ಆತ್ಮಾನಂದ ಲೌಕಿಕವಾದ ಸುಖಕ್ಕಿಂತ ಪರಮೋಚ್ಛವಾಗಿದೆ. ಇಂತಹ ಸುಖದ ಅನುಭವ, ಅಧ್ಯಾತ್ಮದಿಂದ ಮಾತ್ರ ಸಿಗುವುದು. ಸರ್ವ ವಿಶ್ವವನ್ನೇ ಪ್ರೀತಿಸುವಾತನೇ ನಿಜವಾದ ಗುರುವಾಗಿರುತ್ತಾನೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಎರುಂಬು ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ವತಿಯಿಂದ ನಿರ್ಮಾಣವಾಗುವ ತೀಯಾ ಸಮಾಜದ ಇತಿಹಾಸ ಪ್ರಸಿದ್ದ ೧೮ ಭಗವತೀ ಕ್ಷೇತ್ರದಲ್ಲಿ ಒಂದಾದ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಗರ್ಭಗುಡಿ ಹಾಗೂ ಸುತ್ತು ಪೌಳಿಯ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಯುವಕರಿಗೆ ಇದೆ. ಎಂದು ತಿಳಿಸಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ಮಾಡಿ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವವರು ಮನೆ ದೇವರ ಪ್ರತಿಷ್ಠೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ದೇವಿಯ ಅನುಗ್ರಹವಿದ್ದಾಗ ಅನುಕೂಲತೆಗಳು ಒಲಿದು ಬರುತ್ತದೆ ಎಂದು ಹೇಳಿದರು.
ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಶ್ರೀನಿವಾಸ ಯಾನೆ ಅಪ್ಪು ಕಾರ್ನವರು, ಏರಿಯಕೋಟ ಶ್ರೀ ಭಗವತೀ ಕ್ಷೇತ್ರದ ಚಂದ್ರಶೇಖರ ಕಾರ್ನವರು, ಕನಿಲ ಶ್ರೀ ಭಗವತೀ ಕ್ಷೇತ್ರದ ಗೋಪಾಲದಾಸ ಯಾನೆ ಕಣ್ಣ ಕಲೇಕಾರರು, ಉದ್ಯಮಿ ಕೃಷ್ಣ ಎನ್. ಉಚ್ಚಿಲ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಭಾಗವಹಿಸಿದ್ದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್, ಕೇಪು ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಮದಕ ಮತ್ತಿತರರು ಉಪಸ್ಥಿತರಿದ್ದರು.
ಯತೀಂದ್ರನಾಥ ಪುತ್ತೂರು ಸ್ವಾಗತಿಸಿದರು. ಶ್ರೀಧರ್ ಅಳಿಕೆ ವಂದಿಸಿದರು. ಸದಾಶಿವ ಅಳಿಕೆ, ಮಾಲತಿ, ಮೋನಪ್ಪ ಎರುಂಬು, ಮೋಹನದಾಸ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಆತ್ಮಾನಂದ ಲೌಕಿಕವಾದ ಸುಖಕ್ಕಿಂತ ಪರಮೋಚ್ಛ: ಒಡಿಯೂರುಶ್ರೀ"