ತಡೆಯಲಾರದ ಬಿಸಿಲು, ಇನ್ನು 42 ಡಿಗ್ರಿ ತಲುಪುತ್ತದೆ ಎಂಬ ಭೀತಿ. ಅದರೊಂದಿಗೆ ವಿಪರೀತ ಸೆಖೆ. ಬಿ.ಸಿ.ರೋಡ್ ಪೇಟೆಯಲ್ಲಿ ಹತ್ತು ನಿಮಿಷ ಓಡಾಡಿದರೂ ಸಾಕು, ಬೆವರಿನ ಸ್ನಾನದೊಂದಿಗೆ ಧೂಳಿನ ಪೌಡರ್….!!!
- ಹರೀಶ ಮಾಂಬಾಡಿ
ತಡೆಯಲಾರದ ಬಿಸಿಲು, ಇನ್ನು 42 ಡಿಗ್ರಿ ತಲುಪುತ್ತದೆ ಎಂಬ ಭೀತಿ. ಅದರೊಂದಿಗೆ ವಿಪರೀತ ಸೆಖೆ. ಬಿ.ಸಿ.ರೋಡ್ ಪೇಟೆಯಲ್ಲಿ ಹತ್ತು ನಿಮಿಷ ಓಡಾಡಿದರೂ ಸಾಕು, ಬೆವರಿನ ಸ್ನಾನದೊಂದಿಗೆ ಧೂಳಿನ ಪೌಡರ್….!!!
ಈಗ ಬಿ.ಸಿ.ರೋಡ್ ನಲ್ಲಿ ಎಲ್ಲಿ ನೋಡಿದರೂ ಧೂಳು, ಧೂಳು, ಧೂಳು…
ಎಲ್ಲಿ ನೋಡಿದರೂ ಭಾರೀ ಪ್ರಗತಿಯಾಗುತ್ತಿದೆ ಎಂದು ಭಾಸವಾಗುವವಂತೆ ರಸ್ತೆಗಳನ್ನು ಅಗೆಯುವುದು, ಧೂಳೆಬ್ಬಿಸುದು, ದೊಡ್ಡ ದೊಡ್ಡ ಹೊಂಡ ತೋಡುವುದು ಕಾಣಸಿಗುತ್ತದೆ. ಸಂಬಂಧಪಟ್ಟ ಎಂಜಿನಿಯರುಗಳಲ್ಲಿ ಒಬ್ಬರು ದೂರವಾಣಿ ಕರೆಗೆ ಸಿಕ್ಕರೆ, ಮತ್ತೊಬ್ಬರಿಗೆ ಫೋನೆತ್ತಲೂ ಪುರುಸೊತ್ತಿಲ್ಲ. ಜನಸಾಮಾನ್ಯನೇನಾದರೂ ಇದೇನು ಎಂದು ಗಾಬರಿಬಿದ್ದು, ಯಾವುದಾದರೂ ಇಲಾಖೆಗೆ ಫೋನುಗಳ ಮೇಲೆ ಫೋನು ಮಾಡಿದರೆ, ಒಂದು ಹೆದ್ದಾರಿ, ಮತ್ತೊಂದು ನೀರಿನ ಪೈಪ್ ಲೈನ್ ಕೆಲಸ , ನಿಮಗೆ ನೀರು ಬೇಕೋ, ಚಂದದ ರಸ್ತೆ ಬೇಕೋ ಈಗ ಸ್ವಲ್ಪವಾದರೂ ಅನುಭವಿಸಲೇಬೇಕಲ್ವಾ ಎಂಬ ಉತ್ತರ ಸಿಗುತ್ತದೆ.
ಹೀಗಾಗಿ ಬಿ.ಸಿ.ರೋಡಿನಲ್ಲಿ ಪುಟ್ಟ ವಾಹನ ಸಂಚರಿಸಿದರೂ ಸುಂಟರಗಾಳಿಯಂತೆ ಧೂಳೇ ಧೂಳು…
ಅದರಲ್ಲೂ ನಡೆದುಕೊಂಡು ಹೋಗಬೇಕಾದರೆ ಬಹಳ ಎಚ್ಚರವಹಿಸಬೇಕಾದ ಪರಿಸ್ಥಿತಿ ಇದೆ. ರಾತ್ರಿಯಂತೂ ದೀಪದ ಬೆಳಕಿಲ್ಲದಿದ್ದರೆ ಗುಂಡಿಗೆ ಬೀಳು ಸಾಧ್ಯತೆ ಇದೆ.
ಮುಂದೆ ದೊರಕಲಿರುವ ಅದ್ಭುತ ಸೌಲಭ್ಯಕ್ಕಾಗಿ ಇಂದು ಎಷ್ಟು ಧೂಳು ಎದ್ದರೂ ಆದದ್ದಾಯಿತು ಎಂದು ನಗರವಾಸಿಗಳು ಹೊಂದಾಣಿಕೆ ಮಾಡುತ್ತಾ ಬಂದಿದ್ದಾರೆ.
ಕಳೆದ ವರ್ಷದಿಂದಲೇ ಬಿ.ಸಿ.ರೋಡ್ ಪರಿಸರದಲ್ಲಿ ಕಾಮಗಾರಿಗಳು ಒಂದರ ಹಿಂದೊಂದರಂತೆ ನಡೆಯುತ್ತಲೇ ಇವೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಭವ್ಯ ಬಸ್ ನಿಲ್ದಾಣ ಕೆಲಸ ಭರದಿಂದ ಸಾಗುತ್ತಿದ್ದರೆ, ತಾಲೂಕು ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಇನ್ನೆರಡು ತಿಂಗಳ ಅಂತಿಮಗೊಳ್ಳುವ ಸಾಧ್ಯತೆ ಇದೆ. ಕಳೆದ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಮೂರು ಮೀಟಿಂಗ್ ಮಾಡಿದ ಜಿಲ್ಲಾಕಾರಿ, ಇಡೀ ಬಿ.ಸಿ.ರೋಡ್ ನಕ್ಷೆ ಬದಲಿಸಿ ಭಾರೀ ಬದಲಾವಣೆಯ ಕುರಿತು ಸೂಚಿಸಿದ್ದರು. ಆಗ ಪುರಸಭೆಗೆ ಮುಖ್ಯಾಕಾರಿಯಾಗಿ ಪ್ರಭಾರ ಆಡಳಿತ ವಹಿಸಿದ್ದ ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಜಿಲ್ಲಾಕಾರಿ ಆದೇಶ ಪಾಲನೆಗೆ ಹೊರಟು, ಕೈಕಂಬದಲ್ಲಿ ಬಸ್ ಬೇ ನಿರ್ಮಾಣಕ್ಕೆ ಸೂಚಿಸಿದ್ದರು. ಕೂಡಲೇ ಅಲ್ಲಿ ಜೆಸಿಬಿ ತಂದು ಹೊಂಡ ಮಾಡಲಾಯಿತು. ಅಗೆದ ಮಣ್ಣಿನ ಬಹುಪಾಲು ಅಂಶ ಗಾಳಿಯಲ್ಲಿ ಲೀನವಾಗಿ ಸಮೀಪದ ಜನರಿಗೆಲ್ಲ ಧೂಳಿನ ಸ್ನಾನ ಮಾಡಿಸಿತು ಹಾಗೂ ಅಲರ್ಜಿಯನ್ನು ಕೊಟ್ಟಿತೇ ವಿನ: ಇದುವರೆಗೂ ಬಸ್ ಬೇ ನಿರ್ಮಾಣಗೊಳ್ಳಲಿಲ್ಲ. ಈಗ ಮಂಗಳೂರಿನಿಂದ ಬಿ.ಸಿ.ರೋಡ್ ಪ್ರವೇಶಿಸುವ ಸಂದರ್ಭ ಕೈಕಂಬದಲ್ಲೇ ಧೂಳು, ಮಣ್ಣು ಸ್ವಾಗತ ಕೋರುತ್ತವೆ. ಬಸ್ ಬೇ ನಿರ್ಮಾಣ ಅರ್ಧಕ್ಕೆ ನಿಂತರೆ, ಸಮಗ್ರ ಕುಡಿಯುವ ನೀರಿಗಾಗಿ ಪೈಪ್ ಲೈನ್ ಕಾಮಗಾರಿ ಭರದಿಂದ ಆರಂಭಗೊಡಿತು. ಇದೀಗ ಕಾಮಗಾರಿ ವೇಗ ಪಡೆದುಕೊಂಡಿದ್ದು, ಇದುವರೆಗೆ ಬಂಟ್ವಾಳ ಒಳರಸ್ತೆಗಳಲ್ಲೆಲ್ಲ ರಸ್ತೆ ಬದಿ ಅಗೆದು ಪೈಪ್ ಹಾಕಿ ಮಣ್ಣು ಮುಚ್ಚುವ ಕಾರ್ಯ ನಡೆಯುತ್ತಿತ್ತು. ಆದರೀಗ ಹೆದ್ದಾರಿಯಲ್ಲೇ ಕೆಲಸ ನಿರ್ವಹಿಸಬೇಕಾದ ಕಾರಣ ಮಣ್ಣು ಅಗೆದು ಪಕ್ಕಕ್ಕೆ ಹಾಕಿದಾಗಲೆಲ್ಲ ಧೂಳಿನ ಕಣಗಳು ಕಣ್ಣಿನೊಳಗೇ ಪ್ರವೇಶಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಕಾರವೂ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಹಾಗೂ ಸರ್ವೀಸ್ ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದೊಂದು ಸೇರ್ಪಡೆಯಾದರೆ ಇಡೀ ಬಿ.ಸಿ.ರೋಡ್ ಕಾಮಗಾರಿಗಳಿಂದ ತುಂಬಿ ಹೋದಂತಾಗುತ್ತದೆ.
Be the first to comment on "ಬಿಸಿಲು + ಧೂಳು = ಬಿ.ಸಿ.ರೋಡ್"