ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
ಸೋಮವಾರ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿ ಮಾಡಿದ ಜಿಲೆಯ ಮುಖಂಡರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು, ಕರಾವಳಿಯಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕೆಂಬ ಜಿಲ್ಲೆಯ ಮುಖಂಡರ ಬೇಡಿಕೆಯ ಬಗ್ಗೆ ಚರ್ಚೆ ನಡೆಸಿ, ಶೀಘ್ರವೇ ಈ ನೀತಿ ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರಾವಳಿಯಲ್ಲಿ ಮರಳು ಎತ್ತುವುದು ಮತ್ತು ಪೂರೈಕೆಯ ಸಮಸ್ಯೆಗಳು ಪದೇ ಪದೇ ಮರಕಳಿಸುತ್ತಿವೆ. ಸಾರ್ವಜನಿಕರಿಂದಲೂ ಈ ಬಗ್ಗೆ ಒತ್ತಡಗಳು ಬರುತ್ತಿವೆ. ರಾಜ್ಯದ ಉಳಿದ ಜಿಲ್ಲೆಗಳಿಗೂ ಕರಾವಳಿಗೂ ಮರಳುಗಾರಿಕೆಯಲ್ಲಿ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರುವುದೇ ಇದಕ್ಕೆ ಶಾಶ್ವತ ಪರಿಹಾರ ಎಂದು ಸಚಿವ ರಮಾನಾಥ ರೈ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಾರ್ವಜನಿಕರಿಗೆ ಮರಳು ದೊರಕುವಲ್ಲಿ ಯಾವುದೇ ಸಮಸ್ಯೆಗಳುಂಟಾಗಬಾರದು. ವಿಶೇಷವಾಗಿ, ರಾಜ್ಯ ಸರಕಾರವು ಪ್ರತಿಯೊಬ್ಬರಿಗೂ ಮನೆ ಒದಗಿಸುವ ವಸತಿ ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಂಡಿದೆ. ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ತರಲು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.
ನಿಯೋಗದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶಾಹುಲ್ ಹಮೀದ್, ಶೇಖರ ಕುಕ್ಕೇಡಿ, ಪಿ.ಪಿ. ವರ್ಗೀಸ್, ಧರಣೇಂದ್ರ ಕುಮಾರ್, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪಕ್ಷದ ಮುಖಂಡರಾದ ಕಣಚೂರು ಮೋನು, ಪ್ರಥ್ವೀರಾಜ್, ಹರೀಶ್ ಕುಮಾರ್, ಡಾ. ರಘು, ಪಿಯೂಸ್ ರಾಡ್ರಿಗಸ್, ಸುರೇಶ್ ಕೋಟ್ಯಾನ್, ಆಸಿಫ್ ಮೂಲ್ಕಿ, ಇಕ್ಬಾಲ್ ಬೊಳ್ಳಾಯಿ, ಶ್ರೀನಿವಾಸ ಕಿಣಿ, ಕೆ.ಪಿ. ಥಾಮಸ್, ಅಶ್ರಫ್ ಗರಾಡಿ ಮತ್ತಿತರರು ಇದ್ದರು.
Be the first to comment on "ಕರಾವಳಿಗೆ ಪ್ರತ್ಯೇಕ ಮರಳು ನೀತಿ: ಮುಖ್ಯಮಂತ್ರಿ ಒಪ್ಪಿಗೆ "