ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದ ಜಾತ್ರಾ ಮಹೋತ್ಸವ ಸಂದರ್ಭ ಹಾಗೂ ದೇಶದ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಮಾನ ಶಿಕ್ಷಣ ಜಾರಿಗೊಳಿಸಬೇಕೆಂದು ಆಗ್ರಹಿಸಿ ಅಂದೋಲನ ನಡೆಸುತ್ತಿರುವ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿಗೆ ಹುಟ್ಟೂರ ಅಭಿನಂದನಾ ಸಮಾರಂಭ ನಡೆಯಲಿದೆ.
ಮಾರ್ಚ್ 3ರಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯುವುದು ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬ್ರಬೈಲು ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. ೩ರಂದು ಶ್ರೀಕ್ಷೇತ್ರದಲ್ಲಿ ಬ್ರಹ್ಮಬೈದರ್ಕಳ ಜಾರ್ತೆ ನಡೆಯಲಿದ್ದು ರಾತ್ರಿ ಒಲಿಮರೆಯಿಂದ ಬೈದರ್ಕಳ ಹೊರಟು ಬಾಕಿಮಾರ್ ಗದ್ದೆಗೆ ಇಳಿಯಲಿದೆ. ಬಳಿಕ ಪ್ರಕಾಶ್ ಅಂಚನ್ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ನಡೆಯುವುದು ಎಂದರು.
ಪ್ರಕಾಶ್ ಅಂಚನ್ ಅವರು ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬಳಿಕ ಶಾಲಾ ದತ್ತು ಯೋಜನೆಯಡಿ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದು ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ಈ ಶಾಲಾ ಕಟ್ಟಡವು ಸ್ಥಳೀಯರ ಸಹಕಾರದೊಂದಿಗೆ ಪ್ರಗತಿಯಲ್ಲಿದೆ ಎಂದರು.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೂಜಂತೋಡಿ ಎಂಬಲ್ಲಿ ಕೊರಗಪ್ಪ ಪೂಜಾರಿ ಮತ್ತು ವಸಂತಿ ದಂಪತಿಯ ದ್ವಿತೀಯ ಪುತ್ರ ಪ್ರಕಾಶ್ ಅಂಚನ್ ಬಾಲ್ಯದಲ್ಲೇ ತನ್ನ ಮನೆಯ ಬಡತನವನ್ನು ಕಂಡು ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ , ದೂರದ ಊರಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿದವರು. ಬಳಿಕ ಹುಟ್ಟೂರಿನಲ್ಲಿ ಜವಳಿ ಉದ್ಯಮ ಆರಂಭಿಸಿ, ಪ್ರಗತಿ ಕಂಡವರು. ಕರೆಂಕಿ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಸೇವೆಯೊಂದಿಗೆ ಅಮೂಲಾಗ್ರ ಬದಲಾವಣೆ ಕಂಡ ಅಪ್ರತಿಮ ಸಂಘಟನಾ ಚತುರ. ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಸರ್ವ ಸದಸ್ಯರ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಫಲವಾಗಿ ಇಂದು ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ದಡ್ಡಲಕಾಡು ಅಭಿವೃದ್ಧಿ ಪಥದತ್ತ ಸಾಗಿದೆ.
ಇವರ ನೇತೃತ್ವದ ತಂಡವು ಸರಕಾರಿ ಶಾಲೆಗಳನ್ನು ಉಳಿಸಬೇಕು. ದೇಶಾದ್ಯಂತ ಸಮಾನ ಶಿಕ್ಷಣ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೇರಳ, ತಮಿಳುನಾಡು, ರಾಜಸ್ಥಾನ ರಾಜ್ಯಗಳಿಗೆ ಭೇಟಿ ನೀಡಿ ಸರಕಾರಿ ಶಾಲೆಗಳ ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಡಾ ಅಧ್ಯಾಯನ ನಡೆಸಿದರೆ ಇವರ ಈ ಮಾದರಿ ಕೆಲಸವನ್ನು ಗುರುತಿಸಿ ಈ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಕಾರಿಗಳಾದ ಸಂಜೀವ ಪೂಜಾರಿ ಪಿಲಿಂಗಾರು, ಲಕ್ಷ್ಮಿನಾರಾಯಣ ಗೌಡ, ಪೂವಪ್ಪ ಮೆಂಡನ್, ಆನಂದ ಜಿ. ಪೂಜಾರಿ ಕೇಲ್ದೋಡಿ, ರಾಮಚಂದ್ರ ಪೂಜಾರಿ ಕರಂಕಿ ಅವರು ಉಪಸ್ಥಿತರಿದ್ದರು.
Be the first to comment on "ಕೇಲ್ಡೋಡಿ ಜಾತ್ರೆಯಲ್ಲಿ ಪ್ರಕಾಶ್ ಅಂಚನ್ ಗೆ ಹುಟ್ಟೂರ ಸನ್ಮಾನ"