ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘ ಚಾಲಕ ಗುರೂಜಿ ಮಾಧವ ಸದಾಶಿವ ರಾವ್ ಗೋಳ್ವಲ್ಕರ್ ಜನ್ಮದಿನಾಚರಣೆ ನಡೆಯಿತು.
ಈ ಸಂದರ್ಭ ಸಭಾ ಕಾರ್ಯಕ್ರಮ ಬಳಿಕ ಸಾಮರಸ್ಯ ಭೋಜನ ನಡೆಯಿತು. ಮುಖ್ಯ ಅತಿಥಿಗಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಭಾಗವಹಿಸಿ ಮಾತನಾಡಿ, ಸಂಸ್ಕಾರಭರಿತ ಶಿಕ್ಷಣ ನೀಡಿ ಸಮಾಜಕ್ಕೆ ಸತ್ಪ್ರಜೆಯನ್ನು ಕೊಡುವುದೇ ದೇಶಪ್ರೇಮ. ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ. ಅಲ್ಲಿ ಇಟ್ಟ ಹೆಜ್ಜೆ ಮಾಸುವುದಿಲ್ಲ. ಸಂಸ್ಕಾರ ಇಲ್ಲದ ಶಿಕ್ಷಣ ಸುಗಂಧವಿಲ್ಲದ ಪುಷ್ಪದಂತೆ ಎಂದು ಹೇಳಿದರು.
ಶಿಶುಮಂದಿರ ಮತ್ತು ಪೂರ್ವಗುರುಕುಲದ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು. ಜಯರಾಮ್ ಇರಾ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.
ಪ್ರೌಢಶಾಲಾ ಶಿಕ್ಷಕಿ ಗಾಯತ್ರಿ ಮಾತಾಜಿ ಶ್ರೀ ಗುರೂಜಿಯವರ ಜೀವನ ಚರಿತ್ರೆಯನ್ನು ತಿಳಿಸಿದರು.
ನಂತರ ಸಾಮರಸ್ಯ ಭೋಜನ ನೆರವೇರಿತು. ವಿದ್ಯಾಕೇಂದ್ರದ ಸುತ್ತಮುತ್ತಲಿನ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಂದ ಅನ್ನ, ಕಡ್ಲೆ ಪಲ್ಯ, ಪಾಯಸ, ಉಪ್ಪಿನಕಾಯಿ, ಕೊಬ್ಬರಿ ಮಿಠಾಯಿಗಳನ್ನು ಮಾತೆಯರು ತಯಾರಿಸಿ ತಂದಿದ್ದರು. ಕಾರ್‍ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೆ ಬಡಿಸಿ ಸಾಮೂಹಿಕ ಸಹಭೋಜನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಮಾತೃಭಾರತಿ ಅಧ್ಯಕ್ಷೆ ಅರುಣೋದಯ ಸ್ವಾಗತಿಸಿ, ವೀಣಾ ಸೂರಿಕುಮೇರು ನಿರೂಪಿಸಿದರು. ವಿದ್ಯಾ ನೆತ್ತರೆಕೆರೆ ವಂದಿಸಿದರು.
Be the first to comment on "ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗುರೂಜಿ ಗೋಳ್ವಲ್ಕರ್ ಜನ್ಮದಿನಾಚರಣೆ"