ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹನ್ನೆರಡನೇ ವಾರ್ಷಿಕೋತ್ಸವವದ ಅಂಗವಾಗಿ ಶನಿವಾರ ಸಂಜೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಿರಿಯ ಯಕ್ಷಗಾನ ಪ್ರಸಾಧನ ಕಲಾವಿದ ದೇವಕಾನ ಕೃಷ್ಣ ಭಟ್ ಉದ್ಘಾಟಿಸಿದರು.
ಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಮಾತನಾಡಿ, ಯುವ ಜನತೆ ಇಂದು ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದರೂ ಇನ್ನಷ್ಟು ಚಿಂತನೆಗೀಡುಮಾಡುವ ಅಂಶಗಳನ್ನು ಮೈಗೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಮುಳಿಯಾರು ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ, ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ಹಿರಿಯ ಮದ್ದಳೆವಾದಕ ಬಿ.ನಾರಾಯಣ ಭಟ್ ಪೆರುವಾಯಿಯವರಿಗೆ ಪಡ್ರೆ ಚಂದು ಪ್ರಶಸ್ತಿ, ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ರವರಿಗೆ ಅಡ್ಕಸ್ಥಳ ಪ್ರಶಸ್ತಿ, ಮೃದಂಗ ವಿದ್ವಾನ್ ಶಂಕರ ಭಟ್ ಕುಕ್ಕಿಲ ರವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೆರ್ನಡ್ಕ ಶ್ಯಾಮ ಭಟ್ ಅಭಿನಂದನಾ ಭಾಷಣ ಮಾಡಿದರು.
ಕೇಂದ್ರದ ನಿರ್ದೇಶಕ ಸಬ್ಬಣಕೋಡಿ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಕೆ.ಎಸ್.ಗಣೇಶ್ ಸುಳ್ಯ ವಂದಿಸಿದರು.ಎನ್.ಕೆ.ರಾಮಚಂದ್ರ ಭಟ್ ಪನೆಯಾಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ,ಪಾಂಚಜನ್ಯ, ಹಾಗು ಶಾಂಭವೀ ವಿಲಾಸ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ,ಶ್ರೀಸತ್ಯನಾರಾಯಣ ಪೂಜೆ,ಮಧ್ಯಾಹ್ನ ಮಹಾಪೂಜೆ ನಡೆಯಿತು.ಸಂಜೆ ಕೇಂದ್ರದ ಮಕ್ಕಳಿಂದ ಮನೋಹರ ಪೂರ್ಣ ಪ್ರಮಾಣದ ಪೂರ್ವರಂಗ ಪ್ರಸ್ತುತಿ ಜನಮನಸೂರೆಗೊಂಡಿತು.
Be the first to comment on "ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 12ನೇ ವಾರ್ಷಿಕೋತ್ಸವ"