ಅವಳಿಗೆ ಮುಖ್ಯಪಾತ್ರ ಕೊಟ್ಟು, ನಿನಗೆ ಸಣ್ಣಪಾತ್ರ ಕೊಟ್ಟರೋ..?

ನಿನ್ನ ಫ್ರೆಂಡ್‌ನ ಪಾತ್ರಕ್ಕೆ ಜೀವ ತುಂಬಿದ್ದು ನಿನ್ನ ಹಾಡು, ನಿನ್ನ ಹಾಡಿನ ಶಕ್ತಿ ಹೆಚ್ಚಿಸಿದ್ದು ನಿನ್ನ ಫ್ರೆಂಡ್‌ನ ಅಭಿನಯ- ನಾಟಕದಲ್ಲಿ ಯಾವ ಪಾತ್ರವೂ ಮುಖ್ಯವಲ್ಲ.. ಆದರೆ ಎಲ್ಲಾ ಪಾತ್ರವೂ ಮುಖ್ಯವೇ. ನಾಟಕವೆಂದರೆ ಪರಸ್ಪರ ಸಹಕರಿಸುವ ಆಟ.. ॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒

  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

www.bantwalnews.com

ಆ ಇಬ್ಬರು ಮಕ್ಕಳಲ್ಲಿ ಯಾವಾಗಲೂ ಕೋಪ, ತರಗತಿಯಲ್ಲಿ ಒಂದೇ ಬೆಂಚ್ ನಲ್ಲಿ ಕುಳಿತುಕೊಂಡಿದ್ದರೂ ಅವರಿಬ್ಬರೂ ಪರಸ್ಪರ ಮುಖನೋಡಿಕೊಳ್ಳುತ್ತಿರಲಿಲ್ಲ. ಒಂದು ಬಗೆಯಲ್ಲಿ ಪ್ರೌಢಶಾಲಾ ಮಟ್ಟದಲ್ಲೇ ಶುರುವಾಗಿತ್ತು ಅವರ ಗುಂಪುಗಾರಿಕೆ. ಚಟುವಟಿಕೆಗಳ ಸಮಯದಲ್ಲಿ ನಡೆಸಲಾಗುವ ತಂಡಗಳಲ್ಲಿಯೂ ಇವರು ಜೊತೆಯಾಗಿ ಇರಲು ಸಿದ್ದರಿಲ್ಲ, ಇನ್ನು ಉಳಿದ ಸಮಯದಲ್ಲಿ ಅವರು ಹೇಗಿದ್ದಾರು ಎಂಬುದನ್ನು ನೀವೇ ಯೋಚಿಸಿ ನೋಡಿ..

ಇದನ್ನು ದ್ವೇಷವೆನ್ನಬೇಕೋ,ಕೋಪವೆನ್ನಬೇಕೋ ಗೊತ್ತಾಗುತ್ತಿಲ್ಲ.

ಯಾಕೆ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ ಎಂದರೆ, ತರಗತಿಯೊಳಗೆ ವಿದ್ಯಾರ್ಥಿಗಳ ನಡುವೆ ಅಂಕಗಳಿಗಾಗಿ ನಡೆಯುವ ಪೈಪೋಟಿ ಒಮ್ಮೊಮ್ಮೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬುದನ್ನು ಇದು ತಿಳಿಹೇಳುತ್ತದೆ.

ಸ್ಪರ್ಧಾ ಮನೋಭಾವ ಇದ್ದಾಗ ಮಕ್ಕಳಲ್ಲಿ ತಾನೂ ಗೆಲ್ಲಬೇಕೆಂಬ ಆಸಕ್ತಿ ಹುಟ್ಟುವುದು ಸಹಜ, ಆದರೆ ಅನಾರೋಗ್ಯಕರ ಸ್ಪರ್ಧೆ ನಡೆದರೆ..? ಹೌದು ಮೇಲೆ ಹೇಳಿದ ವಿಚಾರವೂ ಮಕ್ಕಳ ನಡುವೆ ಅಂಕಗಳಿಗಾಗಿ ನಡೆದ ಅನಾರೋಗ್ಯಕರ ಪೈಪೋಟಿಯ ಫಲ.

ಇಂದು ಈ ಅನಾರೋಗ್ಯಕರ ಸ್ಪರ್ಧೆಗಳಿಂದಾಗಿ ವಿದ್ಯಾರ್ಥಿಗಳ ನಡುವೆ ಕಂದಕಗಳು ಹುಟ್ಟಿಕೊಂಡಿದೆ.  ಜ್ಞಾನಾರ್ಜನೆಯ ಉದ್ದೇಶದಿಂದ ಗಳಿಸಬೇಕಾದ ಅಂಕಗಳನ್ನು ಪ್ರತಿಷ್ಠೆಯ ಉಳಿಸುವಿಕೆಗಾಗಿ ಗಳಿಸುವಂತಾ ಪರಿಸ್ಥಿತಿ ಬಂದೊದಗಿದೆ. ಶಾಲೆಗಳಲ್ಲಿ ಕೆಲ ಶಿಕ್ಷಕರು ನಡೆಸುವ ಮಕ್ಕಳ ನಡುವಿನ ಬೇಧಭಾವ ಮಕ್ಕಳ ಇಂತಹ ಮನಸ್ಥಿಗೆ ಕಾರಣವಾದರೆ, ಸ್ವಪ್ರತಿಷ್ಠೆಗಾಗಿ ಮಕ್ಕಳ ಪೋಷಕರ ನಡುವೆ ನಡೆವ ಮಾನಸಿಕ ಸಮರ ಮಕ್ಕಳ ಕಲಿಕೆಯ ಉದ್ದೇಶಗಳನ್ನೇ ಬದಲಿಸುತ್ತಿದೆ.

ಇದು ಖಾಸಗಿ ಶಾಲೆಯೊಂದರ ಕಥೆ..

ಆ ವರ್ಷ ಆ ಶಾಲೆಯಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಲು ನನಗೆ ಅವಕಾಶ ಒದಗಿತ್ತು. ಎಲ್‌ಕೆಜಿ ಯಿಂದ ಒಂಭತ್ತನೇ ತರಗತಿವರೆಗಿನ ವಿವಿಧ ವಯೋಮಾನದ 38 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.

ಕ್ಯಾಂಪ್ ಎಂದರೆ ಹಾಗೇ ಮೊದಲ ದಿನ ಹುಡುಗರು-ಹುಡುಗಿಯರು ಎನ್ನುವ ಬೇಧ ಹೆಚ್ಚಿರುವುದು ಸಹಜ, ಆದರೆ ನಾನು ಗಮನಿಸಿದ ಹಾಗೇ ಅಲ್ಲಿ ಎರಡಲ್ಲ ಮೂರು ಗುಂಪಾಗಿ ಕುಳಿತಿದ್ದರು. ಹುಡುಗರದು ಒಂದು ಹುಡುಗಿಯರದು ಎರಡು.  ವಿಷಯ ತಿಳಿಯದ ನಾನು ಆ ಬಗ್ಗೆ ಗಮನ ಹರಿಸಲೇ ಇಲ್ಲ. ಚಟುವಟಿಕೆ ನಡೆಸಿ ನಾಟಕ ದ ಕಥೆ ಓದಿ ಹೇಳಿದೆ. ಆ ಬಳಿಕದಿಂದಲೇ ಶುರುವಾಯ್ತು ನೋಡಿ.. ಯಾರಿಗೆ ಯಾವ ಪಾರ್ಟ್ ಎಂಬ ಮಕ್ಕಳ ಪ್ರಶ್ನೆಗಳ ಸರಮಾಲೆ. ಕುತೂಹಲ ಉಂಟುಮಾಡಿಸುವ ಉದ್ದೇಶದಿಂದ ಮತ್ತೆರಡು ದಿನ ವಿವಿಧ ಚಟುವಟಿಕೆ ನಡೆಸಿದೆ. ಗುಂಪು ಗುಂಪಾಗಿದ್ದ ಮಕ್ಕಳನ್ನು ಒಂದೇ ಗುಂಪಾಗಿಸುವುದು ನನ್ನ ಉದ್ದೇಶವಾಗಿತ್ತು. ನಾಲ್ಕು ದಿನ ಕಳೆಯಿತು. ತಾವಿಷ್ಟ ಪಟ್ಟ ಪಾತ್ರ ಸಿಗದ ಕಾರಣಕ್ಕೆ ಮಕ್ಕಳು ಪಾತ್ರ ಹಂಚುವಿಕೆಯ ಸಂದರ್ಭ ಮಕ್ಕಳು ಬೇಸರಪಡುವ ಸಾಧ್ಯತೆಯ ಬಗ್ಗೆ ಅರಿವಿದ್ದ ನಾನು, ಪಾತ್ರಗಳ ಮಹತ್ವ, ಟೀಮ್ ವರ್ಕ್‌ನ ಅಗತ್ಯತೆ, ತಂಡದಲ್ಲಿನ ಶಿಸ್ತು ಹೀಗೆ ಎಲ್ಲವನ್ನೂ ಬಿಡಿಸಿ ಹೇಳಿ, ಎಲ್ಲಾ ಮಕ್ಕಳಲ್ಲಿಯೂ ಎಲ್ಲಾ ಪಾತ್ರಗಳ ಮೇಲೆ ಪ್ರೀತಿ ಮೂಡಿಸಿದ್ದೆ. ಮಕ್ಕಳ ಚಹರೆ, ಎತ್ತರ, ಚುರುಕುತನ, ಉತ್ಸಾಹಗಳನ್ನು ಆಧರಿಸಿ ಐದನೇ ದಿನ ನಾಟಕದೊಳಗಿನ ಪಾತ್ರಗಳನ್ನು ಹಂಚಿದೆ.  ಮಕ್ಕಳು ಲವಲವಿಕೆಯಿಂದಲೇ ಪಾತ್ರಗಳನ್ನು ಅನುಭವಿಸಿ ಅಭ್ಯಾಸಕ್ಕೆ ಮುಂದಾದರು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆ ಬಳಿಕದ ಕಥೆ ಕೇಳಿ.

ಹೀಗೆ ನಡೆಯಿತು ಐದು ದಿನಗಳ ರಿಹರ್ಸಲ್.. ಆದರೆ ಆರನೇ ದಿನದ ಶಿಬಿರಕ್ಕೆ ಓರ್ವ ವಿದ್ಯಾರ್ಥಿನಿ ಬರಲೇ ಇಲ್ಲ.  ಕೇಳಿದಾಗ ಸಿಕ್ಕ ಉತ್ತರ ಆಕೆಗೆ ಮೈ ಹುಷಾರಿಲ್ಲ..ಎಂದು. ಮತ್ತೆರಡು ದಿನವೂ ಆಕೆ ಗೈರು ಹಾಜರಾಗಿದ್ದಳು. ಆದರೆ ಅದಕ್ಕೆ ಸ್ಪಷ್ಟಕಾರಣ ತಿಳಿಯಲಿಲ್ಲ. ಆ ಬಳಿಕ ವಿದ್ಯಾರ್ಥಿ ಬಳಗದಿಂದಲೇ ನಾನು ತಿಳಿದ ವಿಚಾರ ನಿಜಕ್ಕೂ ನನ್ನ ಅಚ್ಚರಿಗೆ ಕಾರಣವಾಗಿತ್ತು.  ಅವಳಿಗೆ ಮುಖ್ಯಪಾತ್ರ ಕೊಟ್ಟು, ನಿನಗೆ ಸಣ್ಣ ಪಾತ್ರ ಕೊಟ್ಟರೋ.. ಹಾಗಾದ್ರೆ ನೀನು ಕ್ಯಾಂಪಿಗೆ ಹೋಗೋದು ಬೇಡ ಅಂತ ಅವಳಮ್ಮ ಹೇಳಿದ್ರಂತೆ. ಅದಕ್ಕೆ ಅವಳು ಬರುದಿಲ್ಲವಂತೆ, ಫೋನ್ ಮಾಡಿದಾಗ ತುಂಬಾ ಕೂಗಿಕೂಗಿ ಹೇಳಿದ್ಲು ಎಂದು ಅವಳ ಗೆಳತಿ ನನಗೆ ವರದಿ ಒಪ್ಪಿಸಿದ್ಲು.. ಕ್ಯಾಂಪ್ ಗೆ ಬರುವುದು ಬಿಡುವುದು ಮಕ್ಕಳ ಇಚ್ಛೆಗೆ ಬಿಟ್ಟ ವಿಚಾರವಾದ್ದರಿಂದ ನಾನಾಗಿ ಹೆಚ್ಚು ಒತ್ತಾಯ ಮಾಡಲು ಹೋಗಲಿಲ್ಲ, ಅಲ್ಲಿನ ಶಿಕ್ಷಕರೂ ಸ್ವಲ್ಪ ತಲೆಕೆಡಿಸಿಕೊಂಡು ಬಿಟ್ಟರೇ ವಿನಃ ಹೆತ್ತವರ ಕೆಲ ನಿರ್ಧಾರಗಳಿಗೆ ಮೌನವೇ ಉತ್ತರ ಎಂಬಂತೆ ತಾವೂ ಸುಮ್ಮನಾದರು. ಆ ಪಾತ್ರವನ್ನು ಬೇರೆ ವಿದ್ಯಾರ್ಥಿನಿಗೆ ಕೊಟ್ಟು, ಅಂತೂ ಇಂತೂ ನಾಟಕ ತಯಾರಾಯಿತು.  ಬಳಿಕ ಶಾಲೆ ಪುನರಾರಂಭವಾದ ಬಳಿಕ ನಾಟಕ ಪ್ರದರ್ಶನದ ಕಾರಣಕ್ಕೆ ಬಿಡುವಿನ ವೇಳೆಯಲ್ಲಿ ನಾಟಕ ರಿಹರ್ಸಲ್ ಆರಂಭಿಸಲಾಯ್ತು. ಒಂದು ಕಾರಣವಲ್ಲದ ಕಾರಣಕ್ಕೆ ನಾಟಕದಿಂದ ದೂರವಾಗಿದ್ದ ಆ ವಿದ್ಯಾರ್ಥಿನಿಯನ್ನು ನಾಟಕಕ್ಕೆ ಸೇರಿಸಿಕೊಳ್ಳಲೇಬೇಕೆಂಬ ಉದ್ದೇಶ ನನ್ನಲ್ಲಿತ್ತು. ಆ ಕಾರಣಕ್ಕೆ ಅವಳನ್ನು ಕರೆದು ನಾಟಕಕ್ಕೆ ನೀನು ಹಾಡಬೇಕೆಂದು ಸೂಚಿಸಿದೆ, ಅವಳು ಸಂತೋಷದಿಂದಲೇ ಒಪ್ಪಿದಳು ಮತ್ತು ನಾಳೆ ಕನ್‌ಫರ್ಮ್ ಹೇಳುತ್ತೇನೆ ಎಂದೊಮ್ಮೆ ತನ್ನ ಅಮ್ಮನನ್ನೂ ನೆನಪಿಸಿಕೊಂಡಳು ಆಕೆ.

ಆದರೆ ಅದೃಷ್ಟವಶಾತ್ ಮಾರನೇ ದಿನದಿಂದಲೇ ನಾಟಕದ ರಿಹರ್ಸಲ್ ಗೆ ಸೇರಿಕೊಂಡಳು ಅವಳು. ಮುಖ್ಯಪಾತ್ರದ ನಟಿ ರಂಗದ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಈಕೆ ರಂಗದಲ್ಲೇ ಕುಳಿತು ಹಾಡುಹಾಡುತ್ತಿದ್ದಳು. ಇವಳು ಹಾಡು-ಅವಳ ಅಭಿನಯ ಸೇರಿಯೇ ನಾಟಕ ಪ್ರೇಕ್ಷಕರ ಮುಂದೆ ರಸವತ್ತಾಗಿ ಮೂಡಿಬಂತು. ಅವಳಮ್ಮ ಹೇಳಿದ ಕಾರಣಕ್ಕೆ ಆಕೆ ಶಿಬಿರಕ್ಕೆ ಬಂದಿರಲಿಲ್ಲ ಎಂಬುದು ನನಗೆ ಗೊತ್ತಿತ್ತು ಎಂದೂ ಅವಳಿಗೆ ಗೊತ್ತಾಗಲಿಲ್ಲ. ನಾನು ಆ ಬಗ್ಗೆ ವಿಚಾರಿಸಲೂ ಹೋಗಲಿಲ್ಲ. ಅದರೆ ನಾಟಕ ಮುಗಿದ ಮೇಲೆ ಹೇಳಿದೆ.. ನಿನ್ನ ಫ್ರೆಂಡ್ ನ ಪಾತ್ರಕ್ಕೆ ಜೀವ ತುಂಬಿದ್ದು ನಿನ್ನ ಹಾಡು, ನಿನ್ನ ಹಾಡಿನ ಶಕ್ತಿ ಹೆಚ್ಚಿಸಿದ್ದು ನಿನ್ನ ಫ್ರೆಂಡ್‌ನ ಅಭಿನಯ- ನಾಟಕದಲ್ಲಿ ಯಾವ ಪಾತ್ರವೂ ಮುಖ್ಯವಲ್ಲ.. ಆದರೆ ಎಲ್ಲಾ ಪಾತ್ರವೂ ಮುಖ್ಯವೇ. ನಾಟಕವೆಂದರೆ ಪರಸ್ಪರ ಸಹಕರಿಸುವ ಆಟ.. ಹೀಗೆಲ್ಲಾ ಹೇಳಿ ನಾಟಕದ ಬಗ್ಗೆ ಅವಳ ಪ್ರೀತಿ ಹೆಚ್ಚಾಗುವಂತೆ ಮಾಡಿದೆ. ಇದನ್ನೆಲ್ಲಾ ಗಮನಿಸಿದ ಆ ಶಾಲಾ ಶಿಕ್ಷಕಿ ಹೇಳಿದ್ರು… ನಾನು-ನೀವು ಅವಳಿಗೆ ಬುದ್ದಿ ಹೇಳ್ಬೋದು.. ಆದ್ರೆ ಅವಳಮ್ಮನಿಗೆ ಯಾರು ಬುದ್ದಿ ಹೇಳುದು..? ಎಂದಾಗ ನನಗೂ ಹೌದೆನ್ನಿಸಿತು.

ನಿಜವಾಗಿಯೂ ಮಕ್ಕಳ ನಡುವೆ ಇರಬೇಕಾದ ಪ್ರೀತಿ -ಆತ್ಮವಿಶ್ವಾಸದ ನಡವಳಿಕೆಗಳು ಪರಸ್ಪರ ಸೇಡು, ಕೋಪದ ರೂಪ ಪಡೆಯುತ್ತಿರುವುದು ಹೆತ್ತವರ ಇಂತಹಾ ನಿರ್ಧಾರಗಳಿಂದ. ಇಷ್ಟಕ್ಕೂ ಆ ಮುಖ್ಯಪಾತ್ರದ ಹುಡುಗಿಗೂ-ಈಕೆಗೂ ಅಂಕಗಳಿಸುವಿಕೆಯಲ್ಲಿ ಹೆತ್ತವರ ಒತ್ತಾಯದ ನಡುವೆ ಇದ್ದ ಪೈಪೋಟಿಯೇ ಇದಕ್ಕೆ ಕಾರಣವಾಗಿತ್ತು. ಆದರೆ ಸ್ವಭಾವತಃ ನೋಡಿದರೆ ಆ ಇಬ್ಬರೂ ಒಳ್ಳೆಯ ವಿದ್ಯಾರ್ಥಿನಿಯರು. ಎಲ್ಲರೊಂದಿಗೂ ಸೌಮ್ಯ ಸ್ವಭಾವದಿಂದ ಮಾತನಾಡುವ ಅವರು, ಅಂಕ,ಸ್ಪರ್ದೆಗಳ ವಿಚಾರ ಬಂದಾಗ ಮಾತ್ರ ಮಾನಸಿಕವಾಗಿ ಬದಲಾಗುತ್ತಿದ್ದರು. ಇಂತಹಾ ಮನಸ್ಥಿತಿಗಳು ನಮ್ಮ ಮಕ್ಕಳಲ್ಲಿ ಇರಬಾರದು. ಈ ಬಗ್ಗೆ ಜಾಗೃತಿ ಬೇಕು..

ತಮ್ಮ ಹಿತಾಸಕ್ತಿ, ಪ್ರತಿಷ್ಠೆಗಾಗಿ ಮಕ್ಕಳ ನೆಮ್ಮದಿ-ಸಂತೋಷವನ್ನು ಬಲಿಕೊಡುವ ಹೆತ್ತವರೇ ಗಮನಿಸಿ.. ಯಾರೇ ಆಗಲಿ ಕಳೆದುಕೊಂಡ ಬಾಲ್ಯವನ್ನು ಮರಳಿ ಪಡೆಯಲಾಗುವುದಿಲ್ಲ, ಬಾಲ್ಯದಲ್ಲಿ ಕಂಡುಕೊಳ್ಳುವ ಸುಖಸಂತೋಷಗಳು ಮತ್ತೆಂದೂ ಆ ತೆರನಾಗಿ ಪಡೆಯುವುದು ಕಷ್ಟ.. ನಮ್ಮ ಮಕ್ಕಳನ್ನು ನಾವಾಗಿಯೇ ನೋವಿನತ್ತ ದೂಡುವುದು ಬೇಡ. ನಮ್ಮ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರೆಲ್ಲಾ ಆಲೋಚನೆಗಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯೋಣ, ಮಕ್ಕಳನ್ನು ಸರ್ವತೋಮುಖ ಅಭಿವೃದ್ದಿಯೇ ನಮ್ಮ ಧ್ಯೇಯವಾಗಲಿ..

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಅವಳಿಗೆ ಮುಖ್ಯಪಾತ್ರ ಕೊಟ್ಟು, ನಿನಗೆ ಸಣ್ಣಪಾತ್ರ ಕೊಟ್ಟರೋ..?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*