ಬಂಟ್ವಾಳ ಪುರಸಭಾ 2016-17ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಒಟ್ಟು 60 ಮಂದಿ ಫಲಾನುಭವಿಗಳು ಆಯ್ಕೆಯಾಗಿದ್ದು, ತಲಾ 2.7 ಲಕ್ಷ ಮಂಜೂರಾತಿಯಾಗಿರುತ್ತದೆ. ಶನಿವಾರ ಅವರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪುರಸಭಾ ವ್ಯಾಪ್ತಿಯಲ್ಲಿ ಹಲವು ರಸ್ತೆಗಳಲ್ಲೀಗ ಕಾಂಕ್ರೀಟ್ ಹಾಗೂ ಡಾಂಬರೀಕರಣ ಕಾರ್ಯ ನಡೆಯುತ್ತಿದೆ. ಸಮಗ್ರ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ ಎಂದರು.
ನಗರೋತ್ಥಾನ ಯೋಜನೆಯಡಿ 9 ಕೋಟಿ ರೂಪಾಯಿಗಳು ಮಂಜೂರಾಗಿದ್ದು, ಎರಡು ತಿಂಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಳಸಾಗುವುದು ಎಂದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಈ ಸಂದರ್ಭ ಹೇಳಿದರು. ಸಮಗ್ರ ನೀರಿನ ಯೋಜನೆಯಡಿ ಪೈಪ್ ಕಾಮಗಾರಿ ಸಂದರ್ಭ ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಲಾಗುವುದು. ಎರಡು ತಿಂಗಳೊಳಗೆ ಈ ಕೆಲಸ ಮುಗಿಸಲಾಗುವುದು ಎಂದು ಆಳ್ವ ತಿಳಿಸಿದರು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಆಶ್ರಯ ಸಮಿತಿ ಸದಸ್ಯ ಖಾಸಿಂ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಕೆ.ಸುಧಾಕರ್ ಸ್ವಾಗತಿಸಿದರು. ಆಶ್ರಯ ಸಮಿತಿ ಸದಸ್ಯ ಸಂಜೀವ ಬಂಜನ್ ವಂದಿಸಿದರು.
Be the first to comment on "ಬಂಟ್ವಾಳ ಪುರಸಭೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ"