- ಹರೀಶ ಮಾಂಬಾಡಿ
ಕವರ್ ಸ್ಟೋರಿ
ಮಂಥನ ನಡೆದದ್ದು ಒಂದು ದಿನ. ತೇರು ಎಳೆದದ್ದು ಇನ್ನೊಂದು ದಿನ. ಆದರೆ ಸಾವಿರ ದಿನಗಳಿಗಾಗುವಷ್ಟು ವಿಚಾರಪ್ರಭೆಯನ್ನು ಅದು ಬಿತ್ತಿ ಹೋಗಿತ್ತು.
ಹಸಿರುಸಿರಿಯ ಕರೋಪಾಡಿ ಗ್ರಾಮದ ಒಡಿಯೂರು ಎಂಬ ಸಾನ್ನಿಧ್ಯ, ಭಾಷಾ ಬೆಳವಣಿಗೆ ಮೂಲಕ ಇಡೀ ಸಮಾಜದ ಉನ್ನತಿ ಸಾಧ್ಯ ಎಂಬುದನ್ನು ಸಾಕ್ಷೀಕರಿಸಲು ಹೊರಟಿತ್ತು. ಸಹಸ್ರ ಸಂಖ್ಯೆಯ ಜನತೆ ತುಳು ಭಾಷೆಯ ಕುರಿತ “ತುಲಿಪು’’ವಿನಲ್ಲಿ ಭಾಗವಹಿಸಿ ವಿಚಾರ ಪ್ರಚೋದನೆ ಪಡೆದುಕೊಂಡರೆ, ರಥ ಎಳೆಯುವ ಮೂಲಕ ಆತ್ಮಶುದ್ಧಿಯನ್ನೂ ಪರಿವರ್ತನೆಯ ಸಮಾಜಮುಖಿ ಬದುಕಿನತ್ತ ಹೆಜ್ಜೆ ಹಾಕಿದರು.
ಇದು ಫೆಬ್ರವರಿ 5, 6ರಂದು ಎರಡು ದಿನಗಳ ಕಾಲ ದಕ್ಷಿಣ ಗಾಣಗಾಪುರ ಎಂದೇ ಪ್ರಖ್ಯಾತವಾದ ಒಡಿಯೂರು ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ಹಿನ್ನೋಟ.
ತುಳುವೆರೆ ತುಲಿಪು ಜೊತೆಗೆ ತುಳುನಾಡ ಜಾತ್ರೆ. ಒಡಿಯೂರು ರಥೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡದ್ದು ಹೀಗೆ.
ಕೃಷಿ ಮರೆತರೆ, ಎಲ್ಲವನ್ನೂ ಮರೆತಂತೆ, ಮಣ್ಣಿನ ವಾಸನೆಯಿದ್ದಾಗ ಸಂಸ್ಕೃತಿ ಉಳಿಯುತ್ತದೆ. ಹೀಗಾಗಿ ತುಳು ಗ್ರಾಮವನ್ನೇ ನಿರ್ಮಿಸುವ ಯೋಚನೆ ತಮಗಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ತುಳುವೆರೆ ತುಲಿಪು ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ವಿದ್ವಾಂಸರು ತುಳು ಭಾಷೆ ಉಳಿವಿಗೆ ಒತ್ತು ನೀಡಿದರೆ, ಸ್ವಾಮೀಜಿ ಮುಂದಿನ ವರ್ಷ ತುಳು ಸಂಘಟನೆಗಳ ಸಮಾವೇಶ ನಡೆಸುವುದಾಗಿ ಘೋಷಿಸಿದರು.
ಯುವ ಶಕ್ತಿಯನ್ನು ತುಳು ಭಾಷೆ ಉಳಿಸುವ ಕೈಂಕರ್ಯಕ್ಕೆ ಬಳಸುವ ಹಿನ್ನೆಲೆಯಲ್ಲಿ ಯುವ ಜಾಗೃತಿಗಾಗಿ ನಡೆಸಿದ ಈ ಸಮಾವೇಶದ ಇಡೀ ಜವಾಬ್ದಾರಿಯನ್ನು ಒಡಿಯೂರು ತುಳು ಕೂಟದ ಪ್ರಧಾನ ಸಂಚಾಲಕ ಡಾ.ವಸಂತ ಕುಮಾರ ಪೆರ್ಲ, ಸಂಚಾಲಕ ತಾರಾನಾಥ ಕೊಟ್ಟಾರಿ ಹೊತ್ತಿದ್ದರು. ಅಂತಿಮವಾಗಿ ತುಳುವರು ಪಾಶ್ಚಾತ್ಯ ಸಂಸ್ಕೃತಿಯ ಬಿರುಗಾಳಿಗೆ ಸಿಲುಕದೆ, ತುಳು ಭಾಷಾಪ್ರೇಮವನ್ನು ಆಂತರಂಗಿಕವಾಗಿ ಉಳಿಸಿ, ಬೆಳೆಸಿದರೆ ಭಾಷೆಗೆ ಯಾವ ಅಪಾಯವೂ ಇಲ್ಲ. ಮಕ್ಕಳಲ್ಲಿ ತುಳುವಿನ ಕುರಿತು ಪ್ರೀತಿ ಹುಟ್ಟುವುದು ಇಂದಿನ ಅಗತ್ಯ ಎಂಬ ಸಂದೇಶವನ್ನು ತುಳುವೆರೆ ತುಲಿಪು ನೀಡಿತು.
ಮರುದಿನ ನಡೆದ ಧರ್ಮಸಭೆಯಲ್ಲೂ ತುಳುವಿನ ವಿಚಾರವೇ ಬಂತು. ಧರ್ಮ ಮತ್ತು ಸಂಸ್ಕೃತಿ ಕುರಿತು ವಿಶ್ಲೇಷಣೆ ಸೇರಿದ ಸಭಾಸದರನ್ನು ಚಿಂತನೆಗೆ ಹಚ್ಚಿತು.
ಸಂಜೆ ನಡೆದ ರಥೋತ್ಸವದ ಸುಮಾರು ಹನ್ನೆರಡು ಕಿ.ಮೀ. ಸಂಚಾರದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಹೆಜ್ಜೆ ಹಾಕಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆಯ ವೈಭವದ ಶ್ರೀ ದತ್ತಾಂಜನೇಯ ದೇವರ ರಥದ ಮೆರವಣಿಗೆ ಶ್ರೀಗುರುದೇವಾನಂದ ಸ್ವಾಮೀಜಿ ಮತ್ತು ನವರತ್ನಖಚಿತ ಸ್ವರ್ಣ ಪಾದುಕೆಗಳೊಂದಿಗೆ ಗ್ರಾಮ ದೈವಸ್ಥಾನಕ್ಕೆ ತೆರಳಿ, ಪೇಟೆ ಸವಾರಿಯಾಗಿ ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ಬಳಿಕ ಶ್ರೀ ಸಂಸ್ಥಾನಕ್ಕೆ ಹಿಂದಿರುಗಿತು. ವೈವಿಧ್ಯಮಯ ಕಾರ್ಯಕ್ರಮಗಳು, ಸಾಂಸ್ಕೃತಿಕ ವೈಭವ ಜನಮನಸೂರೆಗೊಂಡವು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಾಧ್ವಿ ಮಾತಾನಂದಮಯೀ ನೇತೃತ್ವದಲ್ಲಿ ನಡೆಸಲ್ಪಡುವ ಗ್ರಾಮವಿಕಾಸ ಸಹಿತ ಒಡಿಯೂರು ಕ್ಷೇತ್ರ ಪ್ರೇರಿತ ವಿವಿಧ ಸಂಘಟನೆಗಳ ಸದಸ್ಯರು ಎರಡೂ ದಿನಗಳ ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾದ ನಿರ್ವಹಣೆಯೊಂದಿಗೆ ಗಮನ ಸೆಳೆದರು.
Be the first to comment on "ಭಾಷೆ, ಬದುಕಿಗೆ ಶಕ್ತಿ ತುಂಬಿದ ಒಡಿಯೂರಿನ ತುಳುನಾಡ ಜಾತ್ರೆ"