- ಡಾ.ರವಿಶಂಕರ್ ಎ.ಜಿ.
- www.bantwalnews.com
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಹಿಂಗು ಮತ್ತು ತೆಂಗು ಇದ್ದರೆ ಮಂಗನೂ ಅಡಿಗೆ ಮಾಡೀತು’ ಎಂಬ ಗಾದೆ ಮಾತೇ ಇದೆ.ಇದರಿಂದ ಅಡುಗೆ ಮನೆಯಲ್ಲಿ ಹಿಂಗಿನ ಪ್ರಾಮುಖ್ಯತೆ ಗೊತ್ತಾಗುತ್ತದೆ.ಹಿಂಗು ಪದಾರ್ಥಗಳಿಗೆ ಉತ್ತಮ ರುಚಿ ಮತ್ತು ಪರಿಮಳವನ್ನು ನೀಡುತ್ತದೆ.ಹಾಗೆಯೇ ತಿಂದ ಆಹಾರವನ್ನು ಕರಗಿಸುವಲ್ಲಿ ಸಹ ಮಹತ್ತರ ಪಾತ್ರ ವಹಿಸುತ್ತದೆ. ಇಷ್ಟೇ ಅಲ್ಲದೆ ಹಿಂಗು ಹಲವಾರು ವ್ಯಾಧಿ ಅಥವಾ ಅನಾರೋಗ್ಯದ ಸಂದರ್ಭಗಳಲ್ಲಿ ರಾಮಬಾಣವಾಗಿ ಕೆಲಸ ಮಾಡುತ್ತದೆ.
- ಹಿಂಗು ಪಿತ್ತ ಹಾಗು ಅಗ್ನಿವರ್ಧಕವಾಗಿದ್ದು, ಹಸಿವು ಹಾಗು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಪಚನ ಕ್ರಿಯೆಯನ್ನು ಉತ್ತೇಜಿಸುತ್ತದೆ.
- ಅಧಿಕ ಪ್ರಮಾಣದ ಆಹಾರ ಸೇವನೆ ಅಥವಾ ಅಜೀರ್ಣದಿಂದಾಗಿ ಹೊಟ್ಟೆ ಉಬ್ಬರಿಸಿ ಉಸಿರಾಡಲು ಕಷ್ಟವಾಗುತ್ತಿದ್ದರೆ ಅಥವಾ ಹೊಟ್ಟೆ ನೋವು ಇದ್ದರೆ ಸ್ವಲ್ಪ ಹಿಂಗನ್ನು ಮಜ್ಜಿಗೆಗೆ ಹಾಕಿ ಕುಡಿಯಬೇಕು.
- ಹಲ್ಲನ್ನು ಹುಳ ತಿಂದು(dental caries) ನೋವು ಇದ್ದರೆ ಸ್ವಲ್ಪ ಹಿಂಗನ್ನು ಸಟ್ಟುಗದಲ್ಲಿ ಹುರಿದು ನೋವಿರುವ ಹಲ್ಲಿನ ಜಾಗದಲ್ಲಿ ಇಡಬೇಕು.
- ಹಲ್ಲು ನೋವಿದ್ದಾಗ ಹಿಂಗು ಮತ್ತು ಲವಂಗವನ್ನು ನೀರಿನಲ್ಲಿ ಕುದಿಸಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ಶಮನವಾಗುತ್ತದೆ.
- ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಇದ್ದರೆ ಸ್ವಲ್ಪ ಹಿಂಗು ಮತ್ತು ಉಪ್ಪನ್ನು ಮಿಶ್ರ ಮಾಡಿ ನೀರು ಅಥವಾ ಮಜ್ಜಿಗೆಯೊಂದಿಗೆ ಸೇವಿಸಬೇಕು. ಇದರಿಂದ ಮುಟ್ಟಿನ ರಕ್ತ ಸ್ರಾವವೂ ಸರಿಯಾಗಿ ಆಗುತ್ತದೆ.
- ಚಿಕ್ಕ ಮಕ್ಕಳಿಗೆ ರಾತ್ರಿಯಲ್ಲಿ ಗುದದ್ವಾರದಲ್ಲಿ ಹುಳ ಚುಚ್ಚುವುದು ಸಾಮಾನ್ಯ.ಆವಾಗ ಸ್ವಲ್ಪ ಹಿಂಗನ್ನು ಗುದದ್ವಾರದಲ್ಲಿ ಇಟ್ಟರೆ ತಕ್ಷಣ ಚುಚ್ಚುವುದು ಕಡಿಮೆಯಾಗುತ್ತದೆ.
- ಹೊಟ್ಟೆಯಲ್ಲಿ ಹುಳ ತುಂಬಿ ಅರುಚಿ, ಅಜೀರ್ಣ ಅಥವಾ ಹೊಟ್ಟೆ ನೋವು ಇದ್ದಾಗ ಹಿಂಗಿನ ಕಷಾಯ ಅಥವಾ ಮಜ್ಜಿಗೆಯೊಂದಿಗೆ ಸೇವಿಸಬೇಕು. ಹೊಕ್ಕುಳದ ಸುತ್ತಲು ಹಿಂಗನ್ನು ಅರೆದು ಲೇಪಿಸುವುದರಿಂದಲೂ ಪ್ರಯೋಜನವಾಗುತ್ತದೆ.
- ಹಿಂಗು ಕಷಾಯವು ವಿಷಮ ಜ್ವರ, ಶೀತ, ಉಬ್ಬಸ. ಕೆಮ್ಮು ನಿವಾರಕವಾಗಿದ್ದು ಮುಖ್ಯವಾಗಿ ಮಕ್ಕಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.
- ಮೈ ಮೇಲೆ ಹುಳ ಕಜ್ಜಿಗಳು (ring worm) ಇದ್ದರೆ ಹಿಂಗನ್ನು ನೀರಿನಲ್ಲಿ ಕಲಸಿ ಕಜ್ಜಿಯ ಮೇಲೆ ಹಚ್ಚುವುದರಿಂದ ತುರಿಕೆ ಹಾಗು ಕಜ್ಜಿ ಕಡಿಮೆಯಾಗುತ್ತದೆ.
- ಹಿಂಗಿನ ನಿತ್ಯಬಳಕೆಯಿಂದ ಹೃದಯಕ್ಕೆ ಶಕ್ತಿ ಬರುತ್ತದೆ ಮತ್ತು ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ರಕ್ತದಲ್ಲಿ ಹಾಗು ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ.
- ಅಲ್ಪಪ್ರಮಾಣದಲ್ಲಿ ಹಿಂಗನ್ನು ನಿತ್ಯ ಬಳಸುವುದರಿಂದ ಕಣ್ಣಿನ ಗೋಚರ ಸಾಮರ್ಥ್ಯ ಹೆಚ್ಚಾಗುತ್ತದೆ.
- ಹಿಂಗನ್ನು ತುಪ್ಪದಲ್ಲಿ ಹುರಿದು ಸ್ವಲ್ಪ ಉಪ್ಪಿನೊಂದಿಗೆ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಹಿಂಗು ಕಫವನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ.ಆದುದರಿಂದ ಕಪ ಪೂರಿತ ಕೆಮ್ಮಿನಲ್ಲಿ ಹಿಂಗನ್ನು ಕಷಾಯ ಮಾಡಿ ಕುಡಿಯಬೇಕು.ಹಾಗೆಯೇ ಒಣ ಕೆಮ್ಮಿನಲ್ಲಿ ಹಿಂಗನ್ನು ತುಪ್ಪದಲ್ಲಿ ಹುರಿದು ಸೇವಿಸಿದರೆ ಉತ್ತಮ.
- ಹಿಂಗು ಮತ್ತು ಉಪ್ಪನ್ನು ಅರೆದು ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಿ ಎದೆಗೆ ಹಚ್ಚಿದರೆ ಕಪ ಕರಗಿ, ಸರಾಗವಾಗಿ ಉಸಿರಾಡುವಂತಾಗುತ್ತದೆ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
- ಹಿಂಗು, ಪಿತ್ತ ಜನಕಾಂಗದ ಅರೋಗ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ.ಮುಖ್ಯವಾಗಿ ಮಧ್ಯಪಾನಿಗಳಲ್ಲಿ ಹಿಂಗು ಬಲು ಉತ್ತಮ ಪಥ್ಯಾಹಾರವಾಗಿದೆ.
- ಹಿಂಗು ವಾತಶಾಮಕವಾಗಿದ್ದು ಅಪಸ್ಮಾರ ರೋಗಿಗಳಲ್ಲಿ ಹಿಂಗನ್ನು ಎಳ್ಳೆಣ್ಣೆಯಲ್ಲಿ ಕಾಯಿಸಿ 2 ರಿಂದ 3 ಬಿಂದುವಿನಷ್ಟು ಮೂಗಿಗೆ ಬಿಟ್ಟಲ್ಲಿ ಅತ್ಯಂತ ಪ್ರಯೋಜನವನ್ನು ನೀಡುತ್ತದೆ.
- ಹಿಂಗನ್ನು ಬಿಸಿನೀರಿನಲ್ಲಿ ಕರಗಿಸಿ ಸೇವಿಸಿದರೆ ತಲೆನೋವು(ಮೈಗ್ರೈನ್ ) ಕಡಿಮೆಯಾಗುತ್ತದೆ.
- ಹಿಂಗು ಉತ್ತಮ ವಾತಶಾಮಕವಾದ ಕಾರಣ ಪಕ್ಷವಾತ,ಸೊಂಟ ನೋವು, ನರಗಳ ನೋವು ಇತ್ಯಾದಿಗಳಲ್ಲಿ ನಿತ್ಯ ಬಳಕೆ ಮಾಡುವುದರಿಂದ ವ್ಯಾಧಿ ಶೀಘ್ರ ವಾಸಿಯಾಗುವಲ್ಲಿ ಸಹಕರಿಸುತ್ತದೆ.
Be the first to comment on "ಹಿಂಗು ಇದ್ದರೆ ಅನಾರೋಗ್ಯ ದೂರ"