ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಧಾರ್ಮಿಕ ಸಭೆ
www.bantwalnews.com report
ತುಳುನಾಡಿನಲ್ಲಿ ಕಳೆದ 25 ವರ್ಷಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ದೈವಸ್ಥಾನ ಮತ್ತು ದೇವಸ್ಥಾನ ಮತ್ತಿತರ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪುನರುತ್ಥಾನಗೊಂಡಿರುವುದು ಉತ್ತಮ ಬೆಳವಣಿಗೆಕೆಯಾಗಿದೆ. ದೇವರ ಮೇಲಿನ ಅನನ್ಯ ಭಕ್ತಿ ಮತ್ತು ಶ್ರದ್ಧೆ ಜೊತೆಗೆ ವಿಶ್ವಾಸದಿಂದ ಇಂತಹ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಾಗ ದೇವರ ಅನುಗ್ರಹ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ತಾಲ್ಲೂಕಿನ ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಸಂದೇಶ ನೀಡಿದರು.
ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿನಿತ್ಯ ಭಗವಂತನ ಭಕ್ತಿಯಿಂದ ಸದ್ಗುಣ ಬೆಳೆದು ಮನಸ್ಸು ಶುದ್ಧವಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಾಮಾಜಿಕ ಬದಲಾವಣೆಯಿಂದ ಜನಸಾಮಾನ್ಯರು ಕೂಡಾ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ ಎಂದರು.
ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್. ಶೆಟ್ಟಿ, ಅರಳ ಕ್ಷೇತ್ರದ ಆಡಳಿತ ಮೊಕ್ತೇಸರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ರಾಜೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ, ಪ್ರಧಾನ ಅರ್ಚಕ ಎ.ರಾಜ ಭಟ್ ಹುಣ್ಸೆಯಡಿ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಅರಳ ಕ್ಷೇತ್ರದ ವೆಬ್‌ಸೈಟ್ ಅನಾವರಣಗೊಳಿಸಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಮುರಳೀಧರ ಶೆಟ್ಟಿ, ಕೋಶಾಧಿಕಾರಿ ರಂಜನ್ ಕುಮಾರ್ ಶೆಟ್ಟಿ, ಡೊಂಬಯ ಬಿ.ಅರಳ, ವಿವಿಧ ಸಮಿತಿ ಪದಾಧಿಕಾರಿಗಳು ಇದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಆಳ್ವ ಅಗ್ಗೊಂಡೆ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ ವಂದಿಸಿದರು. ಶರತ್ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
—
Be the first to comment on "ತುಳುನಾಡಿನಲ್ಲಿ ಗರಿಷ್ಟ ಧಾರ್ಮಿಕ ಕ್ಷೇತ್ರ ಪುನರುತ್ಥಾನ: ಹೆಗ್ಗಡೆ"