https://bantwalnews.comreport
ವಾಹನ ಪಾರ್ಕಿಂಗ್, ಬಿಲ್ ಪಾವತಿ, ನಾಮಫಲಕ ವಿಚಾರ…
ಸೋಮವಾರ ನಡೆದ ವಿಟ್ಲ ಪಟ್ಟಣ ಪಂಚಾಯಿತಿ ಸಭೆಯಲ್ಲಿ ವೈವಿಧ್ಯಮಯ ವಿಚಾರಗಳು ಪ್ರಸ್ತಾಪವಾದವು.
ವಿಟ್ಲದ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಖಾಸಗಿ ಹಾಗೂ ರಾಜ್ಯ ರಸ್ತೆ ಬಸ್ಸುಗಳು ಎಲ್ಲೆಂದರಲ್ಲಿ ನಿಂತು ಸುಗಮ ವಾಹನ ಸಂಚಾರಕ್ಕೆ, ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಸಮರ್ಪಕ ಕ್ರಮ ಕೈಗೊಳ್ಳಬೇಕು. ಪಟ್ಟಣ ಪಂಚಾಯಿತಿಯಿಂದ ಅಧಿಕೃತವಾದ ಯಾವುದೇ ಪರವಾನಿಗೆಯಿಲ್ಲದೇ ಯೂನಿಯನ್ಗಳ ಹೆಸರಲ್ಲಿ ರಿಕ್ಷಾ ಪಾರ್ಕಿಂಗ್ ನಾಮಫಲಕ ಅಳವಡಿಸಲು ಅವಕಾಶವಿಲ್ಲ. ಕೂಡಲೇ ಅದನ್ನು ತೆರವುಗೊಳಿಸಲಾಗುವುದು ಎಂಬ ನಿರ್ಣಯವನ್ನೂ ಅಧ್ಯಕ್ಷ ಅರುಣ ಎಂ. ವಿಟ್ಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ವಿಟ್ಲ-ಪಕಳಕುಂಜ ರಾಜ್ಯ ಸರಕಾರಿ ಸಂಸ್ಥೆಯ ಬಸ್ಸು ವಿಟ್ಲ ಪೇಟೆಯಲ್ಲಿ ಅದರಲ್ಲಿಯೂ ನಿಲುಗಡೆ ನಿಷೇಧಿತ ಸ್ಥಳದಲ್ಲಿ 15 ನಿಮಿಷಗಳಿಗಿಂತಲೂ ಹೆಚ್ಚು ಅವಧಿ ನಿಲ್ಲುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಸದಸ್ಯರು ಒತ್ತಾಯಿಸಿದರು.
ಅಣೆಕಟ್ಟು ನಿರ್ಮಾಣದಿಂದ ಅಡಕೆ ಸಸಿಗಳು ನಾಶವಾದ ನಾರಾಯಣ ಟೈಲರ್ ಅವರಿಗೆ ಪರಿಹಾರ ನೀಡುವಂತೆ ಕೃಷಿ ಇಲಾಖೆಗೆ ಶಿಫಾರಸ್ಸು ಮಾಡುವ ಬಗ್ಗೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಬಗ್ಗೆ, ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯಿತಿಯಿಂದ ಕಾಮಗಾರಿ ನಡೆಸಿ ಅದೆಷ್ಟು ಸಮಯವಾದರೂ ಪಾವತಿಯಾಗಿಲ್ಲ. ಈ ಬಗ್ಗೆ ಸಭೆಯಲ್ಲಿ ಸ್ಪಷ್ಟನೆ ಕೇಳಿದಾಗ ಆಡಳಿತ ಪಕ್ಷದ ಸದಸ್ಯ ಮತ್ತು ಪ್ರತಿಪಕ್ಷದ ಸದಸ್ಯರೊಳಗೆ ವಾಗ್ವಾದ ನಡೆಯಿತು. ಸ್ಥಾಯೀ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಪ.ಪಂ. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಕಿರಿಯ ಅಭಿಯಂತರ ಶ್ರೀಧರ ನಾಯ್ಕ ಭಾಗವಹಿಸಿದ್ದರು. ಕೌನ್ಸಿಲರ್ಗಳಾದ ಶ್ರೀಕೃಷ್ಣ, ವಿ.ರಾಮದಾಸ ಶೆಣೈ, ಮಂಜುನಾಥ ಕಲ್ಲಕಟ್ಟ, ಉಷಾ ಕೆ, ಲೋಕನಾಥ ಶೆಟ್ಟಿ, ಜಯಂತ, ಸುನೀತಾ ಕೋಟ್ಯಾನ್, ಗೀತಾ ಪುರಂದರ, ಕೆ.ಚಂದ್ರಕಾಂತಿ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ, ದಮಯಂತಿ, ಸಂಧ್ಯಾ ಮೋಹನ್ ಎಸ್., ಲತಾ ಅಶೋಕ್ ಪೂಜಾರಿ, ಅಬ್ಬೋಕರೆ ವಿ., ಇಂದಿರಾ ಅಡ್ಡಾಳಿ, ಅಬ್ದುಲ್ ರಹಿಮಾನ್ ಹಸೈನಾರ್ ಉಪಸ್ಥಿತರಿದ್ದರು.
Be the first to comment on "ವಿಟ್ಲದಲ್ಲಿ ವಾಹನ ಪಾರ್ಕಿಂಗ್ ಗೆ ಕಟ್ಟುನಿಟ್ಟಿನ ಕ್ರಮ"