ಮಹಾಮಂಗಲದ ಬಳಿಕ ಇನ್ನು ಗೋಹತ್ಯೆ ಸುಲಭವಲ್ಲ, ಗೋಘಾತುಗರು ನಿದ್ದೆಗೆಡುವಂತಾಗಿದೆ. ಗೋಯಾತ್ರೆಯ ಮಹಾಮಂಗಲ ಮೂಲಕ ಗೋರಕ್ಷೆಯ ಕಾರ್ಯಕ್ಕೆ ಬಲ ಬಂದಿದೆ. ತ್ಯಾಗ, ಸಮರ್ಪಣೆಯಿಂದ ಯಾತ್ರೆ ಯಶಸ್ವಿಯಾಗಿದೆ. ಇನ್ನು ಗ್ರಾಮ, ಗ್ರಾಮಗಳಲ್ಲಿ ಗೋದೀಕ್ಷೆ ಪಡೆದು ಗೋರಕ್ಷಕರ ಸಂಖ್ಯೆಯನ್ನು ಸಂಯೋಜನೆ ಮಾಡುವ ಕಾರ್ಯ ನಡೆಯಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸೋಮವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಮಂಗಲ ಗೋಯಾತ್ರೆಯ ಮಹಾ ಮಂಗಲದ ಅವಲೋಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಪರಿವರ್ತನೆ ಹಾದಿ ತುಳಿದವರಿಗೆ ಸಂಕಷ್ಟ, ಷಡ್ಯಂತ್ರ, ಇದ್ದದ್ದೇ. ಕಾರ್ಯಕ್ರಮಗಳು ಮಳೆಯ ರೀತಿಯಲ್ಲಿ ಇದ್ದು, ಸಂಘಟನೆ ಹಾಗೂ ಕಾರ್ಯಕರ್ತರು ಹೊಳೆಯ ಹಾಗೆ ವರ್ಷಾಪೂರ್ತಿ ಹರಿಯುತ್ತಿರಬೇಕು. ಸರಿ ಎಂದು ಕಾಣುವುದನ್ನು ಮುನ್ನುಗ್ಗಿ ಮಾಡಬೇಕು ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಶಂಕರಾಚಾರ್ಯ ಪೀಠದಲ್ಲಿ ಕಳಂಕ ಬರಲು ಸಾಧ್ಯವೇ ಇಲ್ಲ. ಸಮರ್ಪಣಾ ಭಾವದಿಂದ ಪ್ರತಿಯೊಬ್ಬರೂ ತೊಡಗಿಸಿಕೊಂಡು ಗೋವಿನ ಕಾರ್ಯದಲ್ಲಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದಾರೆ ಎಂದರು.
ಉತ್ತರಕಾಶಿ ಶ್ರೀಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ, ಮಾಲೂರು ಶ್ರೀ ಲೋಕೇಶಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉಪಸ್ಥಿತರಿದ್ದರು. ಹರಿಪ್ರಸಾದ್ ಪೆರಿಯಾಪು ಕಾರ್ಯಕ್ರಮ ನಿರೂಪಿಸಿದರು.
Be the first to comment on "ತ್ಯಾಗ, ಸಮರ್ಪಣೆಯಿಂದ ಗೋಯಾತ್ರೆ ಮಹಾಮಂಗಲ ಯಶಸ್ವಿ: ರಾಘವೇಶ್ವರ ಸ್ವಾಮೀಜಿ"