ಎಳೆ ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರವನ್ನು ಕಲಿಸುವ ಕಾರ್ಯ ಹೆತ್ತವರಿಂದ ಆಗಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಗಾಳದ ಕೊಂಕಣಿ ಅಭ್ಯುಧಯ ಸಂಘದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಸೋಮನಾಥ ಉಳಿಯ ಆಡಳಿತ ಸಮಿತಿ, ಶ್ರೀ ಸೋಮೇಶ್ವರಿ ಮಹಿಳಾ ಮಂಡಳಿ, ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ಸಂಘ ಹಾಗೂ ಮುಂಬೈ ಸಜ್ಜನ ಸೇವಾ ಸಂಘದ ಸಹಕಾರದೊಂದಿಗೆ ಭಾನುವಾರ ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿ ನಡೆದ ಗಾಳದ ಕೊಂಕಣಿ ಸಮುದಾಯದ ವಟುಗಳಿಗೆ ನಡೆದ ಸಾಮೂಹಿಕ ಉಪನಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ದೇವರನ್ನು ಸ್ಮರಿಸಲು ಉಪನಯನ ಸಹಕಾರಿಯಾಗಿದೆ. ಇದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರಕುತ್ತದೆ. ಈ ದೆಸೆಯಲ್ಲಿ ಸಮುದಾಯದ ಕಾರ್ಯ ಅಭಿನಂದನೀಯವಾಗಿದೆ ಎಂದರು.
ಸಾಮೂಹಿಕ ತಪ್ತಮುದ್ರಧಾರಣೆಯನ್ನೂ ಶ್ರೀಗಳು ನೆರವೇರಿಸಿದರು. ಗಾಳದ ಕೊಂಕಣಿ ಅಭ್ಯುಧಯ ಸಂಘದ ಅಧ್ಯಕ್ಷ ನರಸಿಂಹ ನಾಕ್ ಹರೇಕಳ, ಉಪಾಧ್ಯಕ್ಷ ರಂಜನ್ ಮಣ್ಣಗುಡ್ಡೆ, ಶ್ರೀ ಅರಸು, ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ಎಸ್.ರಾಮ ನಾಕ್, ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಉಮಾನಾಥ್ ನಾಕ್ ಉಳ್ಳಾಲ, ಶ್ರೀ ಸೋಮೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಹೇಮಾ ಮಂಕಿಸ್ಟ್ಯಾಂಡ್, ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ನಾಕ್ ಕಲ್ಲಾಪು, ಕಾರ್ಯಾಧ್ಯಕ್ಷ ಶಿವಾನಂದ ನಾಕ್, ಪ್ರಧಾನ ಕಾರ್ಯದರ್ಶಿ ಯು.ದಯಾನಂದ ನಾಕ್ ಮೊದಲಾದವರು ಉಪಸ್ಥಿತರಿದ್ದರು.
ಸ್ಯಾಕ್ಸೋಫೋನ್ ವಾದಕಿ, ಯುವ ಪ್ರತಿಭೆ ಶಾಲ್ಮಳಿ ಕುದ್ರೋಳಿ ಅವರನ್ನು ಸನ್ಮಾನಿಸಲಾಯಿತು. ಗಾಳದ ಕೊಂಕಣಿ ಅಭ್ಯುದೋಯ ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿ ಜಯ ನಾಕ್ ಸ್ವಾಗತಿಸಿ ವಂದಿಸಿದರು. 29 ವಟುಗಳು ಈ ಸಾಮೂಹಿಕ ಉಪನಯನದಲ್ಲಿ ಭಾಗವಹಿಸಿದ್ದರು.
Be the first to comment on "ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರ ಕಲಿಸಿ: ಅದಮಾರು ಸ್ವಾಮೀಜಿ"