- ಪ್ರೊ. ರಾಜಮಣಿ ರಾಮಕುಂಜ
ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ಈ ದೇವಾಲಯಕ್ಕೆ ದಾಖಲಿತ ಇತಿಹಾಸವಿಲ್ಲ. ಭಾವುಕ ಜನರ ನಂಬಿಕೆಯಂತೆ, ನಂದ ಅರಸರ ಕಾಲದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ ಈ ದೇವಾಲಯ ಪ್ರಸರಿಸಿತ್ತು ಅನ್ನುವುದು ಪ್ರಚಲಿತದಲ್ಲಿರುವ ಮಾತು.
ಪೊಲೀಸ್ ಸಿಬ್ಬಂದಿ ವರ್ಗದವರಿಂದ ಆರಂಭದ ದಿನಗಳಲ್ಲಿ ಅಸ್ತಿತ್ವವನ್ನು ಪಡೆದ ಈ ದೇವಾಲಯ ಮುಂದಕ್ಕೆ ಸಾರ್ವಜನಿಕರ ಸಹಕಾರದೊಂದಿಗೆ ಬೃಹತ್ ದೇವಾಲಯವಾಗಿ ನಿರ್ಮಾಣಗೊಂಡಿತು. ಶಿವ ಸಾನ್ನಿಧ್ಯಕ್ಕೂ ಇಂಬುಕೊಡುತ್ತಿರುವ ಈ ದೇವಾಲಯ ವಿಶೇಷವಾಗಿ ನಾಗ ಸಾನ್ನಿದ್ಧ್ಯವನ್ನೂ ಪಡೆದಿದೆ. ಗರ್ಭಗುಡಿ, ಸುತ್ತ ಪೌಳಿ ಇಲ್ಲಿನ ಪ್ರಧಾನ ವಾಸ್ತು ರಚನೆ. ತಾಮ್ರದ ಮೇಲ್ಛಾವಣಿ ಹೊಂದಿದ್ದು, ಶಿಲಾಮಯವಾದ ಮತ್ತು ಕೀರ್ತಿಮುಖವನ್ನೂ ಹೊಂದಿರುವ ಗಜಪೃಷ್ಠಾಕಾರದ ದೇವಾಲಯವಿದು.
ಪಶ್ಚಿಮಾಭಿಮುಖವಾಗಿರುವ ಈ ದೇವಾಲಯದ ನೈಋತ್ಯ ಭಾಗದಲ್ಲಿ ಗಣಪತಿಯ ಗುಡಿಯಿದೆ. ಹೊರಾಂಗಣದ ನೈಋತ್ಯ ಭಾಗದಲ್ಲಿ ನಾಗನ ಕಟ್ಟೆಯಿದೆ. ಸ್ಥಳ ದೈವವಾಗಿ ಗುಳಿಗನ ಸಾನ್ನಿಧ್ಯವಿದೆ.
ದಸರಾ ಸಂದರ್ಭದಲ್ಲಿ ನವರಾತ್ರಿ ಪೂಜೆ, ಈ ಅವಧಿಯಲ್ಲಿ ಪ್ರತಿ ದಿನ ಚಂಡಿಕಾ ಯಾಗ, ಸಾರ್ವಜನಿಕ ಅನ್ನ ಸಂತರ್ಪಣೆ, ಆಶ್ಲೇಷ ಬಲಿ ಇತ್ಯಾದಿಗಳು ನಡೆಯುತ್ತವೆ. ದಿನಾಂಕ 11.03.2009 ರಿಂದ 16.03.2009 ರವರೆಗೆ ಇಲ್ಲಿ ಬಿಂಬ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಶೇಕ ಇಲ್ಲಿ ನಡೆದಿತ್ತು.
ಈ ಕಾರಣಿಕ ಕ್ಷೇತ್ರದಲ್ಲಿ ದಿನಾಂಕ 30.01.2017ನೇ ಸೋಮವಾರ ಸೂರ್ಯೋದಯದಿಂದ, ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿಕ್ಕಿದೆ. ಬೆಳಿಗ್ಗೆ 7.30 ಕ್ಕೆ ಪ್ರಾರ್ಥನೆ, ಗಣಪತಿ ಹೋಮ, ಗಂಟೆ ಎಂಟರಿಂದ ನವಚಂಡಿಕಾಹೋಮ, 12 ಕ್ಕೆ ಮಹಾಪೂಜೆ, 1 ರಿಂದ ಅನ್ನ ಸಂತರ್ಪಣೆ, ಸಂಜೆ ೪ರಿಂದ 6.30 ರವರೆಗೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7 ಕ್ಕೆ ನೃತ್ಯ ಬಲಿ, ಬಟ್ಟಲು ಕಾಣಿಕೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ. ಜಾತ್ರಾ ಬಾಬ್ತು ದಿನಾಂಕ 31.01.2017ರಂದು ರಾತ್ರಿ ಗಂಟೆ 8 ರಿಂದ ಸ್ಥಳ ದೈವ ಗುಳಿಗನ ವರ್ಷಾವಧಿ ಕೋಲ ನಡೆಯಲಿಕ್ಕಿದೆ.
Be the first to comment on "ಬಿ.ಸಿ.ರೋಡ್ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ"