ಬಿ.ಸಿ.ರೋಡ್ ವಾಮದಪದವು ಮಾರ್ಗದ ಸನಿಹ ಪೆಜಕಳ ಎಂಬಲ್ಲಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು ಜಾತ್ರೆ
- ಪ್ರೊ. ರಾಜಮಣಿ ರಾಮಕುಂಜ
ಬಿ.ಸಿ.ರೋಡಿನಿಂದ ವಾಮದಪದವಿಗೆ ಹೋಗುವಾಗ ಒಂದು ಕಿಲೋಮೀಟರ್ ಮೊದಲೇ ಬಲ ಬದಿಗೆ ಸಿಗುವ ಕಚ್ಚಾರಸ್ತೆಯಲ್ಲಿ ಕಾಲು ನಡಿಗೆಯಲ್ಲಿ ಕಾಲು ಗಂಟೆ ಕ್ರಮಿಸಿದರೆ, ಗದ್ದೆ ತೋಟಗಳ ಅಂಚಿನಲ್ಲಿ ಸಿಗುವುದೇ ಪೆಜಕಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ.
ಸುಮಾರು ಎರಡುವರೆ ಅಡಿಗಳಷ್ಟು ಎತ್ತರವಿರಬಹುದಾದ ದೊರಗು ಶಿಲೆಯ ಈ ಮೂರ್ತಿಯನ್ನು ಮಯೂರ ವರ್ಮನು ಕೊಡಮಾಡಿದನೆಂದು ಪ್ರತೀತಿ. ಈತ ಅಹಿಚ್ಚತ್ರದಿಂದ 64 ಕುಲದ ಶಿವಳ್ಳಿ ಬ್ರಾಹ್ಮಣರನ್ನು ಕರೆತಂದಿದ್ದಾನಂತೆ. ಅವರಲ್ಲಿ ನಾಲ್ಕು ಮಂದಿ ಗ್ರಾಮಣಿಗಳಾದ ಪೂಂಜ ಬೈಪಾಡಿತ್ತಾಯ, ವಾಮದ ಪದವು ಅಜ್ಜಿಬೆಟ್ಟು ಸಮೀಪದ ಬಲ್ಲಾಳ, ಕುಞ್ಞೋಡಿ ಕುಞಣ್ಣಾಯ, ಪಾಂಗಲ್ಪಾಡಿ ಪಾಂಗಣ್ಣಾಯ ಈ ನಾಲ್ವರಿಗೆ ಪೂಜಾವಿಧಿಗಾಗಿ ಈ ಕಲ್ಲಿನ ಪ್ರತಿಮೆಗಳನ್ನು ಒಪ್ಪಿಸಿದ್ದನಂತೆ. ಇದರ ಜತೆಯಲ್ಲಿ ಈ ನಾಲ್ಕು ಗ್ರಾಮಣಿಗಳ ಕುಲ ಪುರೋಹಿತರಾದ ಕಕ್ರಣ್ಣಾಯರಿಗೆ ಇನ್ನೊಂದು ಮೂರ್ತಿಯನ್ನು ಪೂಜಿಸುವ ದೃಷ್ಟಿಯಿಂದ ಕೊಡಮಾಡಿದನಂತೆ. ಈ ಐದು ಮೂರ್ತಿಗಳಿಗೆ ಸಂಬಂಧಿಸಿದಂತೆ ಐದು ದೇವಾಲಯಗಳಿದ್ದವು. ಆದರೆ, ಬಲ್ಲಾಳರಿಗೆ ಸಂಬಂಧಿತ ದೇವಾಲಯವನ್ನು ಬಿಟ್ಟರೆ ಉಳಿದ ಎಲ್ಲಾ ನಾಲ್ಕು ಮೂರ್ತಿಗಳಿಗೂ ಇಂದು ದೇವಾಲಯಗಳಿವೆ. ಎಲ್ಲಾ ಮೂರ್ತಿಗಳೂ ಕೂಡ ಲಕ್ಷಣದಲ್ಲಿ ಒಂದೇ ರೀತಿಯಿದೆ. ಎಡ ಭಾಗದ ಮೇಲ್ಗೈಯಲ್ಲಿ ಶಂಖ, ಕೆಳಗೈಯಲ್ಲಿ ಗದೆ, ಬಲ ಭಾಗದ ಮೇಲ್ಗೈಯಲ್ಲಿ ಚಕ್ರ, ಕೆಳಗೈಯಲ್ಲಿ ಪದ್ಮ(?)ಗಳೆಂಬ ಆಯುಧಗಳಿವೆ. ಬಲಭಾಗದ ಕೆಳಗೈಯಲ್ಲಿರುವುದು ಪದ್ಮವೆಂದರೂ ಅದೊಂದು ಪಿಂಡದಂತಿದ್ದು ಪಿಂಡ ಜನರ್ಧನನೆಂದು ಸಂಶಯ ಹುಟ್ಟಿಸುತ್ತದೆ. ದೇವಾಲಯದ ರಚನೆ ದುಂಡಗಾಗಿದ್ದು, ಗರ್ಭಗುಡಿ ಒಂದು ಆವರಣವಾದರೆ, ಇದರ ಹೊರಗೆ ಇನ್ನೊಂದು ದುಂಡಗಿನ ಆವರಣವಿದೆ.ಇವುಗಳ ಮಧ್ಯೆ ಇಡೆನಾಳ್ಯವಿದೆ. ಎದುರು ಬದಿ ತೀರ್ಥ ಮಂಟಪ ಹಾಗೂ ಮುಂಭಾಗದಲ್ಲಿ ಮಾತ್ರ ಗೋಪುರವಿದೆ. ಉಳಿದ ಮೂರು ದೇವಾಲಯಗಳಂತೆಯೆ ಇದಕ್ಕೂ ರೂ.ನಾಲ್ಕು ತಸ್ತೀಕು ಇದೆ. ಇಂದು ಇಲ್ಲಿ ಜಾತ್ರಾ ಸಂಭ್ರಮ. ಬೆಳಿಗ್ಗೆ ೮ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪಂಚಾಮೃತ ಅಭಿಷೇಕ, ನವಕ ಕಲಶಭಿಷೇಕ, ಪ್ರಧಾನ ಹೋಮ, ಮಧ್ಯಾಹ್ನ 12ಕ್ಕೆ ಹಾಲು ಪಾಯಸ ಸೇವೆ, ಪ್ರಸನ್ನ ಪೂಜೆ, ಸಂಜೆ ೫ಕ್ಕೆ ಸಾರ್ವಜನಿಕ ಶನಿಪೂಜೆ, ದೈವಗಳಿಗೆ ಪರ್ವ, 6.30 ರಿಂದ ಐದು ದಿನಗಳ ಅವಧಿಯ ಭಜನಾ ಮಂಗಲೋತ್ಸವ, ರಂಗಪೂಜೆ, ರಾತ್ರೆ 9ಕ್ಕೆ ಸರಿಯಾಗಿ ದೇವರ ಬಲಿ ಹೊರಟು ಉತ್ಸವ, ಗಂಟೆ ಹತ್ತಕ್ಕೆ ಕೆರೆಕಟ್ಟೆ ಉತ್ಸವದೊಂದಿಗೆ ಒಂದು ದಿನದ ಜಾತ್ರೆ ಸಮಾಪ್ತಿಗೊಳ್ಳುತ್ತದೆ.
(ಲೇಖಕರು ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ನಿವೃತ್ತ ಪ್ರಾಧ್ಯಾಪಕರು, ಹಾಗೂ ಸಂಶೋಧಕರು)
Be the first to comment on "ಜಾತ್ರಾ ಸಂಭ್ರಮದಲ್ಲಿ ಪುಚ್ಚಿಪ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪೆಜಕಳ"