ಎರಡು ದಿನಗಳ ಬಳಿಕ ಇದೇ ಸ್ಥಳದಲ್ಲಿ ವಿಶ್ವದಲ್ಲಿ ಹೊಸದೊಂದು ಶಕ್ತಿ ಉದಯವಾಗಲಿದೆ. ಅದು ಗೋವಿನ ಸುತ್ತ ಭದ್ರ ಕೋಟೆ ಕಟ್ಟಿ, ಗೋವಿನ ಕಾವಲಿಗೆ ನಿಲ್ಲಲಿದೆ. ತನ್ಮೂಲಕ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಶಕ್ತಿ ತೋರಲಿದೆ ಎಂದು ಎಂದು ಶ್ರೀ ರಾಮಚಂದ್ರಾಫುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಕೂಳೂರಿನ ಮಂಗಲಭೂಮಿಗೆ ಮಂಗಲ ಗೋಯಾತ್ರೆಯ ಪುರಪ್ರವೇಶದಲ್ಲಿ ಗೋಧ್ವಜ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಗೋಯಾತ್ರೆ ಸಂಚರಿಸಿದಲ್ಲೆಲ್ಲ ಹೊಸ ಹೊಸ ಪ್ರೇರಣೆ ನೀಡಿದೆ. ಗೋವಿದ್ದರೆ ನಾವು ಎಂಬ ಸಂದೇಶವನ್ನು ಸಮಾಜಕ್ಕೆ ತೋರಿಸಿಕೊಟ್ಟಿದೆ. ಸಮಸ್ತ ಸಂತ ಶಕ್ತಿ ಇದರ ಹಿಂದಿದೆ. ಜಾತಿ ಭೇದ ಮರೆತು ಗೋಮಾತೆಯ ರಕ್ಷಣೆಗೆ ಮುಂದಾಗೋಣ ಎಂದು ಕರೆ ನೀಡಿದರು.
ಗೋಹತ್ಯೆ ನಿಲ್ಲಿಸಬೇಕೆಂದು ಅಲ್ಲಲ್ಲಿ ಧ್ವನಿ ಕೇಳಿ ಬರುತ್ತಿದೆ. ಇದು ಚುಕ್ಕಿಗಳಿದ್ದಂತೆ. ಈ ಚುಕ್ಕಿಗಳನ್ನು ಗೆರೆ ಎಳೆದು ಒಂದು ಮಾಡಿ ಗೋರಕ್ಷಣೆಯ ಹಿಂದೆ ಮಹಾನ್ ಶಕ್ತಿ ಇದೆ ಎಂದು ಪ್ರದರ್ಶಿಸಬೇಕಿದೆ ಎಂದು ಹೇಳಿದರು.
ಇಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉಪಸ್ಥಿತಿ ಮಾತ್ರ ನಮ್ಮ ಬೇಡಿಕೆ. ಬೇರೆ ಯಾವುದೇ ಬೇಡಿಕೆ ಇಲ್ಲಿಲ್ಲ ಎಂದು ಶ್ರೀಗಳು ಭಾವುಕರಾಗಿ ನುಡಿದರು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, “ವಿಶ್ವದಾಖಲೆಯ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲದಿದ್ದ ನಮಗೆ ಇದೀಗ ಗೋ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ. ಇದರಲ್ಲಿ ಯಾರಿಗೂ ಸಾವಿನ ಭಯವಿಲ್ಲ. ಯಾಕೆಂದರೆ ನಾಳೆ ಇಲ್ಲಿ ಸಾವಿರದ ಸಂತರೇ ಈ ಸಂಗ್ರಾಮದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
ಗೋಮಂಗಲ ಯಾತ್ರೆಗೆ ಸರ್ಕಾರದಿಂದ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಆದರೆ ಈ ಮಂಗಲ ಕಾರ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ. ಇಷ್ಟು ದೊಡ್ಡ ಕಾರ್ಯಕ್ರಮವಾಗುತ್ತಿದ್ದರೂ, ಸರ್ಕಾರದ ಒಬ್ಬನೇ ಒಬ್ಬ ಸಚಿವ ಇದರಲ್ಲಿ ಪಾಲ್ಗೊಂಡಿಲ್ಲ. ಇದು ವಿಷಾದದ ಸಂಗತಿ ಎಂದರು.
ಮೂಡಬಿದರೆಯ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹುಲಿಯ ಬದಲು ಗೋವು ದೇಶದ ಪ್ರಾಣಿಯಾಗಲಿ. ಈ ಮೂಲಕ ಅದರ ಹತ್ಯೆ ನಿಲ್ಲಲ್ಲಿ ಎಂದರು.
ಗರ್ತಿಕೆರೆ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಗೋರಕ್ಷಣೆಗೆ ಹೋರಾಡುತ್ತಿರುವ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಆಧುನಿಕ ಭಗೀರಥನೆನಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಲ್ಯೊಟ್ಟು ಗುರುಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬ್ರಹ್ಮಕುಮಾರಿ ವಿಶ್ವೇಶ್ವರಿ ಅಕ್ಕ, ಕಲ್ಲಡ್ಕ ಡಾ.ಪ್ರಭಾಕರ ಭಟ್ ವೇದಿಕೆಯಲ್ಲಿದ್ದರು. ಗೋಮಂಗಲ ಯಾತ್ರೆಯ ದಿಗ್ದರ್ಶಕ ಡಾ.ವೈ.ವಿ.ಕೃಷ್ಣಮೂರ್ತಿ ಸಪ್ತ ರಾಜ್ಯಗಳಲ್ಲಿ ಸಂಚರಿಸಿದ ಗೋಯಾತ್ರೆಯ ಸಾಧನಾ ವರದಿ ನೀಡಿದರು. ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಗೋವನ್ನು ಉಳಿಸುವ ಕಾರ್ಯಕ್ಕೆ ಕೈಜೋಡಿಸಿ: ರಾಘವೇಶ್ವರ ಸ್ವಾಮೀಜಿ"