ನಮ್ಮಲ್ಲಿ ಎಲ್ಲರೂ ನಾಯಕತ್ವ ತರಬೇತಿ ಪಡೆಯಲು ಬಯಸುತ್ತಾರೆ ಹೊರತು ಹಿಂಬಾಲಕರಾಗಲು ಏನೆಲ್ಲಾ ಗುಣಲಕ್ಷಣಗಳಿರಬೇಕು ಎಂದು ಯಾರೂ ತರಬೇತಿ ಕೊಡುವುದಿಲ್ಲ.
- ಡಾ.ಅಜಕ್ಕಳ ಗಿರೀಶ ಭಟ್ಟ
- ಅಂಕಣ – ಗಿರಿಲಹರಿ
ಭಾರತದ ಕ್ರಿಕೆಟ್ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ತಾನು ನಾಯಕತ್ವದಿಂದ ನಿವೃತ್ತಿ ಘೋಷಿಸಿದಾಗ ಹಲವರು ವಿಶ್ಲೇಷಣೆಗಾರರು ಸ್ವಾಗತಿಸಿದರು. ಇನ್ನು ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಮುಖ್ಯವಾದ ಸಂಗತಿಯೆಂದರೆ ಇಷ್ಟು ಹಿರಿಯ ಪ್ರಾಯದಲ್ಲಿ ಸಾಮಾನ್ಯವಾಗಿ ಆಟಗಾರರು ನಾಯಕತ್ವದಿಂದ ನಿವೃತ್ತಿಯಾಗುವುದರ ಜೊತೆ ಕಣದಿಂದಲೂ ನಿವೃತ್ತರಾಗುತ್ತಾರೆ. ಇತರರ ನಾಯಕತ್ವದಲ್ಲಿಆಡಲು ತಯಾರಾಗಿರುವುದಿಲ್ಲ. ಧೋನಿಯ ವಿಶೇಷತೆ ಇರುವುದೇ ಇಲ್ಲಿ. ಹಿಂದೆ ಕೂಡ ನಾಯಕತ್ವ ಬಿಟ್ಟವರು ಇದ್ದರಾದರೂ ಯಶಸ್ವಿಯಾದ ಮತ್ತು ವಯಸ್ಸು ಮತ್ತು ಅನುಭವದಲ್ಲಿ ಹಿರಿಯನಾದ ನಾಯಕ ಇನ್ನೊಬ್ಬನ ಹಿಂಬಾಲಕನಾಗಲು ಸಿದ್ಧನಾಗುವುದು ಅಷ್ಟು ಸುಲಭವಲ್ಲ.
ಇದು ತರಬೇತಿಗಳ ಕಾಲ. ಶಾಲಾ ಕಾಲೇಜುಗಳ ಬೋಧಕರಿಗಂತೂ ಪಾಠ ಮಾಡುವುದಕ್ಕೆಅಥವಾ ತಾವು ಪಡೆದ ತರಬೇತಿಯನ್ನು ಅನುಷ್ಠಾನಕ್ಕೆ ತರಲೂ ಪುರುಸೊತ್ತಿಲ್ಲದಂತೆ ಪದೇ ಪದೇ ತರಬೇತಿಗಳು. ವಿದ್ಯಾರ್ಥಿಗಳಿಗೂ ಹಾಗೆಯೇ. ಎಲ್ಲದಕ್ಕೂ ತರಬೇತಿಯಿದೆ. ಸಂದರ್ಶನ ಎದುರಿಸುವುದು ಹೇಗೆ ಎಂದು ಹೇಳಿಕೊಡುವ ತರಬೇತಿಗಳಿವೆ. ವಸ್ತುಗಳನ್ನು ಮಾರಾಟ ಮಾಡುವುದು ಹೇಗೆ ಎಂದು ಹೇಳಿಕೊಡಲು ತರಬೇತಿಯಿದೆ. ಇನ್ನು ಪರೀಕ್ಷೆ ಎದುರಿಸುವ ಕ್ರೇಶ್ ಕೋರ್ಸುಗಳು ಹೇಗೂ ಇವೆಯಲ್ಲ. ಹಾಗಂತ ನಾಪಾಸಾಗುವಿಕೆಯನ್ನು ಹೇಗೆ ಎದುರಿಸಬೇಕು ಎಂಬ ತರಬೇತಿಯಿಲ್ಲ.
ಗೆಲ್ಲಲಿಕ್ಕಾಗಿಯೇ ನಮ್ಮ ತರಬೇತಿಗಳು ಇರುವುದರಿಂದ ಸೋಲನ್ನುಎದುರಿಸುವ ತರಬೇತಿ ಅನ್ನುವ ಪರಿಕಲ್ಪನೆಗೆ ಅಷ್ಟು ಗಮನ ಸಿಕ್ಕಿಲ್ಲ. ಹೀಗಾಗಿ ಸೋಲು ನಮ್ಮನ್ನುಕಂಗೆಡಿಸುತ್ತದೆ. ಹಾಗೆ ನೋಡಿದರೆ ಹತ್ತನೇ ತರಗತಿ ಮತ್ತು ದ್ವಿತೀಯ ಪದವಿಪೂರ್ವ ತರಗತಿಯಲ್ಲಿ ನೂರು ಶೇಕಡಾ ಅಂಕಗಳನ್ನು ಪಡೆದವರ ಬಗ್ಗೆ ಬೇಕಾದಷ್ಟು ಪತ್ರಿಕೆಗಳಲ್ಲಿ ಅಥವಾ ಇತರ ಮಾಧ್ಯಮಗಳಲ್ಲಿ ಕಾಣುತ್ತೇವೆ. ಆದರೆ ನಾವು ಗಮನಿಸಬೇಕಾದದ್ದೆಂದರೆ ಅದೇ ತರಗತಿಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು ನಾಪಾಸು ಕೂಡ ಆಗಿರುತ್ತಾರೆ. ಅವರೆಲ್ಲ ಹತಾಶರಾಗುವುದೂ ಇಲ್ಲ. ಒಂದೋ ಇನ್ನೊಮ್ಮೆ ಪರೀಕ್ಷೆ ಬರೆಯುತ್ತಾರೆ ಅಥವಾ ಬೇರೇನಾದರೂ ಉದ್ಯೋಗ ಹುಡುಕುತ್ತಾರೆ. ಅಥವಾ ಉಂಡಾಡಿ ಗುಂಡ/ಗುಂಡಿಯರಾಗಬಹುದು. ಆತ್ಮಹತ್ಯೆ ಇತ್ಯಾದಿಗೆ ಹೋಗುವವರು ಪ್ರಮಾಣದ ದೃಷ್ಟಿಯಿಂದ ಕಡಿಮೆಯೇ. ಅಂತೂ ಸೋಲನ್ನು ಎದುರಿಸುವ ತರಬೇತಿಯನ್ನು ಹೊಂದಿದವರು ಸೋತಾಗ ಹತಾಶರಾಗುವ ಸಂಭವ ಕಡಿಮೆ.
ನಾನು ಹೇಳಲು ಹೊರಟ ವಿಚಾರವೇನೆಂದರೆ ಅದು ಈ ನಾಯಕತ್ವ ತರಬೇತಿಯದು.
ಬೇರೆ ಬೇರೆ ಸಂಘ ಸಂಸ್ಥೆಗಳಿಗೆ ಸೇರಿಕೊಂಡರೆ ನಾಯಕತ್ವ ತರಬೇತಿ ಸುಲಭವಾಗಿ ದೊರೆಯುತ್ತದೆ ಅಂತ ನಾವು ಸಾಮಾನ್ಯವಾಗಿ ನಂಬುತ್ತೇವೆ. ನಾಯಕತ್ವ ಎಂದರೇನು?
ಯಾರೋ ಒಬ್ಬರು ಹೇಳಿದ್ದುಂಟು: ತನ್ನ ಕೆಲಸವನ್ನು ಬೇರೆಯವರ ಮೂಲಕ ಮಾಡಿಸುವುದೇ ನಾಯಕತ್ವ ಗುಣ ಅಂತ. ಇರಬಹುದೇನೋ. ಮತ್ತೆ ಕೆಲವರು ವೇದಿಕೆಯಲ್ಲಿ ಮಾತನಾಡುವುದೇ ನಾಯಕತ್ವ ಎಂದು ಭಾವಿಸುವುದುಂಟು.ಇಲ್ಲಿ ನಿಮಗೆ ರಾಜಕೀಯ ನಾಯಕತ್ವದ ನೆನಪು ಬಂದೀತು. ಬೆಂಗಳೂರಿನಲ್ಲಿ ನಡೆದ ಒಂದು ವಿಚಾರ ಸಂಕಿರಣಕ್ಕೆ ನನ್ನನ್ನು ಸಂಪನ್ಮೂಲ ವ್ಯಕ್ತಿಯಾಗಿ ಕರೆದಿದ್ದರು. ಅಲ್ಲಿ ಕೆಲವರನ್ನು ಸನಮಾನಿಸುವ ಕಾರ್ಯಕ್ರಮ ಕೂಡ ಇತ್ತು.ಅದನ್ನು ಆಯೋಜಿಸಿದವರಿಗೆ ಆ ವಿಚಾರಸಂಕಿರಣದ ಮೂಲಕ ಮತ್ತು ನಾಡಿನ ಹಲವರನ್ನುಸನ್ಮಾನಿಸುವ ಮೂಲಕ ತಮ್ಮ ಸಂಸ್ಥೆಯನ್ನು ಪ್ರಚಾರಗೊಳಿಸುವ ಉದ್ದೇಶ ಕೂಡ ಇತ್ತು.
ಆ ಸಂಸ್ಥೆ ಭಾವಿ ರಾಜಕೀಯ ನಾಯಕರಿಗೆ ತರಬೇತಿಗೊಳಿಸುವ ಸಂಸ್ಥೆ.ಅಷ್ಟೇ ಅಲ್ಲ, ಆ ಸಂಸ್ಥೆಯ ಇನ್ನೊಂದು ವಿಶೇಷವೆಂದರೆ ಅಲ್ಲಿ ಪ್ರೇಮಿಗಳಿಗೂ ತರಬೇತಿಕೊಡುವ ವ್ಯವಸ್ಥೆಇತ್ತು. ಹಾಗಂತ ಅದರ ನಾಯಕರು ಹೇಳಿದರು. ಎಷ್ಟು ಮಂದಿ ಈ ವಿಷಯದಲ್ಲಿತರಬೇತಿ ಪಡೆದರು ಎಂದು ನಾನು ಕೇಳಲಿಲ್ಲ.
ನಮ್ಮಲ್ಲಿ ಎಲ್ಲರೂ ನಾಯಕತ್ವ ತರಬೇತಿ ಪಡೆಯಲು ಬಯಸುತ್ತಾರೆ ಹೊರತು ಹಿಂಬಾಲಕರಾಗಲು ಏನೆಲ್ಲಾ ಗುಣಲಕ್ಷಣಗಳಿರಬೇಕು ಎಂದು ಯಾರೂ ತರಬೇತಿ ಕೊಡುವುದಿಲ್ಲ.
ನಾನು ಈಚೆಗೆ ಆಲೋಚಿಸುತ್ತಿರುವಂತೆ ನಮ್ಮದೇಶದ ದೊಡ್ಡ ಸಮಸ್ಯೆ ನಾಯಕತ್ವ ಗುಣ ಕಡಿಮೆ ಇರುವುದು ಅಥವಾ ನಾಯಕರ ಕೊರತೆಯಿರುವುದು ಅಲ್ಲ. ಬದಲಾಗಿ ಸರಿಯಾದ ಹಿಂಬಾಲಕತ್ವಗುಣ ನಮಗೆ ಸಿದ್ಧಿಸದೇ ಇರುವುದು. ಹಿಂಬಾಲಕತ್ವದ ತರಬೇತಿಯೆಂದರೆ ಅದರಲ್ಲಿ ಏನು ಹೇಳಿಕೊಡಬೇಕಾಗುತ್ತದೆ? ನಾಯಕರನ್ನು ಅನುಸರಿಸುವುದು ಎಂದರೆ ಏನೂ? ಎಂಥ ನಾಯಕರನ್ನುಅನುಸರಿಸಬೇಕು? ನಂಬಬೇಕು? ಎಂತಹ ನಾಯಕರಿಗೆ ಎದುರು ನಿಲ್ಲಬೇಕು? ಮುಂತಾದ ವಿಚಾರಗಳನ್ನು ತಿಳಿಸಬೇಕಾದೀತು. ಉತ್ತಮ ಹಿಂಬಾಲಕರಾಗುವುದೆಂದರೆ ನಿಯಮಗಳನ್ನು ಸರಿಯಾಗಿ ಪಾಲಿಸುವುದು. ಹೀಗಾಗಿ ಒಳ್ಳೆಯ ಹಿಂಬಾಲಕರಿದ್ದರೆ ಮುಂದಿರುವವನು ತನ್ನಿಂತಾನೇ ಒಳ್ಳೆಯ ನಾಯಕನಾಗುತ್ತಾನೆ. ಇದು ಸರಿಯಾಗಿ ಗೊತ್ತಾಗುವುದು ಕ್ರೀಡಾಂಗಣದಲ್ಲಿಯೇ. ಒಳ್ಳೆಯ ತಂಡ ಇದ್ದಾಗ ನಾಯಕ ತೆಗೆದುಕೊಂಡ ತೀರ್ಮಾನಗಳು ತನ್ನಿಂತಾನೇ ಯಶಸ್ವಿಯಾಗುತ್ತವೆ. ಆತ ಒಳ್ಳೆಯ ನಾಯಕ ಎನಿಸಿಕೊಳ್ಳುತ್ತಾನೆ.
ಆದರೆ ನಮಗೆ ಬಹಳಷ್ಟು ಪ್ರಜೆಗಳಿಗೆ ಈ ಪ್ರಜಾಪ್ರಭುತ್ವದಲ್ಲಿ ಹಿಂಬಾಲಕರಾದ ನಾವು ಸರಿಯಾದ ಹಿಂಬಾಲಕರಾಗಿಲ್ಲದೇ ಇರುವುದೇ ನಮ್ಮರಾಜಕೀಯ ನಾಯಕತ್ವವನ್ನು ದುರ್ಬಲಗೊಳಿಸಿದೆ ಎಂಬುದರ ಅರಿವಿಲ್ಲ.
ಧೋನಿಯಂತೆ ನಾಯಕತ್ವ ಬಿಟ್ಟುಇನ್ನೊಬ್ಬರ ಅಡಿಯಲ್ಲಿ ರಾಜಕೀಯ ಮಾಡಬೇಕಾದರೆ ಧೋನಿಯಂತೆ ಕ್ರೀಡಾ ಮನೋಭಾವ ರಾಜಕಾರಣಿಗಳಿಗೂ ಬೇಕಾಗುತ್ತದೆ. ಆದರೆ ರಾಜಕೀಯ ನಾಯಕನ ಕಷ್ಟವೆಂದರೆ ಆತ ನಾಯಕತ್ವದಲ್ಲಿ ಒಂದು ಮೆಟ್ಟಲು ಕೆಳಗೆ ಇಳಿದರೆ ತಾವು ಎರಡು ಮೆಟ್ಟಲು ಕೆಳಗೆ ಬಿದ್ದಂತೆ ಎಂದು ಆತನ ಹಿಂಬಾಲಕರು ಭಾವಿಸುತ್ತಾರೆ.
ಹೀಗಾಗಿ ಅವನ ನಾಯಕತ್ವ ಕಾರ್ಯಕರ್ತರಿಗಾಗಿ ಮೇಲೆ ಮೇಲೆಯೇ ಏರುತ್ತಿರಬೇಕಾಗುತ್ತದೆ. ಹಾಗಾಗಿ ಧೋನಿ ಇಂದು ನಮ್ಮನ್ನುಚಿಂತನೆಗೆ ಹಚ್ಚುತ್ತಾರೆ.
Be the first to comment on "ಹಿಂಬಾಲಕರಾಗಲೂ ಬೇಕು ತರಬೇತಿ"