- ಸ್ವಸ್ಥ ಸಮಾಜ ನಿರ್ಮಾಣಕ್ಕೆ ಗೋ ಆಂದೋಲನ ಪ್ರಸ್ತುತ
- ಮುಡಿಪು, ವಿಟ್ಲಕ್ಕೆ ಬಂದ ಗೋ ಮಂಗಲ ಯಾತ್ರೆ ರಥ
www.bantwalnews.com report
ಗೋ ಸಂರಕ್ಷಣೆಯ ಕಾರ್ಯ ಸಂಸ್ಕೃತಿಯ ಉಳಿವಿನ ಭಾಗವಾಗಿದ್ದು, ಈ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಗೋ ಆಂದೋಲನ ಅತ್ಯಂತ ಪ್ರಸ್ತುತವಾಗಿದೆ. ಗೋವಿನ ಮೂಲಕ ಸಂತ ಮತ್ತು ಸಮಾಜವನ್ನು ಸೇರಿಸುವ ತ್ರಿವೇಣಿ ಸಂಗಮದ ಕಾರ್ಯಮವಾಗಿ ನಡೆಯುತ್ತಿದೆ. ಗೋ ಮಂಗಲ ಯಾತ್ರೆ ದೇಶ ಮಂಗಲ ಕಾರ್ಯವಾಗಿ ವಿಶ್ವ ಮಂಗಲ ಯಾತ್ರೆಯಾಗಿ ರಾಷ್ಟ್ರೋತ್ಥಾನದ ನಾಂದಿಗೆ ಸಹಕಾರಿಯಾಗಲಿದೆ. ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಪ್ತರಾಜ್ಯದಲ್ಲಿ ಸಂಚರಿಸಿದ ಮಂಗಲಗೋಯಾತ್ರೆಯ ಆವಾಹನಾ ರಥ ಯಾತ್ರೆಯ ಸಂತ ಸುರಭಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಜಗತ್ತಿನಲ್ಲಿ ಗೋವನ್ನು ಪುರಾತನ ಕಾಲದಿಂದಲೂ ತಾಯಿಯ ಸ್ಥಾನದಲ್ಲಿ ಆರಾಧಿಸಲಾಗುತ್ತಿದೆ. ಗೋ ಮಾತೆ ಯಾರಿಗೂ ಹಿಂಸೆ ನೀಡಿದ ಉದಾಹರಣೆ ಇಲ್ಲ. ಗೋವಿನ ವಿಚಾರದಲ್ಲಿ ಸಾದು ಸಂತರೆಲ್ಲರೂ ಒಗ್ಗಟ್ಟಾಗಿ ಪ್ರತಿಜ್ಞೆ ಸ್ವೀಕರಿಸಲಿದ್ದು, ಜನಸಾಮಾನ್ಯರೂ ಇದರಲ್ಲಿ ಭಾಗವಹಿಸಬೇಕು. ಗೋಯಾತ್ರೆ ಮಂಗಲ ಕಾರ್ಯ ನಮ್ಮೆಲ್ಲರ ಕಾರ್ಯವೆಂದು ಒಗ್ಗಟ್ಟು ಪ್ರದರ್ಶಿಸಿದಾಗ ಉದ್ದೇಶ ಈಡೇರಲು ಸಾಧ್ಯ ಎಂದು ಹೇಳಿದರು.
ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ಮಾಡಿ ನಮ್ಮ ಮನೆಯೊಳಗೆ ಕಲ್ಮಶ ಸಂಗ್ರಹಿಸುವುದು ಬಿಟ್ಟು ಒಂದೊಂದು ಹಸುವನ್ನು ಸಾಕಿದಾಗ ಗೋಸಂರಕ್ಷಣೆಯ ಅಳಿಲ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಮಾಗೋಪ್ರಾಡಕ್ಟ್‌ನ ದತ್ತಾತ್ರೇಯ ಭಟ್ ಅವರಿಂದ ಪಂಚಗವ್ಯ ಪ್ರಾತ್ಯಕ್ಷಿಕೆ ನಡೆಯಿತು. ವಿಟ್ಲ ಅರಮನೆಯ ವಿ. ಜನಾರ್ಧನ ವರ್ಮ ಅರಸರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಲಗೋಯಾತ್ರೆಯ ವಿಟ್ಲ ಸಮಿತಿ ಅಧ್ಯಕ್ಷ ಅರುಣ ವಿಟ್ಲ ವಹಿಸಿದರು.
ಆವಾಹನಾ ರಥಯಾತ್ರೆ ಜಿಲ್ಲಾ ಸಂಯೋಜಕ ಸತ್ಯಜಿತ್ ಸುರತ್ಕಲ್ ಮಾತನಾಡಿ ಹಟ್ಟಿಯಲ್ಲಿನ ದನದ ಸಂಖ್ಯೆಯ ಮೇಲೆ ಶ್ರೀಮಂತಿಕೆಯನ್ನು ಅಳೆಯುವ ಕಾಲ ನಮ್ಮಲ್ಲಿತ್ತು. ಭಾರತದ ಪ್ರತಿಯೊಂದು ಆಚರಣೆಯಲ್ಲಿ ವೈಜ್ಞಾನಿಕ ಸತ್ಯಗಳಿದೆ. ಗೋವಿನ ಹಿಂದಿರುವ ವೈಜ್ಞಾನಿಕ ಸತ್ಯವನ್ನು ನಾವು ತಿಳಿದುಕೊಳ್ಳುವ ಕಾರ್ಯ ಮಾಡಬೇಕಾಗಿದೆ. ವಿಷ ಮುಕ್ತ ಸಾವಯವ ಆಹಾರಕ್ಕಾಗಿ ಜಗತ್ತು ರೈತರ ಬಳಿಗೆ ಬರುತ್ತಿದೆ. ಸಗಣಿಯಲ್ಲಿ ಅಣುವಿಕರಣವನ್ನು ತಡೆಯುವ ಶಕ್ತಿ ಇದೆ ಎಂಬುದು ಸಂಶೋಧನೆಯಿಂದ ತಿಳಿದೆ. ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ಗೋಹತ್ಯೆಯನ್ನು ನಿಷೇಧಿಸುವುದಕ್ಕೆ ಹೋರಾಡಬೇಕಾಗಿದೆ. ರಾಷ್ಟ್ರೀಯ ಪ್ರಾಣಿಯಾಗಿ ಗೋಮಾತೆಯನ್ನು ಘೋಷಣೆ ಮಾಡಬೇಕಾಗಿದೆ ಎಂದು ಹೇಳಿದರು.
ಸಂತ ಸೇವಕ ಸಮಿತಿಯ ಪ್ರಮುಖರಾದ ಎಲ್ ಎನ್ ಕೂಡೂರು, ಶೈಲಜಾ ಕೆಟಿ ಭಟ್, ಬಂಟ್ವಾಳ ತಾಲೂಕು ಮಂಗಲಗೋಯಾತ್ರೆಯ ಸಂಘಟನಾ ಕಾರ್ಯದರ್ಶಿ ಕಾಡೂರು ರಾಜಾರಾಮ ಭಟ್, ವಿಟ್ಲ ಪ್ರಧಾನ ಕಾರ್ಯದರ್ಶಿ ಪಡಾರು ಚಂದ್ರಶೇಖರ, ವಿಟ್ಲ ಮಂಗಲಗೋಯಾತ್ರೆಯ ಸಮಿತಿಯ ಗೌರವಾಧ್ಯಕ್ಷ ಕೃಷ್ಣಯ್ಯ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ವೈಷ್ಣವಿ ಅಡಿಗ ಪ್ರಾರ್ಥಿಸಿದರು. ಮಂಗಲಗೋಯಾತ್ರೆಯ ಜಿಲ್ಲಾ ಸಂಯೋಜಕ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಸ್ವಾಗತಿಸಿದರು. ವಿಟ್ಲ ಮಂಗಲಗೋಯಾತ್ರೆಯ ಸಮಿತಿಯ ಉಪಾಧ್ಯಕ್ಷ ರವಿಪ್ರಕಾಶ್ ವಿಟ್ಲ ವಂದಿಸಿದರು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.
ಮುಡಿಪುವಿನಲ್ಲಿ ರಥಯಾತ್ರೆಯನ್ನು ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದ ಮುಖ್ಯಸ್ಥ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಸ್ವಾಗತಿಸಿದರು.
Be the first to comment on "ಸಂಸ್ಕೃತಿ ಉಳಿವಿನ ಭಾಗವಾಗಿ ಗೋರಕ್ಷಣೆ"