ಕನ್ನಡದಲ್ಲಿ ತುಳುವನ್ನು ಬರೆಯುವುದಕ್ಕಿಂತ ಸ್ವಂತ ಲಿಪಿ ಇದ್ದಾಗ, ಅದರಲ್ಲೇ ಯಾಕೆ ಬರೀಬಾರದು?
- ಬಿ.ತಮ್ಮಯ್ಯ
www.bantwalnews.com ಅಂಕಣ – ನಮ್ಮ ಭಾಷೆ
ಒಂದು ಭಾಷೆಯನ್ನು ಇನ್ನೊಂದು ಭಾಷೆಯ ಲಿಪಿಯಲ್ಲಿ ಬರೆಯಬಹುದು ಎಂದು ಬುದ್ಧಿಜೀವಿಗಳು ಹೇಳುತ್ತಾರೆ. ಆದರೆ ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯುವಾಗ ಬರೆಯುವವನಿಗೆ ತುಂಬಾ ಕಷ್ಟವಾಗುತ್ತೆ. ಯಾಕೆಂದರೆ ಅಲ್ಲಿ ಅನೇಕ ಒತ್ತುಗಳು ಇರಬೇಕು. ಹಾಗೆ ಓದುವಾಗಲೂ ಕನ್ನಡ ದಿದಷ್ಟು ಸುಲಭವಾಗಿ ತುಳುವನ್ನು ಕನ್ನಡ ಲಿಪಿಯಲ್ಲಿ ಬರೆದರೆ ಓದಲು ಆಗುವುದಿಲ್ಲ.
ಕನ್ನಡ ಬಲ್ಲವರು ತುಳುವನ್ನು ಕನ್ನಡದಲ್ಲಿ ಬರೆದ ಸಾಹಿತ್ಯವನ್ನು ಓದಲು ನಿರಾಕರಿಸಿದ ಅದೆಷ್ಟೋ ಸಂದರ್ಭಗಳನ್ನು ನಾನು ನೋಡಿದ್ದೇನೆ. ನಾನು ತುಳುವನ್ನು ತುಳು ಲಿಪಿಯಲ್ಲಿ ಬರೆದಾಗ, ಕನ್ನಡದಲ್ಲಿ ಬರೆಯುವುದಕ್ಕಿಂತ ಸುಲಭವಾಯಿತು. ಓದಲು ಕನ್ನಡಕ್ಕಿಂತ ತುಳುವೇ ಸುಲಭವಾಯಿತು. ಆದುದರಿಂದ ನನ್ನ ಅನೇಕ ಶಿಷ್ಯಂದಿರಲ್ಲಿ ಈ ಬಗ್ಗೆ ಕೇಳಿದಾಗಲೂ ಅವರು ತುಳುವನ್ನು ಕನ್ನಡದಲ್ಲಿ ಬರೆಯುವುದಕ್ಕಿಂತ ತುಳು ಲಿಪಿಯಲ್ಲಿ ಬರೆಯಲು ಓದಲು ಸುಲಭ ಎಂಬ ಅಭಿಪ್ರಾಯ ಕೊಟ್ಟರು. ಇನ್ನು ಇಂಗ್ಲೀಷ್ ಲಿಪಿಯಲ್ಲಿ ತುಳುವನ್ನು ವಾಟ್ಸಾಫ್ ಬರೆಯುತ್ತಾರೆ. ಅದನ್ನು ಒಂದು ವಾಕ್ಯ ಓದಲು ತುಂಬಾ ಸಮಯ ಬೇಕು.
ಆಯಾ ಭಾಷೆಯ ಲಿಪಿಯಲ್ಲಿ ಬರೆದರೆ ಆಭಾಸಗಳೂ ಆಗುವುದಿಲ್ಲ.
ತುಳು ಒಂದು ಸಮೃದ್ಧ ಭಾಷೆ. ತುಳು ಭಾಷೆಯ ಸೌಂದರ್ಯವನ್ನು ಅನುಭವಿಸಬೇಕಾದರೆ ಪಾಡ್ದನ ಕೇಳಬೇಕು. ಸಂಧಿಗಳನ್ನು ಕೇಳಬೇಕು. ಆಗ ನೇಜಿ ತೆಗೆಯುವ ಮತ್ತು ನೆಡುವ ಸಂದರ್ಭ ಸಂದರ್ಭ (ನಾನು 5-6 ವರ್ಷದವನಿದ್ದಾಗ) ಗದ್ದೆ ಹುಣಿಯಲ್ಲಿ ಇರುತ್ತಿದ್ದೆ. ಯಾಕೆಂದರೆ ಆ ಸಂಧಿ ಪಾಡ್ದನಗಳನ್ನು ಕೇಳುವ ಆಸೆ. ಅದನ್ನು ಕೇಳುತ್ತಾ ಬೆಳೆದವನು ಆ ದಿನಗಳಲ್ಲಿ ಸಂಧಿ ಪಾಡ್ದನಗಳನ್ನು ಧ್ವನಿಮುದ್ರಣ ಮಾಡಿದ್ದರೆ ಇವತ್ತು ಜಾನಪದ ಪಂಡಿತನಾಗುತ್ತಿದ್ದೆ. ಅದು ಸಾಧ್ಯವಾಗದ್ದಕ್ಕೆ ವಿಷಾದವಿದೆ. ತುಳು ಬಹಳ ಸಮೃದ್ಧ ಭಾಷೆ. ಒಂದು ತೆಂಗಿನ ಮರದ ಹೂವನ್ನು ಕೊಂಬು ಎನ್ನುತ್ತೇವೆ. ಅದರ ಒಳಗಿರುವದನ್ನು ಉರುವೆ ಎನ್ನುತ್ತೇವೆ. ಬೆಳೆದ ಮೇಲೆ ತೆಂಡೆಲ್. ಮತ್ತು ಬೆಳೆದ ಮೇಲೆ ಬೊಂಡ. ಇನ್ನೂ ಬೆಳೆದರೆ ಬನ್ನಂಗಾಯಿ, ಮತ್ತೂ ಬೆಳೆದರೆ ತಾರಾಯಿ. ಒಣಗಿದರೆ ಗೋಟು. ಎಣ್ಣೆ ತೆಗೆಯಲು ತಯಾರಾದರೆ ಕೊಪ್ಪರ. ಹೀಗೆ ಒಂದು ವಸ್ತುವನ್ನು ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುವುದರಿಂದ ಸ್ಪಷ್ಟತೆ ಉಂಟಾಗುತ್ತದೆ. ಕೋಳಿಯ ಮೊಟ್ಟೆ ಮುಂದೆ ಕಿಣ್ಣಿ. ನಂತರ ಹೆಣ್ಣಾದರೆ ಲಾಕಿ, ಗಂಡಾದರೆ ತೆಲವು ನಂತರ ಹೆಣ್ಣಾದರೆ ಪೆರಡೆ, ಗಂಡಾದರೆ ಪೂಂಜೆ, ಕೋಳಿಕಟ್ಟದಲ್ಲಿ ಗೆದ್ದರೆ ಬಂಟೆ, ಸೋತು ಸತ್ತರೆ ಒಟ್ಟೆ ಹೀಗೆ ತುಳು ಶಬ್ದಗಳು ಪ್ರತಿ ಹಂತದಲ್ಲೂ ಸ್ಪಷ್ಟತೆ ತೋರಿಸುವ ಸಮೃದ್ಧತೆ ಹೊಂದಿದೆ.
(ಲೇಖಕರು ತುಳು ಲಿಪಿ ಶಿಕ್ಷಕರೂ ಆಗಿದ್ದಾರೆ. ಅವರ ಸಂಪರ್ಕ ಸಂಖ್ಯೆ: 9886819771)
ನಿಮ್ಮ ಅಭಿಪ್ರಾಯವನ್ನು ಬಂಟ್ವಾಳನ್ಯೂಸ್ ಗೆ ಬರೆದು ಕಳುಹಿಸಿ. ಈ ಮೈಲ್ ವಿಳಾಸ: bantwalnews@gmail.com
Be the first to comment on "ತುಳು ಭಾಷೆಯನ್ನು ತುಳು ಲಿಪಿಯಲ್ಲೇ ಬರೀರಿ"