ಕಂಬಳ ಉಳಿಸುವ ಪಕ್ಷಾತೀತ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದು ಬಂಟ್ವಾಳ ತಾಲೂಕಿನ ಕಂಬಳ ಕೋಣಗಳ ಮಾಲೀಕರು, ಕಂಬಳ ನಡೆಸುವವರು ಹಾಗೂ ಕಂಬಳ ಪ್ರೇಮಿಗಳು ಹೇಳಿದ್ದಾರೆ.
www.bantwalnews.com report
ಈ ಕುರಿತು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮುಖರಾದ ಎಡ್ತೂರು ರಾಜೀವ ಶೆಟ್ಟಿ ಹಾಗೂ ಸೀತಾರಾಮ ಶೆಟ್ಟಿ, ಕಂಬಳ ನಿಷೇಧದ ಹಿಂದೆ ಪೇಟಾದ ಅನುಭವರಹಿತ ತಿಳುವಳಿಕೆ ಇದೆ. ಈ ಕುರಿತು ಈಗಾಗಲೇ ಎಂಟು ಮಂದಿ ಕೋರ್ಟಿಗೆ ಹೋಗಿದ್ದಾರೆ. ಕಂಬಳದ ಬಗ್ಗೆ ತಪ್ಪು ತಿಳುವಳಿಕೆಯಿಂದ ಮಾತನಾಡುವ ಪೇಟಾಕ್ಕೆ ಸರಿಯಾದ ಮಾರ್ಗದರ್ಶನ ದೊರೆಯಬೇಕು. ಕಂಬಳದಲ್ಲಿ ಯಾವುದೇ ಅಪಾಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಆಗಬೇಕು ಎಂದರು.
ಈ ಕುರಿತು ಗ್ರಾಮೀಣ ಭಾಗದಲ್ಲಿ ಕಂಬಳಾಸಕ್ತರ ಅಭಿಪ್ರಾಯ ಒಳಗೊಂಡ ಹೊತ್ತಗೆಯನ್ನು ಕೇಂದ್ರ ಕಾನೂನು ಸಚಿವರಿಗೆ ನೀಡಲಾಗುವುದು, ಕಂಬಳ ಕುರಿತು 28 ರಂದು ಮೂಡುಬಿದರೆಯಲ್ಲಿ ನಡೆಯುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಲಿದ್ದೇವೆ. 30ರಂದು ಹೈಕೋರ್ಟ್ ತೀರ್ಪು ಬಂದ ನಂತರ ಮುಂದೇನು ಎಂಬುದರ ಕುರಿತು ಯೋಚಿಸಲಾಗುವುದು ಎಂದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತಂದಾದರೂ ಕಂಬಳ ನಿಷೇಧ ರದ್ದುಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರೂ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಹೀಗಾಗಿ ಕಂಬಳ ನಿಷೇಧ ರದ್ದಾಗಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಕಂಬಳ ಕ್ಷೇತ್ರದ ಪ್ರಮುಖರಾದ ವಲೇರಿಯನ್ ಅಪ್ಪು ಡೇಸಾ, ಭಕ್ತಕುಮಾರ ಶೆಟ್ಟಿ, ಕ್ಲಾಡಿ ಡಿಸೋಜ, ಕೃಷ್ಣಾಪುರ ಪರಮೇಶ್ವರ ಸಾಲಿಯಾನ್, ನಿರಂಜನ ರೈ ಮಠಂತಬೆಟ್ಟು, ಅವಿಲ್ ಮಿನೇಜಸ್, ಸತೀಶ್ಚಂದ್ರ ಸಾಲಿಯಾನ್, ಬಾಲಕೃಷ್ಣ ಸಾಲಿಯಾನ್, ನವೀನ್ ಚಂದ್ರ ಆಳ್ವ, ವಿವೇಕ್ ಪುರಸಭಾ ಸದಸ್ಯ ಸದಾಶಿವ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಕಂಬಳ ಉಳಿಸುವ ಹೋರಾಟಕ್ಕೆ ಎಲ್ಲರ ಬೆಂಬಲ"