ಮಂಗಲಗೋಯಾತ್ರೆ ಸಮಾರೋಪ ಸಮಾರಂಭಕ್ಕೆ ಆಹ್ವಾನ
www.bantwalnews.com report
ಶ್ರೀರಾಮಚಂದ್ರಾಪುರ ಮಠಾಽಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ನ.8ರಂದು ಆರಂಭಿಸಿದ ಮಂಗಲಗೋಯಾತ್ರೆಯ ಸಮಾರೋಪ ಸಮಾರಂಭ ಮಂಗಳೂರು ಸಮೀಪದ ಕೂಳೂರು ಗೋಲ್ಡ್ ಫಿಂಚ್ ಸಿಟಿ, ಮಂಗಲಭೂಮಿಯಲ್ಲಿ ಜನವರಿ 29ರಂದು ನಡೆಯುವ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಅಕ್ಷತಾ ಅಭಿಯಾನ ಭರದಿಂದ ಸಾಗುತ್ತಿದೆ.
ಶುಭ ಸಮಾರಂಭಗಳಿಗೆ ಅಕ್ಷತೆ ನೀಡಿ ಆಮಂತ್ರಣ ನೀಡುವುದು ಹಿಂದಿನಿಂದ ಬೆಳೆದುಬಂದ ಸಂಪ್ರದಾಯ. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಇದೇ ಸಂಪ್ರದಾಯವನ್ನು ಗೋಸಂರಕ್ಷಣಾ ಅಭಿಯಾನ ಸಂದರ್ಭ ಕೈಗೊಳ್ಳಲಾಗಿದೆ.
ಈ ಭಾಗದ ಪ್ರತಿ ಮನೆಯೂ ಆಮಂತ್ರಣ ತಲುಪದೇ ಇರಬಾರದು. ಮತ್ತು ಗೋವಿನ ಆಂದೋಲನದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂಬ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಯದಂತೆ, ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಅಕ್ಷತಾ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿರುವ ಅಕ್ಷತಾ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ಐದಾರು ಮಂದಿ ತಂಡ ಮನೆ ಮನೆಗೆ ಸಾಗುತ್ತಿದೆ. ಹರಿವಾಣ, ಆಮಂತ್ರಣ, ಅಕ್ಷತೆ, ಗೋಹವನದ ಪ್ರಸಾದವನ್ನು ಇಟ್ಟು ಮನೆಯವರನ್ನು ಆಹ್ವಾನಿಸಲಾಗುತ್ತಿದೆ. ಜತೆಗೆ ಪ್ರತಿಯೊಬ್ಬರೂ ಕನಿಷ್ಠ 1 ರೂ.ವನ್ನು ನೀಡಬೇಕು ಎಂಬ ಆಶಯವನ್ನೂ ಇರಿಸಲಾಗಿದೆ. ಈ ಕಾರ್ಯದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಮನೆ ಮನೆ ತೆರಳುತ್ತಿದ್ದಾರೆ. ಸಾವಿರಾರು ಕಾರ್ಯಕರ್ತರು ಈ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಮಂಗಲ ಗೋಯಾತ್ರೆಯು ಜ.20ರಂದು ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದೆ. ಉಡುಪಿಯಿಂದ ದ.ಕ., ಕಾಸರಗೋಡು ಜಿಲ್ಲೆಗಳ ಪ್ರಮುಖ ಪ್ರದೇಶಗಳನ್ನು ಇವು ಸಂಚರಿಸಲಿವೆ. ಈಗ ಈ ಯಾತ್ರೆಯು ಆವಾಹನಾ ರಥ ಯಾತ್ರೆಯಾಗಿ ಪರಿವರ್ತನೆಗೊಂಡಿದೆ. ಈ ಪ್ರದೇಶದಲ್ಲಿ ಈ ರಥ ಸಂಚರಿಸುತ್ತ ಸರ್ವ ಗೋಪ್ರೇಮಿಗಳನ್ನು ಆಹ್ವಾನಿಸುವ ಹಾಗೂ ಸಂಚಲನ ಮೂಡಿಸುವ ಉದ್ದೇಶವನ್ನು ಹೊಂದಿದೆ. ಪ್ಲಾಸ್ಟಿಕ್ ಮುಕ್ತ ಮೇವು ದೊರಕಿಸುವ ಯೋಜನೆಗಾಗಿ ಅಮೃತಪಥ ಕಾರ್ಯಕ್ರಮ, ಆ ಮೂಲಕ ಪ್ಲಾಸ್ಟಿಕ್ ನಿಷೇಧಿಸುವ ಮತ್ತು ಗೋವನ್ನು ಉಳಿಸುವ ಯೋಜನೆಯನ್ನು ರೂಪಿಸಲಾಗಿದೆ.
ಜ.23ರಂದು ಗುತ್ತಿಗಾರು, ಪಂಜ, ಬೆಳ್ಳಾರೆ, ಸುಳ್ಯ, ಜಾಲ್ಸೂರು, ಈಶ್ವರಮಂಗಲ ಬಳಿಕ ಕಾಸರಗೋಡು ತಾಲೂಕಿಗೆ ಪ್ರವೇಶ. ಅಡೂರು ದೇಗುಲದಲ್ಲಿ ವಾಸ್ತವ್ಯ. 24ರಂದು ಕುಂಟಾರು ಮಹಾವಿಷ್ಣು ದೇಗುಲ, ಮುಳ್ಳೇರಿಯ, ಬೋವಿಕ್ಕಾನ, ಕಾಸರಗೋಡು ವಿದ್ಯಾನಗರ ಚಿನ್ಮಯ ಶಾಲೆ, ಮಧೂರು ದೇವಸ್ಥಾನ, ಕೂಡ್ಲು, ಕಾಸರಗೋಡು, ಅನಂತಪುರ, ಮುಜುಂಗಾವು ವಾಸ್ತವ್ಯ. 25 ರಂದು ಸೀತಾಂಗೋಳಿ, ನೀರ್ಚಾಲು, ಬದಿಯಡ್ಕ, ಪೆರ್ಲ, ಪೆರ್ಮುದೆ, ಬಾಯಾರುಪದವು, ಪೈವಳಿಕೆ, ಉಪ್ಪಳ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮ, ಸಭಾ ಕಾರ್ಯಕ್ರಮ, ವಾಸ್ತವ್ಯ. ಜ.26ರಂದು ಮಂಜೇಶ್ವರ, ಮೀಯಪದವು, ವರ್ಕಾಡಿ, ಮುಡಿಪು, ಆನೆಕಲ್ಲು, ಕನ್ಯಾನ ಮೂಲಕ ಸಂಜೆ ಗಂಟೆ 6.30 ಕ್ಕೆ ವಿಟ್ಲಕ್ಕೆ ಪ್ರವೇಶಿಸಲಿದೆ. ಸಭಾ ಕಾರ್ಯಕ್ರಮ ಮುಗಿಸಿ, ವಾಸ್ತವ್ಯ. 27ರಂದು ವಿಟ್ಲದಿಂದ ಪುತ್ತೂರು, ಉಪ್ಪಿನಂಗಡಿ, ಕಲ್ಲಡ್ಕ, ಬಿ.ಸಿ.ರೋಡ್, ಮಂಗಳೂರು ಪುರ ಪ್ರವೇಶ ಮಾಡಲಿದೆ.
Be the first to comment on "ಕರಾವಳಿಯಾದ್ಯಂತ ಅಕ್ಷತಾ ಅಭಿಯಾನ"