ಇದು ಭಾರತ-ಪಾಕಿಸ್ಥಾನ ಬಾರ್ಡರ್ ಕತೆಯೇನಲ್ಲ. ಆದರೂ ಕರ್ನಾಟಕ – ಕೇರಳ ಮಧ್ಯೆ ಪ್ರತ್ಯೇಕ ಗೆರೆ ಇದೆ. ಸದ್ಯಕ್ಕಂತೂ ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ಗಡಿಗಳು ಖತರ್ ನಾಕ್ ಎಂಬಂತೆ ಭಾಸವಾಗುವುದು ಇತ್ತೀಚೆಗೆ ನಡೆದ ಕೆಲ ಕೃತ್ಯಗಳು ಬಹಿರಂಗಗೊಂಡಾಗಲೇ….
- ಹರೀಶ ಮಾಂಬಾಡಿ
bantwalnews.com cover story
ತುಂಬಾ ಸುಲಭ.
ಕನ್ಯಾನದಲ್ಲಿ ಏನಾದರೂ ದುಷ್ಕೃತ್ಯ ಮಾಡಿ, ಮುಗುಳಿ, ಮುಳಿಗದ್ದೆ ದಾಟಿ ತಪ್ಪಿಸಿಕೊಳ್ಳುವುದು.
ಹೀಗೆಂದು ಭಾವಿಸಿ ಕಿಡಿಗೇಡಿ ಕೆಲಸ ಮಾಡುವವರು ಹಲವರಿದ್ದಾರೆ. ಅಂಥವರಿಗೆಲ್ಲ ಗಡಿ ಭಾಗವೆಂದರೆ ಅಚ್ಚುಮೆಚ್ಚು. ಅಪರಾಧ ಕೃತ್ಯವೆಸಗಿ ಪಾರಾಗಲು ತುಂಬಾ ಸುಲಭ. ಮೊನ್ನೆ ಮೊನ್ನೆ ನಡೆದಂತೆ ಭಾಸವಾಗುವ ಅಪರಾಧ ಕೃತ್ಯಗಳು ಹಲವಾರು ಕನ್ಯಾನದಲ್ಲಿ ಘಟಿಸಿವೆ. ಈ ಭಾಗ ಎಂದೇನಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಗಡಿ ಪ್ರದೇಶ ಕೇರಳಕ್ಕೂ,ಕರ್ನಾಟಕಕ್ಕೂ ಹಲವು ಲಿಂಕ್ ಗಳು ಹಲವು ವಿಧದ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ತಾಣವಾಗಿವೆ.
ನಮ್ಮ ಪೊಲೀಸ್ ವ್ಯವಸ್ಥೆಯಡಿ ಒಂದೊಂದು ಠಾಣೆಗೂ ಸರಹದ್ದು ಇದೆ. ಇದು ಕಳ್ಳರಗೂ ವರದಾನವಾಗಿದೆ. ನಮ್ಮ ರಾಜ್ಯವಾದರೆ ಹಾಗೂ ಹೀಗೂ ನಮ್ಮ ಪೊಲೀಸರಿಗೆ ಮಾಹಿತಿ ನೀಡಬಹುದು. ಹೊರರಾಜ್ಯದ ಪೊಲೀಸರಿಗೆ ವಿಷಯ ತಿಳಿಸುವುದು ಅಷ್ಟೊಂದು ಸುಲಭವೇನಲ್ಲ. ಹೀಗಾಗಿ ಅಪರಾಧ ಕೃತ್ಯವೆಸಗುವವರೂ ಗಡಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಏನೇನಿದೆ:
ದುಷ್ಕೃತ್ಯಗಳಿಗೆ ಲೆಕ್ಕ ಬೇಕೇ? ಇಲ್ಲಿವೆ ಕೆಲ ಸ್ಯಾಂಪಲ್ಲುಗಳು. ಅಕ್ರಮ ದನ ಸಾಗಾಟ, ದರೋಡೆ, ತಲವಾರು ಝಳಪಿಸುವುದು, ಕೊಲೆ ಆರೋಪಿಗಳು ಕೇರಳಕ್ಕೆ ಓಡಿಹೋಗುವುದು ಮಾಮೂಲಾಗಿದೆ. ಇದಕ್ಕೆ ಹೊಸ ಸೇರ್ಪಡೆ ಗಾಂಜಾ.
ಮಾಣಿಲ, ಪೆರುವಾಯಿ, ಕನ್ಯಾನ, ಕರೋಪಾಡಿ, ಸಾಲೆತ್ತೂರು ರಾಜ್ಯದ ಗಡಿ ಭಾಗವಾಗಿದ್ದು, ವಿಟ್ಲ ಠಾಣಾ ಸರಹದ್ದಿಗೆ ಸೇರಿದ್ದಾಗಿದೆ. ವಿಟ್ಲ ಠಾಣೆಯಿಂದ ಕೇರಳ ಗಡಿ ಭಾಗ ಸುಮಾರು 20ರಿಂದ 25 ಕಿ ಮೀ ದೂರವಿರುವುದನ್ನೇ ವಿದ್ವಂಸಕ ಕೃತ್ಯ ಎಸಗುವ ವ್ಯಕ್ತಿಗಳು ಬಂಡವಾಳವಾಗಿಸುತ್ತಿದ್ದಾರೆ. ಗಡಿ ಭಾಗದಲ್ಲಿ ಅಕ್ರಮ ದನ ಸಾಗಾಟ ದೊಡ್ಡ ಸಮಸ್ಯೆಕಳ್ಳತನ, ಅಪಘಾತ, ಕೊಲೆ, ಸುಲಿಗೆ ಹೀಗೆ ಕೇರಳದಿಂದ ಬರುವವರು ನಡೆಸುತ್ತಿದ್ದು, ಸ್ಥಳಕ್ಕೆ ಪೊಲೀಸರು ಮುಟ್ಟುವ ವೇಳೆಗೆ ಎಲ್ಲರೂ ಪರಾರಿಯಾಗಿ ಸುರಕ್ಷಿತ ತಾಣಗಳನ್ನು ತಲುಪಿಕೊಳ್ಳುತ್ತಾರೆ.
ಪೊಲೀಸ್ ತಾತ್ಕಾಲಿಕ ಚೆಕ್ ಪೋಸ್ಟ್ ಗಳನ್ನು, ಹೆಚ್ಚುವರಿ ಪೊಲೀಸ್ ವಾಹನಗಳನ್ನು ಹಾಕಲಾಗುತ್ತಿದೆ. ಆದರೆ ಅವರಿಗೆ ವಸತಿ ಸೇರಿ ಮೂಲ ಸೌಕರ್ಯಗಳೇ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣಾವಾಗುತ್ತಿದೆ. ಹಾಗೆಂದು ಅವರು ಆ ಸ್ಥಳ ಬಿಟ್ಟು ಹೋಗುವಂತೆ ಇಲ್ಲವಾದ್ದರಿಂದ ಗಡಿ ಭಾಗದಲ್ಲಿ ಪ್ರತ್ಯೇಕ ವಸತಿ ಸಹಿತ ಹೊರಠಾಣೆ ನಿರ್ಮಾಣವಾಗಬೇಕಾಗಿದೆ. ಇದು ಸ್ಥಳೀಯ ನಾಗರೀಕರ ಆಗ್ರಹವೂ ಆಗಿದೆ.
ಸಾಲೆತ್ತೂರು, ಪೆರುವಾಯಿ ಭಾಗದಲ್ಲಿ ಅಕ್ರಮ ದನ ಸಾಗಾಟ ದೊಡ್ಡ ಸಮಸ್ಯೆಯಾಗಿದೆ. ಕನ್ಯಾನದಲ್ಲಿ ಕೊಲೆಯತ್ನ, ತಲವಾರು ಕಾಳಗ, ದರೋಡೆ ಘಟನೆಗಳು ನಡೆಯುತ್ತಿದೆ. ಈ ಭಾಗದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಗಳೂ ಇಲ್ಲದಿರುವುದು ಭಯವಿಲ್ಲದೆ ಸಂಚರಿಸುವಂತೆ ಮಾಡುತ್ತಿದೆ.
ಪೊಲೀಸ್ ಔಟ್ ಪೋಸ್ಟ್ ಬೇಕು ಎಂಬುದು ಇಂದು ನಿನ್ನೆಯ ಬೇಡಿಕೆಯಲ್ಲಿ. ಈ ಬಗ್ಗೆ ವಿಟ್ಲ ಪತ್ರಕರ್ತರೂ ಉನ್ನತ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದ್ದರು. ಆದರೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಯಿತೇ ವಿನ: ಹೊರಠಾಣೆ ನಿರ್ಮಾಣ ಕನ್ಯಾನದಲ್ಲಿ ಆಗಲೇ ಇಲ್ಲ.
ಇತ್ತೀಚೆಗೆ ವಶಪಡಿಸಲ್ಪಟ್ಟು ಬಂಧನಕ್ಕೊಳಗಾಗಿರುವ ಗಾಂಜಾ ಪ್ರಕರಣದ ಆರೋಪಿ ಕನ್ಯಾನವನ್ನು ಅಡ್ಡೆಯಾಗಿಸಿಕೊಂಡಾತ. ಇಂಥದ್ದು ಎಷ್ಟಿದೆಯೋ, ಇದನ್ನು ತನಿಖೆ ನಡೆಸಬೇಕಾದರೆ, ಪೊಲೀಸ್ ಸಿಬ್ಬಂದಿ ಬಲಗೊಳ್ಳಬೇಕು. ಕನ್ಯಾನದಲ್ಲಿ ಬಿಗು ಪೊಲೀಸ್ ಪಹರೆ ಇರಲೇಬೇಕು ಎಂಬುದು ನಾಗರಿಕರ ಒತ್ತಾಯ.
ನಿಮ್ಮ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಬರೆಯಿರಿ. bantwalnews@gmail.com
Be the first to comment on "ಗಡಿ ಕಾಯಲು ಬೇಕು ಪೊಲೀಸ್ ಹೊರಠಾಣೆ"