ವರ್ತಮಾನ ಕಾಲದಲ್ಲಿ ಬದುಕುವ ಕಷ್ಟ ಸುಖ

ವರ್ತಮಾನ ಕಾಲವೆಂಬ ಕಾಲವೊಂದು ನಿಜವಾಗಿ ಅಸ್ತಿತ್ವದಲ್ಲಿ ಇಲ್ಲ ಎಂದೂ ಹಲವರು ಹೇಳುತ್ತಾರೆ. ಈ ಕ್ಷಣ ಎನ್ನುವುದು ಕೂಡ ಅರೆಕ್ಷಣದಲ್ಲಿ ಭೂತವೇ ಆಗುತ್ತದಲ್ಲ?

  • ಅಜಕ್ಕಳ ಗಿರೀಶ ಭಟ್
  • www.bantwalnews.com ಅಂಕಣ ಗಿರಿಲಹರಿ

ಕಾಲಗಳಲ್ಲಿ ಭೂತ ಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲ ಎಂದು ಮೂರು ವಿಧಗಳಿವೆ ಎಂಬುದನ್ನು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕಲಿತವರೆಲ್ಲ ನೆನಪಿಟ್ಟುಕೊಳ್ಳುತ್ತಾರೆ. ಹಾಗೆ ನೋಡಿದರೆ, ಯಾವುದೇ ಭಾಷೆಯ ವ್ಯಾಕರಣದಲ್ಲಿ ನೆನಪಿಟ್ಟುಕೊಳ್ಳಲು ಅತಿ ಸುಲಭ ಅಂಶವೆಂದರೆ ಈ ಮೂರು ಕಾಲಗಳ ಕಲ್ಪನೆ.

ಜಾಹೀರಾತು

ಎಲ್ಲ ಭಾಷೆಗಳಲ್ಲಿ ಈ ಮೂರೂ ಕಾಲಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ ಸೂಚಿಸುವ ಪದಗಳು, ಪದಭಾಗಗಳು ಅಥವಾ ಪ್ರತ್ಯಯಗಳು ಇಲ್ಲದೇಇರಬಹುದು. ಆದರೆ ಈ ಮೂರರ ಕಲ್ಪನೆಯಂತೂ ಇದೆ. ಭಾಷೆ ಮಾತ್ರ ವಿಶ್ವಾತ್ಮಕವಾಗಿ ಮಾನವನಿಗೆ ಸಿದ್ಧಿಸಿದ ಒಂದು ವಿದ್ಯಮಾನವಲ್ಲ; ಕಾಲದ ಕುರಿತ ಈ ಕಲ್ಪನೆ ಬಹುಶಃ ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಇದೆ ಎನ್ನುವುದೇ ಭಾಷೆಗೆ ಒಂದು ವಿಶ್ವಾತ್ಮಕವಾದ ವ್ಯಾಕರಣ ಇದೆ ಎಂಬುದಕ್ಕೂ ಆಧಾರವಾಗುತ್ತದೆ. ಇದೊಂದೇ ಅಲ್ಲ; ವ್ಯಾಕರಣದ ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಯೋಚಿಸುತ್ತಾ ಹೋದರೆ ನಮಗೆ ವಿಸ್ಮಯವಾಗುವಷ್ಟು ಸಾಮ್ಯತೆಗಳು ಜಗತ್ತಿನ ದೂರದೂರದ ಭಾಷೆಗಳ ನಡುವೆ ಕೂಡ ಕಾಣಬಲ್ಲೆವು. ವಿವಿಧ ಭಾಷೆಗಳ ಗಾದೆಗಳಲ್ಲಿ ಇರುವ ಸಾಮ್ಯವನ್ನು ನೋಡಿದರೂ ಇದು ಮತ್ತೊಂದು ರೀತಿಯಲ್ಲಿ ಮನದಟ್ಟಾಗುತ್ತದೆ. ಇರಲಿ, ವ್ಯಾಕರಣದಲ್ಲಿ ಈ ಮೂರು ಕಾಲಗಳ ಪರಿಕಲ್ಪನೆ ಮೂರ್ತಗೊಳ್ಳುವುದು ಕ್ರಿಯೆಗೆ ಅನ್ವಯಿಸಿದಾಗ. ಯಾವುದೋ ಘಟನೆ ಅಥವಾ ಕ್ರಿಯೆ ಆಗಿ ಮುಗಿದಿರುವುದೋ, ಆಗುತ್ತಿರುವುದೋ ಅಥವಾ ಮುಂದಿನ ಯಾವುದೋ ಕಾಲಘಟ್ಟದಲ್ಲಿಆಗಲಿರುವುದೋ ಎಂಬುದನ್ನು, ಭಾಷೆಯಲ್ಲಿ ಈ ಮೂರು ಕಾಲಗಳ ಕಲ್ಪನೆಯು ನೀಡುತ್ತದೆ ಎನ್ನುವುದು ಸಾಮಾನ್ಯವಾಗಿ ನಾವೆಲ್ಲ ಅರಿತಿರುವ ವಿಚಾರ.

ವರ್ತಮಾನ ಕಾಲವೆಂಬ ಕಾಲವೊಂದು ನಿಜವಾಗಿ ಅಸ್ತಿತ್ವದಲ್ಲಿ ಇಲ್ಲ ಎಂದೂ ಹಲವರು ಹೇಳುತ್ತಾರೆ. ಈ ಕ್ಷಣ ಎನ್ನುವುದು ಕೂಡ ಅರೆಕ್ಷಣದಲ್ಲಿ ಭೂತವೇ ಆಗುತ್ತದಲ್ಲ? ಅಥವಾ ಈಗ ಬರದೇ ಇರು ಕಾಲ, ಅಂದರೆ, ಒಂದೇಕ್ಷಣ ಮುಂದಿನದು ಕೂಡ ತಾರ್ಕಿಕವಾಗಿ ಭವಿಷ್ಯವೇ ಆಗುತ್ತದೆ. ಹೀಗಾಗಿ ವರ್ತಮಾನ ಕಾಲವೆಂಬುದು ನಮ್ಮ ಹಿಡಿತಕ್ಕೆ ಸಿಗದೆ ನುಣುಚಿಕೊಳ್ಳುತ್ತಲೇ ಇರುತ್ತದೆ.

ಜಾಹೀರಾತು

ಇದು ಕೇವಲ ಭಾಷೆಯ ವ್ಯಾಕರಣಕ್ಕೆಅಥವಾ ನಡೆದ, ನಡೆಯುತ್ತಿರುವ ಅಥವಾ ನಡೆಯಲಿರುವ ಕ್ರಿಯೆಗೆ ಸಂಬಂಧಿಸಿದ ಸಂಗತಿಯಲ್ಲ. ನಾವು ಬದುಕುವ ಕ್ರಮಕ್ಕೂ ಬದುಕಿನ ಕುರಿತಾದ ನಮ್ಮ ದೃಷ್ಟಿಕೋನಕ್ಕೂ ಈ ಮೂರೂ ಕಾಲಗಳ ಕಲ್ಪನೆಗಳನ್ನು ಅನ್ವಯಿಸಿ ಪರಿಗಣಿಸಲು ಸಾಧ್ಯವಿದೆ. ಬಹುಶಃ ವರ್ತಮಾನ ಕಾಲವು ನಮ್ಮ ಹಿಡಿತಕ್ಕೆ ಸಿಗದೇ ಇರುವುದರಿಂದ ಭೂತ ಭವಿಷ್ಯಗಳು ನಮ್ಮ ಬದುಕನ್ನು ನುಂಗುತ್ತಲೇ ಇರುತ್ತವೆ.

ಬಹಳಷ್ಟು ಜನರು ಭೂತಕಾಲದಲ್ಲಿ ಬದುಕುತ್ತಾರೆ, ಮತ್ತೆ ಕೆಲವರು ಭವಿಷ್ಯತ್‌ ಕಾಲದಲ್ಲಿ ಬದುಕುತ್ತಾರೆ. ಇನ್ನು ಕೆಲವರು ವರ್ತಮಾನ ಕಾಲದಲ್ಲಿ ಬದುಕುತ್ತಾರೆ ಎಂದು ನಾವು ಹೇಳುತ್ತೇವೆ. ಹಾಗೆ ಕಂಡರೆ ಶುದ್ಧವಾಗಿ ಅಥವಾ ಪೂರ್ತಿಯಾಗಿ ವರ್ತಮಾನ ಕಾಲದಲ್ಲಿ ಬದುಕಲು ಅಸಾಧ್ಯ. ಆದರೂ ಅದಕ್ಕೆ ಮಾತ್ರ ಒತ್ತು ಕೊಟ್ಟು ಬದುಕುವವರನ್ನು ನಾವು ಕಾಣುತ್ತೇವೆ. ಭೂತದಲ್ಲಿ ಬದುಕುವವರು ಹಿಂದೆ ತಮ್ಮಜೀವನದಲ್ಲಿತಾವು ಅನುಭವಿಸಿದ ಸಂತೋಷವನ್ನು ನೆನಪು ಮಾಡಿಕೊಂಡು ವರ್ತಮಾನದಲ್ಲಿಅದು ಕಡಿಮೆಯಾಗಿದ್ದರೆ ಆ ಬಗ್ಗೆ ಕೊರಗುತ್ತಲೇ ಇರುತ್ತಾರೆ. ಮತ್ತೆ ಕೆಲವರು ಹಿಂದೆ ತಾವು ಅನುಭವಿಸಿದ್ದ ಕಷ್ಟಗಳನ್ನು ನೆನೆಯುತ್ತ ಈಗ ಹೆಚ್ಚು ನೆಮ್ಮದಿಯಾಗಿರುವ ಬಗ್ಗೆ ತೃಪ್ತಿ ಪಟ್ಟುಕೊಳ್ಳುತ್ತಾರೆ. ಇಂಥವರ ಸಂಖ್ಯೆ ಕಡಿಮೆ.ಇನ್ನೂ ಕೆಲವರು ಹಿಂದಿನ ತಮ್ಮ ಕಷ್ಟ ಈಗಲೂ ಮುಂದುವರಿದಿರುವ ಬಗ್ಗೆ ದುಃಖಿಸುವವರು. ಇನ್ನು, ಹಿಂದೆ ಇದ್ದ ತಮ್ಮ ಸುಖ ಸಂತೋಷಗಳು ಈಗಲೂ ಮುಂದುವರಿಯುತ್ತಿವೆ ಎಂಬ ಸಂತಸವನ್ನು ನಿತ್ಯವೂ ಅನುಭವಿಸುವವರು ಸಾಮಾನ್ಯವಾಗಿ ಕಾಣುವುದಿಲ್ಲವಾದರೂ ಇಲ್ಲವೇ ಇಲ್ಲ ಎನ್ನಲಾಗದು.

ಭವಿಷ್ಯದಲ್ಲಿ ಬದುಕುವವರ ಬಗ್ಗೆ ಕೂಡ ಇದೇ ಬಗೆಯ ಮಾತುಗಳನ್ನು ಹೇಳಬಹುದು.ಇವರಲ್ಲಿ ಕೆಲವರು ಭವಿಷ್ಯತ್‌ ಕಾಲದ ಸುಖ ಸಂತೋಷದ ಕನಸನ್ನುಕಾಣುವವರು.ಇವರ ವರ್ತಮಾನವು ನಿರೀಕ್ಷೆಯಲ್ಲಿಯೇ ಕಳೆದುಹೋಗುತ್ತದೆ. ಮತ್ತೆ ಕೆಲವರು ಭವಿಷ್ಯತ್‌ಕಾಲದಲ್ಲಿಏನೆಲ್ಲತೊಂದರೆ, ಕಷ್ಟ, ಸಾವು, ನೋವು ಬಂದೀತು ಎಂಬ ಆತಂಕದಲ್ಲಿಯೇ ದಿನ ಕಳೆಯುತ್ತಾರೆ. ಯಾವುದೋ ಅಂಗಡಿಯಿಟ್ಟು ವ್ಯಾಪಾರ ಮಾಡುತ್ತಿರುವವರಾದರೆ ನನ್ನ ಅಂಗಡಿ ಎದುರೇ ನಾಳೆ ಅಥವಾ ಹತ್ತು ವರ್ಷಗಳ ನಂತರ ಇನೊಬ್ಬಅಂಗಡಿ ತೆರೆದರೆ ಏನು ಮಾಡುವುದು ಎಂಬ ಆತಂಕ. ಖಾಸಗಿ ನೌಕರಿಯಲ್ಲಿಇರುವವನಿಗೆ ತನ್ನನ್ನುಯಾವುದಾದರೂ ಕಾರಣಕ್ಕೆ ಅಥವಾ ಯಾರಾದರೂಚಾಡಿ ಹೇಳಿ ನೌಕರಿಯಿಂದ ತೆಗೆದರೆ ಎಂಬ ಆತಂಕ. ಸರಕಾರಿ ನೌಕರನಿಗೆ ಸರಕಾರ ದಿವಾಳಿಯಾಗಿ ಸಂಬಳ ನಿಂತರೆ ಎಂಬ ಆತಂಕ. ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡವನಿಗೆ ಆಸ್ತಿ ಹರಾಜಾದರೆ ಎಂಬ ಹೆದರಿಕೆಯಾದರೆ, ಬ್ಯಾಂಕಿನಲ್ಲಿಠೇವಣಿಯಿಟ್ಟವರಿಗೆ ಬ್ಯಾಂಕೇ ಮುಳುಗಿದರೆ ಎಂಬ ತಲೆಬಿಸಿ.

ಜಾಹೀರಾತು

ಒಟ್ಟಿನಲ್ಲಿ ಮೇಲೆ ಹೇಳಿದ ಎರಡೂ ಬಗೆಯವರ, ಅಂದರೆ, ಭೂತಕಾಲದಲ್ಲಿ ಬದುಕುವವರ ಮತ್ತು ಭವಿಷ್ಯತ್‌ಕಾಲದಲ್ಲಿ ಬದುಕುವವರ ವರ್ತಮಾನ ಕಾಲದ(ಅಂದರೆ ಆಯಾಯಾ ಕ್ಷಣದ) ಸಂತೋಷಅಥವಾದುಃಖಕ್ಕೆಒಂದೋ ಭೂತಕಾರಣವಾಗಿರುತ್ತದೆಅಥವಾ ಭವಿಷ್ಯಕಾರಣವಾಗಿರುತ್ತದೆ.

ವರ್ತಮಾನ ಕಾಲದಲ್ಲಿ ಬದುಕುವವರ ಕತೆ ಬೇರೆಯೇ ರೀತಿ ಇರುತ್ತದೆ. ಬಹಳಷ್ಟು ತತ್ವಜ್ಞಾನಿಗಳು ಹೇಳುವಂತೆ ವರ್ತಮಾನ ಕಾಲದಲ್ಲಿ ಬದುಕುವವರು ಹೆಚ್ಚು ಸುಖಿಗಳು.ತಿಳಿದವರು ಹೇಳುವಂತೆ ನಿನ್ನೆಯು ಕಳೆದು ಹೋದುದು, ನಾಳೆಯು ಬರುತ್ತದೋ ಇಲ್ಲವೋಗೊತ್ತಿಲ್ಲ, ಹಾಗಾಗಿ ಈ ಕ್ಷಣವನ್ನು ಅನುಭವಿಸಿ. ಚಾರ್ವಾಕ ಹೇಳಿದ್ದೂ ಹೆಚ್ಚು ಕಡಿಮೆ ಇದನ್ನೇ ಅಲ್ಲವೇ? ಸಾಲ ಮಾಡಿಯಾದರೂ ತುಪ್ಪ ಕುಡಿ ಅಂತ. ಹಾಗಂತ ಈ ಕ್ಷಣದ ಚಿಂತೆ ಯಾರಿಗೂ ತಪ್ಪಿದ್ದಲ್ಲ. ತುಪ್ಪ ತಯಾರಿದ್ದರೆ ಸರಿ, ಇಲ್ಲದಿದ್ದರೆ ತುಪ್ಪ ಎಲ್ಲಿದೆಯೆಂದು ಈ ಕ್ಷಣವಾದರೂ ಚಿಂತಿಸಲೇಬೇಕಾಗುತ್ತದೆ. ಹುಡುಕಬೇಕಾಗುತ್ತದೆ.

ಅದೇನೇ ಇದ್ದರೂ ವರ್ತಮಾನ ಕಾಲದಲ್ಲಿ ಬದುಕುವವರು ಹೆಚ್ಚು ನೆಮ್ಮದಿಯಾಗಿರುತ್ತಾರೆಂಬುದು ಅಷ್ಟೇನೂ ಸತ್ಯವಾದ ಮಾತು ಅಂತ ಅನಿಸುವುದಿಲ್ಲ. ಇದಕ್ಕೆ ಹಲವು ದೃಷ್ಟಾಂತಗಳನ್ನು ನೀಡಬಹುದು.ಈಗ ನನ್ನದೇ ಉದಾಹರಣೆ ತೆಗೆದುಕೊಳ್ಳಿ.ನಾನು ಈಚೆಗೆ ಕಂಡುಹಿಡಿದಿರುವಂತೆ, ನನ್ನಅತಿ ದೊಡ್ಡ ದೌರ್ಬಲ್ಯವೆಂದರೆ ವರ್ತಮಾನದಲ್ಲಿ ಮಾತ್ರ ಬದುಕುವುದೇ ಆಗಿದೆ.ಅಂದರೆ ನಿನ್ನೆಆದುದನ್ನು ಮರೆಯುವುದು ಮತ್ತು ನಾಳೆ ಏನು ಮಾಡಬೇಕು ಎನ್ನುವುದನ್ನು ನೆನಪು ಮಾಡಿಕೊಳ್ಳದೇ ಇರುವುದು. ನಿನ್ನೆಯ ನೋವು ಮರೆತರೆ ಮತ್ತು ನಾಳಿನ ಬಗ್ಗೆ ಚಿಂತಿಸದಿದ್ದರೆ ಇಂದು ನೆಮ್ಮದಿಯಾಗಿರಬಹುದು ಎಂಬುದು ಮಿಥ್ಯಾಕಲ್ಪನೆಯೆಂದು ನನಗೀಗ ಜ್ಞಾನೋದಯವಾಗುತ್ತಲಿದೆ. ಕಳೆದದ್ದು ಮರೆಯುವುದರಿಂದ ಏನಾಗುತ್ತದೆ ನೋಡಿ: ಮದುವೆಯ ವಾರ್ಷಿಕ ದಿನ ನೆನಪಿರುತ್ತದೆಯೇ? ನಾನೂ ಒಂದು ಶುಭವಸರದಲ್ಲಿ(?) ಮದುವೆಯಾಗಿದ್ದೆ ಅಂತ ನೆನಪಾಗುವುದುಯಾವಾಗೆಂದರೆ ಆ ದಿನ ಹಾಗೆಯೇ ಎಂದಿನಂತೆ ಕಳೆದು ಹೋಗಿ ಮರುದಿನ ಹೆಂಡತಿ ನೆನಪು ಮಾಡಿದಾಗಲೇ. ಹೆಂಡತಿಯಾದರೂ ಅದೇ ದಿನ ನೆನಪು ಮಾಡಬಾರದೇ?ಆದರೆ ನನಗೆ ನೆನಪಾಗುತ್ತದೋ ಎಂದು ಅವಳು ಪರೀಕ್ಷೆ ಮಾಡಬೇಕಲ್ಲ!  ಹಾಗೊಂದು ವೇಳೆ ಅದೇ ದಿನ ರಾತ್ರಿ ಹನ್ನೊಂದೂವರೆಗೆ ಅವಳು ನೆನಪಿಸಿದರೆ ನನಗೆ ನೆನಪಿತ್ತು, ನಿನಗೆ ನೆನಪುಂಟೋ ಎಂದು ನೋಡಲು ನಾನು ಕಾದದ್ದು ಅಂತ ನಾನು ಹೇಳುವವನೇ ಅಂತ ಅವಳಿಗೆ ಗೊತ್ತುಂಟು. ಕೆಲ ವರ್ಷಗಳ ಹಿಂದೊಮ್ಮೆಒಂದು ದಿನ ಬೆಳಗ್ಗೆ ನನ್ನ ಸಹ ಸಹೋದರ(ಕೋಬ್ರದರ್?) ದೂರವಾಣಿ ಕರೆ ಮಾಡಿ ಅನ್ನಿವರ್ಸರಿ ಅಂತ ಆರಂಭಿಸಿದಾಗ ನನಗೇ ಅನ್ನಿವರ್ಸರಿಯ ಶುಭಾಶಯ ಹೇಳಿದ್ದಾನೆ ಅಂದುಕೊಂಡು ಥಟ್ಟನೆ ಧನ್ಯವಾದ ಅಂತ ಹೇಳಿ ಮಂಗನಾಗಿದ್ದೆ. ಅವನು ನಿಜವಾಗಿ ಅವನ ಅನ್ನಿವರ್ಸರಿಗೆ ಕರೆಯಲು ಫೋನು ಮಾಡಿದ್ದ.

ಜಾಹೀರಾತು

ಇನ್ನು ನನ್ನ ಜನ್ಮದಿನದ ಬಗ್ಗೆ ಕೇಳಬೇಡಿ. ಅದು ಮರೆತರೂ ತೊಂದರೆಯಿಲ್ಲ. ದೊಡ್ಡ ಕಷ್ಟವೆಂದರೆ ಹೆಂಡತಿಯ ಜನ್ಮದಿನವೂ ಮರೆತು ಹೋಗುವುದು. ನಾನು ಹುಟ್ಟಿದ್ದನ್ನು ಅಥವಾ ಮದುವೆಯಾಗಿದ್ದೇನೆಂಬುದನ್ನು ಮರೆತು ನೆಮ್ಮದಿಯಾಗಿರಬಹುದು. ಆದರೆ ಹೆಂಡತಿ ಹುಟ್ಟಿದ್ದನ್ನು ಮತ್ತು ಮದುವೆಯಾಗಿದ್ದಾಳೆ ಎಂಬುದನ್ನು ಮರೆತು ನೆಮ್ಮದಿಯಾಗಿರುವುದು ಹೇಗೆ?

ನಾನು ಎಲ್ಲಿಗಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಹೋದೆನೆನ್ನಿ. ಕೈಯಲ್ಲಿ ಕ್ಯಾಮರಾ ಹಿಡಿದುಕೊಳ್ಳಲು ಮರೆಯುತ್ತೇನೆಂಬುದುಒಂದು.ಒಂದುವೇಳೆ ಕ್ಯಾಮರಾ ಇದ್ದರೂ ಆ ಪ್ರೇಕ್ಷಣೀಯ ನೋಟಗಳನ್ನು ಆ ಕ್ಷಣ ಅನುಭವಿಸುವ ನನ್ನ ಮನಸ್ಸಿಗೆ ಛಾಯಾಚಿತ್ರ ತೆಗೆಯಲು ನೆನಪೇ ಆಗುವುದಿಲ್ಲ.

ನನ್ನ ವರ್ತಮಾನ ಕಾಲದ ಅವಧಿ ಕೂಡ ಬಹಳ ಸಣ್ಣದು ಎಂದು ನನಗೀಗ ಸ್ಪಷ್ಟವಾಗುತ್ತಿದೆ. ಹತ್ತು ವರ್ಷ ಪ್ರಾಯದ ನನ್ನ ಮಗನನ್ನುಇಪ್ಪತ್ತು ಮೈಲಿ ದೂರದ ಅವನ ಅಜ್ಜನ ಮನೆಗೆ ಕಳಿಸಲು ಬಸ್ಸಿಗೆ ಹತ್ತಿಸಿ ಬಿಡಲು ಬಸ್ಸುನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿಟ್ಟುಕೊಳ್ಳಿ. ಬಸ್ಸು ಬಂತು; ಮಗನನ್ನು ಬಸ್ಸಿನಲ್ಲಿ ಕುಳ್ಳಿರಿಸಿ ಟಿಕೇಟಿಗೆ ದುಡ್ಡುಕೊಟ್ಟು ಇಳಿದುಬಿಟ್ಟರೆ ಮುಗಿಯಿತು. ಮತ್ತೆ ಅವನು ತಲುಪಬೇಕಾದಲ್ಲಿಗೆತಲುಪಿದನೇ? ಎಷ್ಟು ಹೊತ್ತಿಗೆತಲುಪಿದ? ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲು ನೆನಪೇ ಇರುವುದಿಲ್ಲ. ಯಾವಾಗಾದರೂ, ಎಲ್ಲಿಗಾದರೂ ಆತ್ಮೀಯರಾದ, ದಾಕ್ಷಿಣ್ಯ ಮಾಡುವ ಅಗತ್ಯವಿಲ್ಲದಷ್ಟು ಆತ್ಮೀಯರಾದ, ಮಿತ್ರರು ಅಥವಾ ನೆಂಟರ ಮನೆಗೆ ನಾನೊಬ್ಬನೇ ಹೋಗಿದ್ದಾಗ ಯಾವುದೋ ಅಪರೂಪದ ಭಕ್ಷ್ಯ ಭೋಜ್ಯವೇನಾದರೂ ಇದ್ದರೆ ಅದನ್ನು ಬಡಿಸಿದಾಗ ರುಚಿರುಚಿ ಮಾಡಿಕೊಳ್ಳುತ್ತ ಅದನ್ನು ಮೆಲ್ಲುವುದರತ್ತ ಮಾತ್ರ ನನ್ನ ಆ ಕ್ಷಣದ ಗಮನ. ಅದರಿಂದಾಚೆಗೆ ಯೋಚಿಸಿ, ಇದ್ದರೆ ಒಂಚೂರು ನನ್ನ ಹೆಂಡತಿ ಮಕ್ಕಳಿಗೆ ಕಟ್ಟಿಕೊಡಿ ಎನ್ನಲು ನನಗೆ ನೆನಪಾಗದು. ನೆನಪಾಗದಿರುವುದು ಅಂತಹ ದೊಡ್ಡ ಸಮಸ್ಯೆಯಲ್ಲ; ಅದರ ಸವಿಯನ್ನು ಮನೆಗೆ ಹೋಗಿ ವರ್ಣಿಸಲು ಕೆಲವೊಮ್ಮೆ ನೆನಪಾಗುತ್ತದಲ್ಲ, ಅದೇ ನಿಜವಾದ ಸಮಸ್ಯೆ! ತಿನ್ನುವಾಗ ನಿನ್ನ ನೆನಪಾಯಿತು, ಕೇಳಬೇಕೆಂದುಕೊಂಡೆ, ದಾಕ್ಷಿಣ್ಯವಾಯಿತುಎಂದೆಲ್ಲ ಸುಳ್ಳು ಪೋಣಿಸಬೇಕಾಗುತ್ತದೆ.

ಜಾಹೀರಾತು

ಆಯಾ ಕ್ಷಣದ ವರ್ತಮಾನ ಕಾಲದಲ್ಲಿ ಬದುಕುವವರ ಪರವಾಗಿ ಮಂಡಿಸಬಹುದಾದ ಒಂದೇ ಒಂದು ವಾದವೆಂದರೆ, ಆ ಕ್ಷಣದ ಕೆಲಸದ ಬಗ್ಗೆ ಅಂಥವರು ಏಕಾಗ್ರತೆ ಹೊಂದಿರುತ್ತಾರೆ ಎನ್ನುವುದು. ಆದರೆ ಇದು ಎಲ್ಲಿಯೂ ಸಾಕ್ಷಿ ಸಮೇತ  ಈವರೆಗೆ ಪ್ರೂವ್‌ಆದಂತಿಲ್ಲ.

ವರ್ತಮಾನ ಕಾಲದಲ್ಲಿ ಬದುಕುವವನು/ಳು ತನ್ನಕುಟುಂಬದ ಬಗ್ಗೆ, ಬಂಧುಗಳ ಬಗ್ಗೆ ಅಥವಾ ತಾನು ಬದುಕುತ್ತಿರುವ ಸಮಾಜದ ಬಗ್ಗೆ ಎಷ್ಟೇ ಕಾಳಜಿಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡರೂ ಅದು ಮೂರ್ತವಾಗಿ ವ್ಯಕವಾಗುವ ಅವಕಾಶಗಳೇ ಕಡಿಮೆ. ಸಂಸಾರ, ಸಮಾಜಎಲ್ಲವನ್ನೂ ಬಿಟ್ಟು ಸನ್ಯಾಸಿಯಾದವನು, ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳದವನು/ಳು ಆದರೆ ಸರಿ. ಆದರೆ ಸಂಸಾರಿಯಾಗಿ, ಸಮಾಜದ ನಡುವೆ ಇರುವವನು/ಳು ಇತರರ ಮತ್ತುತನ್ನ ಹುಟ್ಟುಹಬ್ಬವನ್ನು, ಮದುವೆಇತ್ಯಾದಿ ವಾರ್ಷಿಕಾವರ್ತನ ದಿನಗಳನ್ನು, ಎಂದೋ ಎಲ್ಲೋ ಪರಿಚಿತರಾದವರ ಹೆಸರನ್ನು ನೆನಪಿಟ್ಟುಕೊಂಡರೆ ಅವರಿಗೂ ಖುಷಿ.ಎಲ್ಲವನ್ನೂ ಮರೆತವನನ್ನುಎಲ್ಲರೂ ಮರೆಯುತ್ತಾರೇನೋ?!

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ವರ್ತಮಾನ ಕಾಲದಲ್ಲಿ ಬದುಕುವ ಕಷ್ಟ ಸುಖ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*