ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯಲಿದೆಯೇ ಅಂತಿಮ ಹೋರಾಟ

www.bantwalnews.com

ಎತ್ತಿನಹೊಳೆ ಯೋಜನೆ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೋರಾಟಗಾರರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಿಜೆಪಿಯಲ್ಲೂ ಎತ್ತಿನಹೊಳೆ ಯೋಜನೆ ಬೇಡವೇ ಬೇಡ ಎಂಬ ಸ್ಪಷ್ಟ ನಿಲುವು ಇನ್ನೂ ರಾಜ್ಯಮಟ್ಟದಿಂದ ಪ್ರಕಟವಾಗಿಲ್ಲ. ರಾಜ್ಯಾಡಳಿತದ ನಿರ್ಧಾರ ಕೈಗೊಳ್ಳುವ ಎರಡು  ರಾಜಕೀಯ ಪಕ್ಷಗಳೇ ಈ ರೀತಿ ಆದ ಮೇಲೆ ಹೋರಾಟ ಹೇಗಿರುತ್ತೆ?

  • ಹರೀಶ ಮಾಂಬಾಡಿ

www.bantwalnews.com ವಿಶೇಷ

ಜಾಹೀರಾತು

pics: Kishore B.C.Road

ಎತ್ತಿನಹೊಳೆ ಕುರಿತು ಸಾಕಷ್ಟು ವರದಿ, ವಿಚಾರಗಳು ಪತ್ರಿಕೆಗಳಲ್ಲ ಬರುತ್ತಿವೆ. ಆದರೆ  ಯಾವುದಕ್ಕೂ ತಾರ್ಕಿಕ ಅಂತ್ಯ ದೊರಕಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಹೋರಾಟದ ಧ್ವನಿ ಎಬ್ಬಿಸುತ್ತಾರೆ. ಅದಕ್ಕೆ ಆಡಳಿತ ನಡೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅಷ್ಟೇ ವ್ಯಂಗ್ಯದಿಂದ ಉತ್ತರಿಸುತ್ತಾರೆ.

 ಎತ್ತಿನಹೊಳೆ ಹೋರಾಟ ಎಂಬುದು ರಾಜಕೀಯದಲ್ಲಿ ಮೂಲೆಗುಂಪಾದವರ ವೇದಿಕೆಯಾಗಿ ರೂಪುಗೊಳ್ಳುತ್ತಿದೆ ಎಂದು ಸಕ್ರಿಯವಾಗಿ ರಾಜಕೀಯದಲ್ಲಿರುವವರು ಟೀಕೆ ಮಾಡುವಂತೆ ಆಗಿದೆ. ದೊಡ್ಡ ಮಟ್ಟದ ಹೋರಾಟಗಳೂ ಅಂಥ ಪರಿಣಾಮ ಬೀರದಿರಲು ಕಾರಣ ಪ್ರಬಲವಾದ ಜನಸ್ಪಂದನೆ ಇದಕ್ಕೆ ಸಿಗದಿರುವುದೇ? ಜನರೇ ಹೇಳಬೇಕು. ಆದರೆ ಸರಕಾರ ಮಾತ್ರ ಯಾವ ಕಾರಣಕ್ಕೂ ಎತ್ತಿನಹೊಳೆ ಯೋಜನೆಯನ್ನು ಕೈಬಿಡಲು ಸಿದ್ಧವಿಲ್ಲ ಎಂಬುದಂತೂ ಸ್ಪಷ್ಟ. ಹೀಗಾಗಿ ಇನ್ನು ಸರ್ಜಿಕಲ್ ಸ್ಟ್ರೈಕ್ ಮಾದರಿಯ ಅಂತಿಮ ಹೋರಾಟ ಎನ್ನುತ್ತಾರೆ ವಿಜಯಕುಮಾರ ಶೆಟ್ಟಿ.

ಜಾಹೀರಾತು

ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಅದನ್ನು ಅವರು ಹೇಳಿದ್ದಾರೆ. ವಿಜಯಕುಮಾರ ಶೆಟ್ಟಿ ನೇತ್ರಾವತಿ ಸಂರಕ್ಷಣಾ ಸಮಿತಿ ಅಧ್ಯಕ್ಷ. ಎತ್ತಿನಹೊಳೆ ಯೋಜನೆ ವಿರುದ್ಧ ಪ್ರಬಲವಾಗಿ ಹೋರಾಟ ಮಾಡುವವರಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಒಬ್ಬರು. ಮಾಜಿ ಶಾಸಕರು.

ಇದೀಗ ರಾಷ್ಟ್ರೀಯ ಹಸಿರುಪೀಠ ನ್ಯಾಯಾಧಿಕರಣ ವಿಚಾರಣೆಯನ್ನು 20ಕ್ಕೆ ಮುಂದೂಡಲಾಗಿದೆ. ಅಲ್ಲೇನಾಗುತ್ತೋ ಗೊತ್ತಿಲ್ಲ, ಹೋರಾಟ ಮುಂದುವರಿಯುವುದಂತೂ ಸತ್ಯ, ನಾವಿನ್ನು ಜ.26ರಿಂದ ಸರ್ಜಿಕಲ್ ಸ್ಟ್ರೈಕ್ ಮಾದರಿ ಹೋರಾಟ ಮಾಡ್ತೇವೆಎಂದಿದ್ದಾರೆ ಶೆಟ್ಟರು.

ಈಗಾಗಲೇ ತುಂಬೆ ಡ್ಯಾಂ ಎತ್ತರಕ್ಕೇರಿದೆ. ಮೇಲ್ನೋಟಕ್ಕೆ ನೀರಿನ ಸಂಗ್ರಹ ಕಾಣುತ್ತಿದೆ. ಆದರೆ ಯಾವಾಗ ಅದು ಖಾಲಿಯಾಗುತ್ತೋ ಗೊತ್ತಿಲ್ಲ. ನೇತ್ರಾವತಿಯಲ್ಲಿ ನೀರಿಲ್ಲದೇ ಇದ್ದರೆ ತುಂಬೆ ತುಂಬುವುದಾದರೂ ಹೇಗೆ.

ಜಾಹೀರಾತು

ಮಂಗಳೂರಿಗೆ ನೀರಿಲ್ಲದಿದ್ದರೆ ಏನು ತೊಂದರೆ ಎಂಬುದನನ್ನು ಕಳೆದ ಮೇ ತಿಂಗಳಿನ ಭೀಕರ ಬರಗಾಲ ತೋರಿಸಿಕೊಟ್ಟಿದೆ. ಸಮುದ್ರ ಸೇರುವ ಮುನ್ನ ನೇತ್ರಾವತಿಗೆ ಅದೆಷ್ಟು ಉಪನದಿಗಳು ಸೇರುತ್ತವೆ, ನೀರು ಕೊಂಡೊಯ್ಯುವುದು ಸಮುದ್ರದ ಬದಿಯಿಂದಷ್ಟೇ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರಬೇಕು.

ಪ್ರಪಂಚದ ಅತ್ಯಂತ ಸೂಕ್ಷ್ಮ  ಸಂಪನ್ಮೂಲ ಇರುವ ಪ್ರದೇಶ ಪಶ್ಚಿಮಘಟ್ಟ.  2000ನೇ ಇಸ್ವಿಯಲ್ಲಿ ಜಿ.ಎಸ್‌.ಪರಮಶಿವಯ್ಯ ಕರ್ನಾಟಕ ಸರಕಾರಕ್ಕೆ ನೀಡಿದ ವರದಿಯಲ್ಲಿ, ರಾಜ್ಯದ 3,440 ಟಿಎಂಸಿ ನೀರಿನಲ್ಲಿ 400 ಟಿಎಂಸಿ ನೀರು ನೇತ್ರಾವತಿಯಲ್ಲಿ ಪಶ್ಚಿಮಕ್ಕೆ ಹರಿದು ವೃಥಾ ಸಮುದ್ರ ಸೇರುತ್ತದೆ ಎಂದು ಹೇಳಿದ್ದರು. ನೇತ್ರಾವತಿ ನೀರು ಸಮುದ್ರ ಸೇರುವ ಜಾಗ ಮಂಗಳೂರಿನ ಬೇಂಗ್ರೆ ಅಳಿವೆ ಎಂಬಲ್ಲಿದೆ. ಜೂನ್‌ -ಜುಲೈ ತಿಂಗಳಿನಲ್ಲಿ ನೇತ್ರಾವತಿ ಪ್ರವಾಹದ ನೀರು ಸಮುದ್ರ ಸೇರುವ ಜಾಗದಲ್ಲಿ 400 ಟಿಎಂಸಿ ನೀರು ಹರಿದರೆ ಏನಾದೀತು ನೀವೇ ಯೋಚಿಸಿ.

. 250 ಕಿ.ಮೀ. ಉದ್ದದ ಕೊಳವೆ ನಿರ್ಮಿಸಿ 200 ಮೀಟರ್‌ ಎತ್ತರದ ಪೂರ್ವಕ್ಕೆ ನೀರನ್ನೇ ತಿರುಗಿಸುವ ಎತ್ತಿನಹೊಳೆ ಯೋಜನೆಯಿಂದ ಸಾವಿರಾರು ಹೆಕ್ಟೇರು ಅರಣ್ಯ ಭೂಮಿ ನಾಶವಾಗಬಹುದು. ಜಗತ್ತಿನ ವಿಶಿಷ್ಟ ಮಳೆಕಾಡು ಪ್ರದೇಶಕ್ಕೆ ಕೊಡಲಿ ಏಟು ಬಿದ್ದು ನದಿ ಮೂಲ ಬರಿದಾಗುತ್ತದೆ. ಇಷ್ಟೆಲ್ಲ ವಾದ, ವಿಚಾರಗಳು ಎತ್ತಿನಹೊಳೆ ಯೋಜನೆ ವಿರೋಧಿಸುವವರ ಬಳಿ ಇವೆ. ಯೋಜನೆಯಿಂದ ಯಾರಿಗೂ ಲಾಭ ಇಲ್ಲ ಎಂದಾದರೆ ಅನುಷ್ಠಾನವಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಗೊತ್ತಿಲ್ಲ.

ಜಾಹೀರಾತು

ಆದರೆ ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯುವ ಹೋರಾಟದ ತಿರುಳು ಜನಸಾಮಾನ್ಯರಿಗೆ ಇನ್ನೂ ತಲುಪಲಿಲ್ಲವೋ, ಅಥವಾ ಯೋಜನೆ ಅನುಷ್ಠಾನವಾದರೆ ಏನೂ ಆಗಲಿಕ್ಕಿಲ್ಲ ಎಂಬ ಧೈರ್ಯವೋ ಗೊತ್ತಿಲ್ಲ.

ನಮ್ಮ ರಾಜಕಾರಣಿಗಳೂ ಅಷ್ಟೇ. ಹೊರಾಟದ ದಿಸೆಯಲ್ಲಿ ರಾಜಕೀಯ ಬಿಡಲೂ ಅವರಿಗೆ ಮನಸ್ಸಿಲ್ಲ. ಇಲ್ಲಿ ಒಂದು ಮಾತನಾಡುತ್ತಾರೆ, ಬೆಂಗಳೂರಿಗೆ ಹೋದರೆ ಮಾತು ಬೇರೆಯೇ ಇರುತ್ತದೆ. ಎತ್ತಿನಹೊಳೆ ಯೋಜನೆಯಿಂದ ಸಾಧಕ, ಬಾಧಕಗಳೇನು ಎಂಬ ಅರಿವು ನಮ್ಮ ಜನಪ್ರತಿನಿಧಿಗಳಿಗೆ ಇದೆಯೇ ಎಂಬುದು ಗೊತ್ತಿಲ್ಲ.

ಮಂಗಳೂರಿನಲ್ಲಿ ಹೋರಾಟ ನಡೆಸುತ್ತಿರುವವರು, ನೀರಾವರಿ ಹಾಗೂ ಪರಿಸರಕ್ಕೆ ಸಂಬಂಧಿಸಿ ವಿಷಯ ತಜ್ಞರು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ಕರೆದು ಎಲ್ಲರೂ ಶಿಸ್ತಿನಲ್ಲಿ ವಿಚಾರ ಮಂಡಿಸಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ ಹಾಗಾಗಲಿಲ್ಲ.

ಜಾಹೀರಾತು

ಅದು ಆಗೋದೂ ಇಲ್ಲ ಎಂಬುದು ಕಳೆದ ತಿಂಗಳು ಮುಖ್ಯಮಂತ್ರಿ ಎದುರೇ ಸಾಬೀತಾಗಿದೆ. ಇಲ್ಲಿ ಹೋರಾಟ ಮಾಡಿದವರು ಅಲ್ಲಿ ಸಭಾತ್ಯಾಗ ಮಾಡಿದರು. ಪಕ್ಷದ ವೇದಿಕೆಯ ಚರ್ಚೆ, ಜಗಳಗಳಿಗೆ ಆ ಮೀಟಿಂಗ್ ಬಳಕೆಯಾಯಿತು.

ನೆನಪಿಡಿ, ಇದು ಯಾರ ಸ್ವಂತ ಖರ್ಚಿನಲ್ಲಿ ಮಾಡಿದ ಸಭೆಯೂ ಆಗಿರಲಿಲ್ಲ. ಅಲ್ಲ ಹೋಗಿ ಕುಳಿತು ನೀವು ಕುಡಿದ ನೀರಿನ ಬಾಟ್ಲಿಯ ಬಿಲ್ ನಾವು ಕಟ್ಟಿದ ತೆರಿಗೆ ಹಣದಲ್ಲೇ ಪಾವತಿಯಾಗಿದೆ. ಹೀಗಾಗಿ ಇನ್ನೇನು ಎಂಬ ಪ್ರಶ್ನೆ ಎದ್ದಿದೆ.

ಒಂದೆಡೆ ಹೋರಾಟದ ಮಾತು, ಮತ್ತೊಂದೆಡೆ ನಡೆಸಿಯೇ ಸಿದ್ಧ ಎಂಬ ಮಾತು ಕೇಳಿಬರುತ್ತಿವೆ.

ಜಾಹೀರಾತು

ಜನಸಾಮಾನ್ಯರಂತೂ ಇದೆಲ್ಲ ದೊಡ್ಡ ಮಟ್ಟದಲ್ಲಿ “ಆಗಿದೆ’’ ಎಂಬ ಊಹೆಯಲ್ಲೇ ಇದ್ದಾರೆ. ಇದು ನಿಜವಾ, ಅಲ್ವಾ ಎಂಬುದನ್ನು ಜನಪ್ರತಿನಿಧಿಗಳೇ ಹೇಳಬೇಕು. ವಾಸ್ತವ ಏನೆಂಬುದನ್ನು ಮುಂದಿಡಬೇಕು.

ಮುಂದೇನು?

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯಲಿದೆಯೇ ಅಂತಿಮ ಹೋರಾಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*