ಸಣ್ಣಗಾತ್ರದ ಈ ಕಾಳು ದೊಡ್ಡ ಕಾರ್ಯವನ್ನೇ ಮಾಡುತ್ತದೆ. ಕೇವಲ ಪರಿಮಳ ಸೂಸುವ ಒಗ್ಗರಣೆಗಷ್ಟೇ ಅಲ್ಲ, ಸಾಸಿವೆ ಮಹಿಮೆ ಅಪಾರ
www.bantwalnews.com
- ಡಾ. ರವಿಶಂಕರ್ ಎ.ಜಿ.
ಅಂಕಣ ಪಾಕಶಾಲೆಯೇ ವೈದ್ಯಶಾಲೆ
ಸಾಸಿವೆ ಹಾಕದೆ ಒಗ್ಗರಣೆ ಇಲ್ಲ, ಸಾಸಿವೆಯು ವಿಷಘ್ನ ಗುಣವನ್ನು ಹೊಂದಿದೆ. ತಯಾರಿಸಿದ ಆಹಾರದಲ್ಲಿ ಏನಾದರು ವಿಷಪೂರಿತ ಅಂಶ ಇದ್ದರೆ,ಅದರ ನಿವಾರಣೆಗಾಗಿ ಒಗ್ಗರಣೆಗೆ ಸಾಸಿವೆಯನ್ನು ಸೇರಿಸುತ್ತಾರೆ. ಹಾಗೆಯೇ ಇದು ಪದಾರ್ಥದ ರುಚಿಯನ್ನೂ ಹೆಚ್ಚಿಸುತ್ತದೆ.
- ಬಾವು ಪೂರಿತವಾದ ನೋವು ,ಆಮವಾತ ಇತ್ಯಾದಿಗಳಲ್ಲಿ ಸಾಸಿವೆಯನ್ನು ಬಿಸಿನೀರಿನಲ್ಲಿ ಅರೆದು ಲೇಪಹಾಕುವುದರಿಂದ ಬಾವು ಹಾಗು ನೋವು ಕಡಿಮೆಯಾಗುತ್ತದೆ.
- ಶರೀರದಲ್ಲಿ ಅಲರ್ಜಿಯಾಗಿ ಮೈ ತುರಿಕೆ ಇದ್ದರೆ ಸಾಸಿವೆಯ ಎಣ್ಣೆ ಹಚ್ಚಿ ಸ್ನಾನ ಮಾಡ ಬೇಕು.
- ಸಾಸಿವೆ ಎಣ್ಣೆಯು ಚರ್ಮಕ್ಕೆ ಕಾಂತಿ ಹಾಗು ಕೋಮಲತೆಯನ್ನು ನೀಡುತ್ತದೆ.
- ಶೀತ ಅಥವಾ ಕಫದ ಕಾರಣ ಕಿವಿ ನೋವು ಇದ್ದಾಗ ಸಾಸಿವೆಯನ್ನು ಜಜ್ಜಿ ತೆಂಗಿನ ಎಣ್ಣೆಯಲ್ಲಿ ಕುದಿಸಿ ಕಿವಿಗೆ 2 ರಿಂದ 3 ಬಿಂದು ಬಿಟ್ಟಲ್ಲಿ ಕಿವಿನೋವು ಕಡಿಮೆಯಾಗುತ್ತದೆ.
- ಮುಟ್ಟಿನ ರಕ್ತಸ್ರಾವ ಸರಿಯಾಗಿ ಆಗದಿದ್ದಲ್ಲಿ ಸಾಸಿವೆಯ ಕಷಾಯ ಮಾಡಿ ದಿನಕ್ಕೆ 50 ಮಿಲಿ. ಲೀ ನಷ್ಟು ಕುಡಿಯಬೇಕು.
- ಶರೀರದಲ್ಲಿ ಕೊಬ್ಬಿನ (Cholesterol ) ಅಂಶ ಜಾಸ್ತಿ ಇದ್ದಲ್ಲಿ ಪ್ರತಿದಿನ 5 ಗ್ರಾಂ ನಷ್ಟು ಸಾಸಿವೆಯನ್ನು ಬೆಳಗ್ಗೆ ಸೇವಿಸಬೇಕು
- ಸಾಸಿವೆಯಲ್ಲಿ ವಿಟಮಿನ್ ಎ ,ಕಬ್ಬಿಣ ಸತ್ವ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಇರುವ ಕಾರಣ ವಾರಕ್ಕೆ 1 ರಿಂದ 2 ಬಾರಿ ಸಾಸಿವೆ ಎಣ್ಣೆಯನ್ನು ತಲೆಗ ಹಾಕಿದಲ್ಲಿ ತಲೆ ಕೂದಲು ಉದ್ದವಾಗಿ ಬೆಳೆಯುತ್ತದೆ.
- ಸಾಸಿವೆಯನ್ನು ಮಜ್ಜಿಗೆಯಲ್ಲಿ ಅರೆದು ವಾರಕ್ಕೆ 2 ಬಾರಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ತಲೆಯ ಹೊಟ್ಟು ಹಾಗು ತಿರಿಕೆ ನಿವಾರಣೆಯಾಗುತ್ತದೆ.
- ಮಲಬದ್ದತೆ ಇದ್ದಾಗ 5 ಗ್ರಾಂ ನಷ್ಟು ಸಾಸಿವೆಯನ್ನು ಬೆಲ್ಲದೊಂದಿಗೆ ದಿನಕ್ಕೆರಡು ಬಾರಿ ಸೇವಿಸಿದರೆ ಮಲಶೋಧನೆ ಸರಿಯಾಗಿ ಆಗುತ್ತದೆ.
- ಸಾಸಿವೆಯನ್ನು ಮಜ್ಜಿಗೆಯಲ್ಲಿ ಅರೆದು ಬಿಸಿ ಮಾಡಿ ಕತ್ತಿನ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ಗಳಗಂಡಕ್ಕೆ ದಿನಾ ಹಚ್ಚಿದರೆ ನಿಧಾನವಾಗಿ ಬಾವು ಕರಗುತ್ತದೆ.
- ಹಲ್ಲಿನ ಬುಡದಲ್ಲಿ ಕೀವು ತುಂಬಿ ಸಿಡಿಯುತ್ತಿದ್ದರೆ ಸಾಸಿವೆಯನ್ನು ಪುಡಿಮಾಡಿ, ತೆಂಗಿನ ಎಣ್ಣೆಯಲ್ಲಿ ಬಿಸಿಮಾಡಿ,ನಂತರ ಸ್ವಲ್ಪ ಉಪ್ಪನ್ನು ಸೇರಿಸಿ 5 ರಿಂದ 7 ಚಮಚದಷ್ಟು ಬಾಯಿಗೆ ಹಾಕಿ ಮುಕ್ಕಳಿಸ ಬೇಕು. ಆವಾಗ ಕೀವು ಹೊರಬಂದು ಸಿಡಿತ ಕಡಿಮೆಯಾಗುತ್ತದೆ.(ಸಾಸಿವೆ ಮತ್ತು ಉಪ್ಪನ್ನು ಅರೆದು ಹಲ್ಲಿನ ಬುಡಕ್ಕೆ ಲೆಪಿಸಿದರೂ ಆದೀತು)
- ಮೂತ್ರ ಪ್ರವೃತ್ತಿ ಸರಿಯಾಗಿ ಆಗದಿದ್ದರೆ ಸಾಸಿವೆ ಹುಡಿಯನ್ನು ತಿನ್ನಬೇಕು ಮತ್ತು ಸಾಸಿವೆಯನ್ನು ನೀರಿನಲ್ಲಿ ಅರೆದು ಹೊಕ್ಕುಳದ ಕೆಳಗಿನ ಭಾಗಕ್ಕೆ ಹಚ್ಚಬೇಕು.
- ಸಾಸಿವೆಗೆ ಕಫವನ್ನು ಕರಗಿಸುವ ಸಾಮರ್ಥ್ಯ ಇರುವ ಕಾರಣ, ಇದರ ಕಷಾಯವು ಕಫದಿಂದ ಉಂಟಾದ ಕೆಮ್ಮು ಹಾಗು ದಮ್ಮುಕಟ್ಟುವಿಕೆಯಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿಮಾಡಿ ಎದೆಗೆ ಹಚ್ಚಿದರೆ ಉತ್ತಮ.
- ಹೊಟ್ಟೆಯಲ್ಲಿ ಕ್ರಿಮಿಯ ಬಾಧೆಯಿಂದ ನೋವು ಮತ್ತು ಅರುಚಿ ಇದ್ದರೆ ಸಾಸಿವೆಯ ಹುಡಿಯನ್ನು 2 ರಿಂದ 5 ಗ್ರಾಂ ಆಗುವಷ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ವಲ್ಪ ದಿನ ತೆಗೆದುಕೊಳ್ಳಬೇಕು.
- ಸಾಸಿವೆಯು ಆಹಾರದ ಜೀರ್ಣ ಕ್ರಿಯೆಗೆ ಅತ್ಯಂತ ಸಹಕಾರಿಯಾಗಿದೆ.
ಈ ಲೇಖನದ ಕುರಿತು ತಮ್ಮ ಅಭಿಪ್ರಾಯವನ್ನು ಬಂಟ್ವಾಳನ್ಯೂಸ್ ಜೊತೆ ಹಂಚಿಕೊಳ್ಳಿ. bantwalnews@gmail.com ಗೆ ಮೈಲ್ ಮಾಡಿ.
Be the first to comment on "ಒಗ್ಗರಣೆಗಷ್ಟೇ ಅಲ್ಲ ಸಾಸಿವೆ"