ನೀತಿಯುಕ್ತ ಉತ್ತಮ ಸಂದೇಶ ಭರಿತ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸುಧಾರಣೆಯನ್ನು ಕಾಣಲು ಸಾಧ್ಯವಿದೆ. ಅಂತಹ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಭಿನಂದಾರ್ಹರು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಶನಿವಾರ ರಾತ್ರಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ ,ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ ದ.ಕ.,ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ಒಂದು ವಾರದ ತುಳು ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಟಕಗಳು ನಗುವಿನ ಮೂಲಕ ಆರೋಗ್ಯವನ್ನು ಕಾಪಾಡುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತದೆ. ತುಳು ನಾಟಕಗಳಿಗೆ ಗೌರವ ಕೊಡುವ ಮೂಲಕ ಪ್ರೇಕ್ಷಕರು ಮತ್ತು ಸಂಘಟಕರು ತುಳು ಭಾಷೆ,ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗುತ್ತಿದ್ದಾರೆ ಎಂದರು.
ಆಕಾಶವಾಣಿ ನಿವೃತ್ತ ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಅವರು ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ಭೂತಾರಾಧನೆ,ಯಕ್ಷಗಾನದಂತೆ ರಂಗಭೂಮಿಯು ಶಕ್ತಿಶಾಲಿ ಮಾಧ್ಯಮವಾಗಿದೆ. ಬದುಕಿಗೆ ಕಲಾಪ್ರೇರಣೆ ಅಗತ್ಯವಾಗಿದ್ದು ಇದರಿಂದ ವ್ಯಕ್ತಿತ್ವದ ನಿರ್ಮಾಣದ ಜೊತೆಗೆ ತನ್ನ ಮತ್ತು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದ ಅವರು ಮನೋರಂಜನೆಯೊಂದೇ ನಾಟಕದ ಉದ್ದೇಶವಾಗದೆ ಸಮಾಜಕ್ಕೆ ಮೌಲ್ಯ ಕಾಣಿಸುವ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಧರ್ಮ ಇರಬೇಕು ಎಂದು ಹೇಳಿದರು.ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ| ಲಾರೆನ್ಸ್ ಮಸ್ಕರ್‍ಹೇನಸ್ ಅವರು ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯದ ಅಭಾವವಿದ್ದರೂ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಕಲೆಗೆ ಪ್ರೋತ್ಸಾಹ ಕೊಡುವ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ಹೇಳಿದರು. ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್,ಎಂ.ತುಂಗಪ್ಪ ಬಂಗೇರ,ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಪ್ರಗತಿಪರ ಕೃಷಿಕ ಉದಯ್ ಕುಮಾರ್ ಕಟ್ಟೆಮನೆ,ಬಂಟ್ವಾಳ ಕಾರ್ಯನಿರತ ಪರ್ತಕರ್ತ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ,ದ.ಕ.,ಉಡುಪಿ ಜಿಲ್ಲೆ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ,ಉದ್ಯಮಿ ಹರೀಂದ್ರ ಪೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ಸಂತೋಷ್ ಮೂರ್ಜೆ,ಅಧ್ಯಕ್ಷ ಮೋಹನ ಸಾಲ್ಯಾನ್,ವನಿತಾ ಸಮಾಜದ ಗೌರವಾಧ್ಯಕ್ಷೆ ಶಶಿಕಲಾ ಗೋಪಾಲ್,ಅಧ್ಯಕ್ಷೆ ಅಮೃತಾ ಎಸ್.,ಕಾರ್ಯದರ್ಶಿ ವಿನಿತ್‌ಕುಮಾರ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಸದಸ್ಯ ರಾಜೇಂದ್ರ ಕೆ.ವಿ.ಅವರು ಸ್ವಾಗತಿಸಿ ಪ್ರಸ್ತಾವಿಸಿದರು.ಸದಸ್ಯ ರತ್ನದೇವ್ ಪುಂಜಾಲಕಟ್ಟೆ ಆಶಯ ಭಾಷಣ ಮಾಡಿದರು.ಶಿಕ್ಷಕ ಉದಯ ಕುಮಾರ್ ಶೆಟ್ಟಿ ವಂದಿಸಿದರು.ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಜ.16 ರಂದು ಸೋಮವಾರ ನಮ್ಮ ಕಲಾವಿದೆರ್ ನೆಲ್ಯಾಡಿ ತಂಡದವರಿಂದ ಪನ್ಪಿನಕ್ಲು ಪನ್ಪೆರ್ ಸರ್ಧಾ ನಾಟಕ ನಡೆಯಲಿದೆ.
Be the first to comment on "ನೀತಿಭರಿತ ನಾಟಕಗಳಿಂದ ಸಾಮಾಜಿಕ ಪರಿವರ್ತನೆ: ರೈ"