ದೇಶದ ಭವಿಷ್ಯಕ್ಕೆ ಕಂಟಕವಾಗಿರುವ ಸಾಮಾಜಿಕ ಪಿಡುಗು ಮಾದಕ ಪದಾರ್ಥಗಳ ಸೇವನೆ ಹಾಗೂ ಸಾಗಾಟ ಜಾಲದ ನಿಮೂಲನೆಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ಮನವಿ ಮಾಡಿದರು.
ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ (ರಿ.) ತುಂಬೆ ಇದರ ಆಶ್ರಯದಲ್ಲಿ ’ಮಾದಕ ಬದುಕು ಭಯಾನಕ’ ಎಂಬ ಘೋಷಣೆಯೊಂದಿಗೆ ತುಂಬೆಯಾದ್ಯಂತ ಒಂಭತ್ತು ದಿನಗಳ ಕಾಲ ಹಮ್ಮಿಕೊಂಡ ’ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ’ದ ತುಂಬೆಯ ಬಿ.ಎ. ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ಉಪ ವಿಭಾಗದಲ್ಲಿ ಗಾಂಜ ಸಹಿತ ಮಾದಕ ವಸ್ತುಗಳ ಸಾಗಾಟಗಾರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಹೊಸ ವರ್ಷದ ದಿನದಂದು ಗಾಂಜ ಸಾಗಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ೧೬ ಕೆ.ಜಿ. ಗಾಂಜ ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಮೂರು ದಿನಗಳ ಹಿಂದೆ ಒಬ್ಬನನ್ನು ಬಂಧಿಸಿ ೩ ಕೆ.ಜಿ. ಗಾಂಜ ವಶಪಡಿಸಿಕೊಳ್ಳಲಾಗಿದ್ದು ಮಾದಕ ಜಾಲದ ವಿರುದ್ಧದ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಕೆಲವು ಪ್ರಭಾವಿ ವ್ಯಕ್ತಿಗಳು ಸ್ವತಃ ಮಾದಕ ಪದಾರ್ಥಗಳನ್ನು ಸೇವಿಸದೆ ಬಡ, ಅಮಾಯಕ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾರಾಟ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಶಾಲಾ – ಕಾಲೇಜಿನ ಕ್ಯಾಂಪಸ್‌ಗಳಲ್ಲೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಂಬ ಭೇದವಿಲ್ಲದೆ ಮಾದಕ ವಸ್ತುಗಳ ಸೇವನೆ ರಹಸ್ಯವಾಗಿ ನಡೆಯುತ್ತಿದೆ. ಮಾದಕ ಜಾಲದ ನಿರ್ಮೂಲನೆಗೆ ಪೊಲೀಸರೊಂದಿಗೆ ಸಮಾಜ ಪ್ರಜ್ಞಾವಂತ ಜನರು ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಯಾವರ ಸಾವಿರ ಜಮಾಅತ್ ಹಾಗೂ ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಅತ್ತಾವುಲ್ಲಾ ತಂಙಳ್ ಎಂ.ಎ. ದುಅ ಮೂಲಕ ಉದ್ಘಾಟಿಸಿ ಬಳಿಕ ಆರ್ಶಿವರ್ಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೆಸೆಂಟ್ ಯಂಗ್ ಮೆನ್ಸ್ ಅಧ್ಯಕ್ಷ ಸಿರಾಜುದ್ದೀನ್ ತುಂಬೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಡಾ. ಶ್ರೀನಿವಾಸ್ ಭಟ್ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ತುಂಬೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ಮಾತನಾಡಿ ದುಅ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಬಿ.ಎ. ಸಮೂಹ ಸಂಸ್ಥೆಯ ನಿರ್ದೇಶಕ ಬಿ.ಅಬ್ದುಲ್ ಸಲಾಂ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿದ ಪುತ್ತೂರು ಕೂರ್ನಡ್ಕ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ನಿರ್ಮೂಲನೆಗೆ ಜಿಲ್ಲಾ ಮಟ್ಟದ ವಿಶೇಷ ಪೊಲೀಸ್ ದಳದ ರಚನೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ತುಂಬೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕ್ಕರ್, ಹಯಾತುಲ್ ಇಸ್ಲಾಮ್ ಮದರಸದ ಸದರ್ ಮುಹಲ್ಲಿಂ, ತುಂಬೆ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಮುಹಮ್ಮದ್ ಬಶೀರ್, ತುಂಬೆ ಸುನ್ನಿ ಕಲ್ಚರಲ್ ಸೆಂಟರ್ ಅಧ್ಯಕ್ಷ ಮುಸ್ತಾಕ್ ಮದನಿ, ತುಂಬೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇಮ್ತಿಯಾಝ್, ತುಂಬೆ ಫ್ರೆಂಡ್ಸ್ ಗ್ರೂಪ್‌ನ ಅಧ್ಯಕ್ಷ ಬದ್ರುದ್ದೀನ್, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ಇದರ ಪ್ರಧಾನ ಕಾರ್ಯದರ್ಶಿ ಶೌಹಾನ್ ಅಹ್ಮದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಂಭತ್ತು ದಿನಗಳ ಅಭಿಯಾನಕ್ಕೆ ಬೀದಿ ನಾಟಕ ತಂಡ ಹಾಗೂ ಕಿರು ಚಿತ್ರವನ್ನು ನೀಡಿ ಸಹಕರಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ವಾನ್ ಸಾದಿಕ್‌ಗೆ ಹಾಗೂ ಬೀದಿ ನಾಟಕ ತಂಡದ ಸದಸ್ಯರಿಗೆ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಕ್ರೆಸೆಂಟ್ ಯಂಗ್ ಮೆನ್ಸ್‌ನ ಮಾಜಿ ಅಧ್ಯಕ್ಷ ಇಮ್ತಿಯಾಝ್ ಎ.ಕೆ. ಪ್ರಾಸ್ತಾವಿಸಿ ಸ್ವಾಗತಿಸಿದರು. ’ಮಾದಕ ಬದುಕು ಭಯಾನಕ’ ಅಭಿಯಾನದ ಸಂಚಾಲಕ ಮುಹಮ್ಮದ್ ಇರ್ಫಾನ್ ಧನ್ಯವಾದಗೈದರು. ಖಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಕ್ರೆಸೆಂಟ್ ಯಂಗ್ ಮೆನ್ಸ್ ಸಹಿತ ತುಂಬೆಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದರು.
Be the first to comment on "ಮಾದಕ ಪದಾರ್ಥ ಸೇವನೆ ನಿರ್ಮೂಲನೆಗೆ ಪೊಲೀಸ್ ಜೊತೆ ಕೈಜೋಡಿಸಿ"