ಭವಿಷ್ಯದ ದೃಷ್ಟಿಕೋನದೊಂದಿಗೆ ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ ಮಾಡಿ, ಸರಕಾರದ ಯೋಜನೆಯನ್ನು ಅಧಿಕಾರಯುತವಾಗಿ ಪಡೆದುಕೊಳ್ಳಿ, ಭೂಶಕ್ತಿ, ಜಲಶಕ್ತಿ, ಜನಶಕ್ತಿ ಕೃಷಿಗೆ ಅಗತ್ಯ, ಆಧುನಿಕ ಯಂತ್ರೋಪಕರಣ ಬಳಕೆಯ ಅರಿವು ಇರಲಿ.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕೃಷಿಕರಿಗೆ ನೀಡಿದ ಟಿಪ್ಸ್ ಇವು.
www.bantwalnews.com report
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಕೃಷಿ ಉತ್ಸವ ಸಮಿತಿ 2016-17 ಆಶ್ರಯದಲ್ಲಿ ಆರಂಭಗೊಂಡ ಎರಡು ದಿನಗಳ ಕೃಷಿ ಉತ್ಸವವನ್ನು ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಕೃಷಿಕರಿಗೆ ಹೆಚ್ಚಿನ ಸಹನೆ, ಕಠಿಣ ದುಡಿಮೆಯ ಛಲ ಇರಬೇಕು. ಇಂದು ಕೃಷಿಕರು ಕಡಿಮೆ ಆಗುತ್ತಿದ್ದಾರೆ ಎಂದರೆ ಅದಕ್ಕೆ ಅನಿಶ್ಚಿತತೆ ಕಾರಣ, ನೆಮ್ಮದಿಯ ಜೀವನದ ಹುಡುಕಾಟದಲ್ಲಿ ಪಟ್ಟಣಗಳತ್ತ ಯುವಕರು ವಾಲುತ್ತಿದ್ದಾರೆ ಎಂದು ಡಾ. ಹೆಗ್ಗಡೆ ವಿಶ್ಲೇಷಿಸಿದರು.
ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಬಂಟ್ವಾಳ ತಾಲೂಕು ಪಡೆದುಕೊಂಡಿದೆ. ಲಾಭದಾಯಕ, ದೀರ್ಘಕಾಲಿಕ ಕೃಷಿಯನ್ನು ಬಂಟ್ವಾಳ ತಾಲೂಕಿನ ಕೃಷಿಕರು ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಇಂದು ಕಾಡುತ್ತಿದೆ ಎಂದು ಹೆಗ್ಗಡೆ ಹೇಳಿದರು.
ಬರಗಾಲದ ಸ್ಥಿತಿ
ಇಂದು ಮಂಡ್ಯ, ಮಲೆನಾಡು, ಬಯಲು ಸೀಮೆಯಲ್ಲಿ ಬರಗಾಲವಿದೆ. ನೀರಿನ ಕೊರತೆ ಎಲ್ಲೆಡೆ ಕಾಣುತ್ತಿದೆ. ಈ ಸಂದರ್ಭ ಕೃಷಿಯಲ್ಲಿ ವಿವಿಧ ಸಾಧ್ಯತೆಯನ್ನು ನಾವು ಅಳವಡಿಸಬೇಕು. ದೂರದೃಷ್ಟಿ ಇಲ್ಲದೇ ಇದ್ದರೆ ಕೃಷಿ ಉದ್ಧಾರವಾಗುವುದು ಕಷ್ಟ, ಕೃಷಿಕರು ಸಹನೆ, ತಾಳ್ಮೆಯಿಂದ ಕೆಲಸ ಮಾಡಬೇಕು ಎಂದು ಡಾ. ಹೆಗ್ಗಡೆ ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನಡೆಯುತ್ತಿರುವ ಕೃಷಿ ಯಂತ್ರಧಾರಾ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ಕೃಷಿಕರಿಂದ ದೊರಕುತ್ತಿದೆ. ಧರ್ಮಸ್ಥಳದ ಯೋಜನೆಗಳು ಕೃಷಿಕರನ್ನು ಜಾಗೃತಿಗೊಳಿಸುವ ಹಾಗೂ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಡಾ. ಹೆಗ್ಗಡೆ ಹೇಳಿದರು.
ಸ್ವಚ್ಛತೆಗೆ ಆದ್ಯತೆ
ಉತ್ಸವಾದಿಗಳ ಸಂದರ್ಭ ಸ್ವಚ್ಛತೆಗೆ ಆದ್ಯತೆ ನೀಡಿ. ಇಂದು ದಕ್ಷಿಣ ಕನ್ನಡ ಆರಾಧನಾ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ ಎಂದು ಡಾ. ಹೆಗ್ಗಡೆ ಮೆಚ್ಚುಗೆ ಸೂಚಿಸಿದರು.
ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ
ಅಧ್ಯಕ್ಷತೆ ವಹಿಸಿದ್ದ ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದರೆ ಜೀವಜಲ ವೃದ್ಧಿಯಾಗುತ್ತದೆ. ಯಾರೂ ಅರಣ್ಯ ಭೂಮಿಯಲ್ಲಿ ಒತ್ತುವರಿ ಮಾಡಬೇಡಿ, ಮಾಡಿದ್ದರೆ ತೆರವುಗೊಳಿಸಿ ಎಂದು ಮನವಿ ಮಾಡಿದರು. ಅರಣ್ಯದೊಳಗೆ ವಾಸಿಸುವವನಿಗೆ ಹಕ್ಕಪತ್ರ ಕೊಡಲು ಆಗುವುದಿಲ್ಲ, ಅನುಭೋಗದ ಹಕ್ಕು ಮಾತ್ರಕೊಡಲು ಸಾಧ್ಯ ಹೀಗಾಗಿ ಅರಣ್ಯ ಉಳಿಸುವುದು ಹೆಚ್ಚು ಸೂಕ್ತ ಎಂದು ರೈ ಹೇಳಿದರು.
ಆಶೀರ್ವಚನ ನೀಡಿದ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಯುವಕರು ಕೃಷಿ ಚಟುವಟಿಕೆಯತ್ತ ಗಮನಹರಿಸುವ ವೇಳೆ ಅಂತರ್ಜಲ ವೃದ್ಧಿಯತ್ತಲೂ ದೃಷ್ಟಿ ಹರಿಸಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಕೃಷಿಕರು ಸದಾ ತಮ್ಮ ಕಾರ್ಯಕ್ಷೇತ್ರದಲ್ಲಿ ಚಟುವಟಿಕೆನಿರತರಾಗಿರಬೇಕು ಎಂದು ಸಲಹೆ ನೀಡಿದರು. ಸಮಯ ವ್ಯರ್ಥ ಮಾಡದೆ, ಕೃಷಿಯಲ್ಲಿ ಹೊಸ ಸಾಧ್ಯತೆಗಳತ್ತ ಗಮನಹರಿಸಬೇಕು. ಕೃಷಿ ಕೆಲಸ ಮಾಡುವ ಬಗ್ಗೆ ಕೀಳರಿಮೆ ಹೊಂದುವುದು ಬೇಡ ಎಂದು ರಾಜೇಶ್ ನಾಯ್ಕ್ ಹೇಳಿದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಟಿ.ತಿಪ್ಪೇಸ್ವಾಮಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತುಂಬೆ ಇಂಡಿಯನ್ ಟಿಂಬರ್ಸ್ ನ ಅಬ್ದುಲ್ ಅಜೀಜ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ , ಕೃಷಿ ಉತ್ಸವ ಸಮಿತಿ ಅಧ್ಯಕ್ಷ ರೊನಾಲ್ಲ್ಡ್ ಡಿಸೋಜ, ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ರುಕ್ಮಯ ಪೂಜಾರಿ, ಎ.ಸಿ.ಭಂಡಾರಿ, ಕಿರಣ್ ಹೆಗ್ಡೆ, ನಾರಾಯಣ ಭಟ್ ಕೆಯ್ಯೂರು, ಹಾಲಿ ಅಧ್ಯಕ್ಷ ಪ್ರಕಾಶ್ ಕಾರಂತ, ಬಂಟ್ವಾಳ ತಾಲೂಕು ಪ್ರ.ಬಂ.ಸ್ವ.ಸ.ಸಂ.ಕೇ.ಒ. ಅಧ್ಯಕ್ಷ ಸದಾನಂದ ಗೌಡ, ಯೋಜನೆಯ ನಿರ್ದೇಶಕರುಗಳಾದ ಮಹವೀರ ಅಜ್ರಿ, ಚಂದ್ರಶೇಖರ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಸುನೀತಾ ನಾಯಕ್ ಕಾರ್ಯಕ್ರಮ ಮಾಹಿತಿ ನೀಡಿದರು. ಪತ್ರಕರ್ತ ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಭವಿಷ್ಯದ ದೃಷ್ಟಿಕೋನದೊಂದಿಗೆ ಕೃಷಿ ನಡೆಸಿ: ಡಾ. ವೀರೇಂದ್ರ ಹೆಗ್ಗಡೆ ಸಲಹೆ"