ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ಆಶ್ರಯದಲ್ಲಿ ಮಡಂತ್ಯಾರ್ ಜೇಸಿಐನ ಸಹಕಾರದೊಂದಿಗೆ ದಿ. ಶಿಸಿರ್ ಪುಂಜಾಲಕಟ್ಟೆ ಅವರ ಸ್ಮರಣಾರ್ಥವಾಗಿ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯನ್ನೊಳಗೊಂಡ ತುಳು ನಾಟಕ ಸ್ಪರ್ಧೆ ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸಕ್ತ ನಾಟಕ ತಂಡಗಳು ಜನವರಿ 26ರ ಒಳಗಾಗಿ ತಮ್ಮ ಕೃತಿಯನ್ನು ಕ್ಲಬ್‌ಗೆ ತಲುಪಿಸುವಂತೆ ಅವರು ಕೋರಿದ್ದಾರೆ.
ಯಾವುದೇ ಅಶ್ಲೀಲತೆ, ಧರ್ಮ ನಿಂದನೆಗಳಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ತುಳು ಸಾಮಾಜಿಕ ನಾಟಕಕ್ಕೆ ಮಾತ್ರ ಆದ್ಯತೆಯನ್ನು ನೀಡಲಾಗುವುದು. ನಾಟಕದ ಅವಧಿಯು ಕನಿಷ್ಠ ೨:೩೦ ತಾಸುಗಳಿಗೆ ಮಾತ್ರ ಸೀಮಿತವಾಗಿರಬೇಕು. ಅವಧಿ ಮೀರಿದ ನಾಟಕಗಳು ಬಹುಮಾನಕ್ಕೆ ಪರಿಗಣಿಸುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಟಕ ತಂಡಗಳಿಗೆ ಹತ್ತು ಸಾವಿರ ಭತ್ಯೆಯನ್ನು ನೀಡಲಾಗುವುದು ಎಂದರು.
ಈಗಾಗಲೇ ಬಹುಮಾನ ಪಡೆದ ನಾಟಕದ ಕೃತಿಗೆ ಈ ಸ್ಪರ್ಧೆಯಲ್ಲಿ ಅವಕಾಶವಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರ ತುಂಗಪ್ಪ ಬಂಗೇರರವರು, ಆಯ್ಕೆಯಾದ ನಾಟಕ ತಂಡ 5 ಸಾವಿರ ರೂಪಾಯಿ ಠೇವಣಿಯನ್ನು ಇಡಬೇಕು. ಹೆಚ್ಚಿನ ಮಾಹಿತಿಗಾಗಿ ೯೯೦೧೦೯೮೦೩೮, ೯೪೪೯೬೧೬೩೭೨ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಮಾರ್ಚ್ 5ರಂದು ಸಾಮೂಹಿಕ ವಿವಾಹ: ಕ್ಲಬ್‌ನ ವತಿಯಿಂದ ೯ನೆ ವರ್ಷದ ಉಚಿತ ಸಾಮೂಹಿಕ ವಿವಾಹವು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಾರ್ಚ್ ೫ರಂದು ನಡೆಯಲಿದೆ. ಅಂದೇ ಸಂಜೆ ನಾಟಕ ಸ್ಪರ್ಧೆಯ ಸಮಾರೋಪ ಸಮಾರಂಭವು ಜರಗುವುದು ಎಂದು ತುಂಗಪ್ಪ ಬಂಗೇರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 10 ಜೋಡಿಗೆ ವಿವಾಹ ನಡೆಯಲಿದೆ. ಪರಿಶಿಷ್ಟ ಜಾತಿಯ ವಧು ವರನಿಗೆ ಸರಕಾರದಿಂದ 50 ಸಾವಿರ ಸಹಾಯ ಧನವನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪ್ರ.ಕಾರ್ಯದರ್ಶಿ ಜಯಾರಾಜ್ ಅತ್ತಾಜೆ, ಮಡಂತ್ಯಾರು ಜೇಸಿಐ ರಾಜೇಶ್ ಪುಳಿಮಜಲು, ನಾಟಕ ಸ್ಪರ್ಧಾ ಸಂಚಾಲಕ ಕಲಾವಿದ ಎಚ್.ಕೆ.ನಯನಾಡು, ಸದಸ್ಯ ಪ್ರಭಾಕರ ಪಿ.ಎಂ. ಉಪಸ್ಥಿತರಿದ್ದರು.
Be the first to comment on "ಸ್ವಸ್ತಿಕ್ ಫ್ರೆಂಡ್ಸ್ ಆಶ್ರಯದಲ್ಲಿ ನಾಟಕ ಸ್ಪರ್ಧೆ"