bantwalnews.com report
ಕೇಂದ್ರ ಸರಕಾರದ ಜವಳಿ ಮಂತ್ರಾಲಯದ ಕರಕುಶಲ ನಿಗಮ ಪ್ರಾಯೋಜಕತ್ವದಲ್ಲಿ 10 ದಿನಗಳ ಕರಕುಶಲ ಮಾರಾಟ ಮೇಳ ಮಂಗಳೂರಿನ ಪಿಲಿಕುಳ ನಿಸರ್ಗಧಾನದ ಅರ್ಬನ್ ಹಾಥ್ ನಲ್ಲಿ ಆರಂಭಗೊಂಡಿದೆ.
ಇದು ಜನವರಿ 15ರವರೆಗೆ ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಪ್ರತಿದಿನ ಸಂದರ್ಶಕರಿಗಾಗಿ ತೆರೆದಿರುತ್ತದೆ.
ಹಂಪಿ ವಿಶ್ವವಿದ್ಯಾನಿಲಯದ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮತ್ತು ಪಿಲಿಕುಳ ನಿಸರ್ಗಧಾಮದ ಗವರ್ನಿಂಗ್ ಕೌನ್ಸಿಲ್‌ನ ಸದಸ್ಯ ಪ್ರೊ. ಬಿ.ಎ. ವಿವೇಕ ರೈ ಉದ್ಘಾಟಿಸಿದರು.
ಪಿಲಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್, ಕೇಂದ್ರ ಪ್ರತಿನಿಧಿಯಾಗಿ ಕರಕುಶಲ ಪ್ರಮೋಶನ್ ಅಧಿಕಾರಿ ಕಿರಣ್, ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.
ಈ ಬಾರಿಯ ಮಾರಾಟ ಮೇಳಕ್ಕೆ ದೇಶದ ನಾನಾ ಭಾಗಗಳ ಕರಕುಶಲ ಕರ್ಮಿಗಳು ಆಂಧ್ರ ಪ್ರದೇಶ, ಪಾಂಡಿಚೇರಿ, ಬಿಹಾರ, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ರಾಜಸ್ತಾನ ಮುಂತಾದ ಕಡೆಗಳಿಂದ ಆಗಮಿಸಿದ್ದು, ವೈಶಿಷ್ಟ ಪೂರ್ಣವಾದ ಕೈ ಬ್ಯಾಗುಗಳು, ಆಭರಣಗಳು, ಮಧುಬನಿ, ಝರಿ, ಸೀರೆಗಳು, ಸಿಲ್ಕ್ ಮತ್ತು ಹ್ಯಾಂಡ್‌ಲೂಂ, ಸೆಣಬಿನ ಬ್ಯಾಗ್, ಮರದ ಐಟಂಗಳು, ಕಲ್ಲಿನ ಕೆತ್ತನೆಗಳು, ಚನ್ನಪಟ್ಟಣ ಸಾಮಾಗ್ರಿಗಳು ರಾಜಸ್ತಾನ ಪಾದರಕ್ಷೆಗಳು, ಟೆರ್ರಾಕೋಟಾ, ರೆಡಿಮೇಡ್ ಬಟ್ಟೆಗಳು, ಇಳಕಲ್ ಸೀರೆಗಳು, ಶಾಲ್‌ಗಳು ಇವೇ ಮುಂತಾದ ಆಕರ್ಷಕ ಸಾಮಾಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.
ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‌ಗೆ ಆಗಮಿಸಿ ಈ ಕರಕುಶಲ ಸಾಮಾಗ್ರಿಗಳನ್ನು ಖರೀದಿಸಿ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಆಡಳಿತಾಧಿಕಾರಿ ಬಾಬು ಗೌಡ ವಿನಂತಿಸಿದ್ದಾರೆ.
Be the first to comment on "ಪಿಲಿಕುಳದಲ್ಲಿ ಹತ್ತು ದಿನಗಳ ಕರಕುಶಲ ಮಾರಾಟ ಮೇಳದ ಪ್ರಾರಂಭೋತ್ಸವ"