- ಜನಸ್ಪಂದನಾ ಸಭೆ ಉದ್ಘಾಟಿಸಿ ರಮಾನಾಥ ರೈ
- ಅಧಿಕಾರಿಗಳು ಕಡ್ಡಾಯ ಭಾಗವಹಿಸಲು ಸೂಚನೆ
- ನಿರಾಸಕ್ತಿ ವಹಿಸಿದರೆ ತಾಲೂಕಿನಿಂದ ಗೇಟ್ ಪಾಸ್
- ಲೋಪವನ್ನು ಹುಡುಕಬೇಡಿ, ಒಳ್ಳೆಯದನ್ನು ನೋಡಿ ಎಂದ ಸಚಿವ
www.bantwalnews.com report
ಜನಸ್ಪಂದನ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು, ಸರಕಾರಿ ಸವಲತ್ತುಗಳನ್ನು ಪಡೆದವರು ಟೀಕೆ ಮಾಡುವುದು ಸಲ್ಲದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಶನಿವಾರ ಮೇಲ್ಕಾರ್ ನ ಬಿರ್ವ ಆಡಿಟೋರಿಯಂನಲ್ಲಿ ತಾಲೂಕು ಮಟ್ಟದ ಜನಸಂಪರ್ಕ ಸಭೆ – ಜನಸ್ಪಂದನಾ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಈ ವಿಚಾರದಲ್ಲಿ ನಿರಾಸಕ್ತಿ ವಹಿಸಿದರೆ, ಜಾಗ ಖಾಲಿ ಮಾಡಿ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಗರಿಷ್ಠ ಫಲಾನುಭವಿಗಳು
ಸರಕಾರಿ ಸವಲತ್ತುಗಳನ್ನು ಪಡೆದವರಲ್ಲಿ ಜಿಲ್ಲೆಯ ಜನರು ಅಧಿಕ. 94 ಸಿ, 94ಸಿಸಿಯಡಿ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಇಲ್ಲಿ ಬಂದಿವೆ. ಇದರ ಅರ್ಥ ಜಿಲ್ಲೆಯ ಜನ ರಾಜ್ಯ ಸರಕಾರದ ಸವಲತ್ತುಗಳನ್ನು ಅತಿ ಹೆಚ್ಚು ಪಡೆದುಕೊಂಡಿದ್ದಾರೆ ಎಂದು. ಇಂಥ ಸಂದರ್ಭ ಜನರು ಲೋಪವನ್ನು ಹುಡುಕಿ ಟೀಕಿಸುವುದು ಸಲ್ಲದು, ಸರಕಾರ ಮಾಡಿದ ಉತ್ತಮ ಕಾರ್ಯವನ್ನು ನೋಡಿ ಎಂದು ರೈ ಹೇಳಿದರು.
94ಸಿಸಿಯಡಿ ಆದೇಶ ಬಂದ ಬಳಿಕ ಹಕ್ಕುಪತ್ರ ವಿತರಿಸಲಾಗುವುದು, ಸರಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಸವಲತ್ತುಗಳನ್ನು ಜನರಿಗೆ ಒದಗಿಸಲು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ರೈ ಸೂಚಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸದಸ್ಯರಾದ ಆದಂ ಕುಂಞ, ಸಂಜೀವ ಪೂಜಾರಿ, ಕುಮಾರ ಭಟ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಮೊದಲಾದವರು ಮಧ್ಯಾಹ್ನ ಸುಮಾರು 1.30ಕ್ಕೆ ನಡೆದ ಉದ್ಘಾಟನೆ ಸಂದರ್ಭ ಹಾಜರಿದ್ದರು. ಇದಕ್ಕೂ ಮುನ್ನ 11 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ವಿವಿಧ ಸವಲತ್ತುಗಳ ಮಾಹಿತಿ ನೀಡಲಾಯಿತು. ಈ ಸಂದರ್ಭ ಜಿಪಂ ಸದಸ್ಯ ರವೀಂದ್ರ ಕಂಬಳಿ ಉಪಸ್ಥಿತರಿದ್ದರು.
ತಹಸೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ತಾಪಂ ಇಒ ಸಿಪ್ರಿಯನ್ ಮಿರಾಂದಾ ವಂದಿಸಿದರು. ಈ ಸಂದರ್ಭ ತಾಲೂಕಿನ 50 ಫಲಾನುಭವಿಗಳಿಗೆ ಹಕ್ಕುಪತ್ರ, 17 ಮಂದಿಗೆ 1,94,821 ರೂಗಳ ಚೆಕ್, ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.
Be the first to comment on "ಸರಕಾರದ ಫಲಾನುಭವಿಗಳು ಜಿಲ್ಲೆಯಲ್ಲಿ ಅಧಿಕ"