ದಿನಾಕ್ಷರಿಯ ಕಿರಿಕಿರಿ

 

ಪ್ರತಿ ಬಾರಿ ದಶಂಬರ ಕೊನೆಯಾಗುತ್ತ ಬಂದಂತೆ ನಾನು ಮನಸ್ಸಿನಲ್ಲಿ ಮಾಡಿಕೊಳ್ಳುವ ಸಂಕಲ್ಪ ಏನೆಂದರೆ ಜನವರಿ ಒಂದನೇ ತಾರೀಕಿನಿಂದಲೇ ದಿನಾಕ್ಷರಿ ಬರೆಯಬೇಕು.

  •  ಡಾ. ಅಜಕ್ಕಳ ಗಿರೀಶ ಭಟ್

www.bantwalnews.com ಅಂಕಣಗಿರಿಲಹರಿ

ಜಾಹೀರಾತು

 ಇತ್ತೀಚೆಗೆ, ಅಂದರೆ ಮೊನ್ನೆ ಹೊಸ ವರ್ಷ ಬರುವ ಹೊತ್ತಲ್ಲಿ ಮಿತ್ರರೊಬ್ಬರು ತಮ್ಮ ಸಂಸ್ಥೆಯ ವತಿಯಿಂದ ಮುದ್ರಿಸಿದ ಹೊಸ ದಿನಾಕ್ಷರಿಯನ್ನು(ಇಂಗ್ಲಿಷಿನಲ್ಲಿ ಡೈರಿ ಅನ್ನುತ್ತೇವಲ್ಲ ಅದು) ನೀಡಿದರು. ದಿನಾಕ್ಷರಿ ಪುಸ್ತಕವನ್ನು ಹೊಸ ಎಂಬ ವಿಶೇಷಣ ಬಳಸಿ ಹೇಳಬೇಕೇ ಎಂಬ ಪ್ರಶ್ನೆ ಕೂಡ ಬರುತ್ತದೆ.

ಯಾಕೆಂದರೆ ಅದಕ್ಕೆ ಹಳತಾದರೆ ಗಿರಾಕಿಯಿಲ್ಲ. ಅದು ಹಳತಾಗುವುದು ಬರೆದು ಮುಗಿಸಿ ಟ್ರಂಕಿನಲ್ಲಿಯೋ ಅಟ್ಟದಲ್ಲಿಯೋ ಇಟ್ಟ ಮೇಲೆಯೇ. ಆದರೆ ಕೆಲವು ವಸ್ತುಗಳನ್ನು ಕೊಳ್ಳುವ ಮಟ್ಟಿಗೆ ನಾನು ಹಳೇ ಗಿರಾಕಿಯೇ ಹೌದು. ದಿನಾಕ್ಷರಿ ಪುಸ್ತಕದ ಬಗ್ಗೆಯೂ ಹಾಗೆಯೇ. ಅಂಥದ್ದೇ ಇನ್ನೊಂದು ವಸ್ತು ಪಂಚಾಂಗ ಪುಸ್ತಕ. ಯುಗಾದಿ ಬಂದು, ಹೊಸ ವರ್ಷ ಬಂದು ಎರಡು ಮೂರು ತಿಂಗಳು ಕಳೆದ ನಂತರ ಪಂಚಾಂಗ ಪುಸ್ತಕ ಕೇಳಿದರೆ ಅಂಗಡಿಯವರು ಮೇಲಿಂದ ಕೆಳಗಿನವರೆಗೂ ನನ್ನನ್ನೊಮ್ಮೆ ನೋಡಿ ಆನಂತರ ಇಲ್ಲ ಎನ್ನುತ್ತಾರೆ.

ಜಾಹೀರಾತು

ಅದಿರಲಿ, ಈಗ ದಿನಾಕ್ಷರಿಯ ವಿಷಯಕ್ಕೆ ಬಂದರೆ, ಪ್ರತಿ ಬಾರಿ ದಶಂಬರ ಕೊನೆಯಾಗುತ್ತ ಬಂದಂತೆ ನಾನು ಮನಸ್ಸಿನಲ್ಲಿ ಮಾಡಿಕೊಳ್ಳುವ ಸಂಕಲ್ಪ ಏನೆಂದರೆ ಜನವರಿ ಒಂದನೇ ತಾರೀಕಿನಿಂದಲೇ ದಿನಾಕ್ಷರಿ ಬರೆಯಬೇಕು ಎಂಬುದು. ಆದರೆ ನನಗೆ ಬರೆಯುವುದು ಬಿಡಿ, ದಿನಾಕ್ಷರಿ ಪುಸ್ತಕ ಕೊಳ್ಳಲು ಕೂಡ ಪ್ರತಿವರ್ಷವೂ ಮರೆತು ಹೋಗುವುದೇ ಆಗುತ್ತಿತ್ತು. ಈ ವರ್ಷವೇನೋ ಒಬ್ಬರು ನನಗೆ ಒಂದು ದಿನಾಕ್ಷರಿ ಕೊಟ್ಟರು ಸರಿ. ಹಾಗಂತ ಹಿಂದೆಲ್ಲ ನನಗೆ ಅಂಥ ಪುಸ್ತಕ ಕೊಡುವವರು ಯಾರೂ ಇರಲಿಲ್ಲ. ಹೀಗಾಗಿ ಜನವರಿ ಬಂದು ಒಂದೆರಡು ತಿಂಗಳು ಕಳೆದ ನಂತರ ನಾನು ನಮ್ಮ ಸಣ್ಣ ಊರಿನ ಪುಸ್ತಕದಂಗಡಿಗೆ ಹೋಗಿ ಹೊಸ ದಿನಾಕ್ಷರಿ ಕೊಡಿ ಅಂತ ಕೇಳಿದಾಗ ಹೊಸತೂ ಇಲ್ಲ ಹಳತೂ ಇಲ್ಲ, ನೀವು ಇಷ್ಟು ತಡವಾಗಿ ಬಂದ್ರೆ ಹೇಗೆ? ಎಲ್ಲ ಖಾಲಿಯಾಯಿತು. ಉಳಿದದ್ದು ವಾಪಾಸು ಕಳಿಸಿದೆ ಅಂತ ಅಂಗಡಿಯವರು ಹೇಳುವುದು ಪ್ರತಿ ವರ್ಷದ ಮಾಮೂಲು ಸಂಗತಿಯಾಗಿತ್ತು. ಪುಸ್ತಕವೇ ಸಿಗದೆ ದಿನಾಕ್ಷರಿ ಬರೆಯುವುದು ಹೇಗೆ? ಹೀಗಾಗಿ ಪ್ರತಿ ವರ್ಷವೂ ನನ್ನ ಸಂಕಲ್ಪ ತನ್ನಿಂತಾನೇ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತಿತ್ತು.

ಈ ವರ್ಷಾರಂಭದಲ್ಲಿ ಮಿತ್ರರು ಹೊಚ್ಚಹೊಸ ದಿನಾಕ್ಷರಿ ಪುಸ್ತಕ ಸಮಯಕ್ಕೆ ಸರಿಯಾಗಿ ಕೊಟ್ಟರು ಅಂದೆನಲ್ಲ, ಈಗಾಗಲೇ ಐದಾರು ದಿನಗಳು ಕಳೆದವಲ್ಲ; ನಾನು ಬರೆಯಲು ಆರಂಭ ಮಾಡಿಲ್ಲ. ಆದರೆ ಖಂಡಿತಾ ಇನ್ನೊಂದೆರಡು ದಿನಗಳಲ್ಲಿ ಶುರು ಮಾಡಿಯೇ ತೀರುತ್ತೇನೆ(ತೀರುತ್ತೇನೆ ಅಂತ ಮಾತಿಗೆ ಹೇಳಿದ್ದು; ತೀರುವುದಿಲ್ಲ, ತೀರಲು ಮನಸಿಲ್ಲ!). ಅಂತೂ ಆರೇಳು ದಿನಗಳ ದಿನಾಕ್ಷರಿಯ ಹಿಂಬಾಕಿಯನ್ನು ಪೂರೈಸುವುದು ಅಷ್ಟೇನೂ ಕಷ್ಟವಲ್ಲ ಅಂತ ನನಗೆ ಭರವಸೆಯಿದೆ. ಹಿಂದೆ ನಾನು ಶಾಲೆ ಕಲಿಯುತ್ತಿದ್ದಾಗ ಪ್ರತಿ ವರ್ಷವೂ ಶಾಲೆಯ ಆರಂಭಕ್ಕೆ ಮೊದಲು ’ಈ ವರ್ಷ ಅಂದಂದಿನ ಪಾಠವನ್ನು ಅಂದಂದೇ ಓದಿ ಗಟ್ಟಿ ಮಾಡಿಕೊಳ್ಳುತ್ತೇನೆ’ ಅಂತ ಮನಸ್ಸಿನಲ್ಲೇ ಶಪಥ ಮಾಡಿಕೊಳ್ಳುತ್ತಿದ್ದೆ. ಆಗಲೂ ಮೊದಲ ಒಂದೆರಡು ವಾರಗಳಲ್ಲಿ ಇದೇ ಬಗೆಯಲ್ಲಿ ಹಿಂಬಾಕಿಯನ್ನು ಭರ್ತಿ ಮಾಡುವ ವಿಶ್ವಾಸವೇ ಇರುತ್ತಿದ್ದುದು. ಆನಂತರ ಇನ್ನು ಹಿಂದಿನದೆಲ್ಲ ಓದುವುದು ಆಗುವ ಹೋಗುವ ವಹಿವಾಟಲ್ಲ್ಲ ಎಂಬಷ್ಟು ದಿನಗಳು ಕಳೆದ ನಂತರ, ಹೇಗೂ ಇಷ್ಟು ದಿನ ಆಯಿತು, ಪರೀಕ್ಷೆ ಹೊತ್ತಿಗೆ ಓದಿದರೆ ಸಾಕು, ಈಗಿನ್ನು ಗಡಿಬಿಡಿ ಮಾಡಿ ಆಟ ಆಡುವ ಸಮಯವನ್ನು ವ್ಯರ್ಥ ಮಾಡುವುದು ಬೇಡ ಅನ್ನುವ ಎಚ್ಚರಿಕೆ ಜಾಗೃತವಾಗುತ್ತಿತ್ತು.

ಮುಂದಿನ ವರ್ಷ ಆರಂಭದಿಂದಲೇ ಸಿದ್ಧವಾಗಿರಬೇಕು ಅನ್ನುವ ಭಾವ ಮನಸ್ಸಿನಲ್ಲೇ ಮರುದೃಢೀಕರಣವಾಗುತ್ತಿತ್ತು.ಅದು ಶಾಲೆಯ ಕಾಲದ ಕತೆಯಾಯಿತು. ಈಗ ನಾನೇನು ಆಟ ಆಡಿ ಸಮಯ ಕಳೆವಷ್ಟು ಸಣ್ಣ ಹುಡುಗನಲ್ಲ ತಾನೆ?

ಜಾಹೀರಾತು

ಹೀಗಾಗಿ ಈ ವರ್ಷದ ದಿನಾಕ್ಷರಿ ಮಾತ್ರ ಮೊದಲಿನಂತಾಗಲು ಬಿಡುವುದಿಲ್ಲ. ಖಂಡಿತಾ ಬರೆದೇ ಬರೆವೆ ಅಂತ ಈಗಲೂ ನನಗೆ ವಿಶ್ವಾಸವಿದೆ.

ನನಗೆ ಎರಡು ಸಾವಿರದಾ ಹದಿನೇಳನೇ ವರ್ಷದ ದಿನಾಕ್ಷರಿಯನ್ನು ಕೊಡುವ ಮೂಲಕ ಆ ಮಿತ್ರರು ಕೇವಲ ಅದರಲ್ಲಿ ಬರೆಯಲು ನೆನಪಿಸಿದ್ದಷ್ಟೇ ಅಲ್ಲ; ನನ್ನನ್ನು ಸ್ವಲ್ಪ ಸಂದಿಗ್ಧತೆಗೆ ಒಳಗು ಮಾಡಿ ಆಲೋಚನೆಗೂ ಹಚ್ಚಿದ್ದರು. ಅದು ಹೇಗೆಂದರೆ, ತುಂಬ ಉದಾರತೆಯಿಂದ ಇದು ನಿಮಗಾಯಿತು; ಇನ್ನೊಂದು ತೆಗೆದುಕೊಳ್ಳಿ, ನಿಮ್ಮ ಪತ್ನಿಗೆ ಇರಲಿ ಎಂದು ಹೇಳುವ ಮೂಲಕ. ತೆಗೆದುಕೊಳ್ಳುವುದೋ ಬಿಡುವುದೋ ಅನ್ನುವ ಆಲೋಚನೆಯಲ್ಲಿದ್ದಾಗ ಬಾಯಿ ಮಾತ್ರ ಎಂದಿನ ದಾಕ್ಷಿಣ್ಯದಿಂದ ಬೇಡಪ್ಪ ಒಂದು ಸಾಕು. ತುಂಬಾ ಧನ್ಯವಾದಗಳು ಅಂತ ಹೇಳಿತು. ಅವರಿಂದ ಬೀಳ್ಕೊಂಡು ಬರುವಾಗ ಮಾತ್ರ ತಲೆಯಲ್ಲಿ ಒಂದು ಬಗೆಯ ಆತಂಕ ಶುರುವಾಯಿತು.

ನಾನೆಲ್ಲಾದರೂ ಅವರು ಕೊಡಬಹುದಾಗಿದ್ದ ಆ ಇನ್ನೊಂದು ದಿನಾಕ್ಷರಿಯನ್ನೂ ಹಿಡಿದುಕೊಂಡು ಬರುತ್ತಿದ್ದರೆ, ಅದನ್ನು ತಂದು ಹೆಂಡತಿಗೆ ಕೊಡುತ್ತಿದ್ದರೆ, ಏನಾಗುತ್ತಿತ್ತು? ಇಲ್ಲಿ ಹಲವು ಸಾಧ್ಯತೆಗಳಿವೆ. ಬಹುಮಟ್ಟಿಗೆ ಅವಳು ಜನವರಿ ಒಂದರಿಂದಲೇ ಬರೆಯಲು ಆರಂಭ ಮಾಡುವ ಸಾಧ್ಯತೆಯಿತ್ತು. ಆಗ ಅವಳಿಗೆ ಅದರಲ್ಲಿ ದಿನಕ್ಕೆ ಒಂದೇ ಪುಟ ಮೀಸಲು ಇಟ್ಟದ್ದು ಸಾಕಾಗುತ್ತಿತ್ತೆ? ದಿನದಲ್ಲಿ ಇವಳು ಮಾಡಿದ್ದನ್ನು ಮತ್ತು ಮಾತಾಡಿದ್ದನ್ನು ಬರೆದರೇ ಪುಟಗಳು ಸಾಕಾಗದು ಎಂದಾಗುವಾಗ ಇನ್ನು ದಿನದಲ್ಲಿ ಇವಳು ಯೋಚನೆ ಮಾಡಿದ್ದನ್ನು ಬರೆದರೆ ಹೇಗಾದೀತು? ಒಂದೆರಡು ತಿಂಗಳುಗಳಾಗುವಾಗ ಪುಸ್ತಕ ಮುಗಿದರೆ ಮತ್ತೆ ನಾನು ಇದೇ ಎರಡು ಸಾವಿರದಾ ಹದಿನೇಳರ ಇನ್ನೊಂದು ನಾಲ್ಕೈದು ದಿನಾಕ್ಷರಿಗಳಿದ್ದರೆ ಕೊಡಿ ಅಂತ ಅ ಉದ್ಯಮಿ ಮಿತ್ರರಲ್ಲಿ ಹೋಗಿ ಕೇಳಲು ನನಗೆ ಮುಜುಗರವಾಗುತ್ತಿತ್ತಲ್ಲವೇ?

ಜಾಹೀರಾತು

ಅಥವಾ ಮರ್‍ಯಾದೆ ಬಿಟ್ಟು ಕೇಳಿದರೂ ಅವರೇಕೆ ಅಷ್ಟು ಹಳತಾಗುವವರೆಗೆ ಅವುಗಳನ್ನು ಇಟ್ಟುಕೊಂಡಾರು? ಹಾಗಂತ ಒಂದು ಮುಗಿದ ಕೂಡಲೇ ಇನ್ನೊಂದು ತರದೇ ಹೋದರೆ ನನ್ನ ಅಭಿವ್ಯಕ್ತಿಗೆ ನೀವು ಅಡ್ಡಿ ಅಂತಲೋ, ಸಹಕರಿಸುತ್ತಿಲ್ಲ ಅಂತಲೋ ಹೆಂಡತಿ ದೂರಿದರೆ? ಅವಳು ಒಂದೊಂದೇ ಪುಟ ಬರೆದಿಟ್ಟುಕೊಂಡು ಮೇಲೆ ಹೇಳಿದ ಸಮಸ್ಯೆ ಬರದೇಹೋದೀತು ಅಂತಲೇ ಭಾವಿಸಿದರೂ, ನನ್ನ ಬಗ್ಗೆ ಅದರಲ್ಲಿ ಸತ್ಯವಾದ ಮತ್ತು ಮನಸ್ಸಿನಲ್ಲಿದ್ದ ಮಾತುಗಳನ್ನೆಲ್ಲ ಅವಳು ಬರೆದು, ಅಕಸ್ಮಾತ್ ಅದನ್ನು ಓದುವ ಕೆಟ್ಟ ಕುತೂಹಲ ನನಗೆ ಉಂಟಾಗಿ ಅವಳಿಲ್ಲದಾಗ ನಾನು ಓದಿದರೆ? ಆಗ ನನಗೆಷ್ಟು ಬೇಜಾರಾಗಬಹುದು?

ಅಥವಾ ನಾನು ಓದದಿದ್ದರೂ ಇವಳು ಮರೆತು ಆ ಪುಸ್ತಕವನ್ನು ಎಲ್ಲೋ ಇಟ್ಟು, ಅದನ್ನು ಬೇರೆ ಯಾರಾದರೂ ಓದಿದರೆ? ಯಬ್ಬ! ಪುಣ್ಯಕ್ಕೆ ನಾನು ಇನ್ನೊಂದು ತಗೊಳ್ಳದೇ ಇದ್ದದ್ದು ತುಂಬ ಒಳ್ಳೆದಾಯಿತು. ’ಧರ್ಮಕ್ಕೆ ಸಿಕ್ಕಿದ್ರೆ ನಂಗೊಂದು, ನನ್ನಪ್ಪನಿಗೊಂದು,ನನ್ನ ಮಗನಿಗೊಂದು’ ಅನ್ನುವ ಆಲೋಚನೆ ಬರದೇ ಇದ್ದದ್ದಕ್ಕೆ ನನ್ನನ್ನು ನಾನೇ ಒಳಗೊಳಗೇ ಅಭಿನಂದಿಸಿಕೊಂಡೆ.

ದಿನಾಕ್ಷರಿಯಲ್ಲಿ ಹಿಂಬಾಕಿಯನ್ನು ಭರ್ತಿ ಮಾಡುವ ಬಗ್ಗೆ ಹೇಳಿದೆ ಅಲ್ಲವೇ? ಹಾಗೆ ನೋಡಿದರೆ ಅದು ನನ್ನಂಥ ಬೋಧಕವೃತ್ತಿಯಲ್ಲಿ ಇರುವವರಿಗೆ ದೊಡ್ಡ ಕಷ್ಟದ ಕೆಲಸವಲ್ಲ. ಶಾಲಾ ಕಾಲೇಜುಗಳ ಬೋಧಕರು ಮೈಗಳ್ಳರಾಗಿದ್ದಾರೆ; ಸರಿಯಾಗಿ ಬೋಧಿಸುವ ಕೆಲಸ ಮಾಡುವುದಿಲ್ಲ ಅಂತ ದೂರುಗಳು ಬರಲು ಆರಂಭವಾದಾಗ ಮೇಲಧಿಕಾರಿಗಳು ಕಂಡುಕೊಂಡ ಉಪಾಯವೇ ಮೇಷ್ಟರುಗಳ ಕೈಯಲ್ಲಿ ಕೆಲಸದ ದಿನಾಕ್ಷರಿ ಬರೆಸುವುದು.ಹೀಗಾಗಿ ವಿವಿಧ ಹಂತಗಳಲ್ಲಿ ಬೋಧಿಸುವವರು ಆಯಾಯಾ ದಿನಗಳಲ್ಲಿ ಅಷ್ಟೇ ಅಲ್ಲ, ಪ್ರತಿ ಅವಧಿಯಲ್ಲಿ ಯಾವ ಯಾವ ಶಂಖ ಎಷ್ಟೆಷ್ಟು ಹೊತ್ತು ಊದಿದ್ದಾರೆಅಂತೆಲ್ಲವನ್ನೂ ದಿನಾಕ್ಷರಿಯಲ್ಲಿ ದಾಖಲಿಸುವುದು ಅಗತ್ಯ. ಹಾಗೆ ದಾಖಲಿಸಿದರೆ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಅರ್ಥ. ದಿನಾಕ್ಷರಿ ಬರೆಯುವ ಕರ್ತವ್ಯ ಅಲ್ಲ ಮಾರಾಯರೆ! ಪಾಠ ಮಾಡುವ ಕರ್ತವ್ಯ ಅಂತರ್ಥ.ಆದ್ದರಿಂದ ಬೋಧಕರು ದಿನಾಕ್ಷರಿ ಬರೆಯದಿದ್ದರೆ ಅಪಾಯವಿದೆ. ನಾನು ಗಮನಿಸಿದಂತೆ ಮಾಮೂಲಿ ದಿನಾಕ್ಷರಿ ಬರೆಯುವವರಲ್ಲಿ ಹೆಂಗಸರ ಪ್ರಮಾಣ ತುಂಬ ಕಡಮೆ ಇದ್ದರೂ ಶಾಲಾಕಾಲೇಜುಗಳಲ್ಲಿ ಕಾರ್ಯದಿನಾಕ್ಷರಿಯನ್ನು ಕಾಲಕಾಲಕ್ಕೆ ಬರೆಯುವುದರಲ್ಲಿ ಹೆಂಗಸರದೇ ಎತ್ತಿದಕೈ.

ಜಾಹೀರಾತು

ಇನ್ನು ದೊಡ್ಡ ದೊಡ್ಡ ಲಂಚ ಕೊಡುವ ದೊಡ್ಡ ದೊಡ್ಡ ಉದ್ಯಮಿಗಳು ದಿನಾಕ್ಷರಿ ಬರೆದರೆ ಅಪಾಯ ಹೆಚ್ಚು. ಅವರ ದಿನಾಕ್ಷರಿಯಲ್ಲಿ ಯಾವುದೇ ರಾಜಕಾರಣಿಯ ಹೆಸರು ಮತ್ತು ಅವರಿಗೆ ಕೊಟ್ಟ ದುಡ್ಡಿನ ವಿವರ ತನಿಖಾ ಸಂಸ್ಥೆಗಳಿಗೆ ಸಿಕ್ಕಿದರೆ ದೊಡ್ಡ ತಾಪತ್ರಯವೇ ಸರಿ. ಆದರೆ ದೊಡ್ಡ ಉದ್ಯಮಿಗಳು ದಡ್ಡರಲ್ಲ. ಅವರು ಹೆಸರು ಬರೆಯುವುದಿಲ್ಲ. ಅವರು ಸಂಕೇತ,ರೂಪಕಗಳನ್ನು ಬಳಸುವುದರಲ್ಲಿ ಪ್ರವೀಣರು. ಹೀಗಾಗಿ ಕೇವಲ ವ್ಯಕ್ತಿಗಳ ಹೆಸರಿನ ಆದ್ಯಕ್ಷರ ಮತ್ತು ಸಂಖ್ಯೆ ಬರೆದು ಇಟ್ಟರೆ ಆ ಆದ್ಯಕ್ಷರದ ಇಡೀ ಹೆಸರು ಯಾವುದು ಮತ್ತು ಸಂಕೇತ ಸಂಖ್ಯೆ ಸಾವಿರವೋ ಲಕ್ಷವೋ ಕೋಟಿಯೋ ದಶಕೋಟಿಯೋ ಅಂತನ್ನುವುದು ನ್ಯಾಯಾಲಯದಲ್ಲಿ ನಿರ್ಧಾರವಾಗುವಾಗ ಅಂಥ ರಾಜಕಾರಣಿಗಳ ಅಧಿಕಾರಾವಧಿಯೂ ಆಯುಷ್ಯವೂ ಮುಗಿದಿರುತ್ತದೆ. ಉದ್ಯಮ ಮತ್ತಷ್ಟ್ಟು ಅಗಲ ಆಳ ಎತ್ತರಕ್ಕೆ ಬೆಳೆದಿರುತ್ತದೆ.

ನಾನಂತೂ ಸದ್ಯಕ್ಕೆ ಯಾರಿಗೂ ಏನನ್ನೂ ಕೊಡುವ ಸ್ಥಿತಿಯಲ್ಲಿ ಇಲ್ಲದೆ ಇರುವುದರಿಂದ ನಾಳೆಯಿಂದ ದಿನಾಕ್ಷರಿ ಬರೆಯುವವನೇ.

 

ಜಾಹೀರಾತು

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ಮೈಲ್ ಮಾಡಿ: bantwalnews@gmail.com

 

ಕಳೆದ ಬಾರಿ ಬಂಟ್ವಾಳ ಸುರೇಶ ಬಾಳಿಗಾ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ.

ಜಾಹೀರಾತು

ಯಂತ್ರದ ಗುಲಾಮನಾದೆಯೊ ಮನುಜ

ದೊರೆಯದದರಿಂದ ಮುಕುತಿ

ಪರಿಪರಿ ಪರಿಕರಗಳ ಬಳಸಿ

ಜಾಹೀರಾತು

ವ್ಯರ್ಥವಾಗುತಿದೆ ಶಕುತಿ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ದಿನಾಕ್ಷರಿಯ ಕಿರಿಕಿರಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*