ಡ್ರಗ್ಸ್‌ ಮಾಫಿಯಾದಲ್ಲಿ ಮಗಳು ಕಳೆದುಹೋಗಿದ್ದಾಳೆ..!

ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ , ಮಕ್ಕಳಲ್ಲಿ ಕಾಡುವ ಅನಾಥಪ್ರಜ್ಞೆ ಮಕ್ಕಳನ್ನು  ತಪ್ಪುದಾರಿಯಲ್ಲಿ ಮುನ್ನಡೆಸುತ್ತದೆಯಂತೆ.

ಮೌನೇಶ ವಿಶ್ವಕರ್ಮ

ಜಾಹೀರಾತು

www.bantwalnews.com ಅಂಕಣ – ಮಕ್ಕಳ ಮಾತು

ಸ್ನೇಹಾ.. ಎಷ್ಟೊಂದು ಒಳ್ಳೆಯ ಹೆಸರು.. ಆದರೆ ಆ ಸ್ನೇಹಾ ಜೀವಕಳೆದುಕೊಂಡ ಬಗೆಯನ್ನು ನೆನಹುವಾಗಲೇ ಭಯ ಆವರಿಸುತ್ತದೆ. ಇನ್ನೂ ಹದಿನೆಂಟು ತುಂಬುತ್ತಲೇ ಮಾದಕ ವ್ಯಸನದ ನಂಟು ಹಚ್ಚಿಕೊಂಡ ಸ್ನೇಹ ಇಹಲೋಕದ ನಂಟು ಕಳೆದುಕೊಂಡಿದ್ದಾಳೆ. ಡ್ರಗ್ಸ್ ಎಂಬ ಭೂತಕ್ಕೆ ಮಾರುಹೋಗಿ  ಬಾಲ್ಯದೊಂದಿಗೆ , ಜೀವವನ್ನೇ ಬಲಿಕೊಟ್ಟ ಸ್ನೇಹಾ ಡ್ರಗ್ಸ್ ಎಷ್ಟು ಅಪಾಯಕಾರಿ ಎಂದು ತೋರಿಸಿಕೊಟ್ಟಿದ್ದಾಳೆ.  ಡ್ರಗ್ಸ್ ಕೊಳ್ಳಲು ಹಣಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಸ್ನೇಹಾಳ ಹಾದಿ ಯಾರೂ ತುಳಿಯಬಾರದು ಎನ್ನುವುದೇ ಈ ಬರಹದ ಆಶಯ.

ಜಾಹೀರಾತು

ಮಗಳು ಸ್ನೇಹಾ 1 ನೇ ತರಗತಿಯಿಂದ ತರಗತಿಗೇ ಫಸ್ಟ್ ಬರುತ್ತಿದ್ದಳು,  9ನೇ ತರಗತಿಯಲ್ಲಿ 98 ಶೇ ಅಂಕ, ಹತ್ತನೇ ಯಲ್ಲಿ ಶೇ.72 ಅಂಕ ಪಡೆದಾಗ ಏನೋ ಎಡವಟ್ಟು ಆಗಿರುವ ಬಗ್ಗೆ ಗೊತ್ತಾಯಿತು, ನಮ್ಮದು ಗೌರವಸ್ಥ ಕುಟುಂಬ, ಮಾನಮರ್ಯಾದೆಗೆ ಅಂಜಿ ಡ್ರಗ್ಸ್ ಮಾಫಿಯಾ ವಿರುದ್ದ ಮಾತನಾಡಲು ಆಗಿರಲಿಲ್ಲ.. ಆದರೆ ಇಂದು ಡ್ರಗ್ಸ್ ಮಾಫಿಯಾದಲ್ಲಿ ನನ್ನ ಮಗಳೇ ಕಳೆದುಹೋಗಿದ್ದಾಳೆ. ಇದು ಡ್ರಗ್ಸ್ ಸಹವಾಸಕ್ಕೆ ಬಲಿಯಾದ ಸ್ನೇಹಾಳ ತಂದೆ ನೋವಿನ ನಡುವೆಯೂ ಮಾಧ್ಯಮಗಳಿಗೆ ನೀಡಿದ ಸಂಕಟದ ಪ್ರತಿಕ್ರಿಯೆ.

ಮನೆ ಬೆಳಗಬೇಕಾದ ಮನೆಮಗಳು ಕಣ್ಣಮುಂದೆಯೇ ದಿನಾ ಸಾಯುತ್ತಿರುವುದನ್ನು ಸ್ನೇಹಾಳ ಮನೆಮಂದಿ ದಿನಾ ಗಮನಿಸುತ್ತಿದ್ದರು. ಹುಚ್ಚು ಚಟಕ್ಕೆ ಬಲಿಯಾದ ಸ್ನೇಹಾ ಮನೆಯೊಳಗೆ ಪಡುತ್ತಿದ್ದ ಪಾಡು,ನೋವು, ಸಂಕಟ ಎಲ್ಲವನ್ನೂ ಗಮನಿಸಿಯೂ ಹೆತ್ತವರಿಗೆ ಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಡ್ರಗ್ಸ್ ಬದುಕನ್ನೇ ಆವರಿಸುವ ಬಗೆಯೇ ಅಷ್ಟೊಂದು ಕ್ರೂರವಾಗಿ.

ಮಕ್ಕಳು ತಮಗೆ ಗೊತ್ತಿದ್ದೋ-ಗೊತ್ತಿಲ್ಲದೆಯೇ ಇಂತಹಾ ಚಟಕ್ಕೆ ಬಲಿಯಾಗುತ್ತಾರೆ. ಮನೆಯಲ್ಲಿ ಆರ್ಥಿಕ ಬಲವಿದ್ದವರಿಗಂತೂ ಮಾನಸಿಕ ಸ್ಥೈರ್ಯ ಇಲ್ಲದಾಗ ಇಂತಹಾ ಚಟ ಅಂಟಿಕೊಳ್ಳುವುದು ಕಷ್ಟವಾಗಲಾರದು. ಮೊದಮೊದಲು ತಮಾಷೆ, ಜಾಲಿ, ಫೆಂಡ್‌ಶಿಫ್, ಟೈಂಪಾಸ್, ಫ್ಯಾಷನ್, ಪ್ರತಿಷ್ಠೆ ಹೀಗೆ ಹುಡುಗಾಟಿಕೆಯ ವಿಚಾರದಲ್ಲಿ ಮೈಮನ ಆವರಿಸುವ ಈ ಡ್ರಗ್ಸ್ ಬಾಳುಕೊನೆಯಾಗುವವರೆಗೂ ಬಿಡಲಾರದು.

ಜಾಹೀರಾತು

ಇಂತಹಾ ಚಟಗಳಿಗೆ ನಮ್ಮ ಮಕ್ಕಳು ಬಲಿಯಾದ ಬಳಿಕ ಮರುಗುವುದಕ್ಕಿಂತ, ಇಂತಹುಗಳ ಬಗ್ಗೆ ಜಾಗೃತರಾಗಿರುವುದೇ ನಿಜವಾದ ಮದ್ದು. ಹಾಗೆಂದ ಮಾತ್ರಕ್ಕೆ  ದಿನವಿಡೀ ಮಕ್ಕಳನ್ನು ಕಾದುಕುಳಿತುಕೊಳ್ಳಬೇಕು, ದುಶ್ಚಟಗಳಿಗೆ ಅವರು ಬಲಿಬೀಳದಂತೆ ನೋಡಿಕೊಳ್ಳಬೇಕು ಎಂಬುದು ಅಸಾಧ್ಯದ ಮಾತು. ಮತ್ತು  ಜಾಗತೀಕರಣದ ಈ ಕಾಲಘಟ್ಟದಲ್ಲಿ ಮಕ್ಕಳ ಮನಸ್ಸುಗಳು ಕೆಟ್ಟ ವಿಚಾರದತ್ತ ಆಕರ್ಷಿತರಾಗಲು ಹೆಚ್ಚುಹೊತ್ತು ಬೇಕಾಗದು. ಹಾಗೆ ನೋಡಿದರೆ ಮಕ್ಕಳ ವರ್ತನೆಗಳು ದಾರಿತಪ್ಪುವಂತಹಾ ಸನ್ನಿವೇಶಗಳೇ  ನಮ್ಮ ಸುತ್ತಮುತ್ತಹೆಚ್ಚುಹೆಚ್ಚು ನಡೆಯುತ್ತಲೇ ಇರುತ್ತದೆ.

ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ , ಮಕ್ಕಳಲ್ಲಿ ಕಾಡುವ ಅನಾಥಪ್ರಜ್ಞೆ ಮಕ್ಕಳನ್ನು  ತಪ್ಪುದಾರಿಯಲ್ಲಿ ಮುನ್ನಡೆಸುತ್ತದೆಯಂತೆ. ಹಾಗೆ ನೋಡಿದರೆ ಹಣವಂತರ ಮಕ್ಕಳೇ ಇಂದು ಡ್ರಗ್ಸ್ ಎಂಬ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿಷ್ಠಿತ ಕಾಲೇಜುಗಳ ಆವರಣಗಳು, ಪಬ್, ಡಿಷೆಗಳು ಯುವಜನತೆ  ಇಂತಹಾ ಪಿಡುಗುಗಳ ದಾಸರಾಗುವ ತಾಣಗಳಾಗುತ್ತಿದೆ. ಆದರೆ ಪ್ರತಿಷ್ಠೆಯ ಕಾರಣಕ್ಕೆ ಇಂತಹಾ ಕೆಟ್ಟಸುದ್ದಿಗಳು ಸುದ್ದಿಯಾಗುವುದೂ ಇಲ್ಲ. ಎಲ್ಲವನ್ನೂ ತಿಳಿದುಕೊಂಡು ಮಕ್ಕಳು ಕಳೆದು ಹೋಗುತ್ತಿರುವುದನ್ನು ಕಣ್ಣಾರೆ ಕಾಣುತ್ತಾರೆಯಾದರೂ ಮರ್ಯಾದೆಯ ಕಾರಣಕ್ಕೆ ಇಂತಹಾ ಪಿಡುಗುಗಳಿಗೆ ವಿರೋಧ ವ್ಯಕ್ತಪಡಿಸುವುದೇ ಇಲ್ಲ.

ಕೆಲವರ್ಷಗಳ ಹಿಂದೆ ಬುದ್ದಿವಂತರ ಜಿಲ್ಲೆಯ ಮಂಗಳೂರಿನ ನತದೃಷ್ಟೆ ಹೆಣ್ಣುಮಗಳೊಬ್ಬಳು ಡ್ರಗ್ಸ್ ಪಾಶಕ್ಕೆಗುರಿಯಾದ ಬಳಿಕ ಯುವಜನರಿಗೆ, ಸ್ಥಳಿಯಾಡಳಿತಕ್ಕೆ, ಸರ್ಕಾರಕ್ಕೆ ಡ್ರಗ್ಸ್ ಬಗ್ಗೆ ಎಚ್ಚರ ಮೂಡಿದೆ. ಸ್ನೇಹಾಳ ದುರಂತ ಬದುಕನ್ನೇ ಗಮನಿಸಿದರೆ ಸಾಕು ನಾವು-ನೀವು ಡ್ರಗ್ಸ್ ನಿಂದ ಎಷ್ಟು ದೂರಕ್ಕೆ ನಿಲ್ಲಬೇಕು ಎಂಬ ಅರಿವಾಗುತ್ತದೆ.

ಜಾಹೀರಾತು

ಆಸೆ ಆಕಾಂಕ್ಷೆಗಳು ಚಿಗುರೊಡೆದು ಉತ್ತುಂಗಕ್ಕೇರುವ ಹದಿಹರೆಯದಲ್ಲಿಯೇ ಇಂತಹಾ ಚಟಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚು. ಹದಿಹರೆಯದ ವಯಸ್ಸಿಗೆ ಮನೆಯಲ್ಲಿ ಸಿಗುವ ಪ್ರತಿಕ್ರಿಯೆ, ಸಮಾಜ ಅವರನ್ನು ಗಮನಿಸುವ ಸ್ಥಿತಿ,ಮನಸ್ಸಿನೊಳಗಿನ ಸ್ಥಿತಿಗತಿ, ಮೈಮನಕ್ಕೆ ಸಿಗುವ ವಿಚಾರಗಳು ಹದಿಹರೆಯದಲ್ಲಿ ಮಕ್ಕಳ ನಡವಳಿಕೆಯನ್ನು ನಿರ್ಧರಿಸುತ್ತದೆ. ಇಂತಹಾ ಸನ್ನಿವೇಶಗಳಲ್ಲಿ ಹೆತ್ತವರು ವಹಿಸಬೇಕಾದ ಎಚ್ಚರ ಬಲುಮುಖ್ಯವಾದುದು. ಮಗ/ಮಗಳು ಹೈಸ್ಕೂಲ್ ಗೆ ಬಂದಾಗಲೇ ಮಕ್ಕಳು ದೊಡ್ಡವರಾದರು ಎಂದು ನಾವು-ನೀವು ನಂಬುತ್ತೇವಲ್ಲಾ. ಇಲ್ಲೇ ನಡೆಯುವುದು ದೊಡ್ಡ ತಪ್ಪು.  ಮಾಹಿತಿ ತಂತ್ರಜ್ಞಾನ ಮುಂದುವರಿದಿರುವ ಈ ಯುಗದಲ್ಲಿ ಎಲ್ಲರಿಗೂ ನಮ್ಮ ಆಸುಪಾಸಿನ ಮಾಹಿತಿ, ವಿಚಾರಗಳು ಬೇಗ ತಲುಪುತ್ತದೆ. ಮನೆಗಿಂತಲೂ ಶಾಲೆ-ಕಾಲೇಜುಗಳಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳಿಗಂತೂ  ಎಲ್ಲಾ ಸುದ್ದಿ ಬಹುಬೇಗ ತಲುಪಿಬಿಡುತ್ತದೆ. ಈ ವಿಚಾರಗಳನ್ನೇ ಇಟ್ಟುಕೊಂಡು ಮನೆಗಳಲ್ಲಿ ಮಾತನಾಡುವ ನಮ್ಮ ಮಕ್ಕಳ ಜ್ಞಾನ ವನ್ನು ಅಪರಿಮಿತ ಎಂದು ದೊಡ್ಡವರು  ನಂಬುತ್ತಿದ್ದಾರೆ ಇದು ದುರಂತ. ಶಿಕ್ಷಣ ತಜ್ಞರೊಬ್ಬರು ಹೇಳುತ್ತಾರೆ. ಶಾಲೆಗಳಲ್ಲಿ ಇಂದು ಗುಣಾತ್ಮಕ ಶಿಕ್ಷಣದ ಹೆಸರಿನಲ್ಲಿ ಸಿಗುತ್ತಿರುವುದು ಕೇವಲ ಮಾಹಿತಿ ಮಾತ್ರ. ಅನುಭವದ ಜ್ಞಾನ ನೀಡುವ ಶಿಕ್ಷಕರು, ಪಠ್ಯಗಳು ಶಾಲೆಗಳಲ್ಲಿ ಕಾಣಿಸುತ್ತಿಲ್ಲ ಎಂದು. ಇದು ಎಷ ಸತ್ಯವೋ ಗೊತ್ತಿಲ್ಲ.ಆದರೆ ಈ ಬಗ್ಗೆಯೂ ನಮ್ಮ ಚಿಂತನೆ ಹರಿಯಬಿಡುವುದು ಒಳಿತು.

ಬಾಳನ್ನೇ ಕೊಲ್ಲುವಂತಾ, ಬದುಕಿಯೂ ಸತ್ತ ಅನುಭವ ಕೊಡುವ ನಿಷೇಧಿತ ಡ್ರಗ್ಸ್ ನಂತಹ ಮಾದಕ ವಸ್ತುಗಳು ನಮ್ಮ ಸುತ್ತಮುತ್ತ ಪೂರೈಕೆಯಾಗುವುದು ನಿಂತಿಲ್ಲ. ಅದರೆ ಕಡ್ಡಾಯ ನಿಷೇಧಕ್ಕೆ ಸರ್ಕಾರ ಕ್ರಮಕೈಗೊಳ್ಳಬೇಕಾದುದು ಇಂದಿನ ಅತೀಅನಿವಾರ್ಯತೆಗಳಲ್ಲಿ ಒಂದು .

ಜೊತೆಗೆ ಕ್ಷಣಕ್ಷಣಕ್ಕೂ ಆಸೆ,ಆಮಿಷಗಳನ್ನು ಹೆಚ್ಚಿಸುವ ವಾತಾವರಣ ಸೃಷ್ಟಿಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮನ್ನು ನಾವು ನಿಯಂತ್ರಣದಲ್ಲಿರಿಸಿಕೊಳ್ಳುವುದೇ ಎಲ್ಲಾ ದುಶ್ಚಟಗಳಿಗೆ ಮದ್ದು ಎಂಬ ಸಂದೇಶ ಎಲ್ಲೆಡೆಗೂ ರವಾನೆಯಾಗಬೇಕು.

ಜಾಹೀರಾತು

 

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಡ್ರಗ್ಸ್‌ ಮಾಫಿಯಾದಲ್ಲಿ ಮಗಳು ಕಳೆದುಹೋಗಿದ್ದಾಳೆ..!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*