ಪೈಪ್ ಲೈನ್ ಅಳವಡಿಕೆ ಕಾಮಗಾರಿ ಹಿನ್ನೆಲೆ
ಘೋಷಿತ ಮೂರು ದಿನಗಳ ಒಟ್ಟಿಗೆ ಮತ್ತೊಂದು ದಿನ ಸೇರಿ ಶುಕ್ರವಾರದವರೆಗೆ ಬಂಟ್ವಾಳ ಪುರಸಭಾ ನಿವಾಸಿಗಳು ನೀರಿಲ್ಲದ ಸ್ಥಿತಿಯನ್ನು ಅನುಭವಿಸಿದರು.
ಪುರಸಭೆ ವ್ಯಾಪ್ತಿಯ ಎರಡನೇ ಹಂತದ ಬೃಹತ್ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅಳವಡಿಕೆಯ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ.27ರಿಂದ 29ವರೆಗೆ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗಲಿದೆ ಎಂದು ಪುರಸಭೆ ಹಾಗೂ ಕೆ.ಯು.ಡಬ್ಲ್ಯೂಸಿ ಇಲಾಖೆ ಜಂಟಿ ಪ್ರಕಟಣೆ ನೀಡಿತ್ತು. ಇಲಾಖೆಯ ಪ್ರಕಟಣೆಯಂತೆ ನೀರು ಪೂರೈಕೆಯ ವ್ಯತ್ಯಯ ಗುರುವಾರಕ್ಕೆ ಮುಗಿದಿತ್ತು. ಶುಕ್ರವಾರ ಪುರವಾಸಿಗಳಿಗೆ ಬೆಳಗಿನ ಜಾವ ನೀರು ಪೂರೈಕೆಯಾಗಬೇಕಿತ್ತು. ಆದರೆ ಪೈಪ್ ಅಳವಡಿಕೆಯ ಕಾಮಗಾರಿಯ ಸಂದರ್ಭದಲ್ಲಾದ ಅನಾನುಕೂಲತೆಯಿಂದ ಡಿ.30ರಂದು ನಲ್ಲಿಯಲ್ಲಿ ಹರಿಯಬೇಕಾಗಿದ್ದ ನೀರು ವ್ಯತ್ಯಯ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ರೇಣುಕಾಪ್ರಸಾದ್‌ರವರ ಉಪಸ್ಥಿತಿಯಲ್ಲಿ ಬಂಟ್ವಾಳ ಐಬಿಯಲ್ಲಿ ಅಧಿಕಾರಿಗಳ ದಿಢೀರ್ ಸಭೆಯೂ ನಡೆಯಿತು.
ಈ ಸಭೆಯಲ್ಲಿ ಯೋಜನಾ ನಿರ್ದೇಶಕ ಪ್ರಸನ್ನ, ಮುಖ್ಯಾಧಿಕಾರಿ ಸುಧಾಕರ್, ಕೆಯುಡಬ್ಲ್ಯೂಸಿ ಇಂಜಿನಿಯರ್ ಶೋಭಾಲಕ್ಷ್ಮೀ, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು , ಸದಸ್ಯ ಜಗದೀಶ್ ಕುಂದರ್ ಉಪಸ್ಥಿತರಿದ್ದರು. ಈ ಸಭೆಯ ಮಾಹಿತಿ ತಿಳಿದ ಸದಸ್ಯ ಗೋವಿಂದ ಪ್ರಭು ಪುರಸಭೆ ನೀರಿನ ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಮುಗಿಯುತ್ತಿದ್ದಂತೆ ಅಧಿಕಾರಿಗಳ ದಂಡು ಕಾಮಗಾರಿ ನಡೆಯುತ್ತಿದ್ದ ಜಕ್ರಿಬೆಟ್ಟು ನೀರು ರೇಚಕ ಸ್ಥಾವರದ ಬಳಿ ಪರಿಶೀಲನೆ ನಡೆಸಿದರು. ಸಂಜೆಯ ವೇಳೆ ನೀರು ಪೂರೈಸುವ ಬಗ್ಗೆ ಮುಖ್ಯಾಧಿಕಾರಿ ಸುಧಾಕರ್ ಹಾಗೂ ಅಧ್ಯಕ್ಷ ರಾಮಕೃಷ್ಣ ಆಳ್ವ ಸುದ್ದಿಗಾರರಿಗೆ ಖಾತ್ರಿಪಡಿಸಿದರು.
ಕೆಯುಡಬ್ಲ್ಯೂಸಿ ಇಂಜಿನಿಯರ್ ಶೋಭಾಲಕ್ಷ್ಮೀಯವರು ಪೈಪ್‌ಲೈನ್ ಅಳವಡಿಕೆಯ ಸ್ಥಳದಲ್ಲಿ ನಿರಂತರ ಮೂರು ದಿನಗಳ ಕಾಲವೂ ಸ್ಥಳದಲ್ಲೇ ಉಪಸ್ಥಿತರಿದ್ದು ಪೈಪ್ ಅಳವಡಿಕೆಗೆ ಸೂಕ್ತ ಮಾರ್ಗದರ್ಶನ ನೀಡಿದರು. ಜಕ್ರಿಬೆಟ್ಟಿನಲ್ಲಿರುವ ರೇಚಕ ಸ್ಥಾವರದಿಂದ ಪೂರೈಕೆಯಾಗುವ ಪೈಪ್‌ಲೈನ್‌ನಲ್ಲಿ ಸೋರಿಕೆಯ ಪರಿಣಾಮ ಎರಡನೆ ಹಂತದ ಕುಡಿಯುವ ನೀರಿನ ಯೋಜನೆಯ ಹೊಸ ಪೈಪ್‌ಲೈನ್ ಅಳವಡಿಕೆಯ ಸಂದರ್ಭದಲ್ಲಿ ಸಮಸ್ಯ ಉಂಟಾಗಿ ಪುರವಾಸಿಗಳಿಗೆ ಇಲಾಖೆ ನೀಡಿದ ಗಡುವಿನ ದಿನದಂದು ನೀರು ಪೂರೈಕೆ ಸಾಧ್ಯವಾಗಿಲ್ಲ. ಇದಕ್ಕಾಗಿ ವಿಷಾದವಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ಶೋಭಾಲಕ್ಷ್ಮಿ ತಿಳಿಸಿದರು. ಶುಕ್ರವಾರ ಸಂಜೆಯ ವೇಳೆಗೆ ನಗರವಾಸಿಗಳಿಗೆ ನೀರು ಪೂರೈಸುವ ವಾಗ್ದಾನ ನೀಡಿದಂತೆ ನೀರು ಪೂರೈಕೆಯಾಗಿದೆ.
Be the first to comment on "ನಾಲ್ಕು ದಿನ ನೀರಿಲ್ಲದೆ ಪರದಾಟ"