ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಗಳಿಗೆ ಮಂಗಳೂರು ಉತ್ತರ ಮಾಜಿ ಶಾಸಕ ವಿಜಯಕುಮಾರ ಶೆಟ್ಟಿ ಪ್ರಮಾಣಪತ್ರ ಬೇಕಾಗಿಲ್ಲ ಎಂದು ಕೆಪಿಸಿಸಿ ಸದಸ್ಯ ಎಂ.ಎಸ್.ಮಹಮ್ಮದ್ ಹೇಳಿದ್ದಾರೆ.
ಮೂರು ಬಾರಿ ಕ್ಯಾಬಿನೆಟ್ ಸಚಿವರಾಗಿ, ಮೂವರು ಮುಖ್ಯಮಂತ್ರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸಿದ ರಮಾನಾಥ ರೈ ಅವರ ಬಗ್ಗೆ ವಿಜಯ ಕುಮಾರ್ ಶೆಟ್ಟಿ ಅವರ ಪ್ರಮಾಣಪತ್ರ ಬೇಕಾಗಿಲ್ಲ. ಅವರ ರಾಜಕೀಯ ಮುತ್ಸದ್ಧಿತನ, ಪರಿಶುದ್ಧ ಸೇವಾ ಮನೋಭಾವ, ಯಾವುದೇ ಭ್ರಷ್ಟಾಚಾರವನ್ನು ನಡೆಸದ, ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ಸೇವೆ ಇತರರಿಗೆ ಮಾದರಿಯಾಗಿದೆ. ಅವರ ಬಗ್ಗೆ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ವಿಜಯ ಕುಮಾರ್ ಶೆಟ್ಟಿ ಅವರು ಬಿಜೆಪಿ ಏಜೆಂಟ್‌ನಂತೆ ವರ್ತಿಸಿ, ಇಲ್ಲಸಲ್ಲದ ಮಾತುಗಳನ್ನಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಗುರುವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಪಕ್ಷದ ಅಧ್ಯಕ್ಷರಾಗಿ ಒಂದೇ ಒಂದು ಸಭೆಯನ್ನೂ ಅವರು ಕರೆದಿಲ್ಲ. ಶೆಟ್ಟಿ ಅವರು ಎರಡು ಬಾರಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಶಾಸಕರಾಗಿದ್ದಾರೆ. ಮೊದಿನ್‌ಬಾವಾ ಅವರ ಆಮಿಷಕ್ಕೊಳಗಾಗಿ ಅವರನ್ನು ಬೆಂಬಲಿಸಿದ ವಿಜಯ ಕುಮಾರ್ ಶೆಟ್ಟಿ ಅವರು ಇತರರಿಗೆ ಬುದ್ಧಿವಾದ ಹೇಳುವುದಕ್ಕೆ ಹೊರಟು ತನ್ನ ಜಾತಕ ಪ್ರಕಟಿಸುವಂತೆ ಮಾಡಿದ್ದಾರೆ. ತಿಳಿವಳಿಕೆಯಿಲ್ಲದೇ ಹತಾಶ ಮನೋಭಾವದಿಂದ ಮಾತನಾಡಿದ ಅವರಿಗೆ ಕಾಂಗ್ರೆಸ್ ಪಕ್ಷದ ಋಣವಿದೆ. ಎತ್ತಿನಹೊಳೆ ಯೋಜನೆ ಡಿ.ವಿ.ಸದಾನಂದ ಗೌಡ ಅವರ ಕಾಲದಲ್ಲಿ ಸರ್ವೆ ಆಗಿದ್ದು ಅವರನ್ನು ಪ್ರಶ್ನಿಸಲಿ. ಎತ್ತಿನಹೊಳೆ ವಿಚಾರದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಬಿಜೆಪಿ ಅವರ ಜತೆ ಸೇರಿ ಹೋರಾಟ ಮಾಡಲಿ ಎಂದರು.
ಬಂಟ್ವಾಳ ತಾಲೂಕು ಇಂಟಕ್ ಅಧ್ಯಕ್ಷ ರಮಾನಾಥ ವಿಟ್ಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿ.ಎಚ್.ಸಮೀರ್ ಪಳಿಕೆ ಉಪಸ್ಥಿತರಿದ್ದರು.
Be the first to comment on "ರಮಾನಾಥ ರೈಗಳಿಗೆ ವಿಜಯ ಕುಮಾರ್ ಶೆಟ್ಟಿ ಪ್ರಮಾಣಪತ್ರ ಬೇಕಾಗಿಲ್ಲ"