ಜನಪರ ಚಿಂತನೆ, ಅಧ್ಯಾತ್ಮ ಸಾಧನೆಯ ಪ್ರೇರಕ ಸಂತ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ

ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಬಂಟ್ವಾಳ ತಾಲೂಕಿನ ಒಡಿಯೂರು ಇಂದು ಅಧ್ಯಾತ್ಮ ಸಾಧನೆ, ಗ್ರಾಮವಿಕಾಸ ಯೋಜನೆ ಮೂಲಕ ಹೊರದೇಶದ ಜನರನ್ನೂ ಆಕರ್ಷಿಸಿದೆ ಎಂದರೆ ಇದಕ್ಕೆ ಕಾರಣ ಶ್ರೀ ಗುರುದೇವಾನಂದ ಸ್ವಾಮೀಜಿ.

https://bantwalnews.com cover story

ನಮ್ಮ ಲೌಕಿಕ ಬದುಕನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಸಲಹೆ ಸೂಚನೆ ನೀಡುವವರು ನೂರಾರು. ಆದರೆ ಆಧ್ಯಾತ್ಮಿಕ ಜೀವನ, ನಿರ್ಮಲ ಮನಸ್ಸಿನೊಂದಿಗೆ ಜನರೊಡನೆ ಬೆರೆಯುವುದು ಹೇಗೆ ಎಂಬುದನ್ನು ಅರಿತುಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನ ಅತಿ ಅಗತ್ಯ. ಬಂಟ್ವಾಳ ತಾಲೂಕಿನ ಒಡಿಯೂರು ಕ್ಷೇತ್ರ ಧಾರ್ಮಿಕ, ಆಧ್ಯಾತ್ಮಿಕ ಸಂದೇಶವನ್ನು ಜಗತ್ತಿಗೆ ಸಾರುವ ಕಾರ್ಯ ಮಾಡುತ್ತಿದೆ.

ಕರೋಪಾಡಿ ಗ್ರಾಮದ ಈ ಭಾಗ ದತ್ತಾಂಜನೇಯ ದೇವರ ಸನ್ನಿಧಿ. ಇಲ್ಲಿಗೆ ದಕ್ಷಿಣದ ಗಾಣಗಾಪುರ ಎಂದೂ ಹೆಸರಿದೆ.

ಸುಮಾರು ನಲ್ವತ್ತಡಿ ಎತ್ತರದ ರಾಜಗೋಪುರ, ಅಷ್ಟಪಟ್ಟಿಯಾಕಾರದ ರಚನೆಯ ದೇಗುಲ, ಸಂಪೂರ್ಣ ಶಿಲಾಮಯ ಗರ್ಭಗುಡಿ, ಗುರುದತ್ತಾತ್ರೇಯ, ಹನುಮಂತ, ಶಿವಲೀಲೆಗಳ ಕಥಾನಕ ಸಾರುವ ಕಲಾಕೃತಿಗಳು… ಹೀಗೆ ಒಡಿಯೂರು ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಧರ್ಮತತ್ವಗಳ ಸಾರವೇ ನಮಗೆದುರಾಗುತ್ತದೆ. ಇಲ್ಲಿ ದತ್ತಾತ್ರೇಯ ಪ್ರಭು ಮತ್ತು ಆಂಜನೇಯ ಸ್ವಾಮಿ ಉಪಾಸ್ಯ ದೇವರು. ಇದು ಈ ಕ್ಷೇತ್ರದ ವಿಶೇಷವೂ ಹೌದು. ಈ ಭೂಭಾಗದಲ್ಲಿ ಸ್ವಯಂ ಭೂ ದಕ್ಷಿಣಾಮೂರ್ತಿ ನೆಲೆಯಿದ್ದಿತೆಂಬ ಕಾರಣದಿಂದ ಇಲ್ಲಿ ನಡೆಯುವ ನಾಗಾರಾಧನೆಗೆ ವಿಶೇಷ ಮಹತ್ವ ಪಡೆದಿದೆ. ಪರಿವಾರ ದೇವತೆಗಳಾಗಿ ವಿಘ್ನವಿನಾಶಕ ಬಲಮುರಿ ಗಣಪತಿ, ಸ್ಕಂದಾನುಗ್ರಹಕಾರಕ ಸುಬ್ರಹ್ಮಣ್ಯ, ವಜ್ರಮಾತೆ, ಮೂಲರಾಮ, ಶಕ್ತಿಸ್ವರೂಪಿಣಿ ಭದ್ರಕಾಳಿ ಇಲ್ಲಿ ಆರಾಧಿಸಲ್ಪಡುತ್ತಾರೆ. ಕ್ಷೇತ್ರ ಪ್ರತಿಷ್ಠಾ ವರ್ಧಂತಿ, ಹನುಮ ಜಯಂತಿ, ಲಲಿತಾ ಪಂಚಮಿ, ನಾಗರ ಪಂಚಮಿ ಮತ್ತು ದತ್ತ ಜಯಂತ್ಯುತ್ಸವ ಇಲ್ಲಿ ನಡೆಯುವ ಮುಖ್ಯ ಪಂಚ ಪರ್ವಗಳಾದರೆ ಸಂಸ್ಥಾನದ ಸಹ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಜಯಂತ್ಯುತ್ಸವವನ್ನು ಗ್ರಾಮೋತ್ಸವಾಗಿ ಆಚರಿಸಲಾಗುತ್ತದೆ. ನಿತ್ಯಾನಂದ ಸ್ವರೂಪಿ, ದತ್ತಾವಧೂತ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭಕ್ತರ ನೋವು, ಕಷ್ಟ-ದುಃಖಗಳನ್ನು ದೂರೀಕರಿಸುವುದರಲ್ಲಿ ನಿರತರು.

ವಿಶ್ವಮಾನವ ಧರ್ಮದ ತತ್ವದಡಿ ಸಮಾಜವನ್ನು ಒಗ್ಗೂಡಿಸುವುದು ಇಂದಿನ ಅವಶ್ಯಕತೆ. ಜನರ ನಡುವೆ ಬೆರೆತು, ಅವರ ಕಷ್ಟಕಾರ್ಪಣ್ಯಗಳಿಗೆ ಸಮಾಧಾನ ಹೇಳಿ, ಧಾರ್ಮಿಕ, ಆಧ್ಯಾತ್ಮಿಕ ಜ್ಞಾನವಂತರನ್ನಾಗಿಸಿ, ಸಚ್ಚಾರಿತ್ರ್ಯವಂತರನ್ನಾಗಿ ರೂಪಿಸುವುದು ಸಂತರ ಕೆಲಸ ಎನ್ನುತ್ತಾರೆ ಸ್ವಾಮೀಜಿ. ಭಜನೆ ಅಂತರಂಗದ ವಿಕಾಸವನ್ನೂ ಮೂಡಿಸುತ್ತದೆ, ಜೀವನ ವಿಧಾನವನ್ನು ತಿಳಿಸಲು ಭಜನೆ ಸಹಕಾರಿ. ಕನಕದಾಸರ ಭಜನೆಯ ಒಳಸೂಕ್ಷ್ಮಗಳನ್ನು ನಾವು ಅರಿಯಬೇಕು ಎಂಬ ಸಂದೇಶವನ್ನು ಸ್ವಾಮೀಜಿ ನೀಡುತ್ತಾರೆ.

ಅಧ್ಯಾತ್ಮ ಭವನ ನಿರ್ಮಾಣ ಕಲ್ಪನೆ:

ಒಡಿಯೂರಿನಲ್ಲಿ ಈಗಿರುವ ಗುರುದೇವ ಧ್ಯಾನ ಮಂದಿರದಲ್ಲಿ ನಿತ್ಯ ಸುಪ್ರಭಾತ, ಭಜನೆ, ಸತ್ಸಂಗ, ಸ್ತೋತ್ರ ಪಠಣಕ್ಕೆ ಅವಕಾಶವಿದೆ. ವಿಶೇಷ ಸಾಧನೆಗೆ ಏಕಾಂತ ಧ್ಯಾನಕ್ಕೆ ಅನುಕೂಲವಾಗುವಂತೆ ನಿತ್ಯಾನಂದ ಗುಹೆ, ಗುಹೆಯಲ್ಲಿರುವ ಕವಲುಗಳಲ್ಲಿ ಧ್ಯಾನ ಪೀಠಗಳನ್ನು ನಿರ್ಮಿಸಿದ್ದು ಒಂದು ಕವಲಿನಲ್ಲಿ ಸಣ್ಣದಾದ ಜಲಾಶಯ. ಇನ್ನುಮುಂದೆ ಅಧ್ಯಾತ್ಮ ಭವನ ನಿರ್ಮಾಣ ಯೋಜನೆ ಶ್ರೀಗಳಿಗಿದೆ. ಇದರ ಜೊತೆಗೆ ಈಗಿರುವ ಮೂಲಿಕಾವನವನ್ನು ಮತ್ತಷ್ಟು ವಿಸ್ತರಿಸಿ, ಪರಿಪೂರ್ಣವಾದ ಮೂಲಿಕಾವನ ನಿರ್ಮಾಣದ ಯೋಜನೆ ಇದೆ.

ಜನರೊಂದಿಗೆ ಒಡಿಯೂರು ಕ್ಷೇತ್ರ

ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗಳನ್ನು ಸಮಾಜಕ್ಕೆ ನೀಡುವ ದೃಷ್ಟಿಯಿಂದ ಶ್ರೀ ಗುರುದೇವ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆ, ಜನಪರ ಕಾರ್ಯಗಳಿಗೆ ಸೇವಾ ಬಳಗ, ಮಹಿಳೆಯರ ಸಬಲೀಕರಣಕ್ಕೆ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ವಿದ್ಯಾರ್ಜನೆ ಸಲುವಾಗಿ  ಗುರುದೇವ ವಿದ್ಯಾ ಪೀಠ, ಸಂಸ್ಕೃತಿ ಮತ್ತು ಸಂಸ್ಕಾರಗಳ ಮಾಹಿತಿ ನೀಡುವ ದೃಷ್ಟಿಯಲ್ಲಿ ಸನಾತನ ಸಂಸ್ಕಾರ ಸಂಕಲ್ಪ ಅಭಿಯಾನ, ಆಧ್ಯಾತ್ಮದ ಮಾಹಿತಿಗಳನ್ನು ನೀಡುವ ದೃಷ್ಟಿಯಲ್ಲಿ ಅಧ್ಯಾತ್ಮ ಜಾಗೃತಿ ಅಭಿಯಾನ, ಗೋವುಗಳ ರಕ್ಷಣೆಗೆ ಗೋ ಸೇವಾ ಯೋಜನೆ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ.

ಅಧ್ಯಾತ್ಮ ತಪಸ್ಸಿನ ಮೂಲಕ ಜನ್ಮಭೂಮಿಯಾದ ಕರೋಪಾಡಿ ಗ್ರಾಮದ ಒಡಿಯೂರನ್ನು ತನ್ನ ಸಾಧನಾ ಕ್ಷೇತ್ರವನ್ನಾಗಿಸಿದರು. ಆ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಿದರು. ಅವಧೂತ ಸಂಪ್ರದಾಯದಲ್ಲಿ ಮಹೋನ್ನತ ಸಾಧನೆ ಮಾಡಿದ ಶ್ರೀಗಳು ಸತ್ಸಂಗ, ಪುರಾಣಶ್ರವಣ, ಕಲೋಪಾಸನೆ, ಸಾಹಿತ್ಯ ಸೇವೆ, ಆಧ್ಯಾತ್ಮಿಕ ತತ್ವಪ್ರಚಾರದ ಜತೆ ಜತೆಯಲ್ಲೇ ಸಮಾಜದ ಅಭಿವೃದ್ಧಿಯ ಚಿಂತನೆ. ಸಮಾಜದಿಂದ ಪಡೆದುದನ್ನು ಸಮಾಜಕ್ಕೇ ನೀಡುವ ಸಂತರಿಂದ ಸಮಭಾವ, ಸಹಬಾಳ್ವೆಯ ಸಂದೇಶ, ನಿರಾಡಂಬರದ, ಸರಳ, ಸಜ್ಜನಿಕೆಯ, ವಿನೀತ ಭಾವದಿಂದ ಜನಸಾಮಾನ್ಯರಿಗೆ ಅತ್ಯಂತ ಪ್ರಿಯರೆನಿಸಿದ್ದಾರೆ. ಜನರ ನಡುವೆಯೇ ಇದ್ದು ಅವರ ಕಷ್ಟಗಳಿಗೆ ಪರಿಹಾರೋಪಾಯಗಳನ್ನು ನೀಡುತ್ತಾರೆ. ಅವರ ಕಣ್ಣೀರನ್ನೊರಸುವ ಅವರ ಸಂಕಷ್ಟಗಳನ್ನು ತಾಳ್ಮೆಯಿಂದ ಆಲಿಸಿ, ಅವುಗಳನ್ನು ದೂರ ಮಾಡುವ ಶ್ರೀಗಳು ಭಕ್ತರ ಸುಖ ಪ್ರಾಪ್ತಿಗೆ ಭಗವಂತನಲ್ಲಿ ಪ್ರಾರ್ಥಿಸುತ್ತಾರೆ.

ಪ್ರಮುಖವಾದ ಅಂಶವೇನೆಂದರೆ ಈ ಕ್ಷೇತ್ರ ಯಾವುದೇ ಜಾತಿ, ವರ್ಗ, ಪಂಗಡಗಳಿಗೆ ಮೀಸಲಲ್ಲ. ಆಧ್ಯಾತ್ಮಿಕ, ವೈದಿಕ, ಧಾರ್ಮಿಕವಾಗಿ, ಕಲೆ, ಸಂಸ್ಕೃತಿ, ಭಾಷೆಗಳ ಉಳಿವಿಗಾಗಿ ಇಲ್ಲಿ ಚಟುವಟಿಕೆಗಳು ನಿತ್ಯನಿರಂತರ.

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ  ಕಳುಹಿಸಿ: ಈ ಮೈಲ್ ವಿಳಾಸ: bantwalnews@gmail.com

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಜನಪರ ಚಿಂತನೆ, ಅಧ್ಯಾತ್ಮ ಸಾಧನೆಯ ಪ್ರೇರಕ ಸಂತ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*