ಸರಕಾರ ಮತ್ತು ಸಮಾಜ ಒಗ್ಗಟ್ಟಿನಲ್ಲಿ ಸಾಗುವ ಮೂಲಕ ಅಭಿವೃದ್ಧಿಯನ್ನು ಸುಲಭವಾಗಿಸಬಹುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಗುರುವಾರ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತ ಸಾಮೂಹಿಕ ಸಂಕಲ್ಪ, ಗಣಹೋಮ ಹಾಗೂ ಏಕಾದಶ ರುದ್ರ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ದೀಪಬೆಳಗಿಸಿ, ಆಶೀರ್ವಚನ ನೀಡಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ದೇವತಾ ಕಾರ್ಯದಲ್ಲಿ ಚರ್ಚೆಗಳನ್ನು ಬದಿಗಿಟ್ಟು, ಸತ್ಕರ್ಮಗಳತ್ತ ಮುಂದಡಿ ಇಡಬೇಕು. ಮನಸ್ಸಿನ ಭಾವನೆಗಳ ಕೊರತೆಯನ್ನು ನೀಗಿಸಿದಾಗ ಸಾಮಾಜಿಕ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸರಪಾಡಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಅನುದಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಒಂದು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದರೆ, ಅದರಿಂದ ನೂರು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ ಪುಣ್ಯ ಲಭಿಸುತ್ತದೆ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್, ಕ್ಷೇತ್ರದ ತಂತ್ರಿ ದಿನೇಶ್‌ಕೃಷ್ಣ ತಂತ್ರಿ, ಡಾ. ಎಚ್.ಶಂಕರನಾರಾಯಣ ರಾವ್ ಹಲ್ಸನಾಡು, ಆಡಳಿತ ಮೊಕ್ತೇಸರ ಎನ್.ಸುಬ್ಬಣ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಎಚ್. ವಂದಿಸಿದರು. ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಾಮೂಹಿಕ ಸಂಕಲ್ಪ, ನಿಧಿಕುಂಬ ಸಂಚಯ, ಗಣಹೋಮ, ಏಕಾದಶ ರುದ್ರ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು.
Be the first to comment on "ಸರಕಾರ, ಸಮಾಜ ಒಗ್ಗಟ್ಟಾದರೆ ಅಭಿವೃದ್ಧಿ: ಒಡಿಯೂರು ಶ್ರೀ"