ಕಲಿಯುವುದರಲ್ಲಿ ಪ್ರೈಝ್ ಬರ್ಲಿಲ್ಲ ಅಂತ ಅವಳಮ್ಮ ಬೈಯ್ತಾರಂತೆ

ಅವಳ ಸಂಗೀತ, ನೃತ್ಯ, ಅಭಿನಯ ಚಾತುರ್ಯವಂತೂ ಎಲ್ಲರನ್ನೂ ಬೆರಗುಗೊಳಿಸುವಂತಾದ್ದು. ಪ್ರೇಕ್ಷಕರು ಅದಕ್ಕೆ ನೀಡಿದ ಚಪ್ಪಾಳೆ ಹಾಗೂ ಪ್ರಶಂಸೆಯ ಬಹುಮಾನ ಎಲ್ಲಾ ಬಹುಮಾನಕ್ಕಿಂತೂ ಮಿಗಿಲು.

ಜಾಹೀರಾತು

ಹೌದು.. ಕೆಲವೊಮ್ಮೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವೇ, ಆದರೆ ಅದು ಅಷ್ಟೇ ಸುಲಭವೂ ಹೌದು. ಮಕ್ಕಳು ನಮ್ಮವರಾದಾಗ ಅದು ಸುಲಭವಾಗುತ್ತದೆ.  ಖಾಸಗಿ ಶಾಲೆಯೊಂದರಲ್ಲಿ  ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿದೆ.
ಆಗ ಈ ಘಟನೆಯಿಂದ ನನಗಾದ ದಿಗ್ಬ್ರಮೆ ಯ ಬಗ್ಗೆ ನನ್ನ ಆಪ್ತರಲ್ಲಿ ನಾನಾಗಲೇ ಹಂಚಿಕೊಂಡಿದ್ದೇನೆ. ನೀವೂ ಓದಿ. ಮಾತುಕತೆ ಏನಿದ್ದರೂ ಆ ಬಳಿಕ..
ಹಲವು ಶಾಲೆಗಳ ಸ್ಕೂಲ್ ಡೇ ಗಾಗಿ ನಾನು ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದೇನೆ.

ಆ ವರ್ಷ ಆ ಒಂದು ಖಾಸಗಿ ಶಾಲೆಯ ಮಕ್ಕಳಿಗಾಗಿ ನಾಟಕ ನಿರ್ದೇಶಿಸಿದ್ದೆ. ನಮ್ಮ ನಾಟಕದಲ್ಲಿನ ಎಲ್ಲಾ ಮಕ್ಕಳು ಅಭಿನಯದಲ್ಲಿ ಮುಂದಿದ್ದರು. ಓರ್ವ ವಿದ್ಯಾರ್ಥಿನಿ ರಾಧಾ(ಹೆಸರು ಬದಲಾಯಿಸಿದೆ)ಳಂತೂ ತನ್ನ ಅಭಿನಯದಿಂದ ಶಾಲಾ ಸಮವಸ್ತ್ರದ ರಿಹರ್ಸಲ್‌ನಲ್ಲೇ ನಮ್ಮನ್ನು ಬೆರಗುಗೊಳಿಸುತ್ತಿದ್ದಳು. ಸ್ಕೂಲ್ ಡೇ ದಿನ ಸಭಾಕಾರ್ಯಕ್ರಮದಲ್ಲಿ  ಪ್ರಾರ್ಥನೆಗೆ ಸಾಥ್, ಸ್ವಾಗತ ನೃತ್ಯದ ಭರತನಾಟ್ಯದಲ್ಲಿಯೂ ಹೆಜ್ಜೆ ಹಾಕಿದ್ದ ಈಕೆ ಲವಲವಿಕೆಯಿಂದಲೇ ಇದ್ದಳು. ಸಭಾ ಕಾರ್ಯಕ್ರಮದ ಬಳಿಕ ನಾಟಕದಲ್ಲಂತೂ ತನ್ನ ಆವೇಶ ಭರಿತ ಹಾಗೂ ಮನಮೋಹಕ ಅಭಿನಯದಿಂದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಳು.
ನಾಟಕ ಮುಗಿಯಿತು. ನಾನು ಬಾಡಿಗೆ ವೇಷಭೂಷಣಗಳನ್ನೆಲ್ಲಾ ಗಂಟುಮೂಟೆ ಕಟ್ಟುವ ಗಡಿಬಿಡಿಯಲ್ಲಿದ್ದೆ. ಆ ವೇಳೆ ರಾಧಾ ಯಾಕೋ ಅಳುತ್ತಾ ನಿಂತಿದ್ದಳು. ಅವಳ ಗೆಳತಿಯೊಬ್ಬಳು ಅವಳನ್ನು ಸಮಾಧಾನ ಪಡಿಸುತ್ತಾ ಏನಾಗುದಿಲ್ಲ, ಇದನ್ನು ಕೊಂಡೋಗು ಎಂದು ಬಣ್ಣದ ಕಾಗದದಲ್ಲಿ ಸುತ್ತಿದ್ದ ವಸ್ತುವನ್ನು ಕೊಟ್ಟು ಸಮಾಧಾನ ಪಡಿಸುತ್ತಿದ್ದಳು.

ಯಾಕೆ ಅಳುತ್ತೀ..? ಎಂದಾಗ ಅವಳ ಅಳು ಇನ್ನೂ ಹೆಚ್ಚಾಯಿತು. ಗೆಳತಿ ಹೇಳಿದಳು-ಸರ್.. ಅವಳಿಗೆ ಕಲಿಯುವುದರಲ್ಲಿ ಪ್ರೈಝ್ ಬರ್ಲಿಯಲ್ಲ, ಮನೆಯಲ್ಲಿ ಅವಳ ಅಮ್ಮ ಬೈಯ್ತಾರೆ ಅಂತ ಕೂಗ್ತಾ ಇದ್ದಾಳೆ..  ನನಗೂ ಏನನ್ನಬೇಕು ಎಂದು ಗೊತ್ತಾಗಲಿಲ್ಲ. ಅದೆಂತ ಕೊಡ್ತಾ ಇರುದು..? ಎಂದು ಬಣ್ಣದ ಕಾಗದವನ್ನು ಬೊಟ್ಟುಮಾಡಿ ಕೇಳಿದೆ, ಆಗ ರಾಧಾಳ ಗೆಳತಿ ಹೇಳಿದಳು-ಸರ್.. ಅವಳಿಗೆ ಪ್ರೈಝ್ ಸಿಗ್ಲಿಲ್ಲ, ನಂಗೆ ೫ ಪ್ರೈಝ್ ಸಿಕ್ಕಿದೆ, ಒಂದನ್ನು ರಾಧಾಗೆ ಕೊಡ್ತೇನೆ, ಅವಳಮ್ಮನಿಗೆ ಕೊಡ್ಲಿ.. ಎಂದಾಗ ನನ್ನ ಬಾಯಿಯಿಂದ ಮಾತೇ  ಹೊರಡಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಧಾಳ ಇತರ ಗೆಳತಿಯರು ರಾಧಾಳನ್ನು ಸಮಾಧಾನಗೊಳಿಸಿ, ಆ ಬಣ್ಣದ ಕಾಗದದಲ್ಲಿ ಸುತ್ತಿದ್ದ ಹರಿವಾಣವನ್ನು ರಾಧಾಳ ಕೈಗೆ ನೀಡಿ ಬೇರೆ ಡ್ಯಾನ್ಸ್ ನೋಡುವ ಎಂದು ಅಲ್ಲಿಂದ ಕರೆದೊಯ್ದರು. ಛೇ ಯಾಕೆ ಹೀಗಾಯ್ತು..? ಎಂದು  ತುಂಬಾ ದಿನ ಈ ಘಟನೆ ನನ್ನ ಕೊರೆಯುತ್ತಾ ಇತ್ತು. ಆಗಾಗ ಆ ಶಾಲೆಯ ಪ್ರತಿಭಾನ್ವಿತರ ಹೆಸರು ಪತ್ರಿಕೆಗಳಲ್ಲಿ ಓದಿದಾಗಲೆಲ್ಲಾ ರಾಧಾ ನೆನಪಾಗುತ್ತಾಳೆ.
ಅಂಕಗಳೇ ಪ್ರಧಾನವಾಗಿ ಪ್ರತಿಭೆಗಳು ಮೂಲೆಗುಂಪಾದಾಗ ಆಗುವ ಅಪಾಯಗಳಿವು. ಬಹುಮಾನ ಸಿಗಲಿಲ್ಲ ಎಂಬ ಮಾತ್ರಕ್ಕೆ ರಾಧಾಳೇನೂ ದಡ್ಡ ಳಾಗಿರಲಿಲ್ಲ. ಕಲಿಕೆಗೆ ಬಹುಮಾನ ಕೊಡುವ ಶಾಲೆಯ ಮಾನದಂಡಕ್ಕೆ ರಾಧಾ ಹೊಂದುತ್ತಿರಲಿಲ್ಲವಷ್ಟೇ. ಆದರೆ ಅವಳ  ಸಂಗೀತ, ನೃತ್ಯ, ಅಭಿನಯ ಚಾತುರ್ಯ ವಂತೂ ಎಲ್ಲರನ್ನೂ ಬೆರಗುಗೊಳಿಸುವಂತಾದ್ದು. ಪ್ರೇಕ್ಷಕರು ಅದಕ್ಕೆ ನೀಡಿದ ಚಪ್ಪಾಳೆ ಹಾಗೂ ಪ್ರಶಂಸೆಯ ಬಹುಮಾನ ಈ ಎಲ್ಲಾ ಬಹುಮಾನಕ್ಕಿಂತೂ ಮಿಗಿಲು. ಆದರೆ ಇದು ಬಹುತೇಕ ಪೋಷಕರಿಗೆ ಅರ್ಥವಾಗದ್ದರಿಂದ ಇಂದೂ ಅಂಕ ಗಳೇ ಪ್ರಧಾನವಾಗುತ್ತಿದೆ. ಅದೆಷ್ಟೋ ವಿದ್ಯಾರ್ಥಿಗಳು ರಾಧಾಳಂತೆ ನೋವು ಅನುಭವಿಸುತ್ತಿದ್ದರೋ ಏನೋ..
ಆ ಘಟನೆಯಾದ ಬಳಿಕ ನನಗೆ ಅನ್ನಿಸಿದ್ದು ಇಷ್ಟು.. ರಾಧಾ ರಂಗದ ಮೇಲೆ ನಿಜಜೀವನವನ್ನೂ, ಮನೆಯಲ್ಲಿ ಅಭಿನಯದ ನಾಟಕವನ್ನು ಮಾಡುತ್ತಿದ್ದಾಳೆಯೋ ಏನೋ.. ನಿಜಕ್ಕೂ ಯಾರಿಗೂ ಹೀಗಾಗುವುದು ಬೇಡ.

ಜಾಹೀರಾತು

 

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಕಲಿಯುವುದರಲ್ಲಿ ಪ್ರೈಝ್ ಬರ್ಲಿಲ್ಲ ಅಂತ ಅವಳಮ್ಮ ಬೈಯ್ತಾರಂತೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*