ಸನ್ನಿವೇಶ ಆಧರಿತ ನೃತ್ಯ ಪ್ರಸ್ತುತಿ ಮಂಥನ – 2016

ಸದಾ ಹೊಸ ಕಲಾವಿದರಿಗೆ ವೇದಿಕೆ ಒದಗಿಸುವ ಚಿಂತನೆಯೊಂದಿಗೆ ಮಂಗಳೂರಿನ ನೃತ್ಯಾಂಗನ್ ನಾಟ್ಯಶಾಲೆ ಈ ಬಾರಿ ಮಂಗಳೂರಿನಲ್ಲಿ ಭರತನಾಟ್ಯದ ಜೊತೆಗೆ ಒಡಿಸ್ಸಿಯನ್ನೂ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನತಣಿಸಿತು. ಡಾನ್‌ಬಾಸ್ಕೋ ಸಭಾಂಗಣದಲ್ಲಿ ಪ್ರಸ್ತುತಿ ಕಂಡ ಮಂಥನ-2016 ಕಾರ್ಯಕ್ರಮ ಹಲವು ಕಾರಣಗಳಿಗೆ ಮರೆಯಲಾರದ ಕಾರ್ಯಕ್ರಮವಾಗಿ ನೆನಪಿನಲ್ಲಿ ಉಳಿಯಿತು. ಕಾರ್ಯಕ್ರಮದ ವಿಮರ್ಶೆಯನ್ನು www.bantwalnews.com ಗೆ ನೀಡಿದವರು ಮಂಗಳೂರಿನ ದೀಪ್ತಿ.

ಸದಾ ಹೊಸ ಕಲಾವಿದರಿಗೆ ವೇದಿಕೆ ಒದಗಿಸುವ ಚಿಂತನೆಯೊಂದಿಗೆ ಮಂಗಳೂರಿನ ನೃತ್ಯಾಂಗನ್ ನಾಟ್ಯಶಾಲೆ ಈ ಬಾರಿ ಮಂಗಳೂರಿನಲ್ಲಿ ಭರತನಾಟ್ಯದ ಜೊತೆಗೆ ಒಡಿಸ್ಸಿಯನ್ನೂ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನತಣಿಸಿತು. ಇತ್ತೀಚೆಗೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಪ್ರಸ್ತುತಿ ಕಂಡ ಮಂಥನ-2016 ಕಾರ್ಯಕ್ರಮ ಹಲವು ಕಾರಣಗಳಿಗೆ ಮರೆಯಲಾರದ ಕಾರ್ಯಕ್ರಮವಾಗಿ ನೆನಪಿನಲ್ಲಿ ಉಳಿಯಿತು.
ಚೆನ್ನೈಯ ಉದಯೋನ್ಮುಖ ಕಲಾವಿದೆ ಕಾವ್ಯಾ ಗಣೇಶ್, ಕೇರಳ ಮೂಲದ ಅಭಯಲಕ್ಷ್ಮೀ ಮತ್ತು ಮಂಗಳೂರಿನ ಕಲಾವಿದೆ ವಿದ್ಯಾಶ್ರೀ ರಾಧಾಕೃಷ್ಣ ಅವರು ತಲಾ 45 ನಿಮಿಷಗಳ ಕಾಲ ಪ್ರತಿಭೆ ಪ್ರದರ್ಶನ ಮೂಲಕ ಪ್ರೇಕ್ಷಕರನ್ನು ಹಿಡಿದಿರಿಸಿದರು.
ಕಾವ್ಯಾ ಗಣೇಶ್ ಭರತನಾಟ್ಯ ಆರಂಭ ಮಾಡಿದ್ದು ದೇವೀ ಸ್ತುತಿ ಮೂಲಕ. ಅವರ ಪ್ರಸ್ತುತಿಯಲ್ಲಿ ಆಕರ್ಷಕವಾಗಿ ‘ನವರಸ ಮೋಹನ’ ಭಾಗ ಪ್ರೇಕ್ಷಕರ ಮನಸೂರೆಗೊಳಿಸಿತು. ಕಂಸನ ವಧೆಯ ಉದ್ದೇಶದಿಂದ ಮಥುರೆಗೆ ಕೃಷ್ಣನ ಆಗಮನ, ಅಲ್ಲಿದ್ದ ಜನರ ಒಂಭತ್ತು ಭಾವನೆಗಳನ್ನು ನೃತ್ಯ ಮತ್ತು ಅಭಿನಯದ ಮೂಲಕ ಅವರು ವ್ಯಕ್ತಪಡಿಸಿದ ಬಗೆ ಮನಮೋಹಕ.
ಕಲಾಪ್ರೌಢಿಮೆ, ತಾಳಕ್ಕೆ ತಕ್ಕ ಹೆಜ್ಜೆ ಗಮನಿಸಿದರೆ ಈ ಪ್ರತಿಭಾನ್ವಿತೆಯ ವಯಸ್ಸು ಹದಿನಾಲ್ಕು ಎಂದರೆ ಅಚ್ಚರಿಯಾಗದೇ ಇರದು. ದೆಹಲಿಯ ಪ್ರತಿಭಾನ್ವಿತ ಗುರು ರಮಾ ವೈದ್ಯನಾಥನ್ ಅವರಿಂದ ಭರತನಾಟ್ಯ ತರಬೇತಿ ಪಡೆಯುತ್ತಿರುವುದು ಪ್ರದರ್ಶನದ ವೇಳೆಯೇ ತಿಳಿಯುವಂತಿದೆ. ಚೆನ್ನೈಯ ಗುರು ಮೀನಾಕ್ಷಿ ಚಿತ್ತರಂಜನ್ ಇವರ ಗುರು. ಡಾ.ಎಂ.ಬಾಲಮುರಳಿಕೃಷ್ಣ ಅವರ ರಚನೆಯ ತಿಲ್ಲಾನದೊಂದಿಗೆ ನಾಟ್ಯವನ್ನು ಮುಕ್ತಾಯಗೊಳಿಸಿದರು.
ಇದು ಕಾವ್ಯಾ ಎಂಬ ಕಿರಿಯ ಕಲಾವಿದೆ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣ ಎಂಬ ಮಹಾಗುರುವಿಗೆ ಸಲ್ಲಿಸಿದ ನೃತ್ಯಾಂಜಲಿ.
ಮಂಗಳೂರಿನ ಕಲಾಪ್ರೇಮಿಗಳಿಗೆ ಒಡಿಸ್ಸಿ ನೃತ್ಯ ವಿಶೇಷವೇ. ಮೂಲತಃ ಕೇರಳದ ಮತ್ತು ಬೆಂಗಳೂರಿನ ಕಲಾವಿದೆ ಅಭಯಲಕ್ಷ್ಮಿ ಅವರ ಒಡಿಸ್ಸಿ ನೃತ್ಯ ಸೊಬಗು ಕಲಾಸಕ್ತರನ್ನು ಮನತಣಿಸಿತು. ಒಂದರ್ಥದಲ್ಲಿ ಅದು ಭಿನ್ನವಾದ ಕಲಾಪ್ರಕಾರ ಇಲ್ಲಿಯವ ನೋಟಕರಿಗೆ. ಅಹಿರ್ ಭೈರವ್ ರಾಗಕ್ಕೆ ಭಯಲಕ್ಷ್ಮೀ ಅವರ ಹೆಜ್ಜೆಯೊಂದಿಗೆ ಕಣ್ಣ ನೋಟ, ನೃತ್ಯ ಭಂಗಿ ಬಹು ಆಕರ್ಷಕ. ಮುಸ್ಲಿಂ ಕವಿ ಬರೆದ ಒರಿಯ ಗೀತೆಗೆ ಅವರು ನಾಟ್ಯ ರೂಪ ನೀಡಿದರು. ಗಜೇಂದ್ರ, ದ್ರೌಪದಿ, ಪ್ರಹ್ಲಾದನನ್ನು ಜಗನ್ನಾಥ ದೇವರು ರಕ್ಷಿಸಿದ ಸನ್ನಿವೇಶಗಳು ಅವರ ನಾಟ್ಯಕ್ಕೆ ಕಥಾವಸ್ತುಗಳಾದವು. ದೇಶಾದ್ಯಂತ ನೃತ್ಯ ಪ್ರದರ್ಶನ ನೀಡಿರುವ ಅಭಯಲಕ್ಷ್ಮೀ ಬೆಂಗಳೂರಿನ ಶರ್ಮಿಳಾ ಮುಖರ್ಜಿ ಅವರಿಂದ ತರಬೇತಿ ಪಡೆಯುತ್ತಿರುವ ಪ್ರತಿಭಾವಂತ ಕಲಾವಿದೆ.
ಜ್ವಾಲಾಮುಖಿ ಅಂಬೆ ಎಂಬ ನೃತ್ಯ ರೂಪಕದ ಮೊದಲ ಪ್ರದರ್ಶನಕ್ಕೆ ಮಂಥನ ವೇದಿಕೆಯಾಯಿತು.
ಸ್ತ್ರೀ ಸಂವೇದನೆಯನ್ನು ಅಚ್ಚುಕಟಟಾಗಿ ಸಾದರಪಡಿಸಿದವರು ಮಂಗಳೂರಿನ ಪ್ರತಿಭಾನ್ವಿತ ಕಲಾವಿದೆ ವಿದ್ಯಾಶ್ರೀ ರಾಧಾಕೃಷ್ಣ. ಇವರು ಹಲವು ವಿದ್ಯಾರ್ಥಿಗಳನ್ನು ರೂಪಿಸಿದ ಕಲಾಶಾಲೆ ಮಂಗಳೂರಿನ ಗಾನ ನೃತ್ಯ ಅಕಾಡೆಮಿ ನಿರ್ದೇಶಕಿಯೂ ಹೌದು.
ಪ್ರದರ್ಶನದ ಮೊದಲರ್ಧದಲ್ಲಿ ಅಂಬೆಯ ಪ್ರೀತಿ, ಮಮತೆ, ಕರುಣೆ ಪ್ರಸ್ತುತಗೊಂಡಿತು. ದ್ವಿತೀಯಾರ್ಧ ರೋಷ ರೂಪಕಕ್ಕೆ ಸಾಕ್ಷಿಯಾಯಿತು. ಮಹಾಭಾರತದಲ್ಲಿ ಅಂಬೆ ಎದುರಿಸಿದ ಕಷ್ಟದ ಸನ್ನಿವೇಶಗಳನ್ನು ಪ್ರಸ್ತುತಪಡಿಸುವಲ್ಲಿ ಕಲಾವಿದೆ ಯಶಸ್ವಿಯಾಗಿದ್ದಾರೆ. ಸ್ತ್ರೀ ಕೇವಲ ಒಂದು ವಸ್ತುವೇ? ಅವಳಿಗೂ ಇಲ್ಲವೇ ಭಾವನೆ? ಸ್ತ್ರೀಯನ್ನು ಎಲ್ಲದಕ್ಕೂ ದೂಷಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಕಲಾವಿದೆ ನೃತ್ಯ ರೂಪಕ ಮೂಲಕ ಪ್ರೇಕ್ಷಕರಲ್ಲಿ ಕೇಳಿದರು. ಪ್ರಥಮ ಪ್ರಯೋಗದಲ್ಲಿಯೇ ವಿದ್ಯಾಶ್ರೀ ತಮ್ಮ ಹೊಸ ಕೂಸಿನ ಬೆಳವಣಿಗೆಗೆ ಮುನ್ನುಡಿ ಬರೆದರು.
ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ಶೈಲಿಯ ನೃತ್ಯ ಪ್ರೇಕ್ಷಕರ ಮನತಟ್ಟಿತು. ಧ್ವನಿ ಮತ್ತು ಬೆಳಕಿನ ಸಂಯೋಜನೆಯೂ ಮುದ ನೀಡಿತು.
ಪ್ರತೀ ವರ್ಷ ಸಮರ್ಪಣ್ ಮತ್ತು ಮಂಥನ ಕಾರ್ಯಕ್ರಮ ಆಯೋಜಿಸುವ ಮೂಲಕ ನೃತ್ಯಾಂಗನ್ ಸಂಸ್ಥೆ ಕಲಾವಿದರನ್ನು ಪ್ರೋತ್ಸಾಹಿಸುತ್ತದೆ. ಇದು ಮೂರನೇ ವರ್ಷದ ಮಂಥನ ಕಾರ್ಯಕ್ರಮ. ಭರತನಾಟ್ಯ, ಒಡಿಸ್ಸಿ ನೃತ್ಯದ ಜತೆಗೆ ಸನ್ನಿವೇಶ ಆಧರಿತ ನೃತ್ಯ ಪ್ರಸ್ತುತಿ ಪ್ರೇಕ್ಷಕರನ್ನು ಮನರಂಜಿಸಿತು ಎಂಬುದನ್ನು ಪ್ರತಿಕ್ರಿಯೆಯ ಆಧಾರದಲ್ಲಿ ಹೇಳಬಲ್ಲೆ ಎಂದು ನೃತ್ಯಾಂಗನ್ ಸಂಸ್ಥೆಯ ಸ್ಥಾಪಕ  ನಿರ್ದೇಶಕಿ ರಾಧಿಕಾ ಶೆಟ್ಟಿ ಹೇಳಿದ್ದಾರೆ.
ದೀಪ್ತಿ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸನ್ನಿವೇಶ ಆಧರಿತ ನೃತ್ಯ ಪ್ರಸ್ತುತಿ ಮಂಥನ – 2016"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*