- ಮಧ್ಯಾಹ್ನದ ಬಳಿಕ ನಡೆಯುವ ಕಾರ್ಯಕ್ರಮ
- 3 ಗಂಟೆಗೆ ಆರಂಭ, ರಾತ್ರಿ 10ಕ್ಕೆ ಮುಕ್ತಾಯ
ಬಂಟ್ವಾಳ: ಡಿಸೆಂಬರ್ 19ರಂದು ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಕರಾವಳಿ ಉತ್ಸವ. ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆ, ಬಳಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈಭವ. ರಾತ್ರಿ 10 ಗಂಟೆಗೆ ಮುಕ್ತಾಯ.
ಇದು ಬಿ.ಸಿ.ರೋಡಿನ ಎಸ್.ಜಿ.ಎಸ್.ವೈ ಹಾಲ್ ನಲ್ಲಿ ಸೋಮವಾರ ಬೆಳಗ್ಗೆ ನಡೆದ ಕರಾವಳಿ ಉತ್ಸವ ಆಚರಣಾ ಸಮಿತಿ ಸಭೆ ಕೈಗೊಂಡ ತೀರ್ಮಾನ.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಸಹಾಯಕ ಕಮೀಷನರ್ ಪ್ರಸನ್ನ ಕುಮಾರ್, ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂಡಾ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ತುಂಗಪ್ಪ ಬಂಗೇರ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಪುರಸಭೆ ಮಾಜಿ ಅಧ್ಯಕ್ಷ ಎ.ಸದಾನಂದ ಮಲ್ಲಿ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ನಾಯಕ್ ರಾಯಿ, ಮಂಜು ವಿಟ್ಲ ಸಹಿತ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮಿತಿಗಳ ಪಟ್ಟಿಯನ್ನು ಪ್ರಕಟಿಸಲಾಯಿತು.
ಇದೊಂದು ಕಾಟಾಚಾರದ ಸಭೆಯಾಗಿದ್ದು, ಜಾಗ, ಕಾರ್ಯಕ್ರಮ, ಸಮಿತಿಯನ್ನು ಮೊದಲೇ ನಿರ್ಧರಿಸಿ ಆಗಿದೆ, ಬಾರ್ ನಲ್ಲಿ ಕಾರ್ಯಕ್ರಮ ನಡೆಸುವ ಔಚಿತ್ಯವಾದರೂ ಏನು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ .ತುಂಗಪ್ಪ ಬಂಗೇರ ಆಕ್ಷೇಪ ಸಲ್ಲಿಸಿದರು. ಕರಾವಳಿ ಉತ್ಸವವನ್ನು ತರಾತುರಿಯಲ್ಲಿ ನಡೆಸುವುದೂ ಬೇಡ, ಉತ್ಸವವನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳುವುದಕ್ಕೆ ಬೇಕಾಗಿಯಷ್ಟೇ ನಡೆಸುವುದೇಕೆ, ಎಂದು ತುಂಗಪ್ಪ ಬಂಗೇರ ಪ್ರಶ್ನಿಸಿದರು. ಪದ್ಮನಾಭ ನರಿಂಗಾನ ಮತ್ತು ಜನಾರ್ಧನ ಚೆಂಡ್ತಿಮಾರ್ ಅವರೂ ಕರಾವಳಿ ಉತ್ಸವವನ್ನು ಬಾರ್ ಪಕ್ಕದಲ್ಲಿ ನಡೆಸುವುದು ಬೇಡ ಎಂದು ಆಕ್ಷೇಪ ಸಲ್ಲಿಸಿದರು. ಜಿನರಾಜ ಆರಿಗ ಮಾತನಾಡಿ, ಈಗಾಗಲೇ ನಿರ್ಧರಿಸಿದಂತೆ ಉತ್ಸವ ನಡೆಸೋಣ, ಮುಂದಿನ ವರ್ಷ ಸರಿಯಾಗಿ ಮಾಡೋಣ ಎಂದು ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ಎಚ್. ಸುಂದರ ರಾವ್, ಸಭೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸಮಿತಿಯಲ್ಲಿ ಅಧಿಕಾರಿಗಳ ಹೆಸರನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ, ಇದರಿಂದ ಅಧಿಕಾರಿಗಳನ್ನು ಹಣ ವಸೂಲಿಗೆ ಇಳಿಸಿದಂತಾಗುತ್ತದೆ, ಒಟ್ಟಾರೆಯಾಗಿ ಕರಾವಳಿ ಉತ್ಸವವನ್ನು ತರಾತುರಿಯಲ್ಲಿ ನಡೆಸುವುದೇ ಸರಿಯಲ್ಲ, ಇದಕ್ಕೆ ಸಾಕಷ್ಟು ಪೂರ್ವಯೋಜನೆ ಅಗತ್ಯ ಎಂದು ಸಲಹೆ ನೀಡಿದರು.
ಸಭೆಯಲ್ಲಿದ್ದವರು ಹಲವು ಸಲಹೆ ಸೂಚನೆಗಳನ್ನು ನೀಡಿದರೂ ರಂಗೋಲಿ ಹೋಟೆಲ್ ಸಭಾಂಗಣದಲ್ಲಿ ಕರಾವಳಿ ಉತ್ಸವವನ್ನು ಮೊದಲೇ ದಿನ ನಿಗದಿಸಿದಂತೆ ಡಿಸೆಂಬರ್ 19ರಂದು ನಡೆಸುವುದು ಎಂಬ ತೀರ್ಮಾನಕ್ಕೆ ಬರಲಾಯಿತು.
ಯಾರಿಗಾಗಿ ಉತ್ಸವ
ಕರಾವಳಿ ಉತ್ಸವವನ್ನು ತಾಲೂಕು ಮಟ್ಟದಲ್ಲಿ ಆಯೋಜಿಸುವ ಉದ್ದೇಶವೇನೆಂದರೆ, ತಾಲೂಕಿನ ವಿವಿಧ ಸಾಂಸ್ಕೃತಿಕ ಹಿನ್ನೆಲೆಯನ್ನು ಪ್ರದರ್ಶಿಸುವ ಅವಕಾಶವನ್ನು ಒದಗಿಸುವುದು. ಇದಕ್ಕೆ ಕನಿಷ್ಠ ಎರಡು ತಿಂಗಳ ಮೊದಲಾದರೂ ಸಭೆಗಳು ನಡೆಯಬೇಕು. ಆದರೆ ಮೊದಲ ಸಭೆ ನಡೆದದ್ದು ಕಳೆದ ಶುಕ್ರವಾರ ಡಿಸೆಂಬರ್ 9ರಂದು. ಎರಡನೇ ಸಭೆ ಡಿಸೆಂಬರ್ 12ರಂದು. ಕಾರ್ಯಕ್ರಮ ನಡೆಯುವುದಕ್ಕೂ ಸಭೆ ನಡೆಸುವುದಕ್ಕೂ ಕೇವಲ ಆರು ದಿನಗಳ ಅಂತರ. ಪ್ರದರ್ಶನ ನೀಡುವ ತಂಡಗಳ ಆಯ್ಕೆ, ಕಾರ್ಯಕ್ರಮ ವೀಕ್ಷಿಸಲು ಬರುವವರಿಗೆ ಆಹ್ವಾನ ನೀಡಲು ಇಷ್ಟು ದಿನ ಸಾಕೇ? ಹೀಗೆಂದು ಸಭೆಯಲ್ಲಿದ್ದವರು ಪ್ರಶ್ನಿಸಿದಾಗ ಇದು ನಡೆಸಲೇಬೇಕು, ಇಲ್ಲದಿದ್ದರೆ ನಾವು ನಮ್ಮೂರ ಸಂಸ್ಕೃತಿಯನ್ನು ಪ್ರದರ್ಶಿಸದೆ ಜನರಿಗೆ ದೊಡ್ಡ ಅನ್ಯಾಯ ಮಾಡುತ್ತೇವೆ ಎಂಬರ್ಥದ ಉತ್ತರ ದೊರಕಿತು. ಆದರೆ ಕೇವಲ ಏಳು ಗಂಟೆಯಲ್ಲಿ ಮೆರವಣಿಗೆ, ಉದ್ದುದ್ದ ಭಾಷಣದ ಬಳಿಕ ಬಾರ್ ಪಕ್ಕ ರಾತ್ರಿ ನಡೆಯುವ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿಯೇ ಸಿದ್ಧ ಎಂಬ ಹಠ ಸಾಧನೆಯಿಂದ ಏನು ಲಾಭ, ಇದು ವೇಸ್ಟ್ ಎಂಬ ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ ಮಾತಿಗೆ ಸಮರ್ಪಕ ಉತ್ತರ ಅಧಿಕಾರಿಗಳಿಂದಲೂ ಬರಲಿಲ್ಲ.
ಮೊದಲೇ ಕಾಟಾಚಾರದ ಸಭೆ. ಉತ್ಸವ ಯಾವಾಗ, ಎಲ್ಲಿ ಮಾಡಬೇಕು ಎಂಬ ದಿನವೂ ನಿಗದಿಯಾಗಿತ್ತು. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಕಚೇರಿ ಕಾರ್ಯ ಅವಧಿಯಲ್ಲಿ ಕೂರಿಸಿದ್ದನ್ನು ಬಿಟ್ಟರೆ ಪೂರ್ವಭಾವಿ ಸಭೆಯಿಂದ ಯಾವ ಉಪಯೋಗವೂ ಆಗಿಲ್ಲ, ಬದಲಾಗಿ ಅಧಿಕಾರಿಗಳ ಸಮಯ ವ್ಯರ್ಥವಾಯಿತು. ಮಂಗಳವಾರ ಸರಕಾರಿ ರಜೆ. ಹೀಗಾಗಿ ಕಚೇರಿಗಳು ತೆರೆದಿರುವುದಿಲ್ಲ.
Be the first to comment on "ರಂಗೋಲಿ ಹೋಟೆಲ್ ಸಭಾಂಗಣದಲ್ಲಿ ಕರಾವಳಿ ಉತ್ಸವ"