ಶಾಲಾ ಶಿಕ್ಷಕರ ನಡುವಿನ ಮನಸ್ಥಿತಿಯಲ್ಲಿನ ವ್ಯತ್ಯಾಸಗಳು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮವನ್ನು ಈ ಘಟನೆ ಎತ್ತಿಹಿಡಿಯುತ್ತದೆ. ಇಂತಹ ಹಲವು ವಿದ್ಯಮಾನಗಳು ಶಾಲೆಗಳಲ್ಲಿ ವಿವಿಧ ಕಾರಣಗಳಿಗೆ ನಡೆಯುತ್ತಲೇ ಇರುತ್ತದೆ. ಅಪ್ಪ-ಅಮ್ಮರ ಜಗಳದಲ್ಲಿ ಕೂಸು ಬಡವಾಯಿತು ಎಂಬ ನಾಣ್ಣುಡಿಯಂತೆ ನಮ್ಮ ಮಕ್ಕಳು ವಿಚಿತ್ರ ವಿದ್ಯಮಾನಗಳಿಂದಾಗಿ ವೇದನೆ ಅನುಭವಿಸುತ್ತಿರುತ್ತಾರೆ. ಇವೆಲ್ಲದಕ್ಕೂ ಮುಕ್ತಿ ಹಾಡಬೇಕಾದರೆ ದೊಡ್ಡವರೆನ್ನಿಸಿಕೊಂಡವರು ಮೊದಲು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು.
- ಮೌನೇಶ ವಿಶ್ವಕರ್ಮ
“ಶಿಕ್ಷಕರು- ಪೋಷಕರು ಸರಿಯಾಗಿರಬೇಕು, ಹಾಗಿದ್ದಾಗ ಮಾತ್ರ ಮಕ್ಕಳು ಸರಿಯಿರುತ್ತಾರೆ” ಯಾರಪ್ಪಾ ಹೇಳಿದ್ರು ಈ ಆರೋಪಿತ ಮಾತು..? ಎಂದು ಕಣ್ಣ ಹುಬ್ಬೇರಿಸಬೇಡಿ. ಇದು ಕೆಲವು ವರ್ಷಗಳ ಹಿಂದೆ ಬಿ.ಸಿ.ರೋಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಬರೆದ ಬರಹದ ಸಾಲುಗಳು.. ನಿಜ ಇಂದು ನಮ್ಮ ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವು ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಿರುತ್ತದೆ. ಇವುಗಳಿಂದಾಗಿಯೇ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ನೋವು-ಯಾತನೆ-ಸಂಕಟಗಳು ಆಗಾಗ ಈ ಬಗೆಯ ಪ್ರತಿಭಟನೆಯ ರೂಪದಲ್ಲಿ ವ್ಯಕ್ತವಾಗುತ್ತಿರುತ್ತದೆ. ನಾವು-ನೀವು ಸೂಕ್ಷ್ಮ ಮನಸ್ಸಿನಿಂದ ಅರ್ಥ ಮಾಡಿದಾಗಲಷ್ಟೇ ಅವುಗಳು ನಮಗೆ ಅರ್ಥವಾದೀತು..
ಒಂದು ಪ್ರಾಥಮಿಕ ಶಾಲೆಯದು. ಅಲ್ಲಿನ ಮಕ್ಕಳೆಲ್ಲರಿಗೂ ವಾರ್ಷಿಕೋತ್ಸವದ ಸಂಭ್ರಮ. “ಸರ್ಕಾರಿ ಪ್ರೊಟೋಕಾಲ್” ನಂತೆ ಜನಪ್ರತಿನಿಧಿಗಳೆನ್ನಿಸಿಕೊಂಡ ರಾಜಕಾರಣಿಗಳೆಲ್ಲರ ಭಾಷಣ, ಬಹುಮಾನ ವಿತರಣೆ, ಗಣ್ಯರಿಗೆ ಸನ್ಮಾನ ಮುಗಿಯುವ ಹೊತ್ತಿಗೆ ಗಂಟೆ ರಾತ್ರಿ 10 ಕಳೆದಿತ್ತು. ಪ್ರತಿ ದಿನ ರಾತ್ರಿ 8 ಗಂಟೆಗೆ ನಿದ್ರೆಗೆ ಶರಣಾಗುತ್ತಿದ್ದ ಆ ಪುಟಾಣಿಗಳಂತೂ ಮುಖಕ್ಕೆ ಬಣ್ಣ, ತುಟಿಗೆ ಲಿಪ್ಸ್ಟಿಕ್ ಹಾಕಿಸಿಕೊಂಡು ಸಂಜೆ ೬ ರಿಂದಲೇ ಭಾಷಣ ಮುಗಿಯಲು ಕಾಯುತ್ತಿದ್ದರು. ೯ರ ಹೊತ್ತಿಗೆ ಅವರ ಉತ್ಸಾಹ ಯಾವ ಬಗೆಯಲ್ಲಿ ಬಾಡಿ ಹೋದೀತು ಎಂಬುವುದನ್ನು ನೀವೇ ಊಹಿಸಿಕೊಳ್ಳಿ.. ಇಷ್ಟೇ ಆದರೆ ಪರವಾಗಿಲ್ಲವೇನೋ, ಬಳಿಕದ ವಿದ್ಯಮಾನ ಕೇಳಿ.. ಮಾರುದ್ದ ಭಾಷಣ ಬಿಗಿದ ರಾಜಕಾರಣಿಗಳ ಭಾಷಣ ಮುಗಿದ ಬಳಿಕ ಅಂತೂ ಇಂತೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಯಿತು.
ನಿರೂಪಕರು “ಈಗ ನಿಮ್ಮ ಮುಂದೆ ಮೂರನೇ ತರಗತಿಯ ಪುಟಾಣಿಗಳಿಂದ ಒಂದು ರೆಕಾರ್ಡ್ ಡ್ಯಾನ್ಸ್” ಎಂದು ಹೇಳಿಯೇ ಬಿಟ್ಟರು.
೮ ಮಂದಿ ಪುಟಾಣಿಗಳು ವೇದಿಕೆಗೆ ಬಂದರು. ಕ್ಯಾಸೆಟ್ ಹಾಡು ಶುರು ಮಾಡಿತು. 8 ಮಕ್ಕಳು ತಮ್ಮ ಅರಿವಿಗೆ ಬಂದಂತೆ ಟೀಚರ್ ಕಲಿಸಿದಂತೆ ನೃತ್ಯ ಮಾಡುತ್ತಲೇ ಇದ್ದರು. ವೇದಿಕೆಯ ಒಳ ಬದಿಯ ಎರಡು ಕಡೆಗಳಲ್ಲಿ ಇಬ್ಬರು ಶಿಕ್ಷಕಿಯರು ನಿಂತಿದ್ದರು. ಬಲಬದಿಯಲ್ಲಿ ನಿಂತಿದ್ದ ಶಿಕ್ಷಕಿ ಈ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಟ್ಟವರು. ಸೈಡ್‌ವಿಂಗ್ಸ್ ನಲ್ಲಿ ನಿಂತು ತಾವೂ ಡ್ಯಾನ್ಸ್ ಮಾಡುತ್ತಾ ಮಕ್ಕಳಿಗೆ ಅಂತಿಮ ಕ್ಷಣದ ತರಬೇತಿ ನೀಡುತ್ತಿದ್ದರು. 8 ಮಕ್ಕಳ ಪೈಕಿ ೭ ಮಂದಿ ಈ ಟೀಚರ್ ಅನ್ನೇ ನೋಡುತ್ತಿದ್ದರೆ ಓರ್ವ ವಿದ್ಯಾರ್ಥಿನಿ ಮಾತ್ರ ವೇದಿಕೆಯ ಎಡಭಾಗದಲ್ಲಿ ನಿಂತಿದ್ದ ಮತ್ತೊಂದು ತರಗತಿಯ ಶಿಕ್ಷಕಿಯನ್ನು ನೋಡುತ್ತಿದ್ದಳು. ಒಟ್ಟಿನಲ್ಲಿ ಆ ಎಂಟು ಮಕ್ಕಳು ಹಸಿವು-ಉತ್ಸಾಹ-ಭಯದೊಂದಿಗೇ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದರು.
ಡ್ಯಾನ್ಸ್ ಮುಗಿಯಿತು. ಕ್ಯಾಸೆಟ್ ನಿಂತಿತು. ಸಭಿಕರ ಕಡೆಯಿಂದ ನಮ್ಮೂರ ಮಕ್ಕಳು ಎಂಬ ಅಭಿಮಾನದ ಚಪ್ಪಾಳೆ-ಶಿಳ್ಳೆ ಗಳು ಕೇಳಿಬಂತು. ಇಷ್ಟೊತ್ತಿಗಾಗಲೇ ವೇದಿಕೆಯಲ್ಲಿ ನೃತ್ಯ ಮಾಡಿದ ಮಕ್ಕಳು, ನೃತ್ಯ ಮುಗಿದ ಖುಷಿಯಲ್ಲಿ, ಕತ್ತಲಾದ ಆ ವೇದಿಕೆಯಲ್ಲೂ ಇನ್ನು ಅಪ್ಪ ತೆಗೆಸಿಕೊಡಬಹುದಾದ ಐಸ್ ಕ್ರೀಂ, ಚರುಂಬುರಿ, ಪುಗ್ಗೆಯನ್ನು ನೆನೆದುಕೊಂಡು ಡ್ಯಾನ್ಸ್ ಕಲಿಸಿದ ಶಿಕ್ಷಕಿ ಹೇಳಿದಂತೆ ಬಲಭಾಗದ ಬ್ಯಾಕ್ ಸ್ಟೇಜ್ ಗೆ ಬರುತ್ತಾರೆ. ಕಿರಿದಾದ ಆ ಸ್ಟೇಜ್‌ನಲ್ಲಿ ಮುಂದಿನ ಯೋಗ ಪ್ರದರ್ಶನಕ್ಕೆ ತಯಾರಾಗಿದ್ದ ಮಕ್ಕಳನ್ನು ತಳ್ಳಿಕೊಂಡೇ ಒಳ ಬರುತ್ತಾರೆ.
ಈ ಹೊತ್ತಿಗೆ ಓರ್ವ ವಿದ್ಯಾರ್ಥಿನಿಯ ಬೆನ್ನಿಗೆ ನೃತ್ಯ ಕಲಿಸಿದ ಶಿಕ್ಷಕಿಯ ಕೈ ಪಟಾರನೆ ಬಾರಿಸುತ್ತದೆ. ಏನೋ ಕನವರಿಸಿಕೊಂಡು ಟೀಚರ್‌ನ ಶಹಭಾಸ್ ಗಿರಿ ಸಿಗಬಹುದೆಂಬ ಖುಷಿಯಲ್ಲಿದ್ದ ಆ ವಿದ್ಯಾರ್ಥಿನಿಗೆ ಆ ಟೀಚರ್ ನೀಡಿದ ಪೆಟ್ಟು ಒಮ್ಮೆಲೇ ಸಿಡಿಲುಬಡಿದಂತಾಗುತ್ತದೆ. ಅಷ್ಟಕ್ಕೂ ನಿಲ್ಲಿಸದ ಆ ಶಿಕ್ಷಕಿ ಆ ವಿದ್ಯಾರ್ಥಿನಿಯ ಕಿವಿ ಹಿಂಡಿ ಕೇಳುತ್ತಾರೆ “ಡ್ಯಾನ್ಸ್ ಮಾಡುವಾಗ ಆ ಸೈಡ್ ನೋಡ್ತಾ ಇದ್ದೀಯಲ್ಲಾ..? ನಿಂಗೆ ಡ್ಯಾನ್ಸ್ ಕಲಿಸಿದ್ದು.. ನಾನಾ..? ಅ ಆ ಟೀಚರಾ..?” ಇದಕ್ಕೆ ಯಾವ ಉತ್ತರವನ್ನೂ ನೀಡಲಾಗದೆ ಆ ವಿದ್ಯಾರ್ಥಿನಿ ಒಳಹೋಗುತ್ತಾಳೆ. ಅಷ್ಟಕ್ಕೆ ಆ ಒಂದು ಸನ್ನಿವೇಶ ಮುಗಿಯುತ್ತದೆ. ಆದರೆ ನಮ್ಮ ಆಲೋಚನೆಗಳು ಮುಗಿಯಬಾರದು. ಯಾಕೆ ಹೀಗಾಗುತ್ತಿದೆ ಎಂಬ ಬಗ್ಗೆ ಯೋಚಿಸಬೇಕಾದವರು ನಾವು-ನೀವು.
ಶಾಲಾ ಶಿಕ್ಷಕರ ನಡುವಿನ ಮನಸ್ಥಿತಿಯಲ್ಲಿನ ವ್ಯತ್ಯಾಸಗಳು ಮಕ್ಕಳ ಮೇಲೆ ಬೀರಬಹುದಾದ ಕೆಟ್ಟ ಪರಿಣಾಮವನ್ನು ಈ ಘಟನೆ ಎತ್ತಿಹಿಡಿಯುತ್ತದೆ. ಇಂತಹ ಹಲವು ವಿದ್ಯಮಾನಗಳು ಶಾಲೆಗಳಲ್ಲಿ ವಿವಿಧ ಕಾರಣಗಳಿಗೆ ನಡೆಯುತ್ತಲೇ ಇರುತ್ತದೆ. ಅಪ್ಪ-ಅಮ್ಮರ ಜಗಳದಲ್ಲಿ ಕೂಸು ಬಡವಾಯಿತು ಎಂಬ ನಾಣ್ಣುಡಿಯಂತೆ ನಮ್ಮ ಮಕ್ಕಳುವಿಚಿತ್ರ ವಿದ್ಯಮಾನಗಳಿಂದಾಗಿ ವಿರಹ ವೇದನೆ ಅನುಭವಿಸುತ್ತಿರುತ್ತಾರೆ. ಇವೆಲ್ಲದಕ್ಕೂ ಮುಕ್ತಿ ಹಾಡಬೇಕಾದರೆ ದೊಡ್ಡವರೆನ್ನಿಸಿಕೊಂಡವರು ಮೊದಲು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲಾ ಶಾಲೆಗಳಲ್ಲೂ ಹೀಗಿದೆ ಎಂಬುದು ಈ ಬರಹದ ತಾತ್ಪರ್ಯವಲ್ಲ. ಶಾಲೆಯ ಎಲ್ಲಾ ಶಿಕ್ಷಕರು-ಎಸ್.ಡಿ.ಎಂ.ಸಿ ಒಟ್ಟಾಗಿ ಕೆಲಸ ಮಾಡಿ ಮಕ್ಕಳಿಗೆ-ಶಾಲೆಗೆ-ಊರಿಗೇ ಕೀರ್ತಿ ತಂದುಕೊಟ್ಟ ಉದಾಹರಣೆಗಳು ಅದೆಷ್ಟೋ ಇದೆ. ಅಂತಹಾ ಶಾಲೆಗಳು ನಮಗೆ ಮಾದರಿಯಾಗಲಿ.. ಮಕ್ಕಳ ಸರ್ವತೋಮುಖ ಬೆಳವಣಿಗೆಯ ಜೊತೆಗೆ ಗುಣಮಟ್ಟದ ಶಿಕ್ಷಣ ನಮ್ಮ-ನಿಮ್ಮೆಲ್ಲರ ಗುರಿಯಾಗಲಿ…
……
ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com
ಕಳೆದ ಬಾರಿಯ ಲೇಖನ ಚೆನ್ನಾಗಿದೆ ಎಂದು ಹಲವು ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಹಿರಿಯ ಪತ್ರಕರ್ತ ಪಿ.ರವಿರಾಜ ಆಜ್ರಿ ಬರೆದದ್ದು ಹೀಗೆ.
ಮೌನೇಶ ವಿಶ್ವಕರ್ಮ ಅವರ,” ಒಂದಲ್ಲ ಒಂದು ದಿನ ಅಮ್ಮನಲ್ಲಿ ಹೇಳ್ತೇನೆ” – ಲೇಖನ ಚೆನ್ನಾಗಿದೆ . ತಪ್ಪು ಮಾಡಿದಾಗ ಅದನ್ನು ಅದನ್ನು ಒಪ್ಪಿಕೊಳ್ಳುವುದು ಅದಕ್ಕಿಂತ ದೊಡ್ಡಶಿಕ್ಷೆ ಬೇರೊಂದಿಲ್ಲ . ಇದನ್ನೇ ಆತ್ಮವಿಮರ್ಶೆ ಮಾಡಿಕೊಳ್ಳುವುದು ಹೇಳ್ತಾರೆ . ಕ್ರಿಶ್ಚಿಯನ್ ಧರ್ಮದಲ್ಲಿ ಗುರುಗಳ ಮುಂದೆ ತಪ್ಪು ಒಪ್ಪಿಕೊಳ್ಳುವ ಸಂಪ್ರದಾಯವಿದೆ . ನಿಮ್ಮ ಈ ಲೇಖನ ಓದುವಾಗ ನೆನಪಾಯಿತು ಅಷ್ಟೇ .
Be the first to comment on "ನಿಂಗೆ ಡ್ಯಾನ್ಸ್ ಕಲಿಸಿದ್ದು.. ನಾನಾ..? ಆ ಟೀಚರಾ..?"