ಹೀಗೇ ಇರುತ್ತಾ ಅಥವಾ ಬದಲಾಗುತ್ತಾ?

ಕಳೆದ ಒಂದು ತಿಂಗಳಿಂದ ಬಂಟ್ವಾಳ ಬದಲಾವಣೆ ಕಾಣುತ್ತಿದೆ. ಸಚಿವರು ಹೊಸ ಯೋಜನೆ ಪ್ರಕಟಿಸಿದರೆ, ಜಿಲ್ಲಾಧಿಕಾರಿ ಎರಡು ಮೀಟಿಂಗ್ ನಡೆಸಿ ಹೋಗಿದ್ದಾರೆ. ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳು ಸಾಲಾಗಿ ನಿಂತಿವೆ.

ಸುಮ್ಮನೆ ಕಣ್ಣುಮುಚ್ಚಿ ನೆನಪಿಸಿಕೊಳ್ಳಿ…

ಬಿ.ಸಿ.ರೋಡ್ ಅಥವಾ ವಿಟ್ಲ ಹತ್ತಿರ ಹತ್ತಿರ ನಿಮ್ಮ ವಾಹನ ಬರುತ್ತಿದೆ ಎಂದ ಕೂಡಲೇ ಅಬ್ಬಾ, ಇನ್ನು ಅರ್ಧ ಗಂಟೆಗಂತೂ ಕ್ಯೂ ನಿಲ್ಲೋದು ಗ್ಯಾರಂಟಿ ಎಂದು ಗೊಣಗುತ್ತಿದ್ದ ದಿನಗಳವು. ಒಂದೆರಡು ವರ್ಷಗಳ ಹಿಂದೆ ಬಿ.ಸಿ.ರೋಡ್, ಮೇಲ್ಕಾರ್, ವಿಟ್ಲ ಪೇಟೆ ಬಳಿ ವಾಹನ ದಟ್ಟಣೆ ಇಲ್ಲದ ದಿನಗಳನ್ನು ಲೆಕ್ಕ ಮಾಡಿ ಹೇಳಬಹುದಿತ್ತು.

7

ಈಗ ಹಾಗಿಲ್ಲ. ಭಾರೀ ಬದಲಾವಣೆ ಅಲ್ಲದಿದ್ದರೂ ಮೈಲುದ್ದದ ಕ್ಯೂ ಕಾಣಿಸುವ ದಿನಗಳು ಮುಗಿದು ಹೋಗಿವೆ. ಬಿ.ಸಿ.ರೋಡ್ ಟ್ರಾಫಿಕ್ ವ್ಯವಸ್ಥೆ ಸುಧಾರಣೆ ಕಂಡರೆ, ಮೇಲ್ಕಾರಿನಲ್ಲಿ ರಸ್ತೆ ಅಗಲವಾಗಿವೆ. ವಿಟ್ಲದಲ್ಲಿ ನಾಲ್ಕು ಮಾರ್ಗ ಸೇರುವ ಜಾಗದಲ್ಲಿದ್ದ ಸಮಸ್ಯೆಗೆ ಮುಕ್ತಿ ದೊರಕಿ, ಗಂಭೀರ ಟ್ರಾಫಿಕ್ ಜಾಮ್ ಕಾಣಿಸುವುದು ಕಡಿಮೆ, ಆದರೆ ವಾಹನದಟ್ಟಣೆ ಇದ್ದೇ ಇದೆ. ಜೊತೆಗೆ ಪಾರ್ಕಿಂಗ್ ಕಿರಿಕಿರಿ.

ಇದು ಬದಲಾವಣೆಯ ಹಾದಿ. ಕಾಲ ಬದಲಾದಂತೆ ವ್ಯವಸ್ಥೆಗಳೂ ಅಪ್ ಡೇಟ್ ಆಗುವ ಸಮಯ. ಹೀಗಾಗಿ ಮೂಲಸೌಕರ್ಯಗಳು ಮನುಷ್ಯನ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಲೇ ಇರಬೇಕು.

ಕಳೆದೊಂದು ತಿಂಗಳಿಂದ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲೂ ಬದಲಾವಣೆಯ ಪರ್ವ ಆರಂಭಗೊಂಡಿದೆ.

ಚಿತ್ರ: ಕಿಶೋರ್ ಪೆರಾಜೆ

ಚಿತ್ರಗಳು: ಕಿಶೋರ್ ಪೆರಾಜೆ

ಟ್ರಾಫಿಕ್ ಜಾಮ್ ಗೆ ಇನ್ನೊಂದು ಹೆಸರು ಎಂದೇ ಅಪಕೀರ್ತಿ ಪಡೆದಿದ್ದ ಮೇಲ್ಕಾರ್ನಿಂದ ಕೊಣಾಜೆಗೆ ಹೋಗುವ ರಸ್ತೆ ಬೆಂಗಳೂರು ಮಾದರಿಯಂತೆ ಚತುಷ್ಪಥಗೊಳ್ಳುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸರಿಯಾಗಿ ಒಂದು ತಿಂಗಳ ಹಿಂದೆ ನಡೆಸಿದ ಸಭೆ ಬಳಿಕ ಅಧಿಕಾರಿ ವರ್ಗ ಬಂಟ್ವಾಳದಲ್ಲಿ ಮೈಕೊಡವಿ ನಿಂತಿದೆ.

ಈಗೇನಿದ್ದರೂ ಮಾರ್ಕಿಂಗ್, ಲೆವೆಲಿಂಗ್ ನದ್ದೇ ಸುದ್ದಿ.

ಬಸ್ ಬೇ ನಿರ್ಮಾಣ, ಬಿ.ಸಿ.ರೋಡ್ ಪಾರ್ಕಿಂಗ್, ಸೆಟ್ ಬ್ಯಾಕ್ ವಿಚಾರಗಳದ್ದೇ ಚರ್ಚೆ. ಕೈಕಂಬದಲ್ಲಿ ಬಸ್ ಬೇ ನಿರ್ಮಿಸಲು ಕಾರ್ಯಾಚರಣೆ ಆರಂಭಗೊಂಡಿದೆ. ಮೇಲ್ಕಾರಿನಲ್ಲೂ ಬಸ್ ಬೇ ಕೆಲಸಕ್ಕೆ ವೇಗ ದೊರಕಿದೆ.

5

ಬಂಟ್ವಾಳ ಪೇಟೆ ಅಗಲಗೊಳಿಸುವ ಕುರಿತು ಪ್ರಕ್ರಿಯೆ ಆರಂಭಗೊಂಡಿದೆ. ಖುದ್ದು ಸಚಿವ ಬಿ.ರಮಾನಾಥ ರೈ ಇದರಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ ಎಂದು ಹೇಳುವ ಮೂಲಕ ಪುರಸಭೆಯ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಸ್ ನಿಲ್ದಾಣ ನಿರ್ಮಾಣದ ಕುರಿತು ಚಿಂತನೆ ಕಾರ್ಯರೂಪಕ್ಕೆ ಬರಲಿದೆ.

ವಿಟ್ಲ ಪೇಟೆಯೂ ಮುದುಡಿಕೊಂಡಿದ್ದರೆ, ಪ್ರಗತಿ ಕಾಣುವುದಿಲ್ಲ ಎಂದು ಅಲ್ಲಿನ ಪಟ್ಟಣ ಪಂಚಾಯಿತಿ ಅರ್ಥ ಮಾಡಿಕೊಂಡಿದೆ. ಪೇಟೆಗೆ ನೀರುಣಿಸುವ ಕಾರ್ಯ ಸಹಿತ ವಿವಿಧ ಯೋಜನೆಗಳನ್ನು ಪಪಂ ಹಮ್ಮಿಕೊಂಡಿರುವುದಾಗಿ ಹೇಳಿಕೊಂಡಿದೆ.

ಒಂದೆರಡು ದಿನಗಳಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಆದರೆ ನಿಜಕ್ಕೂ ಬದಲಾವಣೆ ಆಗಬಹುದೇ ಎಂಬ ಕುತೂಹಲ ಈಗ ಸಾರ್ವಜನಿಕರದ್ದು.

ಅದೇ ಹೊತ್ತಿನಲ್ಲಿ ಎವರ್ ಗ್ರೀನ್ ಸಮಸ್ಯೆಗಳಾದ ತ್ಯಾಜ್ಯ ವಿಲೇವಾರಿ, ನೀರಿನ ಪೈಪ್ ಲೈನ್, ಒಳಚರಂಡಿ ಬೆಟ್ಟದಷ್ಟಾಗಿ ಆಡಳಿತದ ಎದುರು ಕುಳಿತಿದೆ. ಸಣ್ಣಪುಟ್ಟ ಸಮಸ್ಯೆಗಳ ಪರಿಹಾರವೂ ಆಗುತ್ತಿಲ್ಲ ಎಂದು ನಾಗರಿಕರು ದಿನನಿತ್ಯ ದೂರುಪೆಟ್ಟಿಗೆ ಭರ್ತಿ ಮಾಡುತ್ತಲೇ ಇದ್ದಾರೆ. ಈ ಎಲ್ಲ ಸಮಸ್ಯೆ, ಸವಾಲುಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಎದುರಿಸಲಾಗುತ್ತದೆ? ಕಾದು ನೋಡಬೇಕು,

ಏಕೆಂದರೆ ಜಿಲ್ಲಾಧಿಕಾರಿ ಮತ್ತೊಂದು ಮೀಟಿಂಗ್ ಗೆ ಸಿದ್ಧವಾಗುತ್ತಿದ್ದಾರೆ!!

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಹೀಗೇ ಇರುತ್ತಾ ಅಥವಾ ಬದಲಾಗುತ್ತಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*