ಒಂದಲ್ಲ ಒಂದು ದಿನ ಅಮ್ಮನಲ್ಲಿ ಹೇಳುತ್ತೇನೆ…

ನಿಜಕ್ಕೂ ಅದೊಂದು ಮೈರೋಮಾಂಚನಗೊಳ್ಳುವ ಸನ್ನಿವೇಶ. ಆ ಪುಟಾಣಿ ಹೇಳಿದ ಆ ನೈಜ ಘಟನೆ ಎಲ್ಲರ ಮನಮುಟ್ಟಿತ್ತು.  ಆ  ಘಟನೆ ಮತ್ತು ಬಾಲಕಿ ಹೇಳಿದ ಮಾತುಗಳ ಬಗ್ಗೆ ಚಿಂತನೆ ನಡೆಸಬೇಕಾದ್ದು ಇಂದಿನ ಅನಿವಾರ್ಯತೆಯೂ ಹೌದೆನ್ನಿಸಿತು.

 ವೇದಿಕೆ ಏರಿದ್ದ ಆ 10 ವರ್ಷದ ಮಗು ತನ್ನ ಬದುಕಿನ ಸತ್ಯವನ್ನು ಬಿಚ್ಚಿಟ್ಟಳು, ಅಮ್ಮನ ಮುಂದೆ ಹೇಳದ ಸತ್ಯವನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದಳು, ಅವಳು ಮಾತು ಆರಂಭಿಸಿ-ಮುಗಿಸುತ್ತಿದ್ದಂತೆಯೇ ನೆರೆದಿದ್ದ ಪ್ರೇಕ್ಷಕ ಸಮೂಹ ಒಂದೊಮ್ಮೆ ಬೆರಗಾಯಿತು, ಕೆಲವರ ಕಣ್ಣಂಚಿನಲ್ಲಿ ನೀರೂ ಹರಿದಿತ್ತು.

picsart_12-04-07-01-24

ಈ ಘಟನೆ ನಡೆದದ್ದು ಕೆದ್ದಳಿಕೆಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ. ಮಾತುಕತೆ ಎಂಬ ವಿಶಿಷ್ಟ ಗೋಷ್ಠಿಯನ್ನು ಆಯೋಜಿಸಿದ್ದ ಸಂಘಟಕರು, ಮಕ್ಕಳು ತಮ್ಮ ಅಪರೂಪದ  ಸಿಹಿ, ಕಹಿ ಘಟನೆಗಳನ್ನು, ಅನುಭವಗಳನ್ನು ವೇದಿಕೆಯ ಮುಂದೆ ಮಂಡಿಸುವ ಅವಕಾಶ ನೀಡಿದ್ದರು.  10 ವಿದ್ಯಾರ್ಥಿಗಳು ಹೆಸರು ಕರೆದಾಕ್ಷಣ ರಂಗಕ್ಕೆ ಬಂದು ಮೈಕ್ ಮುಂದೆ ತಮ್ಮದೇ ಆದ ಶೈಲಿಯಲ್ಲಿ ಮಾತು ಆರಂಭಿಸುತ್ತಿದ್ದರು.

ಈ ಪೈಕಿ ಐದನೇ ತರಗತಿ ವಿದ್ಯಾರ್ಥಿನಿ ದೀಕ್ಷಾ(ಹೆಸರು ಬದಲಾಯಿಸಿದ್ದೇನೆ) ಹೇಳಿದ ಅನುಭವದ ಸಾಲು ಕೇಳಿ.. ಅಮ್ಮ  ನನ್ನನ್ನು ಒಂದು ಸಲ ಅಂಗಡಿಗೆ ಕಳುಹಿಸಿದ್ದರು, ನಾನು ಹೋಗಿದ್ದೆ, ಕೈಯಲ್ಲಿ ಹಿಡಿದುಕೊಂಡಿದ್ದ ೧೦ ರುಪಾಯಿ ಹಣ ದಾರಿಯಲ್ಲಿ ಬಿದ್ದು ಹೋಗಿತ್ತು. ಅಂಗಡಿಯಲ್ಲಿ ಸಾಮಾನು ಖರೀದಿ ಮಾಡಿ ಹಣ ಕೊಡಲು ನನ್ನಲ್ಲಿ ಹಣ ಇರಲಿಲ್ಲ. ಅಂಗಡಿಯವರಲ್ಲಿ ನಾಳೆ ಕೊಡುತ್ತೇನೆ ಎಂದೆ. ಅಂಗಡಿಯವರು ಒಪ್ಪಿದರು. ಮನೆಗೆ ಬಂದೆ.

ಮರುದಿನ  ನನ್ನನ್ನು ಅಮ್ಮ ಸಾಮಾನು ತರಲು ಅಂಗಡಿಗೆ ಹೋಗಿ ಬಾ ಅಂದರು, ನಾನು ಅಮ್ಮನ ಪರ್ಸ್ ನಿಂದ ಹಣ ತೆಗೆಯಲೆಂದು ಹೋದಾಗ ಅಮ್ಮ ಕಿಟಕಿಯಲ್ಲಿ ಹಣ ಇಟ್ಟಿದ್ದೇನೆ , ಅದನ್ನು ಕೊಂಡೋಗು ಎಂದರು. ಆದರೆ ನಾನು ಪರ್ಸ್ ನಿಂದ 10 ರುಪಾಯಿ ಹಣ ತೆಗೆದೆ, ಕಿಟಕಿಯಲ್ಲಿದ್ದ ಹಣವನ್ನೂ ತೆಗೆದುಕೊಂಡು ಹೋದೆ, ಹಿಂದಿನ ದಿನ ಕೊಡದೇ ಇದ್ದ ಹಣವನ್ನು ಅಂಗಡಿಯವರಿಗೆ ಕೊಟ್ಟೆ..

ಆಮೇಲೆ ನನಗೆ ತುಂಬಾ ಬೇಜಾರಾಯ್ತು ॒ಆದರೆ ನಾನು ಈವರೆಗೆ ಹಣ ತೆಗೆದ ವಿಷಯವನ್ನು ಅಮ್ಮನ ಬಳಿ ಹೇಳಿಲ್ಲ, ಒಂದಲ್ಲ ಒಂದು ದಿನ ಹೇಳುತ್ತೇನೆ.. ಮುಂದೆ ಯಾವತ್ತೂ ಇಂತ ತಪ್ಪು ಮಾಡುವುದಿಲ್ಲ ಎಂದು ಭಾವಪರವಶಳಾಗಿಯೇ ಹೇಳಿದಳು. ಅದನ್ನು ಕೇಳಿದಾಗ ಸಭಾಂಗಣದಲ್ಲಿ ಕುಳಿತ್ತಿದ್ದ ಪ್ರೇಕ್ಷಕರ ಕಣ್ತುಂಬಿ ಬಂತು. ಸತ್ಯ ಬಿಚ್ಚಿಟ್ಟ ಆ ಬಾಲಕಿಯನ್ನು ಕೈ ಚಪ್ಪಾಳೆಯ ಮೂಲಕ ಅಭಿನಂದಿಸಿದರು.

ನಿಜಕ್ಕೂ ಅದೊಂದು ಮೈರೋಮಾಂಚನಗೊಳ್ಳುವ ಸನ್ನಿವೇಶ. ಆ ಪುಟಾಣಿ ಹೇಳಿದ ಆ ನೈಜ ಘಟನೆ ಎಲ್ಲರ ಮನಮುಟ್ಟಿತ್ತು. ನಾವು ನೀವು ಆ  ಘಟನೆ ಮತ್ತು ಬಾಲಕಿ ಹೇಳಿದ ಮಾತುಗಳ ಬಗ್ಗೆ ಚಿಂತನೆ ನಡೆಸಬೇಕಾದ್ದು ಇಂದಿನ ಅನಿವಾರ್ಯತೆಯೂ ಹೌದೆನ್ನಿಸಿತು.

ದೀಕ್ಷಾ ಹೇಳಿದ ಪ್ರತೀ ಮಾತುಗಳು ಮುಗ್ಧತನದಿಂದ ಕೂಡಿದ್ದವು, ಅವಳ ಮಾತುಗಳಲ್ಲೆಲ್ಲಿಯೂ ತಾನು ಹಣ ಕದ್ದೆನೆಂಬುದು ಉಲ್ಲೇಖವಾಗಲೇ ಇಲ್ಲ, ಕೇಳದೆ ಹಣ ತೆಗೆದೆ ಎಂಬುದು ಮಾತ್ರ ಇತ್ತು. ನಿಜಕ್ಕೂ ಆ ಘಟನೆಗೆ ಪೂರಕವಾದ ವಾಕ್ಯಗಳೇ ಅಲ್ಲಿ ಬಳಕೆಯಾಗಿದೆ ಎಂಬುದೂ ಇಲ್ಲಿ ಉಲ್ಲೇಖನೀಯ.

ತಾನು ಕೇಳದೆ ಹಣತೆಗೆದದ್ದು ತಪ್ಪು ಎಂಬುದು ಅವಳ ಮನಸ್ಸಿಗೆ ಎಂದೋ ಅನ್ನಿಸಿದೆ, ಮನದೊಳಗೆ ಸುಳಿದಾಡುತ್ತಿದ್ದ, ಕೊರೆಯುತ್ತಿದ್ದ ಆ ವಿಚಾರವನ್ನು  ಯಾರ ಬಳಿಯೂ ಧೈರ್ಯ ಅವಳಲ್ಲಿ ಇರಲಿಲ್ಲ, ಮಕ್ಕಳ ಸಾಹಿತ್ಯ ಸಮ್ಮೇಳನ ಅದಕ್ಕೊಂದು ವೇದಿಕೆ ಕಟ್ಟಿಕೊಟ್ಟಿತ್ತು. ಮನಸ್ಸು ಹಗುರವಾಗಿಸಿಕೊಂಡು ವೇದಿಕೆಯಿಂದಿಳಿದ ದೀಕ್ಷಾಳ ಮುಖದಲ್ಲಿ ಏನೋ ಒಂದು ಸಮಾಧಾನ ಕಂಡಿತು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು, ಇನ್ನು ತಪ್ಪು ಅಗದಿರುವುದಕ್ಕೆ ಪ್ರೇರಣೆಯನ್ನು ನೀಡುತ್ತದೆ. ಅಂತೆಯೇ ಇನ್ನೆಂದೂ ಹಣವನ್ನು ಕೇಳದೆ ತೆಗೆಯುವುದಿಲ್ಲ ಎಂಬ ಧೃಢನಿರ್ಧಾರಕ್ಕೆ ದೀಕ್ಷಾ ಬಂದಿದ್ದಾಳೆ.

ಮಗುಮನಸ್ಸಿನ ಕವಿ ರಾಧೇಶ ತೋಳ್ಪಾಡಿಯವರೂ, ಆ  ಬಾಲಕಿಯ ಅನುಭವದ ಕತೆಯನ್ನು ಮೆಚ್ಚಿದ್ದಾರೆ, ಮಕ್ಕಳು ಅರಿಯದೇ ತಪ್ಪು ಮಾಡುತ್ತಾರೆ, ಅವರ ಅರಿವಿಗೆ ಅದು ಬರುವ ಮೊದಲೇ , ಆಗಿರುವ ತಪ್ಪುಗಳನ್ನು ಮಕ್ಕಳು ತಿದ್ದಿಕೊಳ್ಳುವ ಮೊದಲೇ ಅವರಿಗೆ ಶಿಕ್ಷಕರು, ಪೋಷಕರು, ಸಮಾಜ  ಮಗುವಿಗೆ ಶಿಕ್ಷೆ ನೀಡುತ್ತಾರೆ, ಬೈಗುಳ, ಕೀಳಾಗಿ ಕಾಣುವುದು, ಹೊಡೆಯುವುದು, ಹೀಯಾಳಿಸುವ ಮೂಲಕ ತೇಜೋವಧೆ ಮಾಡುತ್ತಾರೆ, ಇದೆಷ್ಟು ಸರಿ..? ಎನ್ನುವ ಪ್ರಶ್ನೆಯನ್ನೇ ನಮ್ಮ ಮುಂದಿಡುವ ತೋಳ್ಪಾಡಿಯವರು, ಮಕ್ಕಳ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಬೇಕು ಎನ್ನುತ್ತಾರೆ.

ಹೌದು ದೀಕ್ಷಾ ಹೇಳಿರುವ ಈ ಘಟನೆ ಮಕ್ಕಳು ತಾವು ಮಾಡಿದ ತಪ್ಪುಗಳನ್ನು ನೆನೆದು ಕೊರಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.  ಮಕ್ಕಳ ಮನಸ್ಸಿನ ಮಾತುಗಳನ್ನು ಕೇಳುವ, ಆ ಮೂಲಕ ಅವರ ಮನಸ್ಸಿಗೆ ನೆಮ್ಮದಿ ಕೊಡಿಸುವ ದೊಡ್ಡ ಹೊಣೆಗಾರಿಕೆ ದೊಡ್ಡವರ  ಮೇಲಿದೆ ಎಂಬುದು ಎಲ್ಲರಿಗೂ ತಿಳಿಯುವಂತಾಗಬೇಕು.

 

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

 

 

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಒಂದಲ್ಲ ಒಂದು ದಿನ ಅಮ್ಮನಲ್ಲಿ ಹೇಳುತ್ತೇನೆ…"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*