ಇದು ಕೇವಲ ಬಾಯಿಮಾತಲ್ಲ. ಸಾಧಿಸಿ ತೋರಿಸಿದ ಯುವಕರ ತಂಡವೊಂದರ ಯಶೋಗಾಥೆ. ಬಂಟ್ವಾಳ ತಾಲೂಕಿನ ಮೂಡುನಡುಗೋಡು ಎಂಬಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಬಂದ್ ಆಗಬೇಕಿದ್ದ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕಲರವ.
ಬಂಟ್ವಾಳ ಪೇಟೆಯಿಂದ ಹೊರಗೆ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಎಂಬ ಹಳ್ಳಿಗೆ ಬನ್ನಿ.ರಸ್ತೆ ಬದಿಯಲ್ಲಿ ಸ್ವಲ್ಪ ಎತ್ತರದ ಜಾಗದಲ್ಲಿ ಕಟ್ಟಡವೊಂದರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದರಲ್ಲೇನು ವಿಶೇಷ ಅಂದಿರಾ?
ದಡ್ಡಲಕಾಡಿನ ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ವೆಚ್ಚ ಕೋಟಿ ದಾಟಿದೆ. ಅಲ್ಲೊಂದು ಭವ್ಯವಾದ ಶಾಲೆ ನಿರ್ಮಾಣವಾಗುತ್ತಿದೆ. ಹೌದಾ, ಅದು ಖಾಸಗಿ ಶಾಲೆ ಇರಬಹುದು, ಹಳ್ಳಿಗೂ ಕಾಲಿಟ್ಟಿದೇ ಇಂಗ್ಲೀಷ್ ಮೀಡಿಯಂನ ಖಾಸಗಿ ಶಾಲೆ ದರ್ಬಾರು? ಎಂದು ಹುಬ್ಬೇರಿಸಬೇಡಿ.
ಏಕೆಂದರೆ ನಿರ್ಮಾಣವಾಗುತ್ತಿರುವುದು ಸರಕಾರಿ ಶಾಲಾ ಕಟ್ಟಡ. ಅದೂ ಸುಸಜ್ಜಿತವಾಗಿ ಸುಮಾರು 16 ಕೊಠಡಿಗಳೊಂದಿಗೆ, ಎಲ್ಲ ಸೌಕರ್ಯಗಳನ್ನು ಹೊಂದುವಂತೆ ಯೋಜನೆ ರೂಪಿಸಲಾಗಿದೆ. ಶಾಲೆ ಸರಕಾರದ್ದಿರಬಹುದು. ಆದರೆ ಇದನ್ನು ದತ್ತು ತೆಗೆದುಕೊಂಡು ಹೊಸರೂಪ ನೀಡಿದವರು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್. ಸಾಮಾನ್ಯವಾಗಿ ಖಾಸಗಿ ಶಾಲೆಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ದಿನಗಳಿವು. ಆದರೆ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೀಗ ಖಾಸಗಿ ಶಾಲೆಗೆ ಕಡಿಮೆಯೇನಿಲ್ಲ ಎಂಬಂತೆ ಪ್ರಗತಿಪಥದಲ್ಲಿದೆ.
1.5 ಕೋಟಿ ರೂ. ಕಟ್ಟಡ
ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅನಿಸತೊಡಗಿದ್ದಾಗಲೇ ಶ್ರೀ ದುರ್ಗಾ ಫ್ರೆಂಡ್ಸ್ ಶಾಲೆಯನ್ನು ದತ್ತು ತೆಗೆದುಕೊಂಡಿತು. ಯಾವುದೇ ಕಾರಣಕ್ಕೂ ಶಾಲೆ ಮುಚ್ಚಬಾರದು ಎಂಬ ಕಾಳಜಿಯಿಂದ ಶಿಕ್ಷಕರನ್ನು ನೇಮಿಸಿ, ತಮ್ಮ ಖರ್ಚಿನಿಂದಲೇ ಅವರ ವೇತನ ಭರಿಸಿ, ಶಾಲೆಯಲ್ಲಿ ಮಕ್ಕಳ ಕೊರತೆಯಾಗದಂತೆ ನೋಡಿಕೊಂಡರು. ತನ್ನ ಸೇವೆ ಇಷ್ಟಕ್ಕೆ ಸೀಮಿತಗೊಳಿಸದೆ ಕ್ಲಬ್ ಮೂಲಕ ಜಿಲ್ಲೆಯಷ್ಟೇ ಅಲ್ಲ, ಹೊರರಾಜ್ಯಗಳ ಬಹುತೇಕ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪಾಸಿಟಿವ್ ವಿಚಾರಗಳನ್ನು ಪಡೆಯುವ ಕಾರ್ಯದಲ್ಲೀಗ ದುರ್ಗಾ ಫ್ರೆಂಡ್ಸ್ ಸದಸ್ಯರು ಇದ್ದಾರೆ.
ಸಾಧನೆಯ ರೂವಾರಿ:
ಇಲ್ಲಿ ವಿದ್ಯಾರ್ಥಿಗಳ ಕೊರತೆಯನ್ನು ಮನಗಂಡು ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟವರು ಕ್ಲಬ್‌ನ ಅಧ್ಯಕ್ಷ, ಉದ್ಯಮಿ ಪ್ರಕಾಶ್ ಅಂಚನ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ದಡ್ಡಲಕಾಡು ಸರಕಾರಿ ಶಾಲೆಗೆ ಸೇರಿಸಿದರು. ತನ್ನ ಸಹೋದರನ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಸದಸ್ಯರ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಿಂದ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪ್ರಯತ್ನದ ಫಲವಾಗಿ 33 ಮಕ್ಕಳಿದ್ದು ಮುಚ್ಚುವ ಭೀತಿಯಲ್ಲಿದ್ದ ಶಾಲೆಯಲ್ಲಿ ಇಂದು 230 ಮಂದಿ ಮಕ್ಕಳಿದ್ದಾರೆ ಎನ್ನುವುದು ವಿಶೇಷ. ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲೀಷ್ ಮಾತನಾಡ ಬೇಕು ಎನ್ನುವ ಹಿತದೃಷ್ಟಿಯಿಂದ 9 ಮಂದಿ ಶಿಕ್ಷಕರನ್ನು ನೇಮಿಸಿ ಅವರಿಗೆ ತನ್ನ ಸ್ವಂತ ಖರ್ಚಿನಿಂದಲೇ ವೇತನ ಪಾವತಿಸುತ್ತಿದ್ದಾರೆ. ಉಚಿತ ಪುಸ್ತಕ, ಸಮವಸ್ತ್ರ ದೊಂದಿಗೆ ಮಕ್ಕಳನ್ನು ಕರೆದೊಯ್ಯಲು ಉಚಿತ ವ್ಯಾನ್‌ನ ವ್ಯವಸ್ಥೆ ಒದಗಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆ.
Be the first to comment on "ಮುಚ್ಚಬೇಕಿದ್ದ ಸರಕಾರಿ ಶಾಲೆಗೆ ಮರುಜೀವ"