ಬಂಟ್ವಾಳ: ಪುರಸಭಾ ವ್ಯಾಪ್ತಿಯ ವಿವಿಧೆಡೆ ನಿಷೇಧಿತ ಪ್ಲಾಸ್ಟಿಕ್ ಕೈ ಚೀಲಗಳನ್ನು ಉಪಯೋಗಿಸುತ್ತಿದ್ದ ಅಂಗಡಿಗಳಿಗೆ ಪುರಸಭೆಯ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ನೇತೃತ್ವದ ಅಧಿಕಾರಿಗಳ ತಂಡ ಬಂಟ್ವಾಳ ಪೊಲೀಸರ ಸಹಕಾರದಿಂದ ಶುಕ್ರವಾರ ದಾಳಿ ನಡೆಸಿತು.
ಬಿ.ಸಿ.ರೋಡು ಹಾಗೂ ಕೈಕಂಬ ಪರಿಸರದ ಅಂಗಡಿಗಳಿಗೆ ದಾಳಿ ನಡೆಸಿ ಅಲ್ಲಿ ಮಾರಾಟ ಮತ್ತು ಉಪಯೋಗಿಸುತ್ತದ್ದ ನಿಷೇದಿತ 121 ಕೆ.ಜಿ. ಪ್ಲಾಸ್ಟಿಕ್ ಕೈಚೀಲಗಳನ್ನು ತಂಡ ವಶಪಡಿಸಿಕೊಂಡಿತು. ನಿಷೇಧಿತ ಪ್ಲಾಸ್ಟಿಕ್, ಥರ್ಮಾಕೋಲ್ ಸಾಮಾಗ್ರಿಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ದಂಡನೆ ವಿಧಿಸಿ ಅವರ ಉದ್ಯಮ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಗಾರ್ಗಿ ಜೈನ್ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.
ಇದೇ ವೇಳೆ ಬಂಟ್ವಾಳ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳಿಂದ ಪಾವತಿಯಾಗದೆ ಉಳಿದಿದ್ದ ಬಾಡಿಗೆಯಲ್ಲಿ ಸುಮಾರು 1.82 ಲಕ್ಷ ರೂಪಾಯಿಯನ್ನು ಗಾರ್ಗಿ ಜೈನ್ ನೇತೃತ್ವದ ಅಧಿಕಾರಿಗಳ ತಂಡ ವಸೂಲಿ ಮಾಡಿತು. ಮುಂದಿನ ದಿನಗಳಲ್ಲಿ ಪುರಸಭೆಗೆ ಪುರವಾಸಿಗಳು ಪಾವತಿಸಬೇಕಾದ ನೀರಿನ ಶುಲ್ಕವನ್ನು ಕೂಡಾ ವಸೂಲಿ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Be the first to comment on "ನಿಷೇಧಿತ ಪ್ಲಾಸ್ಟಿಕ್ ಬಳಕೆ, ಅಂಗಡಿಗಳಿಗೆ ಪುರಸಭಾ ಅಧಿಕಾರಿಗಳ ದಾಳಿ"