ಸಾರ್.. ನನ್ನಿಂದ ಇವರಿಗೆಲ್ಲಾ ಯಾಕೆ ಕಷ್ಟ…?

ರಂಶೀನಾ ಪ್ರತಿದಿನ ಉಪವಾಸವಿದ್ದುದನ್ನು ಅರಿತಿದ್ದ ಅಲ್ಲಿನ ಶಿಕ್ಷಕ-ಶಿಕ್ಷಕಿಯರು ಆಕೆಯನ್ನು ಅಷ್ಟು ದಿನ ಯಾಕೆ ಮಾತನಾಡಿಸಲೇ ಇಲ್ಲ ? ಎಂಬ ನನ್ನ ಮನಸ್ಸಿನ ಪ್ರಶ್ನೆಗೆ ಈಗಲೂ ಉತ್ತರ ದೊರಕಿಲ್ಲ.

child-net-photo

ಜಾಹೀರಾತು
  • ಮೌನೇಶ್ ವಿಶ್ವಕರ್ಮ

ವಿಕಲಚೇತನರು ತಮ್ಮೊಳಗೇ ಪಡುತ್ತಿರುವ ಪಾಡು ಇಂದು ಬಹುತೇಕರಿಗೆ ಅರ್ಥವಾಗುತ್ತಿಲ್ಲ, ಕೆಲವರಿಗೆ ಇಂತವರು ಹಾಸ್ಯದ ವಸ್ತುಗಳಾಗಿ ಬಳಕೆಯಾದರೆ, ಇನ್ನೂ ಕೆಲವರು ಇಂತವರ ಬಗ್ಗೆ ಸ್ವಲ್ಪವೂ ಯೋಚಿಸುತ್ತಿಲ್ಲ. ಅವರೂ ನಮ್ಮ ನಿಮ್ಮ ಹಾಗೆ ಎಂಬುದನ್ನು ಮರೆತಿರುವ ಹಲವರು ವಿಕಲಚೇತನರನ್ನು ಮೂಲೆಗುಂಪಾಗಿಸುತ್ತಿದ್ದಾರೆ.

ಆದರೆ ಸರ್ಕಾರದ ಸಮನ್ವಯ ಶಿಕ್ಷಣವೆಂಬ ಯೋಜನೆ-ಯೋಚನೆ ವಿಕಲಚೇತನ ಮಕ್ಕಳಲ್ಲಿ ಹೊಸ ಚೈತನ್ಯ ತುಂಬುವ ಕೆಲಸಮಾಡುತ್ತಿದೆ.  ಈ ಮೂಲಕ ಎಲ್ಲಾ ಮಕ್ಕಳು ವಿಕಲಚೇತನ ಮಕ್ಕಳ ಬಗ್ಗೆ ಕಾಳಜಿ ವಹಿಸುವ, ಅವರಿಗೆ ನೆರವಾಗುವ ಮಾನವೀಯತೆಯ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ನಿಮ್ಮ ಮುಂದೆ ನಾನು ಬಿಚ್ಚಿಡುವ ಈ ಘಟನೆ ನಡೆದದ್ದು- ನಾಲ್ಕು ವರ್ಷಗಳ ಹಿಂದೆ ಮಂಗಳೂರು ತಾಲೂಕಿನ ಒಂದು ಶಾಲೆಯಲ್ಲಿ.

ಜಾಹೀರಾತು

ಮಕ್ಕಳ ಹಕ್ಕುಗಳ ಪರವಾಗಿ ಕೆಲಸವನ್ನು ನಿರ್ವಹಿಸುತ್ತಿರುವ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದ ಪರವಾಗಿ ಮಂಗಳೂರಿನ ಹಲವು ಶಾಲಾಮಕ್ಕಳಿಗೆ ಮಕ್ಕಳ ಹಕ್ಕುಗಳ ಕುರಿತಾದ ಸಾಂಸ್ಕೃತಿಕ ತರಬೇತಿಯನ್ನು ನೀಡುವ ಅವಕಾಶ ನನಗೆ  ಒದಗಿ ಬಂದಿತ್ತು.  ಈ ಹಿನ್ನೆಲೆಯಲ್ಲಿ ನಾನು ಆ ಶಾಲೆಗೆ ಭೇಟಿ ಕೊಟ್ಟಿದ್ದೆ. ತರಗತಿ ಆರಂಭವಾದ ಬಳಿಕ ನಾನು ಮಕ್ಕಳನ್ನು ಕುಳ್ಳಿರಿಸಿ ಮಕ್ಕಳ ಹಕ್ಕುಗಳ ಬಗ್ಗೆ ಅವರು ತಿಳಿದುಕೊಂಡಿದ್ದ ಮಾಹಿತಿಗಳನ್ನು ಕಲೆಹಾಕಿದೆ, ಮಕ್ಕಳ ಹಕ್ಕುಗಳ ಜೊತೆಗೆ ಮಕ್ಕಳ ಕರ್ತವ್ಯಗಳ ಬಗ್ಗೆ ತಿಳಿಸುತ್ತಾ ವಿಕಲಚೇತನ ಮಕ್ಕಳಿಗೆ ನಾವು ಹೇಗೆ ನೆರವಾಗಬಹುದು ಎಂದು ಮಕ್ಕಳಿಗೆ ತಿಳಿಸುತ್ತಿದ್ದೆ. ಅಷ್ಟರಲ್ಲಿ ಓರ್ವ ವಿದ್ಯಾರ್ಥಿನಿ ಎದ್ದು ನಿಂತು ಹೇಳಿದಳು, ಸಾರ್ ೭ ನೇ ಯಲ್ಲಿ ರಂಶೀನಾ(ಹೆಸರು ಬದಲಾಯಿಸಿದ್ದೇನೆ) ಇದ್ದಾಳೆ, ಅವಳಿಗೆ ನಡೀಲಿಕ್ಕೆ ಆಗುದಿಲ್ಲ, ಅವಳಿಗೆ ನಾವು ಹೆಲ್ಪ್ ಮಾಡುತ್ತೇವೆ ಎಂದು ಅಭಿಮಾನದಿಂದ ಹೇಳಿಕೊಂಡಳು. ಅದಕ್ಕೆ ಧ್ವನಿಗೂಡಿಸಿದ ಇನ್ನೊಬ್ಬಳು.. ಸಾರ್ ಅವಳ ಅಕ್ಷರ ಚೆಂದ ಉಂಟು.. ಎಂದಾಗ, ಸರಿ ಅವಳ ಅಕ್ಷರ ನೋಡಬೇಕು, ಮತ್ತೆ ಅವಳನ್ನು ತೋರಿಸಿ ಎಂದೆ. ಊಟದ ವಿರಾಮ ಕೊಟ್ಟಾಯ್ತು, ಊಟಕ್ಕೆಂದು ಮುಖ್ಯಶಿಕ್ಷಕರ ಕೊಠಡಿಗೆ ತೆರಳುತ್ತಿದ್ದಂತೆ ವಿದ್ಯಾರ್ಥಿಗಳು ನನ್ನನ್ನು ೭ ತರಗತಿಗೆ ಬನ್ನಿ ಎಂದು ಕರೆದೊಯ್ದರು. ಅಲ್ಲಿಯ ಬೆಂಚಿಯ ಮೇಲೆ  ರಂಶೀನಾ ನಗುತ್ತಾ ಕುಳಿತ್ತಿದ್ದಳು, ಸಾರ್ ಇವಳೇ ರಂಶೀನಾ ಎಂದು ಮಕ್ಕಳು ಪರಿಚಯಿಸಿದಾಗ, ಹಾಯ್.. ನಿನ್ನ  ಅಕ್ಷರ ಚಂದ ಉಂಟಂತೆ..? ಎಂದಾಗ, ಇಲ್ಲಾ ಸಾರ್.. ಎಂದಳು ರಂಶೀನಾ. ನೋಡುವ ಬರಿ.. ಎಂದಾಗ ಬಿಳಿ ಹಾಳೆಯಲ್ಲಿ ನನ್ನ ಹೆಸರನ್ನೇ ಕೇಳಿ ಬರೆದಳು ಆಕೆ. ಅಕ್ಷರ ಚೆನ್ನಾಗಿತ್ತು. ಅಷ್ಟಕ್ಕೂ ಆಕೆ ಪೆನ್ನು ಹಿಡಿದುಕೊಂಡಿದ್ದ ಬಗೆ ವಿಭಿನ್ನವಾಗಿತ್ತು. ಮೊಣಕಾಲಿಗಿಂತ ಕೆಳಗಿನ ಕಾಲುಗಳು ಬಲಹೀನವಾಗಿದ್ದ ಹಾಗೆಯೇ ಇವಳ ಕೈ ಯ ಬಹುತೇಕ ಬೆರಳುಗಳಲ್ಲಿ ಬಲವಿರಲಿಲ್ಲ, ಐದು ಬೆರಳುಗಳನ್ನು ಒಟ್ಟು ಸೇರಿಸಿ ಕಷ್ಟಪಟ್ಟು ಪೆನ್ನು ಹಿಡಿದುಕೊಂಡಿದ್ದ ರಂಶೀನಾ, ಖುಷಿಯಲ್ಲೇ ನನ್ನ ಹೆಸರನ್ನು ಬಿಳಿಹಾಳೆಯಲ್ಲಿ ದಾಖಲಿಸಿದಳು. ಆ ಕ್ಷಣ ಅಚ್ಚರಿಯ ಜೊತೆಗೆ ನೋವು ಅನುಭವಿಸಿದ ನಾನು, ಆಕೆಯಲ್ಲಿ ಊಟ ಆಯ್ತಾ ಎಂದು ಕೇಳಿದೆ.. ಇಲ್ಲಾ ಎಂದು ಸತ್ಯ ನುಡಿದ ಆಕೆ ಬಳಿಕ ಹೇಳಿದಳು..ಆಯ್ತು ಸಾರ್. ಎಂದು. ನಾನು ಅವಳ ಗೆಳೆತಿಯರಲ್ಲಿ ಕೇಳಿದೆ.. ಇವಳ ಊಟ ಆಯ್ತಾ ಎಂದು. ಇಲ್ಲಾ ಸಾರ್ ಅವಳು ಮಧ್ಯಾಹ್ನ ಊಟ ಮಾಡುದಿಲ್ಲ ಎಂದು ಅವರು ಹೇಳಿದಾಗ ನಾನಂದೆ, ರಂಶೀನಾ.. ನೀನು ಊಟ ಮಾಡದಿದ್ದರೆ ನಾನು ಊಟ ಮಾಡುದಿಲ್ಲ ಎಂದು. ಆಗ.. ಸಾರ್ ನೀವು ಊಟ ಮಾಡಿ.. ನಾನು ಊಟ ಮಾಡ್ತೇನೆ ಎಂದಾಗ.. ಉಳಿದ ಮಕ್ಕಳಲ್ಲಿ ಹೇಳಿದೆ. ಹೋಗಿ ಅವಳಿಗೆ ಊಟ ತನ್ನಿ.. ಮಕ್ಕಳು ಖುಷಿಯಿಂದ ಹೋದರು.  ಆ ಹೊತ್ತಿಗಾಗಲೇ ಮುಖ್ಯಶಿಕ್ಷಕರ ಕೊಠಡಿಯಿಂದ ಊಟಕ್ಕೆ ಬರಬೇಕಂತೆ ಎಂದು ಕರೆ ಬಂದದ್ದರಿಂದ ನಾನು ಅತ್ತ ತೆರಳಿದೆ. ಊಟ ಮುಗಿಸಿ ಕೈ ತೊಳೆಯಲೆಂದು ಹೋದಾಗ, ರಂಶೀನಾ ಕೂಡ ಗೆಳತಿಯರ ನೆರವಿನೊಂದಿಗೆ ಕೈ ತೊಳೆಯಲು ಬಂದಿದ್ದಳು. ರಂಶೀನಾ ಗುಡ್.. ಎಂದ ನಾನು, ಯಾಕೆ ನೀನು ಮಧ್ಯಾಹ್ನ ಊಟ ಮಾಡುದಿಲ್ಲ.. ಎಂದಾಗ, ಅವಳಂದಳು.. ಸಾರ್ ನನ್ನಿಂದ ಇವರಿಗೆಲ್ಲಾ ಯಾಕೆ ಕಷ್ಟ…? ಎಂದು. ನನ್ನ ಕಣ್ಣಂಚಿನಲ್ಲಿ ನೀರು ಹರಿದಿತ್ತು.. ಆದರೂ ಸಮಾಧಾನ ಪಟ್ಟುಕೊಂಡು ಹೇಳಿದೆ.. ನಿನಗೆ ಹೆಲ್ಪ್ ಮಾಡುದು ಅಂದ್ರೆ ಇವರಿಗೆಲ್ಲಾ ತುಂಬಾ ಇಷ್ಟ.  ಕಷ್ಟ ಅಂತ ಯಾಕೆ ತಿಳ್ಕೊಳ್ತಿ..? ಪ್ರತಿದಿನ ಊಟ ಮಾಡಬೇಕು, ನಿನ್ನ ಅಗತ್ಯದ ಎಲ್ಲಾ ಕೆಲಸಕ್ಕೆ ಇವರ ಹೆಲ್ಪ್ ತಕೋ, ನೀವೆಲ್ಲಾ ಇವಳಿಗೆ ಹೆಲ್ಪ್ ಮಾಡ್ತೀರಲ್ಲಾ.. ಎಂದು ಉಳಿದ ಮಕ್ಕಳನ್ನು ಬೊಟ್ಟು ಮಾಡಿ ಕೇಳಿದಾಗ, ಅವರೆಲ್ಲಾ ಹೌದು ಸಾರ್.. ಎಂದಾಗ ರಂಶೀನಾ ಮುಖದಲ್ಲಿ ಹೊಸ ಉತ್ಸಾಹ ಕಂಡಿತು.

ಅಪರಾಹ್ನದ ಬಳಿಕದ ತರಗತಿಯಲ್ಲಿ ಉಳಿದ ಮಕ್ಕಳಿಗೆ ರಂಶೀನಾಳಂತವರಿಗೆ ನಾವು ಹೇಗೆ ನೆರವಾಗಬೇಕು ಎಂಬುದನ್ನೆಲ್ಲಾ ಹೇಳಿದಾಗ ಮಕ್ಕಳೂ ಆಸಕ್ತಿಯಿಂದ ಕೇಳಿಕೊಂಡರು.

ಸಂಜೆ ಹೊರಡುವ ಹೊತ್ತು, ರಂಶೀನಾ..ಮುಂದಿನ ವರ್ಷ ಮತ್ತೆ ನಿಮ್ಮ ಶಾಲೆಗೆ ಬರ್‍ತೇನೆ ಅಂದಾಗ, ಬನ್ನಿ ಸಾರ್ ಆದ್ರೆ ನಾನು ಹೈಸ್ಕೂಲ್ ಹೋಗಿರ್‍ತೇನೆ ಎಂದು ನಕ್ಕಳು. ನೀನು ಹೋಗೋ ಶಾಲೆ ಯಾವುದು, ಆ ಶಾಲೆಗೂ ಬರ್‍ತೇನೆ ಎಂದಾಗ ಸಂಭ್ರಮಪಟ್ಟಳು ಆಕೆ.

ಜಾಹೀರಾತು

ನಿಂಗೆ ಒಳ್ಳೆ ಫ್ರೆಂಡ್ಸ್ ಇದ್ದಾರೆ, ಅವರೆಲ್ಲರ ಹೆಲ್ಪ್ ತಕೋ..ಎಂದು ಮತ್ತೆ ಮತ್ತೆ ಹೇಳಿದ ನಾನು ಅವರ ಜೊತೆ ನೀನು ಖುಷಿ ಪಡು ಎಂದಾಗ ಖುಷಿಯಲ್ಲಿ ತಲೆಯಾಡಿಸಿದಳು ರಂಶೀನಾ.

ಆ ದಿನದ ತರಗತಿ ಪರೋಕ್ಷವಾಗಿ ರಂಶೀನಾ ಬಾಳಲ್ಲಿ ಒಂದಷ್ಟು ಹುರುಪು ಮೂಡಿಸಿದರೆ ಸಾಕು ಎಂದಂದುಕೊಂಡು ಹೊರಬಂದೆನಾದರೂ, ರಂಶೀನಾ ಪ್ರತಿದಿನ ಉಪವಾಸವಿದ್ದುದನ್ನು ಅರಿತಿದ್ದ ಅಲ್ಲಿನ ಶಿಕ್ಷಕ-ಶಿಕ್ಷಕಿಯರು ಆಕೆಯನ್ನು ಅಷ್ಟು ದಿನ ಯಾಕೆ ಮಾತನಾಡಿಸಲೇ ಇಲ್ಲ ಎಂಬ ನನ್ನ ಮನಸ್ಸಿನ ಪ್ರಶ್ನೆಗೆ ಈಗಲೂ ಉತ್ತರ ದೊರಕಿಲ್ಲ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಸಾರ್.. ನನ್ನಿಂದ ಇವರಿಗೆಲ್ಲಾ ಯಾಕೆ ಕಷ್ಟ…?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*