ತುಳುನಾಡಿಂದ ದೂರ ಸರಿಯುವ ಸಾಂಪ್ರದಾಯಿಕ ಆಚರಣೆಗಳ ಪೈಕಿ ಕಂಬಳ ಕೋರಿ ಎಂಬ ಗದ್ದೆಪೂಜೆ ಪ್ರಮುಖ. ಈ ಉತ್ಸವಕ್ಕೆ 500 ವರ್ಷಗಳಿಗೂ ಅಧಿಕ ಇತಿಹಾಸ. ಏನಿದು ಕಂಬಳಕೋರಿ? ಮುಂದೆ ಓದಿ.
ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗುತ್ತಿನ ಮನೆಯಲ್ಲಿ ಈಗಲೂ ಸಂಪ್ರದಾಯಬದ್ಧವಾಗಿ ಕಂಬಳ ಕೋರಿ ಆಚರಣೆ ನಡೆದುಕೊಂಡು ಬರುತ್ತಿದೆ. ಭಾನುವಾರ ಮಧ್ಯಾಹ್ನ ಸುಮಾರು ಆರು ನೂರು ಗ್ರಾಮಸ್ಥರ ಸಮ್ಮುಖ ಗುತ್ತಿನ ಮನೆಯವರ ಸೇರುವಿಕೆಯೊಂದಿಗೆ ಗದ್ದೆಪೂಜೆ (ಕಂಬಳಕೋರಿ) ನಡೆಯಿತು. ದೈವಾರಾಧನೆ ಮೂಲಕ ಕೃಷಿ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಒಂದಾಗಿ ಭಾಗವಹಿಸುವುದು ಕಾಡಬೆಟ್ಟು ಗ್ರಾಮಸ್ಥರಿಗೆ ಸಂಭ್ರಮ.
ಭೂದೇವಿಯ ಆರಾಧನೆ ಕೃಷಿ ಸಂಸ್ಕೃತಿಯ ಪ್ರಮುಖ ಘಟ್ಟ. ಕಂಬಳ ಕೋರಿ ಎಂದರೆ ಗದ್ದೆ ಪೂಜೆ. ಇದು ಭೂಮಿಯ ಆರಾಧನೆ. ನಿಗದಿಪಡಿಸಿದ ದಿನ ರೈತರೆಲ್ಲ ಗ್ರಾಮದ ಪ್ರಮುಖರ ಮನೆಯಲ್ಲಿ ಸೇರಿ, ಜಾತಿ, ಮತ, ಪಂಗಡ ಮರೆತು ಕಂಬಳಕೋರಿ ಆಚರಿಸುತ್ತಾರೆ. ದೈವಗಳ ಆರಾಧನೆ ಇದರಲ್ಲಿ ಪ್ರಧಾನ ಅಂಶ.
ಹೇಗಿರುತ್ತೆ ಆಚರಣೆ?
ಮಳೆಗಾಲ ಕಳೆಯುತ್ತಿದ್ದಂತೆ ಕಂಬಳ ಕೋರಿ ನಡೆಸಲು ಗುತ್ತಿನ ಮನೆಯ ಯಜಮಾನರು ದಿನ ನಿಗದಿಪಡಿಸುತ್ತಾರೆ. ಕಂಬಳ ಕೋರಿ ಆರಂಭವಾಗುವ ಮೂರು ದಿನಗಳ ಮೊದಲು ಕೊರಗಜ್ಜ ದೈವ ಗುತ್ತಿನ ಮನೆಯಿಂದ ಹೊರಟು, ಗ್ರಾಮದ ಪ್ರತೀ ಮನೆಗೂ ತೆರಳಿ ಕಂಬುಲದ ಕೋರಿಗ್ ದಿನ ಆತ್ಂಡ್, ಎಂಕ್ ಗ್ರಾಮ ದೈವ ಪಂಜುರ್ಲಿನ ಅಪ್ಪಣೆ ಆತ್ಂಡ್. ಎರುಮಾಣಿ ಬರೊಡುಗೆ (ಕಂಬಳ ಕೋರಿಗೆ ದಿನ ನಿಗದಿಯಾಗಿದೆ. ನನಗೆ ಗ್ರಾಮ ದೈವ ಪಂಜುರ್ಲಿಯ ಅಪ್ಪಣೆ ಆಗಿದೆ. ಜೋಡಿ ಕೋಣ ಹಾಗೂ ಉಳುಮೆಗಾರ ಬರಬೇಕಂತೆ) ಎಂದು ಆಮಂತ್ರಣವನ್ನು ನೀಡುತ್ತದೆ. ಮನೆ ಬಾಗಿಲಿಗೆ ಸುದ್ದಿ ಹೊತ್ತು ತಂದ ಕೊರಗಜ್ಜನಿಗೆ ಮನೆ ಮಂದಿ ಭತ್ತ , ಅಕ್ಕಿ , ವೀಳ್ಯದೆಲೆ ನೀಡಿ ಗೌರವಿಸಿ ಕಳುಹಿಸುತ್ತಾರೆ. ಪೂಜೆಗೆ ಎರಡು ದಿನ ಮೊದಲು ಡೆಕ್ಕೋರಿ ಎಂಬ ಪೂರ್ವಸಿದ್ಧತಾ ಕಾರ್ಯಕ್ರಮ ಇರುತ್ತದೆ. ಕೊಂಬು, ವಾಲಗ, ನಲಿಕೆ(ಜನಾಂಗದ ಹೆಸರು) ಗುತ್ತಿನ ಮನೆಗೆ ಬಂದು ಮನೆಯ ಯಜಮಾನನೊಂದಿಗೆ ಕಂಬಳ ಗದ್ದೆಗೆ ತೆರಳಿ, ಅಲ್ಲಿ ವಾದ್ಯ ನುಡಿಸಿ ಶುಭ ಹಾರೈಸುತ್ತಾರೆ. ಕಂಬಳ ಕೋರಿಯ ದಿನ ಮುಂಜಾನೆ ಗುತ್ತಿನ ಮನೆಯಿಂದ ಹೊರಟ ಕೊರಗಜ್ಜ ದೈವ ಗ್ರಾಮದ ವಿವಿಧ ಮನೆಗಳಿಂದ ಬಂದ ಕೋಣಗಳೊಂದಿಗೆ ಕಂಬಳ ಗದ್ದೆಗೆ ಬಂದು ಕೋಣಗಳನ್ನು ಗದ್ದೆಗೆ ಇಳಿಯಲು ಅಪ್ಪಣೆ ನೀಡುತ್ತದೆ. ಎಲ್ಲ ಕೋಣಗಳನ್ನೂ ಒಮ್ಮೆಲೆ ಗದ್ದೆಗೆ ಇಳಿಸಿ ಮಧ್ಯಾಹ್ನದ ತನಕ ಗದ್ದೆ ಉಳುತ್ತಾರೆ. ಇತ್ತ ಗುತ್ತಿನ ಮನೆಯಲ್ಲಿ ಗ್ರಾಮ ದೈವಗಳಿಗೆ ಪರ್ವ ಹಾಕಿಸಿ, ಪಂಜುರ್ಲಿ ದೈವದ ಹಗಲು ನೇಮೋತ್ಸವ ನಡೆಯುತ್ತದೆ. ಒಂದು ಗಂಟೆಯ ಕಾಲ ನೇಮ ನಡೆದು, ದೈವ ಅಂಗಿ ಏರಿಸುವ(ತೊಡುವ) ಸಂದರ್ಭ ದೈವದ ಮುಕ್ಕಾಲ್ದಿ(ಪಾತ್ರಿ), ನಾಗಬ್ರಹ್ಮ ದೈವ(ವೇಷಧಾರಿ ಪಾತ್ರಿ), ಗುತ್ತಿನ ಯಜಮಾನ, ತಂತ್ರಿ ಬಳಗ ಹಾಗೂ ಗ್ರಾಮಸ್ಥರೊಂದಿಗೆ ಕೊಂಬು ವಾಲಗದ ಹಿಮ್ಮೇಳದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.
ಪೂಕರೆ ಬಂಡಿ
ಅದಾಗಲೇ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಕೇಪುಳ ಹೂವುಗಳಿಂದ ಅಲಂಕರಿಸಿ ಸಿದ್ಧಗೊಳಿಸಲಾಗಿರುತ್ತದೆ. ಈ ಪೂಕರೆ ಬಂಡಿಯನ್ನು ಎಳೆಯಲು ಪಲ್ಲೆ ಎಂಬ ಬೀಳಲನ್ನೇ ಬಳಸಲಾಗುತ್ತದೆ. ಬಳಿಕ ಉಳುಮೆ ಮಾಡುತ್ತಿದ್ದ ಕೋಣಗಳನ್ನು ಮೇಲೆ ಬರುವಂತೆ ಹಾಗೂ ಪೂಕರೆ ಬಂಡಿಯನ್ನು ಎಳೆಯುವಂತೆ ನಾಗಬ್ರಹ್ಮ ದೈವ ಅಪ್ಪಣೆ ನೀಡುತ್ತದೆ. ಗ್ರಾಮಸ್ಥರೆಲ್ಲ ಸೇರಿ ಸಂಭ್ರಮದಿಂದ ಪೂಕರೆ ಬಂಡಿಯನ್ನು ಎಳೆದುಕೊಂಡು ಗದ್ದೆಯ ಮಧ್ಯ ಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವ ಎಲ್ಲರ ಜೊತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತದೆ. ದೈವದ ಜೊತೆ ಓರ್ವ ವೇಷಧಾರಿ ಇದ್ದು ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡುತ್ತದೆ. ಫಸಲಿಗೆ ಕೀಟ ಬಾಧೆ ಬಾರದಂತೆ ತಡೆಯಲು ಉರವೆ ಎಂಬ ತೆಂಗಿನ ಗರಿಯಿಂದ ತಯಾರಿಸಿದ ಹಾವಿನಾಕೃತಿಯ ರಕ್ಷಾದಾರವನ್ನು ಗದ್ದೆ ಬದಿಯ ತೆಂಗಿನ ಮರಕ್ಕೆ ಕಟ್ಟಲಾಗುತ್ತದೆ. ನಾಗಬ್ರಹ್ಮ ದೈವದ ವಾಹನವಾಗಿ ಕುದುರೆಯನ್ನು ತೆಂಗಿನ ಹಸಿ ಸೋಗೆಯಿಂದ ಸಾಂಕೇತಿಕವಾಗಿ ನಿರ್ಮಿಸುತ್ತಾರೆ. ಅದನ್ನು ನಾಗಬನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜೊತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ಗ್ರಾಮಸ್ಥರ ಸಮಸ್ಯೆಗಳಿಗೆ ನ್ಯಾಯ ತೀರ್ಮಾನ ನೀಡಿ ಅಭಯ ಪ್ರದಾನ ನೀಡಿತ್ತದೆ. ಬಳಿಕ ಎಲ್ಲರೂ ಹಬ್ಬದೂಟ ಮಾಡುತ್ತಾರೆ.
Be the first to comment on "ಗದ್ದೆಪೂಜೆಯ ಮಹತ್ವ ಸಾರುವ ಕಂಬಳಕೋರಿ"