ಬಂಟ್ವಾಳ: ನೀರಿನ ಮೂಲದಿಂದ 500 ಮೀಟರ್ ವ್ಯಾಪ್ತಿಯೊಳಗೆ ಬೋರವೆಲ್ ಕೊರೆಯಲು ಅವಕಾಶವಿಲ್ಲ. ಅಕ್ರಮವಾಗಿ ಕೊಳವೆಬಾವಿ ನಿರ್ಮಿಸಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒ, ಅಧಿಕಾರಿ ವರ್ಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಕೊಳವೆ ಬಾವಿ ವಿಚಾರದಲ್ಲಿ ನಡೆದ ಸುದೀರ್ಘ ಚರ್ಚೆ ಸಂದರ್ಭ ಈ ಎಚ್ಚರಿಕೆ ನೀಡಿದ್ದಾರೆ.
ವಿಷಯ ಪ್ರಸ್ತಾಪಿಸಿದ ಕೊಳ್ನಾಡು ಗ್ರಾಪಂ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಜಿಲ್ಲೆಯಲ್ಲಿ ಬೋರ್ ವೆಲ್ ಕೊರೆಯಲು ನಿಷೇಧವಿದ್ದರೂ ಕೆಲವೆಡೆ ಅಕ್ರಮವಾಗಿ ಕೊಳವೆ ಬಾವಿ ನಿರ್ಮಿಸಲಾಗುತ್ತಿದೆ, ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿಯೇ ಬೋರ್ ವೆಲ್ ಏಜನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗಂಗಾ ಕಲ್ಯಾಣ ಯೋಜನೆ ಹೊರತುಪಡಿಸಿ, ಯಾವುದೇ ಬೋರ್ ವೆಲ್ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಬಗ್ಗೆ ಪಿಡಿಒ, ವಿಎಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಈ ಸಂದರ್ಭ ತಹಸೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಈ ಹಂತದಲ್ಲಿ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ಸುಭಾಶ್ಚಂದ್ರ ಶೆಟ್ಟಿ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಆಗ ಮಧ್ಯಪ್ರವೇಶಿಸಿದ ಉಪಕಾರ್ಯದರ್ಶಿ ಉಮೇಶ್, ಅಕ್ರಮವಾಗಿ ಯಾರೇ ಬೋರ್ ವೆಲ್ ಕೊರೆದರೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ನೀಡದ ಹಕ್ಕುಪತ್ರ
ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸ್ತವ್ಯವಿದ್ದರೆ, ಹಕ್ಕುಪತ್ರ ನೀಡಲು ಏನು ತೊಂದರೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸುಭಾಶ್ಚಂದ್ರ ಶೆಟ್ಟಿ, ವಿಟ್ಲ ಜನಸಂಪರ್ಕ ಸಭೆ ವೇಳೆ ಸಹಾಯಕ ಕಮೀಷನರ್ ಈ ಕುರಿತು ಘೋಷಣೆ ಮಾಡಿದ್ದರೂ ತಹಸೀಲ್ದಾರ್ ಅನುಷ್ಠಾನ ಮಾಡುತ್ತಿಲ್ಲ ಎಂದು ದೂರಿದರು. ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ಕರೋಪಾಡಿ ಗ್ರಾಪಂ ಅಧ್ಯಕ್ಷ ಜಲೀಲ್ ಕರೋಪಾಡಿ, ರಾಜೇಶ್ ಬಾಳೆಕಲ್ಲು ಮೊದಲಾದವರು ಈ ಚರ್ಚೆಯಲ್ಲಿ ಪಾಲ್ಗೊಂಡರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್, ನಾವು ಕಾನೂನು ಮೀರಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹಾಗೇನಾದರೂ ಆದರೆ ನಮ್ಮ ಪಿಡಿಒಗಳು ಜೈಲಿಗೆ ಹೋಗಬೇಕಾದೀತು, ಕಾನೂನು ಏನು ಹೇಳುತ್ತದೆಯೋ ಅದನ್ನು ಪಾಲಿಸುತ್ತೇವೆ ಎಂದು ಉತ್ತರಿಸಿದರು.
ಈ ಸಂದರ್ಭ ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ಸುಭಾಶ್ಚಂದ್ರ ಶೆಟ್ಟಿ ಮಧ್ಯೆ ಮತ್ತೆ ಮಾತಿನ ಸಮರ ನಡೆಯಿತು.
ಇಡೀ ರಾಜ್ಯದ 94ಸಿ ಅರ್ಜಿಗಳಿಗೆ ಹೋಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 59 ಸಾವಿರ ಅರ್ಜಿಗಳು ಬಂದಿವೆ. ಕೆಲ ತಾಂತ್ರಿಕ ಸಮಸ್ಯೆಗಳೂ ಇದರ ವಿಲೇವಾರಿ ಸಂದರ್ಭ ಉದ್ಭವಿಸುತ್ತದೆ ಎಂದು ಉಪಕಾರ್ಯದರ್ಶಿ ಹೇಳಿದರು.
ತಾಪಂನಲ್ಲಿ ಪಿಡಿಒಗಳ ಕೊರತೆ, ಶಿಕ್ಷಣ ಇಲಾಖೆ ಸಮಸ್ಯೆ ಸಹಿತ ವ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಇಒ ಸಿಪ್ರಿಯನ್ ಮಿರಾಂಡ ಉಪಸ್ಥಿತರಿದ್ದರು.
Be the first to comment on "ಅಕ್ರಮ ಕೊಳವೆ ಬಾವಿ ನಿರ್ಮಿಸಿದರೆ ಕ್ರಿಮಿನಲ್ ಕೇಸ್"