ಸಸ್ಪೆನ್ಸ್, ಹಾಸ್ಯ, ಕೌಟುಂಬಿಕ ಕತೆಯ ಪನೊಡಾ ಬೊಡ್ಚಾ

  • ಸಂತೋಷ್ ರೈ ಪಾತಾಜೆ ಛಾಯಾಗ್ರಹಣ
  • ಅನಿತಾ ಭಟ್ ಐಟಂ ಸಾಂಗ್
  • 20 ನಾಟಕ ತಂಡಗಳ 207 ಕಲಾವಿದರು
  • ನವೀನ್ ಡಿ.ಪಡಿಲ್ ವಿಶಿಷ್ಟ ಪಾತ್ರ
  • ಒಂದು ಹಾಡಿಗೆ 27 ಲೊಕೇಶನ್
  • ಒಟ್ಟು 187 ಲೊಕೇಶನ್‌ನಲ್ಲಿ ಚಿತ್ರದ ಚಿತ್ರೀಕರಣ
  • ತುಳು ಒಗಟಿನ ಸುತ್ತ ಐಟಂ ಸಾಂಗ್
  • ನವೆಂಬರ್ 18 ಕ್ಕೆ

ತುಳು ಚಿತ್ರರಂಗಕ್ಕೆ ಇದೀಗ ಪರ್ವಕಾಲ. ಕೊಸ್ಟಲ್‌ವುಡ್‌ನಲ್ಲಿ ಇದುವರೆಗೆ ಸುಮಾರು 70ರ ಮೇಲೆ ಚಿತ್ರಗಳು ತೆರೆ ಕಂಡಿವೆ. ಸೀಮಿತ ಮಾರುಕಟ್ಟೆಯಾದರೂ ಹೆಚ್ಚು ಬಜೆಟ್‌ನ ಚಿತ್ರಗಳು ತಯಾರಾಗುತ್ತಿವೆ. ಅಂತೆಯೇ ಬದಲಾವಣೆಯ ಗಾಳಿಯೊಂದಿಗೆ ಹಲವಾರು ವಿಶೇಷತೆಗಳನ್ನು ಹೊತ್ತ ಬಹು ನಿರೀಕ್ಷೆಯ ಚಿತ್ರವೊಂದು ಭರ್ಜರಿ ತಯಾರಿಯೊಂದಿಗೆ ಎಲ್ಲಾ ವರ್ಗದ ಜನರ ಮನತಣಿಸುವ ಆಶಯದಿಂದ ಬೆಳ್ಳಿತೆರೆಯಲ್ಲಿ ಮಿನುಗಲಿದೆ.

panoda

ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ  ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ  ನವೆಂಬರ್ 18 ಕ್ಕೆ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.

panoda1

ತಾಲೂಕಿನ ಪ್ರಥಮ ಸಿನಿ ಬ್ಯಾನರ್ ಎಂಬ ಹೆಮ್ಮೆಯ ಈ ಪ್ರಥಮ ಚಿತ್ರ  ಶ್ರೀ ಕ್ಷೇತ್ರ ಕಾರಿಂಜದ ಶಿವಪಾರ್ವತಿ ಸನ್ನಿಧಿಯಲ್ಲಿ ಚಾಲನೆಗೊಂಡು ಮುತ್ತಪ್ಪ ರೈ ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್‌ನಲ್ಲಿ ಮತ್ತು ಬಂಟ್ವಾಳ, ಬಿ.ಸಿ.ರೋಡ್ ಸುತ್ತಮುತ್ತ ಚಿತ್ರೀಕರಣ ನಡೆಸಿದೆ. ಚಿತ್ರದಲ್ಲಿ ಒಂದು ಐಟಂ ಸಾಂಗ್ ಸಹಿತ 4 ಹಾಡುಗಳಿದ್ದು ಎಚ್ಕೆ ನಯನಾಡು, ಮಧು ಸುರತ್ಕಲ್ ಅವರ ಸಾಹಿತ್ಯವಿದೆ.ಕಡಲಮಗೆ ಖ್ಯಾತಿಯ ಚಂದ್ರಕಾಂತ ಶೆಟ್ಟಿ ಅವರು ಸೊಗಸಾಗಿ ಸಂಗೀತ ನಿರ್ದೇಶನ ನೀಡಿದ್ದಾರೆ. ಕುಶಾಲ ಖುಶಿ, ಮಧು ಬಾಲಕೃಷ್ಣ, ಶಶಾಂಕ್, ರಾಜೇಶ್ ಕೃಷ್ಣನ್,ಅನುರಾಧ ಭಟ್ ಹಾಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ 2 ಹೊಡೆದಾಟದ ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದಿದೆ.

panoda-bodcha

ಹೆಸರಾಂತ ಕ್ಯಾಮರಾಮೆನ್ ಸಂತೋಷ್ ರೈ ಪಾತಾಜೆ ಅವರು ಪ್ರಥಮ ಬಾರಿಗೆ ತುಳುಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದು ಅತ್ಯುತ್ತಮ ರೆಡ್‌ಡ್ರ್ಯಾಗನ್‌ ಅಲೂರಾ ಝೂಮ್ ಕ್ಯಾಮರಾ ಜೊತೆಗೆ 3 ಕ್ಯಾಮರಾ ಬಳಸಿ ಚಿತ್ರೀಕರಣ ನಡೆಸಿದ್ದಾರೆ. ಇದುವರೆಗೆ ಎಲ್ಲೂ ಬಳಕೆಯಾಗದ  ಅತ್ಯುತ್ತಮ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ.

ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾಹಂದರವಿರುವ ಚಿತ್ರದಲ್ಲಿ ಉತ್ತಮ ಹಾಸ್ಯವಿದೆ. ಊರಿನ ಸಮಸ್ಯೆಗಳನ್ನು ಬಗೆಹರಿಸುವ ನಾಯಕನ ಸುತ್ತ ಕಥೆಯಿದ್ದು ಸೆಂಟಿಮೆಂಟ್ಸ್ ಜೊತೆ ನವಿರಾದ ಹಾಸ್ಯವಿದೆ. ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರವಾಗಿದೆ.ಶಿವಧ್ವಜ್ ನಾಯಕ ಪಾತ್ರದಲ್ಲಿದ್ದು, ಶಕುಂತಳಾ ನಾಯಕಿ ಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದ ವಿನಯ ಪ್ರಸಾದ್, ಹರೀಶ್ ರಾಯ್ ಪ್ರಥಮ ಬಾರಿ ತುಳುವಿಗೆ ಬಣ್ಣ ಹಚ್ಚಿದ್ದು ಉಳಿದಂತೆ ಕಿಶೋರ್ ಡಿ.ಶೆಟ್ಟಿ, ಸೀತಾ ಕೋಟೆ, ಇಳಾ ವಿಟ್ಲ, ಯೋಗೀಶ್ ಆಚಾರ್ಯ, ಚೇತನ್ ರೈ ಮಾಣಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ ರೈ ಮಂದಾರ, ಉಮೇಶ್ ಮಿಜಾರ್, ಸತೀಶ್ ಅಮೀನ್, ಚಂದ್ರಹಾಸ ಶೆಟ್ಟಿ ಮಾಣಿ, ರವಿ ಕುಮಾರ್ ಸುರತ್ಕಲ್, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು, ಗಿರೀಶ್ ಶೆಟ್ಟಿ, ರಶ್ಮಿಕಾ,ಅಭಿಲಾಷ, ಬೇಬಿ ತೀರ್ಥ ಪೊಳಲಿ, ಬೇಬಿ ಹವ್ಯಾ ನಾರಾಯಣ್ ಮೊದಲಾದವರು ತಾರಾಗಣದಲ್ಲಿದ್ದಾರೆ.

panoda-4

ಶರಣ್ ಪಂಪ್‌ವೆಲ್ ಮತ್ತು ರಮೇಶ್ ನಾಯಕ್ ರಾಯಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೆ ಹಲವಾರು ಚಿತ್ರಕ್ಕೆ ತಂತ್ರಜ್ಞರಾಗಿ ದುಡಿದಿರುವ ಮಧು ಸುರತ್ಕಲ್ ಚಿತ್ರ ನಿರ್ದೇಶಿಸಿದ್ದಾರೆ.

ಸುಂದರ ರೈ ಮಂದಾರ ಅವರ ಕಥೆ – ಚಿತ್ರಕಥೆ – ಸಂಭಾಷಣೆ – ನಿರ್ಮಾಣ, ಕೇಶವ ಸುವರ್ಣ ಅವರ ಕಲಾ ನಿರ್ದೇಶನವಿದೆ. ನೃತ್ಯ ನಿರ್ದೇಶನ-ಮಹೇಶ್ ಪುತ್ತೂರು. ಮೇಕಪ್-ರಮಣ ಚೆನ್ನೈ, ಸ್ಥಿರಚಿತ್ರ – ಶ್ರೀನಿ, ಸಂಕಲನ- ಸುಜಿತ್ ನಾಯಕ್. ಕಾರ್ಯಕಾರಿ ನಿರ್ಮಾಪಕರು – ಗಣೇಶ್ ಶೆಟ್ಟಿ ಕಲ್ಲಡ್ಕ , ಚಂದ್ರಹಾಸ ಶೆಟ್ಟಿ, ಎಚ್ಕೆ ನಯನಾಡು. ನಿರ್ಮಾಣ ಸಹಾಯಕರು – ರಾಕೇಶ್,ಶಂಕರ್ ಸುಳ್ಯ- ಪ್ರೊಡಕ್ಷನ್ ಮ್ಯಾನೇಜರ್, ಸಚಿನ್ ಶೆಟ್ಟಿ ಕುಂಬ್ಳೆ, ಪ್ರಶಾಂತ್ ಆಳ್ವ ಕಲ್ಲಡ್ಕ, ಪುನೀತ್ ತೀರ್ಥಹಳ್ಳಿ, ಸಂದೀಪ್ ಮೂಡಬಿದಿರೆ ಅವರ ಸಹನಿರ್ದೇಶನವಿದೆ.

ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ವಿನಯ ನಾಯಕ್ ಅವರು ಪನೊಡಾ ಬೊಡ್ಚಾ ಮೂಲಕ ತುಳು ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದಾರೆ.ತುಳು ರಂಗಭೂಮಿಯಲ್ಲಿ ಸಕ್ರಿಯರಾದ ಮತ್ತು ತುಳು ಚಲನಚಿತ್ರ,ಕಿರುತೆರೆಗಳಲ್ಲೂ ಹಾಸ್ಯ ಪಾತ್ರಗಳಲ್ಲಿ ಖ್ಯಾತಿ ಪಡೆದ ಸುಂದರ ರೈ ಮಂದಾರ ಅವರು ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.ಜೊತೆಗೆ ಪ್ರಮುಖ ಹಾಸ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ಸಂತೋಷ್ ರೈ ಪಾತಾಜೆ ಅವರು ಮೂಲತ: ತುಳುನಾಡಿನವರಾದರೂ ಕನ್ನಡ,ತಮಿಳಿನಲ್ಲಿ 21 ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.ಸುಂದರ ರೈ ಅವರ ಮಿತ್ರತ್ವದ ಮೇರೆಗೆ ಪ್ರಥಮ ಬಾರಿ ತುಳುವಿನಲ್ಲಿ ಕ್ಯಾಮರಾ ಚಾಕಚಾಕ್ಯತೆ ತೋರಿದ್ದಾರೆ.ಬಂಟ್ವಾಳ ಸುತ್ತಮುತ್ತ ಪ್ರಕೃತಿ ಸೌಂದರ್ಯವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.ಈ ನಡುವೆ ತುಳು ಚಿತ್ರಗಳಲ್ಲಿ ಅನೇಕ ಆಫರ್‌ಗಳು ಬರತೊಡಗಿದೆ.ಆದರೆ ಉತ್ತಮ ಕಥೆ ಇದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ.ಪನೊಡಾ ಬೊಡ್ಚಾ ಚಿತ್ರ ತಂಡ ಟೀಂ ವರ್ಕ್ ಆಗಿ ಕೆಲಸ ಮಾಡಿದ್ದು ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದಿದ್ದಾರೆ.

%e0%b2%aa%e0%b2%a8%e0%b3%8a%e0%b2%a1

ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ನಾಲ್ಕೂ ಹಾಡುಗಳಿಗೆ ಕೋಸ್ಟಲ್‌ವುಡ್‌ನಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.ಕನ್ನಡ ಮತ್ತು ತುಳುವಿನಲ್ಲಿ 21 ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿರುವ ಚಂದ್ರಕಾಂತ್ ಎಸ್.ಪಿ.ಅವರ ಸ್ವರ ಸಂಯೋಜನೆಯಲ್ಲಿ ಹಾಡುಗಳು ಚಿತ್ರದ ಹೈಲೈಟ್ ಆಗಿದೆ.ಜನಪದ ಒಗಟಿನ ಸಾಹಿತ್ಯದ ಅಡಿಕ್ ಜಕ್ಕನ….ಐಟಂ ಸಾಂಗ್‌ಗೆ ಸ್ಯಾಂಡಲ್‌ವುಡ್‌ನ ಅನಿತಾ ಭಟ್ ನರ್ತಿಸಿದ್ದು ಕಚಗುಳಿ ಇಡುತ್ತದೆ.ಮಧು ಬಾಲಕೃಷ್ಣ ಅವರ ಸ್ವರದಲ್ಲಿ ಭಾವನಾತ್ಮಕ ಹಾಡು,ಶಶಾಂಕ್ ಧ್ವನಿಯ ರಾಘಣ್ಣಿ….ರಾಘಣ್ಣಿ…ಹಾಡು,ರಾಜೇಶ್ ಕೃಷ್ಣನ್,ಅನುರಾಧಾ ಭಟ್ ಸ್ವರದ ಟೈಟಲ್ ಸಾಂಗ್ ಇಂಪಾಗಿದೆ.ರಾಘಣ್ಣಿ ಹಾಡಿಗೆ 27 ಲೋಕೇಶನ್ ಬಳಸಲಾಗಿದೆ.

ಒಂದು ವಿಚಾರವನ್ನು ಹೇಳಲೇ ಬೇಡವೇ(ಪನೊಡಾ ಬೊಡ್ಚಾ ) ಎಂಬ ಸಂದಿಗ್ದ ಪರಿಸ್ಥಿತಿಯಲ್ಲಿ ಉಂಟಾಗುವ ಮಾನಸಿಕ ತುಮುಲಗಳು, ಅದನ್ನು ನಿಭಾಯಿಸುವ ನಾಯಕನ ಸುತ್ತ ಚಿತ್ರದ ಕಥೆ ಸಾಗುತ್ತದೆ.ಒಂದು ರೀತಿಯಲ್ಲಿ ಸಸ್ಪೆನ್ಸ್ ಆಗಿರುವ ಕೌಟುಂಬಿಕ ಕಥೆಯೇ ಚಿತ್ರದ ಹೈಲೈಟ್.

ತುಳು ರಂಗಭೂಮಿಯ ಒಟ್ಟು 207 ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಒಟ್ಟಿನಲ್ಲಿ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು ಸಿನಿಪ್ರಿಯರನ್ನು ಖುಷಿ ಪಡಿಸಲು ಸಿದ್ಧವಾಗಿದೆ.

Be the first to comment on "ಸಸ್ಪೆನ್ಸ್, ಹಾಸ್ಯ, ಕೌಟುಂಬಿಕ ಕತೆಯ ಪನೊಡಾ ಬೊಡ್ಚಾ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*